Karnataka Rains: ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೈದು ದಿನಗಳ ಕಾಲ ಭಾರೀ ಮಳೆ, ಬಹುತೇಕ ಕಡೆಗಳಲ್ಲಿ ಯೆಲ್ಲೋ ಅಲರ್ಟ್
Heavy Rainfall in Karnataka: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇನ್ನೂ 5 ದಿನಗಳ ಕಾಲ ಮಳೆ ಇರಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆ ಮತ್ತು ಚಳಿ ಎರಡೂ ಒಟ್ಟೊಟ್ಟಿಗೆ ದಾಳಿ ಇಟ್ಟಿದ್ದು, ಜನರು ಹೈರಾಣಾಗಿದ್ದಾರೆ.
ಬೆಂಗಳೂರು: ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಹಿಂಗಾರು ಅಬ್ಬರ ಮತ್ತಷ್ಟು ಹೆಚ್ಚಾಗಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇನ್ನೂ 5 ದಿನಗಳ ಕಾಲ ಮಳೆ ಇರಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲಿ ಬೆಳ್ಳಂಬೆಳಿಗ್ಗೆಯೇ ಜಡಿ ಮಳೆ ಆರಂಭವಾಗಿದೆ. ಮಳೆ ಮತ್ತು ಚಳಿ ಎರಡೂ ಒಟ್ಟೊಟ್ಟಿಗೆ ದಾಳಿ ಇಟ್ಟಿದ್ದು, ಜನರು ಹೈರಾಣಾಗಿದ್ದಾರೆ.
ಹವಾಮಾನ ಇಲಾಖೆ ನೀಡಿರುವ ವರದಿಯ ಪ್ರಕಾರ, ಕರ್ನಾಟಕದ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಮತ್ತು ಸಾಧಾರಣ ಮಳೆಯಾಗಲಿದೆ. ಅಕ್ಟೋಬರ್ 14ರಿಂದ 18ರ ತನಕ ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಹಾಕಲಾಗಿದೆ. ಅಕ್ಟೋಬರ್ 17ರಂದು ದಕ್ಷಿಣ ಒಳನಾಡು, ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಕ್ಟೋಬರ್ 17ರಂದು ಉತ್ತರ ಒಳನಾಡಿನಲ್ಲಿ ಮಳೆ ಇರುವುದಿಲ್ಲ ಎಂದು ಐಎಂಡಿ ಮಾಹಿತಿ ನೀಡಿದೆ. ಮುಂಗಾರಿನಂತೆ ಹಿಂಗಾರು ಅಬ್ಬರ ಕೂಡ ಹೆಚ್ಚಾದ ಹಿನ್ನೆಲೆ ಜಲಾಶಯಗಳು ಭರ್ತಿಯಾಗಿವೆ.
ಮೀನುಗಾರರಿಗೆ ಎಚ್ಚರಿಕೆ/ಬೆಂಗಳೂರಿನಲ್ಲಿ ಜಡಿ ಮಳೆ
ಕರಾವಳಿ ಕರ್ನಾಟಕದಲ್ಲಿ 35 ಕಿಲೋ ಮೀಟರ್ನಿಂದ 45 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಚಂಡಮಾರುತದ ವಾತಾವರಣ ಇರಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಮತ್ತೊಂದೆಡೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಜಡಿ ಮಳೆ ಸುರಿಯುತ್ತಿದೆ. ಕೆಲಸಕ್ಕೆ ಹೋಗುವವರಿಗೆ, ವ್ಯಾಪಾರಿಗಳಿಗೆ, ವಾಹನ ಸವಾರರಿಗೆ ಕಿರಿ ಕಿರಿ ಉಂಟಾಗಿದೆ. ಅಲ್ಲದೆ, ಸಂಚಾರ ದಟ್ಟಣೆಯೂ ನಿರ್ಮಾಣವಾಗಿದೆ.
ಭಾನುವಾರ ಅತಿ ಹೆಚ್ಚು ಮಳೆ ಸುರಿದಿದ್ದೆಲ್ಲಿ?
ಅಕ್ಟೋಬರ್ 13ರಂದು ಭಾನುವಾರ ಉಡುಪಿಯ ಕಾರ್ಕಳ ಮತ್ತು ಚಿಕ್ಕಮಗಳೂರಿನ ಬಾಳೆ ಹೊನ್ನೂರಿನಲ್ಲಿ ಅತ್ಯಧಿಕ ಮಳೆಯಾಗಿದೆ. ಎರಡೂ ಕಡೆ 5 ಸೆಂಟಿ ಮೀಟರ್ ಮಳೆ ಸುರಿದಿದೆ. ನಂಜನಗೂಡು , ಜಯಪುರ, ಬೆಳ್ಳೂರು, ಸೋಮವಾರ ಪೇಟೆ, ಸರಗೂರು, ಉಪ್ಪಿನಂಗಡಿ, ಕದ್ರಾ, ಶಿರಾಲಿ, ಹಳಿಯಾಳ, ಧರ್ಮಸ್ಥಳ, ಹಾವೇರಿ, ಹುಕ್ಕೇರಿ ಚಾಮರಾಜನಗರ, ಕುಶಾಲನಗರ, ನಾಪೋಕ್ಲು, ಕಮ್ಮರಡಿ, ಹುಣಸೂರು, ಮಾಗಡಿ, ರಾಮನಗರ, ಹಾರಂಗಿ, ಸಿದ್ದಾಪುರ ಸೇರಿದಂತೆ ರಾಜ್ಯ ದ ಬಹುತೇಕ ಕಡೆ ಉತ್ತಮ ಮಳೆಯಾಗಿದೆ.
ದೇಶದ ವಿವಿಧೆಡೆ ಮಳೆ
ಐಎಂಡಿ ಪ್ರಕಾರ ಹಲವು ರಾಜ್ಯಗಳಲ್ಲಿ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ವರುಣನ ಆರ್ಭಟ ಹೆಚ್ಚಿರುವ ಸಾಧ್ಯತೆ ಇದೆ. ಆಂಧ್ರದ ಬಾಪಟ್ಲಾ, ಪ್ರಕಾಶಂ, ನೆಲ್ಲೂರು, ಕರ್ನೂಲ್ ಮತ್ತು ನಂದ್ಯಾಲದಂತಹ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಚಂಡಮಾರುತದ ಭೀತಿ ಉಂಟಾಗಿರುವ ಕಾರಣ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಸಜ್ಜಾಗುವಂತೆ ಗೃಹ ಮತ್ತು ವಿಪತ್ತು ನಿರ್ವಹಣಾ ಇಲಾಖೆಗೆ ಆಂಧ್ರಪ್ರದೇಶದ ಗೃಹ ಸಚಿವರು ಸೂಚಿಸಿದ್ದಾರೆ.