ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ; ಬೆಂಗಳೂರು ಮೂಲದ ಇಬ್ಬರು ವೈದ್ಯರು ಕೊಯಮತ್ತೂರಿನಲ್ಲಿ ಎನ್‌ಐಎ ವಶಕ್ಕೆ
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಬೆಂಗಳೂರು ಮೂಲದ ಇಬ್ಬರು ವೈದ್ಯರನ್ನು ಕಾಯಮತ್ತೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಇವರಿಂದ ಸಿಕ್ಕ ಮಾಹಿತಿ ಆಧರಿಸಿ ದೇಶದ ವಿವಿಧೆಡೆ ದಾಳಿ ಮುಂದವರಿಸಿದೆ.

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ (Rameshwaram Cafe Blast Case) ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿವಿಧ ರಾಜ್ಯಗಳಿಗೆ ಸೇರಿದ ಹಲವು ಪ್ರದೇಶಗಳಲ್ಲಿ ಮಂಗಳವಾರ (ಮೇ 21) ದಾಳಿ ನಡೆಸಿದೆ. ಕೊಯಮತ್ತೂರಿನ ಇಬ್ಬರು ವೈದ್ಯರ ಮನೆಗಳ ಮೇಲೆ ದಾಳಿ ನಡೆಸಿದೆ. ಈ ಇಬ್ಬರೂ ವೈದ್ಯರು ಬೆಂಗಳೂರಿನವರೇ ಆಗಿದ್ದು, ಕೊಯಮತ್ತೂರಿನ ಸಾಯಿಬಾಬಾ ಕಾಲೋನಿಯ ಖಾಸಗಿ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ. ಈ ಇಬ್ಬರ ವೈದ್ಯರ ಮನೆಗಳ ಮೇಲೆ ಬೆಳಗ್ಗೆ 8 ಗಂಟೆಯಿಂದಲೇ ದಾಳಿ ನಡೆದಿದೆ. ರಾಮೇಶ್ವರಂ ಕೆಫೆ ಮೇಲೆ ನಡೆದ ದಾಳಿಯಲ್ಲಿ ಇವರ ಪತ್ರ ಇದೆಯೇ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹೈದರಾಬಾದ್‌ನಲ್ಲಿ ಪುಣೆ ಮೂಲದ ಉದ್ಯಮಿಯೊಬ್ಬರನ್ನು ಬಂಧಿಸಲಾಗಿದೆ. 50 ವರ್ಷದ ಆಸುಪಾಸಿನ ಈತ ಈ ಹಿಂದೆ ಪ್ರಕರಣವೊಂದರಲ್ಲಿ ಕರ್ನಾಟಕದಲ್ಲಿ ಶಿಕ್ಷೆ ಅನುಭವಿಸಿದ್ದ ಎಂದು ತಿಳಿದು ಬಂದಿದೆ. ಈತ ನಾಂದೇಡ್‌ನಲ್ಲಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದಾನೆ. ಇನ್ನೂ ಹಲವು ದಿನಗಳ ಕಾಲ ದಾಳಿ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತ ಉಗ್ರರು ನೀಡಿದ ಮಾಹಿತಿ ಆಧಾರದಲ್ಲಿ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆ ಮತ್ತು ಬನಶಂಕರಿಯಲ್ಲೂ ದಾಳಿ ನಡೆದಿತ್ತು. ಎನ್‌ಐಎ ಅಧಿಕಾರಿಗಳು ಮಾರ್ಚ್ 3 ರಂದು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಾದ ಏಪ್ರಿಲ್ 12 ರಂದು ಅಬ್ದುಲ್ ಮಥೀನ್ ಅಹಮದ್ ತಾಹಾ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿತ್ತು.
ಪಶ್ಚಿಮ ಬಂಗಾಳದ ಕೊಲ್ಕತ್ತಾದ ಲಾಡ್ಜ್‌ವೊಂದರಲ್ಲಿ ಮಸಾವೀರ್ ಹುಸೇನ್ ಶಾಝಿಬ್ ಹಾಗೂ ತಾಹಾ ಇಬ್ಬರನ್ನು ಬಂಧಿಸಲಾಗಿತ್ತು. ಇವರಿಬ್ಬರು ಸಂಚು ರೂಪಿಸಿ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಇರಿಸಿದ್ದರು. ಇವರಿಬ್ಬರೂ ಗುರುತು ಮರೆಸಿಕೊಂಡು ವಿವಿಧ ರಾಜ್ಯಗಳಲ್ಲಿ ಸಂಚರಿಸುತ್ತಿದ್ದರು. ಹಿಂದೂ ಹೆಸರಿನಲ್ಲಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತನಿಖೆ ಚುರುಕು
ಈ ಇಬ್ಬರೂ ಭಯೋತ್ಪಾದಕರು ಶಿವಮೊಗ್ಗ ಜಿಲ್ಲೆಗೆ ಸೇರಿದ್ದು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನಾ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಎನ್‌ಐಎ ತಿಳಿಸಿತ್ತು. ಇವರನ್ನು ಪತ್ತೆ ಹಚ್ಚಲು ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಎನ್ಐಎ ತಂಡಗಳು ಶೋಧ ನಡೆಸಿದ್ದವು. ಆರೋಪಿಗಳ ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಪುನಾರಂಭ
ಇದೇ ವರ್ಷದ ಮಾರ್ಚ್ 1 ರಂದು ಬೆಂಗಳೂರಿನ ಬ್ರೂಕ್ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡು ಹಲವು ಗ್ರಾಹಕರು ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಈಗಾಗಲೇ ಹಲವರನ್ನು ವಶಕ್ಕೆ ಪಡೆದಿದೆ. ಇವರಿಂದ ಲಭ್ಯವಾದ ಮಾಹಿತಿಯನ್ನು ಆಧರಿಸಿ ದೇಶದ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಲಾಗುತ್ತಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)