ಅಯ್ಯೋ.. ಜಲಪಾತ, ಈಜುಕೊಳ ಅಂತ ಇನ್ನೆಲ್ಲೋ ಹೋಗಬೇಡಿ, ಇಲ್ಲೇ ಮಾನ್ಯತಾಕ್ಕೆ ಬನ್ನಿ, ಸಂಕಷ್ಟಕ್ಕೆ ಸಿಲುಕಿ ಹತಾಶರಾದ ಜನ, ವೈರಲ್ ವಿಡಿಯೋ
ಬೆಂಗಳೂರು ಮಳೆ ಮುಂದುವರಿದಿದ್ದು, ಈ ಸಲ ಮಾನ್ಯತಾ ಟೆಕ್ ಪಾರ್ಕ್ ಹೆಚ್ಚು ಸಂಕಷ್ಟಕ್ಕೀಡಾಗಿದೆ. ಅಲ್ಲಿ ಸಂಕಷ್ಟಕ್ಕೆ ಸಿಲುಕಿ ಜನ ಹತಾಶರಾಗಿದ್ದಾರೆ. ಅಲ್ಲಿನ ಒಂದೊಂದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆಯುತ್ತಿದೆ. ವೈರಲ್ ವಿಡಿಯೋಗಳ ವಿವರ ಇಲ್ಲಿದೆ.
ಬೆಂಗಳೂರು: ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಬೆಂಗಳೂರಲ್ಲಿ ಧಾರಾಕಾರ ಮಳೆ ಸುರಿಯತೊಡಗಿದೆ. ಇದು ನಾಳೆಯೂ ಮುಂದುವರಿಯಲಿದ್ದು, ಈಗಾಗಲೇ ಎರಡು ದಿನಗಳ ಮಳೆಗೆ ಬೆಂಗಳೂರಿಗರು ಕಂಗಾಲಾಗಿದ್ದಾರೆ. ವಿಶೇಷವಾಗಿ ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತಲಿನ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ಮಳೆಯನ್ನು ಎದುರಿಸುವುದಕ್ಕೆ ಬೆಂಗಳೂರು ಹೋರಾಟ ನಡೆಸಿದೆ. ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಅಂತಹ ಪ್ರದೇಶಗಳ ಪೈಕಿ ಮಾನ್ಯತಾ ಟೆಕ್ ಪಾರ್ಕ್ ಗಮನಸೆಳೆಯುತ್ತಿದೆ. ಇದು 300 ಎಕರೆ ಪ್ರದೇಶದಲ್ಲಿದ್ದು, ಬೃಹತ್ ಟೆಕ್ ವಿಲೇಜ್ ಆಗಿ ಅನೇಕ ಕೈಗಾರಿಕೆಗಳಿಗೆ ನೆಲೆಯಾಗಿದೆ. ಎರಡು ದಿನದ ಮಳೆಗೆ ಈ ಪ್ರದೇಶ ಜಲಾವೃತವಾಗಿದೆ. ಅನೇಕ ಉದ್ಯೋಗಿಗಳು ತಮ್ಮ ಕಚೇರಿಯಲ್ಲೇ ಉಳಿದುಕೊಂಡಿದ್ದು, ಹೊರಗಿನ ನೀರು ತಗ್ಗುವುದನ್ನೇ ಕಾಯುತ್ತಿದ್ಧಾರೆ. ಈ ನಡುವೆ, ಮಾನ್ಯತಾ ಟೆಕ್ ಪಾರ್ಕ್‌ನ ಹಲವು ದೃಶ್ಯಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಜಲಪಾತ ನೆನಪಿಸುವ ವಿಡಿಯೋ
ಹಲವು ವಿಡಿಯೋಗಳ ನಡುವೆ ಗಮನಸೆಳೆದ ವಿಡಿಯೋ ಇದು. ಇದನ್ನು ಗಗನಚುಂಬಿ ಕಟ್ಟಡದಲ್ಲಿದ್ದವರು ಚಿತ್ರೀಕರಿಸಿದಂತಿದೆ. ಹೂಬಿಟ್ಟ ಮರ ಮತ್ತು ಜಲಪಾತದ ದೃಶ್ಯ ಕಾಣುತ್ತದೆ. ಅದು ನಿಜವಾಗಿಯೂ ಜಲಪಾತವಲ್ಲ. ರಸ್ತೆಯಲ್ಲಿ ನೀರು ತುಂಬಿ ಟೆಕ್ ಪಾರ್ಕ್ ಒಳಗೆ ಧುಮುಕುತ್ತಿರುವ ದೃಶ್ಯ. ಅದು ಕೆಳಗೆ ಆ ಪ್ರದೇಶದಲ್ಲೆಲ್ಲ ನೀರು ತುಂಬಿ ಪ್ರವಾಹ ಪೀಡಿತ ಪ್ರದೇಶದಂತಹ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ. ಕರ್ನಾಟಕ ಪೋರ್ಟ್‌ಫೋಲಿಯೋ ಖಾತೆಯಲ್ಲಿ ಶೇರ್ ಆಗಿರುವ ಆ ಜಲಪಾತದ ವಿಡಿಯೋ ನೀವೂ ನೋಡಿ
ಈ ವಿಡಿಯೋ ಶೇರ್ ಮಾಡುವಾಗ ಸ್ಥಳೀಯಾಡಳಿತ ಸಂಸ್ಥೆಗಳನ್ನು ಟ್ಯಾಗ್ ಮಾಡಿರುವ ಕರ್ನಾಟಕ ಪೋರ್ಟ್‌ಫೋಲಿಯೋ, ಮಾನ್ಯತಾ ಟೆಕ್ ಫಾಲ್ಸ್ ಎಂದು ವ್ಯಂಗ್ಯದ ಶೀರ್ಷಿಕೆ ನೀಡಿದೆ. ಪ್ರವಾಹ ಪರಿಸ್ಥಿತಿಯ ಸಮರ್ಪಕ ನಿರ್ವಹಣೆಯ ತುರ್ತು ಅಗತ್ಯವನ್ನು ಈ ಪೋಸ್ಟ್ ಪ್ರತಿಪಾದಿಸಿದೆ.
ಇದೇ ರೀತಿ ಇನ್ನೊಂದು ವಿಡಿಯೋವನ್ನೂ ಶೇರ್ ಮಾಡಿರುವ ಈ ಖಾತೆಯಲ್ಲಿ, ಅದಕ್ಕೆ ವಿಶ್ವದ ಅತಿದೊಡ್ಡ ಈಜುಕೊಳ ಎಂದು ಉಲ್ಲೇಖಿಸಲಾಗಿದೆ. "ನಮ್ಮ ಬೆಂಗಳೂರಿನಲ್ಲಿ ಅನಾವರಣಗೊಂಡ ಬ್ರಾಂಡ್ ಬೆಂಗಳೂರಿನ ಮತ್ತೊಂದು ಸಾಧನೆ - ಭಾರೀ ಮಳೆಯಿಂದಾಗಿ, ಮಾನ್ಯತಾ ಟೆಕ್ ಪಾರ್ಕ್ ಪ್ರವಾಹದ ದೃಶ್ಯಕ್ಕೆ ವೇದಿಕೆಯಾಗಿದೆ. ಇದನ್ನು ಹಾಸ್ಯಕ್ಕಾಗಿ "ಮಾನ್ಯತಾ ಟೆಕ್ ಫಾಲ್ಸ್" ಎಂದೂ ಕರೆಯಲಾಗುತ್ತದೆ. ಇದು ಹೊಸ ಸೈಟ್ ಸೀಯಿಂಗ್ ತಾಣವಾಗಿ ಕಂಡುಬಂದರೂ, ಇದು ಬೆಂಗಳೂರಿನ ಮೂಲಸೌಕರ್ಯ ಮತ್ತು ಒಳಚರಂಡಿ ವ್ಯವಸ್ಥೆಗಳಲ್ಲಿನ ಗಂಭೀರ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಈ ಪುನರಾವರ್ತಿತ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಗರದ ಪ್ರಮುಖ ವ್ಯಾಪಾರ ಜಿಲ್ಲೆಗಳಲ್ಲಿ ಸರಿಯಾದ ಪ್ರವಾಹ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಇದು ಎಚ್ಚರಿಕೆಯ ಕರೆಯಾಗಿದೆ ಎಂದು ಎಚ್ಚರಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಏನಿದೆ ಪ್ರತಿಕ್ರಿಯೆ
ವಾವ್, ಅದೊಂದು ಲೇಕ್ ಆಗಿತ್ತು. ನಿಜವಾಗಿಯೂ ನೀರು ಸರಿಯಾಗಿಯೇ ಹರಿಯತ್ತಿದೆ. ಅದಕ್ಕೆ ತನ್ಕ ಹರಿವಿನ ದಾರಿ ಗೊತ್ತಿದೆ ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಈ ಟೆಕ್ ಪಾರ್ಕ್ ಹೊರ ವರ್ತುಲ ರಸ್ತೆಯ ಸಮೀಪ ನಾಗವಾರ ಕೆರೆ ದಂಡೆಯಲ್ಲೇ ಇದೆ. ಇದು ನಿಜಕ್ಕೂ ಭಯ ಹುಟ್ಟಿಸುವಂಥದ್ದು ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಮುಂಜಾನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಾನ್ಯತಾ ಟೆಕ್ ಪಾರ್ಕ್ ಜೊತೆಗೆ, ಗೆದ್ದಲಹಳ್ಳಿ ರೈಲ್ವೆ ಕೆಳಸೇತುವೆ ಮತ್ತು ಆರ್‌ಜಿಎ ಟೆಕ್ ಪಾರ್ಕ್ ಜಂಕ್ಷನ್‌ನ ದೃಶ್ಯಗಳಿರುವ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿವೆ.
ಬೆಂಗಳೂರಲ್ಲಿ ಇನ್ನೂ ಒಂದು ದಿನ ಮಳೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ಎಚ್ಚರಿಸಿದೆ.