ಬೆಂಗಳೂರಲ್ಲಿ ಭಾರಿ ಮಳೆ, ಸಂಜೆ 5ಕ್ಕೆ ಶುರುವಾದ ವರ್ಷಧಾರೆಗೆ ರಸ್ತೆಗಳು ಜಲಾವೃತ, ಸಂಚಾರ ಅಸ್ತವ್ಯಸ್ತ
Bengaluru Weather Today; ಬೆಂಗಳೂರು ಮಹಾನಗರದಲ್ಲಿ ಇಂದು ಸಂಜೆ 5ಕ್ಕೆ ಶುರುವಾದ ವರ್ಷಧಾರೆಗೆ ರಸ್ತೆಗಳು ಜಲಾವೃತವಾಗಿವೆ. ಬೆಂಗಳೂರಲ್ಲಿ ಭಾರಿ ಮಳೆಯ ಕಾರಣ ಜನಜೀವನ ಅಸ್ತವ್ಯಸ್ತವಾಗಿದ್ದು, ಸಂಚಾರಕ್ಕೂ ಅಡ್ಡಿಯಾಗಿದೆ.
ಬೆಂಗಳೂರು: ಕರಾವಳಿ ಕರ್ನಾಟಕದಲ್ಲಿ ಮಳೆ ಕಡಿಮೆಯಾದ ಬೆನ್ನಿಗೆ ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗ ತೊಡಗಿದೆ. ಸೋಮವಾರ (ಆಗಸ್ಟ್ 5) ಸಂಜೆ 5 ಗಂಟೆ ಸುಮಾರಿಗೆ ಶುರುವಾದ ಮಳೆ ರಾತ್ರಿ ಹತ್ತಾದರೂ ನಿಂತಿಲ್ಲ. ಅನೇಕ ಕಡೆ ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ.
ಸಂಜೆ ಹಗುರವಾಗಿ ಬೀಳುತ್ತಿದ್ದ ಮಳೆ ರಾತ್ರಿಯಾಗುತ್ತಿದ್ದಂತೆ ತೀವ್ರಗೊಂಡಿದೆ. ಹೀಗಾಗಿ ಬೆಂಗಳೂರಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತವಾಗಿವೆ. ವಾಹನ ಸವಾರರು ಸಂಚಾರದಲ್ಲಿ ತೊಂದರೆ ಅನುಭವಿಸಿದ್ದಾರೆ. ಶಾಂತಿನಗರ, ವಿಜಯನಗರ, ಜಯನಗರ, ಕೆ.ಆರ್.ಮಾರ್ಕೆಟ್, ಬನಶಂಕರಿ, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ವೃತ್ತ, ವಿಧಾನಸೌಧ, ಕೆಂಗೇರಿ, ರಾಜರಾಜೇಶ್ವರಿನಗರ, ಈಜಿಪುರ ಸುತ್ತಮುತ್ತ ಭಾರೀ ವರ್ಷಧಾರೆಯಾಗಿದೆ.
ಬೆಂಗಳೂರು ಮಹಾನಗರದಲ್ಲಿ ಎಲ್ಲೆಲ್ಲಿ ಹೆಚ್ಚು ಮಳೆಯಾಗುತ್ತಿದೆ?
ಬೆಂಗಳೂರು ದಕ್ಷಿಣ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಇಂದು ರಾತ್ರಿ ಧಾರಕಾರ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ವೆದರ್ ಅಟ್ ಬೆಂಗಳೂರು ಎಕ್ಸ್ ಖಾತೆಯಲ್ಲಿ ಈ ಕುರಿತ ಮಾಹಿತಿ ಶೇರ್ ಆಗಿದೆ. ಇದರಂತೆ, ಜೂನ್ ತಿಂಗಳ 69 ಮಿ.ಮೀ. ದಾಖಲೆ ಮಳೆಯ ಬಳಿಕ ಇಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಇದೇ ಮೊದಲು. ಬನಶಂಕರಿ, ಕೆಂಗೇರಿ, ಆರ್ ಆರ್ ನಗರ, ನಾಯಂಡಹಳ್ಳಿ, ವಿ ನಾಗೇನಹಳ್ಳಿ, ಕಬ್ಬನ್ ಪಾರ್ಕ್ ಭಾಗದಲ್ಲಿ ಧಾರಾಕಾರ ಮಳೆಯಾಗಲಿದೆ.
ಬೆಂಗಳೂರಿನ ರಸ್ತೆಯಲ್ಲಿ ಎದುರು ಇರುವ ವಾಹನ ಕಾಣದಷ್ಟು ಧಾರಾಕಾರ ಮಳೆಯಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ.
ಕೆಂಗೇರಿಯಲ್ಲೂ ಬಹಳ ಹೊತ್ತಿನಿಂದ ಧಾರಾಕಾರ ಮಳೆಯಾಗುತ್ತಿದೆ. ಅನೇಕರು ಮನೆ ಸೇರಲಾಗದೆ ರಸ್ತೆ ಬದಿ ನಿಂತುಕೊಂಡು ವಿಡಿಯೋವನ್ನು ಎಕ್ಸ್‌ಖಾತೆಯಲ್ಲಿ ಶೇರ್ ಮಾಡುತ್ತಿದ್ದಾರೆ. ಅಂತಹ ಒಂದು ವಿಡಿಯೋ ಇಲ್ಲಿದೆ
ಅನಂತ್ ಎಂಬುವವರು ಎರಡು ಗಂಟೆ ಮೊದಲು ಬೆಂಗಳೂರು ಹೀಗಿತ್ತು ಎಂದು ಬೆಂಗಳೂರು ಮಳೆ ಮತ್ತು ಟ್ರಾಫಿಕ್‌ನ ದೃಶ್ಯಗಳನ್ನು ಶೇರ್ ಮಾಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಜಲಾವೃತಗೊಂಡ ರಸ್ತೆಗಳು
ಕರ್ನಾಟಕ ವೆದರ್ ಎಕ್ಸ್ ಖಾತೆಯಲ್ಲಿ ನಾಲ್ಕು ಗಂಟೆ ಮೊದಲು ಬೆಂಗಳೂರಿನ ರಸ್ತೆಗಳು ಧಾರಾಕಾರ ಮಳೆಗೆ ಹೇಗಿದ್ದವು ಎಂಬ ದೃಶ್ಯದ ಪೋಟೋಗಳನ್ನು ಶೇರ ಮಾಡಲಾಗಿದೆ. ಅದರಲ್ಲಿ ಜಲಾವೃತಗೊಂಡ ರಸ್ತೆಗಳು, ಅಂಡರ್‌ಪಾಸ್ ಮತ್ತು ಸಂಚಾರಕ್ಕೆ ಆಗಿರುವ ಅಡ್ಡಿಯನ್ನು ಉಲ್ಲೇಖಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿಕೊಂಡ ಮಳೆಗಾಲದ ಪೂರ್ವತಯಾರಿ ಸಾಲದು ಎಂಬುದನ್ನು ಎತ್ತಿತೋರಿಸಿರುವ ಪೋಸ್ಟ್, ಬೆಂಗಳೂರಿಗರ ಸಮಸ್ಯೆಯನ್ನು ಜಗತ್ತಿನೆದುರು ಅನಾವರಣಗೊಳಿಸಲಾಗಿದೆ.
ರಾಜರಾಜೇಶ್ವರಿ ನಗರದಲ್ಲಿ ಸಂಜೆ 5.15ಕ್ಕೆ ಮಳೆ ಬೀಳುತ್ತಿದ್ದಾಗ ಕೆಲವರು ವಿಡಿಯೋ ಮಾಡಿ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಪೈಕಿ ಒಂದು ವಿಡಿಯೋ ಇಲ್ಲಿದೆ.
ಸಂಚಾರ ಸಲಹೆ: ಟಿನ್ ಫ್ಯಾಕ್ಟರಿ ಕಡೆಯಿಂದ ಕಸ್ತೂರಿ ನಗರ ಕಡೆಗೆ ಹೋಗುವ ಮಾರ್ಗದಲ್ಲಿ ಗ್ರಾಂಡ್ ಸೀಸನ ಹೋಟೆಲ್ ಹತ್ತಿರ ಮಳೆ ನೀರು ನಿಂತಿರುವುದರಿಂದ ರಾಮಮೂರ್ತಿ ನಗರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದನ್ನು ಶೀಘ್ರವೇ ತೆರವುಗೊಳಿಸಲಾಗುತ್ತಿದ್ದು, ವಾಹನ ಸವಾರರು/ಚಾಲಕರು ಸಹಕರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಕೋರಿದ್ದಾರೆ.
ಇದೇ ರೀತಿ, ಹೆಬ್ಬಾಳ ವೃತ್ತದಲ್ಲಿ ನೀರು ನಿಂತಿರುವುದರಿಂದ ವೀರಣ್ಣಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿದೆ. ಉದಯ ಟಿವಿ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ , ಜಯಮಹಲ್ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿದೆ. ನಾಗವಾರ ರಸ್ತೆಯಲ್ಲಿ ನೀರು ನಿಂತಿರುವುದರಿಂದ, ಹೆಣ್ಣೂರು ಕಡೆಗೆ ನಿಧಾನಗತಿಯ ಸಂಚಾರವಿದೆ. ಹೆಣ್ಣೂರ್ ರಸ್ತೆ ಬಳಿ ನೀರು ನಿಂತಿರುವುದರಿಂದ , ಹೆಬ್ಬಾಳ ಸರ್ವಿಸ್ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿರುವುದಾಗಿ ಪೊಲೀಸರು ತಿಳಿಸಿದ್ದಾರೆ.