ಬೆಂಗಳೂರು ಮಳೆ; ಹರಿಯುತ್ತಿರುವ ಮಳೆ ನೀರ ಹಳ್ಳದ ನಡುವೆ ರಸ್ತೆ ಎಲ್ಲಿ ಎಂದು ಹುಡುಕುವ ಸ್ಥಿತಿ ನಿರ್ಮಾಣ, ತಲ್ಲಣದ ಚಿತ್ರಣದ ವೈರಲ್ ವಿಡಿಯೋ
ಬೆಂಗಳೂರು ಮಳೆ; ಸತತ ಮಳೆಗೆ ಬೆಂಗಳೂರು ತಲ್ಲಣಗೊಂಡಿದ್ದು, ವಾಹನ ಸವಾರರು ರಸ್ತೆ ಹುಡುಕಾಡತೊಡಗಿದ್ದಾರೆ. ಒಂದೆಡೆ ರಸ್ತೆ ಗುಂಡಿ ಕಾಟವಾದರೆ, ಇನ್ನೊಂದೆ ಜಲಾವೃತಗೊಂಡ ರಸ್ತೆ. ಇದರಲ್ಲಿ ಸಂಚಾರ ಮಾಡುವುದು ಸವಾಲಿನ ಕೆಲಸ. ಈ ಚಿತ್ರಣ ನೀಡುವ ವೈರಲ್ ವಿಡಿಯೋ, ಬೆಂಗಳೂರು ಸಂಚಾರ ಪೊಲೀಸರು ಹಂಚಿಕೊಂಡ ವಿಡಿಯೋ ವಿವರ ಇಲ್ಲಿದೆ.
ಬೆಂಗಳೂರು: ಸತತ ಮಳೆಯಿಂದ ಬೆಂಗಳೂರು ಮತ್ತು ಬೆಂಗಳೂರಿಗರು ಕಂಗೆಟ್ಟು ಹೋಗಿದ್ದಾರೆ. ರಸ್ತೆಗಳು ಜಲಾವೃತವಾಗಿದ್ದು, ರಸ್ತೆಗುಂಡಿಗಳ ಆತಂಕ ಒಂದೆಡೆಯಾದರೆ, ರಸ್ತೆ ಎಲ್ಲಿದೆ ಎಂದು ಹಳ್ಳದಂತೆ ಹರಿಯುತ್ತಿರುವ ನೀರಿನ ನಡುವೆ ಹುಡುಕಾಡುವ ಪರಿಸ್ಥಿತಿ ಎದುರಾಗಿದೆ. ವಿವಿಧ ಪ್ರದೇಶಗಳಲ್ಲಿ ರಸ್ತೆಗಳಲ್ಲೇ ಮೊಣಕಾಲು ಮಟ್ಟದ ನೀರು ಹರಿಯುತ್ತಿದ್ದು, ವಾಹನ ಸಂಚಾರ ಕಷ್ಟವಾಗಿದೆ. ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಂಗಳೂರು ಸಂಚಾರ ಪೊಲೀಸರು ನಗರದಾದ್ಯಂತ ಹಲವು ಪ್ರದೇಶಗಳಲ್ಲಿ ಜಲಾವೃತ ಮತ್ತು ನಿಧಾನಗತಿಯ ಟ್ರಾಫಿಕ್ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆಯ ಸರಣಿ ಸಲಹೆಗಳನ್ನು ನೀಡುತ್ತಲೇ ಇದ್ದಾರೆ. ವಾಡಿಕೆಯಂತೆ ಪಣತ್ತೂರು ಅಂಡರ್‌ಪಾಸ್ ಮತ್ತೆ ಜಲಾವೃತ್ತವಾಗಿದೆ. ಒಟ್ಟಾರೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಾಹನ ಸವಾರರು ರಸ್ತೆ ಎಲ್ಲಿ ಎಂದು ಹುಡುಕಾಡಬೇಕಾದ ಪರಿಸ್ಥಿತಿಗೆ ಬಂದು ತಲುಪಿದೆ ಬ್ರ್ಯಾಂಡ್ ಬೆಂಗಳೂರು ಎಂದು ಬೆಂಗಳೂರಿಗರು ವ್ಯಾಪಕ ಆಕ್ರೋಶ, ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಚಲ್ಲಘಟ್ಟ- ಕೆಂಪಾಪುರ ರಸ್ತೆ ಎಲ್ಲಿದೆ
ಜೀವನ್ ಭಿಮಾ ನಗರದ ಚಲ್ಲಘಟ್ಟದಲ್ಲಿ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಕೆಂಪಾಪುರ ಕಡೆಗೆ ನಿಧಾನಗತಿಯ ಸಂಚಾರವಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಇದರ ಜೊತೆಗೆ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಹರಿಯುತ್ತಿರುವ ಹಳ್ಳದ ನಡುವೆ ರಸ್ತೆ ಹುಡುಕಬೇಕಾದ ಸ್ಥಿತಿ ಕಂಡುಬಂದಿದೆ.
ಎಲ್ಲೆಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನಗತಿಯ ಟ್ರಾಫಿಕ್
1) ಮಿಷನ್ ರಸ್ತೆ ಯಿಂದ ಶಾಂತಿ ನಗರ ಜಂಕ್ಷನ್ ಕಡೆಗೆ
2) ಪಾಣತ್ತೂರು ರೈಲ್ವೆ ಕೆಳಸೇತುವೆ ಹತ್ತಿರ
3) ಟ್ರಿನಿಟಿ ವೃತ್ತ ದಿಂದ ಎಸಿಎಸ್ ಕೇಂದ್ರದ ಕಡೆಗೆ
4) ಕಂಟೋನ್ಮೆಂಟ್ ರೈಲ್ವೆ ಸೇತುವೆ ಹತ್ತಿರ
5) ದೀಪಾಂಜಲಿ ನಗರ ಮೆಟ್ರೋ ನಿಲ್ದಾಣ ದಿಂದ ನಗರದ ಕಡೆಗೆ
6) 80 ಅಡಿ ರಸ್ತೆ, ಶ್ರೀನಿವಾಗಿಲು ಮುಖ್ಯ ರಸ್ತೆಯಲ್ಲಿ
7) ಮಡಿವಾಳ ಪೊಲೀಸ್ ಠಾಣೆ, ಎಂಸಿಎಚ್‌ಎಸ್ ಕಾಲೋನಿ, ಸ್ಯಾಂಕಿ ರಸ್ತೆ, ಹಳೆ ಹೈಗ್ರೌಂಡ್, ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್, ಕಾವೇರಪ್ಪ ಬಡಾವಣೆ, ವಸಂತನಗರ, ಮಿಲ್ಲರ್ಸ್ ರಸ್ತೆ, ರಾಮಕೃಷ್ಣನಗರ, ಗಂಗಾನಗರ, ಕೆಆರ್ ಸರ್ಕಲ್ ಅಂಡರ್ ಪಾಸ್
8) ವಡ್ಡರಪಾಳ್ಯ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ, ವಿಮಾನ ನಿಲ್ದಾಣದ ಕಡೆಗೆ ನಿಧಾನಗತಿಯ ಸಂಚಾರ
9) ಕೊಡೆ ಜಂಕ್ಷನ್, ವಿಂಡ್ಸರ್ ಮ್ಯಾನರ್ ರೈಲ್ವೆ ಸೇತುವೆ, ಸ್ಯಾಂಕಿ ರಸ್ತೆ, ಪಿಜಿ ಹಳ್ಳಿ, ಮಿಲ್ಲರ್ಸ್ ರಸ್ತೆ ಕೆಳಸೇತುವೆಯಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರ
80 ಅಡಿ ರಸ್ತೆಯ ಪರಿಸ್ಥಿತಿ
ಸಿಐಡಿ ಕಚೇರಿ, ಸಿಬಿಡಿ, ಅರಮನೆ ರಸ್ತೆ, ಗಜೇಂದ್ರ ನಗರ, ನೆಲ್ಲಸಂದ್ರ, ಹೊಸೂರು ರಸ್ತೆ, ಸಿದ್ದಾಪುರ ರಸ್ತೆ, ವಿಲ್ಸನ್ ಗಾರ್ಡನ್, ಜಯಮಹಲ್ ರಸ್ತೆ, ಜೆಸಿ ನಗರ, ಕಾಫಿ ಬೋರ್ಡ್ ಲೇಔಟ್, ಬನ್ನೇರುಘಟ್ಟ ರಸ್ತೆ ಮತ್ತು ಜಯನಗರದಂತಹ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿರುವ ಕಾರಣ ಸಂಚಾರ ನಿಧಾನಗತಿಯಲ್ಲಿವೆ. ಬಸವೇಶ್ವರ ನಗರ, ಮಲ್ಲೇಶ್ವರಂ, ಯಶವಂತಪುರ, ಹೆಬ್ಬಾಳ ಮತ್ತು ರಾಜರಾಜೇಶ್ವರಿ ನಗರದಲ್ಲಿ ಭಾರೀ ಮಳೆಯಾಗಿದೆ.
ಇದಲ್ಲದೆ, ಆಡುಗೋಡಿಯ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಬಿಡಿಎ ಜಂಕ್ಷನ್ ಕಡೆಗೆ ಮರ ಬಿದ್ದಿದೆ. ಅದನ್ನು ಅಲ್ಲಿಂದ ತೆರವುಗೊಳಿಸುವ ಕಾರ್ಯಾಚರಣೆ ನಡೆದಿದೆ. ಈ ಸಮಯದಲ್ಲಿ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ, ನಿವಾಸಿಗಳು ತಕ್ಷಣದ ಸಹಾಯಕ್ಕಾಗಿ 112 ಗೆ ಕರೆ ಮಾಡಬಹುದು.
ಹವಾಮಾನ ಮುನ್ಸೂಚನೆಯ ಪ್ರಕಾರ, ಬೆಂಗಳೂರು ನಗರದಲ್ಲಿ ನಿರಂತರ ಮಳೆಯ ಕಾರಣ ಸೋಮವಾರ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಆದಾಗ್ಯೂ, ಶಿಕ್ಷಣ ಸಂಸ್ಥೆಗಳ ಪೈಕಿ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.