ರಾಜಧಾನಿ ಬೆಂಗಳೂರಿನಲ್ಲಿ 36 ಮಿಮೀ ಮಳೆ ದಾಖಲು; ಮಹಾಮಳೆಗೆ ರಸ್ತೆಗಳು ಜಲಾವೃತ, ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು
ಕನ್ನಡ ಸುದ್ದಿ  /  ಕರ್ನಾಟಕ  /  ರಾಜಧಾನಿ ಬೆಂಗಳೂರಿನಲ್ಲಿ 36 ಮಿಮೀ ಮಳೆ ದಾಖಲು; ಮಹಾಮಳೆಗೆ ರಸ್ತೆಗಳು ಜಲಾವೃತ, ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು

ರಾಜಧಾನಿ ಬೆಂಗಳೂರಿನಲ್ಲಿ 36 ಮಿಮೀ ಮಳೆ ದಾಖಲು; ಮಹಾಮಳೆಗೆ ರಸ್ತೆಗಳು ಜಲಾವೃತ, ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು

Bengaluru Rains: ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ಅಪಾರ್ಟ್​ಮೆಂಟ್​​ಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸರಾಸರಿ 36 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಮಹಾಮಳೆಗೆ ರಸ್ತೆಗಳು ಜಲಾವೃತ, ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು
ಮಹಾಮಳೆಗೆ ರಸ್ತೆಗಳು ಜಲಾವೃತ, ಅಪಾರ್ಟ್​ಮೆಂಟ್​ಗೆ ನುಗ್ಗಿದ ನೀರು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಅಕ್ಟೋಬರ್​ 5ರ ರಾತ್ರಿ ಗುಡುಗು-ಮಿಂಚು ಸಹಿತ ವ್ಯಾಪಕ ಮಳೆ ಸುರಿದಿದ್ದು, ಭಾರಿ ಅವಾಂತರ ಸೃಷ್ಟಿಸಿದೆ. ಸಂಜೆ ಆರಂಭವಾದ ಮಳೆ ತಡರಾತ್ರಿವರೆಗೂ ಬಿಟ್ಟೂಬಿಡದೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಅಂಡರ್​ಪಾಸ್​​ಗಳಲ್ಲಿ ನೀರು ತುಂಬಿದ್ದು, ವಾಹನ ಸಂಚಾರಕ್ಕೂ ಸಾಕಷ್ಟು ಸಮಸ್ಯೆ ಉಂಟಾಗುವಂತೆ ಮಾಡಿತು. ನಗರದಲ್ಲಿ ಸರಾಸರಿ 36 ಮಿಲಿಮೀಟರ್​ ಮಳೆ ದಾಖಲಾಗಿದ್ದು, ಇನ್ನೂ ಒಂದು ವಾರ ಮಳೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಸರ್ಜಾಪುರ, ಸಿಲ್ಕ್​ಬೋರ್ಡ್ ಜಂಕ್ಷನ್, ಓಕುಳಿಪುರ, ಅಂಡರ್​​ಪಾಸ್, ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗ, ಕೆಆರ್​ ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್​ಪೇಟೆ, ಕಾಟನ್​ ಪೇಟೆ, ವಿಜಯನಗರ, ಕಾಮಾಕ್ಷಿಪಾಳ್ಯ, ಮೆಜೆಸ್ಟಿಕ್, ಮೈಸೂರು ರಸ್ತೆ, ಬಸವನಗುಡಿ, ಮಲ್ಲೇಶ್ವರಂ, ಜೆಪಿ ನಗರ, ಹೆಬ್ಬಾಳ, ಯಲಹಂಕ, ಸೇರಿದಂತೆ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದವು. ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಅಲ್ಲದೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಟ್ರಾಫಿಕ್ ಪೊಲೀಸರು ಪರದಾಡಿದರು. ಅಲ್ಲದೆ, ಬಹುತೇಕ ಕಡೆ ಮನೆಗಳಿಗೆ ನೀರು ನುಗ್ಗಿದೆ. ತಡರಾತ್ರಿವರೆಗೂ ಮಳೆ ಸುರಿಯುತ್ತಿತ್ತು.

ಅಪಾರ್ಟ್​ಮೆಂಟ್ ಮತ್ತು ವೃದ್ಧಾಶ್ರಮಕ್ಕೆ ನುಗ್ಗಿದ ನೀರು

ಪ್ರತಿವರ್ಷದಂತೆ ಈ ಬಾರಿಯೂ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್​ಗೂ ನೀರು ನುಗ್ಗಿದ್ದು​, ಜಲಾವೃತವಾಗಿದೆ. ಇಲ್ಲಿನ 603 ಫ್ಲಾಟ್​ಗಳಲ್ಲಿ 2 ಸಾವಿರ ನಿವಾಸಿಗಳಿಗೆ ಜಲದಿಗ್ಭಂಧನ ಹಾಕಿತ್ತು. 80ಕ್ಕೂ ಅಧಿಕ ಕಾರು, ನೂರಕ್ಕೂ ಅಧಿಕ ಬೈಕ್​​​ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಅಪಾರ್ಟ್​ಮೆಂಟ್​ ಕೆಳಭಾಗ ಜಲಾವೃತವಾದ ಕಾರಣ ಟ್ರಾಕ್ಟರ್​ ಮೂಲಕ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಬೋಟ್, ಟ್ರ್ಯಾಕ್ಟರ್ ಮೂಲಕ ಆಹಾರ-ನೀರು ಪೂರೈಕೆ ಮಾಡಲಾಗಿದೆ. ಬಿರುಸಿನ ಮಳೆಯ ಕಾರಣ ಬಸವೇಶ್ವರನಗರದ ವೃದ್ಧಾಶ್ರಮಕ್ಕೆ ನೀರು ನುಗ್ಗಿದೆ. ಫ್ಲೈವುಡ್ ಹಾಗೂ ಗ್ಲಾಸ್ ಅಂಗಡಿಯೂ ಜಲಾವೃತವಾಗಿತ್ತು.

ಕಾಂಪೌಂಡ್ ಕುಸಿತ, ಕುಟುಂಬಸ್ಥರು ರಾತ್ರಿಯಿಡೀ ಜಾಗರಣೆ

ಮಹಾಮಳೆಗೆ ಬಿನ್ನಿ ಇಟಾ ಮಾಲ್​ನ ಹಿಂಭಾಗದಲ್ಲಿದ್ದ ಕಾಂಪೌಂಡ್ ಕುಸಿದಿದೆ. ಇದರ ಪರಿಣಾಮ ಕಂಬ ವಾಲಿದ್ದು, ನಿವಾಸಿಗಳು ಮನೆಯಿಂದ ಹೊರಗೆ ಬಾರದ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಹಲವು ಬೈಕ್​​ಗಳು ಜಖಂ ಆಗಿವೆ. ಇನ್ನು ಯಲಹಂಕದ ಅಟ್ಟೂರು ಲೇಔಟ್​ನಲ್ಲಿ ವರುಣ ಆರ್ಭಟಿಸಿದ್ದು, ಮನೆಗಳಲ್ಲಿ ಗೃಹಪಯೋಗಿ ವಸ್ತುಗಳು ನೀರುಪಾಲಾಗಿವೆ. ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕಲು ಕುಟುಂಬ ಸದಸ್ಯರು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು. ಟಿ ದಾಸರಹಳ್ಳಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ಹೆದ್ದಾರಿಗಳು ಕೆರೆಯಂತಾಗಿದ್ದವು. ಸಂಚಾರ ದಟ್ಟಣೆಯೂ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ನಗರದಲ್ಲಿ ಎಲ್ಲೆಲ್ಲಿ, ಎಷ್ಟು ಮಳೆ

ಕೊಟ್ಟೆಗೆಪಾಳ್ಯ - 113 ಮಿಲಿ ಮೀಟರ್​

ಹಂಪಿನಗರ - 108 ಮಿಲಿ ಮೀಟರ್

ನಾಗಪುರ - 107.5 ಮಿಲಿ ಮೀಟರ್

ಚೌಡೇಶ್ವರಿ - 79.5 ಮಿಲಿ ಮೀಟರ್

ಮಾರುತಿಮಂದಿರ - 75.5 ಮಿಲಿ ಮೀಟರ್

ನಂದಿನಿ ಲೇಔಟ್ - 71.5 ಮಿಲಿ ಮೀಟರ್

ರಾಜಾಜಿನಗರ - 59 ಮಿಲಿ ಮೀಟರ್

ನಾಯಂಡಹಳ್ಳಿ - 46 ಮಿಲಿ ಮೀಟರ್

ಹೆಚ್​ಎಎಲ್ ಏರ್ಪೋರ್ಟ್ - 45 ಮಿಲಿ ಮೀಟರ್

ವಿದ್ಯಾರಣ್ಯಪುರ - 45 ಮಿಲಿ ಮೀಟರ್

ಪುಟ್ಟೇನಹಳ್ಳಿ - 42.5 ಮಿಲಿ ಮೀಟರ್

ರಾಜರಾಜೇಶ್ವರಿ ನಗರ - 42.5 ಮಿಲಿ ಮೀಟರ್

ರಾಜಮಹಲ್ ಗುಟ್ಟಹಳ್ಳಿ - 42.5 ಮಿಲಿ ಮೀಟರ್

ಬೆಂಗಳೂರು ನಗರದಲ್ಲಿ ಒಟ್ಟಾರೆ ಸರಾಸರಿ 36 ಮಿ.ಮೀ ಮಳೆ ದಾಖಲಾಗಿದೆ.

 

 

Whats_app_banner