ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವಾಗ ಹೀಗೂ ವಂಚನೆಗೆ ಒಳಗಾಗಬಹುದು; ಹೊಸ ವಂಚನಾ ವಿಧಾನದ ಬಗ್ಗೆ ತಿಳ್ಕೊಂಡು ಜಾಗರೂಕರಾಗಿರಿ
Rental fraud in Bengaluru: ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕಾಟವೇ ಒಂದು ಸಾಹಸ. ವಂಚನೆಗೆ ಬಲಿಯಾಗುವುದು ಕೂಡ ಸುಲಭ. ಬಾಡಿಗೆದಾರರು ಮತ್ತು ಮನೆ ಮಾಲೀಕರು ಇಬ್ಬರೂ ಇಂತಹ ವಂಚನೆಗಳನ್ನು ಆಗಾಗ್ಗೆ ಎದುರಿಸುತ್ತಿರುತ್ತಾರೆ. ಹೊಸ ಮಾದರಿ ವಂಚನೆಯನ್ನು ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
Rental fraud in Bengaluru: ಬೆಂಗಳೂರಿಗರಿಗೆ ನಿತ್ಯವೂ ವಂಚನೆಗಳ ನಾನಾ ಮುಖಗಳ ಪರಿಚಯವಾಗುತ್ತಲೇ ಇರುತ್ತದೆ. ಹೊಸ ಹೊಸ ವಿಧಾನಗಳನ್ನು ಅನುಸರಿಸಿ ವಂಚನೆ ಮಾಡುತ್ತ ಹಣ ಮಾಡುವ ಜನರು ಮತ್ತು ಇವುಗಳ ಅರಿವು ಇಲ್ಲದೇ ಮುಗ್ಧತೆಯ ಕಾರಣಕ್ಕೆ ವಂಚನೆಗೆ ಒಳಗಾಗುತ್ತಲೇ ಇರುತ್ತಾರೆ. ಬೆಂಗಳೂರಿನಲ್ಲಿ ಅತ್ಯಂತ ಕಷ್ಟದ ಕೆಲಸ ಅಂದ್ರೆ ಬಾಡಿಗೆ ಮನೆ ಹುಡುಕುವುದು. ಬ್ರೋಕರ್‌ಗಳ ಮೂಲಕ ಹೋದರೆ ಅವರಿಗೆ ಒಂದು ತಿಂಗಳ ಬಾಡಿಗೆ ಹಣ ಕೊಡಬೇಕು. ನೇರವಾಗಿ ಹೋಗಿ ಹುಡುಕಾಡುವಷ್ಟು ಸಮಯ ಇರೋದಿಲ್ಲ. ಜಾಹೀರಾತು ನೋಡಿ ಫೋನ್ ಮಾಡಿ ಹೋಗಿ ಬಾಡಿಗೆ ಮನೆ ಹಿಡಿಯವುದು ಕೂಡ ಕಷ್ಟ. ವಿಶ್ವಾಸದಿಂದ ನಡೆಯಬೇಕಾದ ವ್ಯವಹಾರಗಳೆಲ್ಲವೂ ಈಗ ಸಂದೇಹದೊಂದಿಗೆ, ವಂಚನೆಗಳ ಭೀತಿಯಲ್ಲೇ ನಡೆಯುತ್ತಿರುವುದು ವಾಸ್ತವ. ಇರಲಿ, ಬೆಂಗಳೂರಿನಲ್ಲಿ ಈಗ ಹೊಸ ರೀತಿಯ ಬಾಡಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆನ್‌ಲೈನ್ ಮೂಲಕ ಬಾಡಿಗೆ ಮನೆ ಹುಡುಕುವವರ ಕಳವಳ ಹೆಚ್ಚಿಸಿದೆ. ಅನಾಮಧೇಯ ವ್ಯಕ್ತಿಯೊಬ್ಬರು ಈ ಹೊಸ ವಂಚನಾ ವಿಧಾನವನ್ನು ಬಹಿರಂಗಪಡಿಸಿದ್ದಾರೆ.
ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವಾಗ ಹೀಗೂ ವಂಚನೆಗೆ ಒಳಗಾಗಬಹುದು
ಆನ್‌ಲೈನ್‌ನಲ್ಲಿರುವ ಜಾಹೀರಾತು ನೋಡಿ ಬಾಡಿಗೆ ಮನೆ ಡೀಲ್ ಕುದುರಿಸುವುದಾದರೆ ಸ್ವಲ್ಪ ಮುಂಜಾಗರೂಕತೆ ಬೇಕು. ಹಲವು ರೀತಿಯಲ್ಲಿ ವಂಚನೆಗಳು ನಡೆಯುತ್ತಿರುವ ಕಾರಣ ಇದು ಅನಿವಾರ್ಯ. ಬಾಡಿಗೆ ಮನೆ ಹುಡುಕುವವರನ್ನು ಗುರಿಯಾಗಿಟ್ಟುಕೊಂಡು ವಂಚಕರು ತಾವೇ ಮನೆಯ ಮಾಲೀಕರಂತೆ ಬಿಂಬಿಸಿಕೊಳ್ಳಬಹುದು. ಬ್ರೋಕರ್‌ಗಳು ಕೂಡ ಕಡಿಮೆ ಏನಲ್ಲ. ಅವರೂ ಮನೆಯ ಬಗ್ಗೆ ಸುಂದರ ಕನಸುಗಳನ್ನು ತುಂಬಬಹುದು. ಟೋಕನ್ ಅಡ್ವಾನ್ಸ್ ಕೊಟ್ಟು ಈಗಲೇ ಬುಕ್ ಮಾಡಿ ಎಂದು ಒತ್ತಡ ಹೇರಬಹುದು. ಆಗ ನೀವೇನಾದರೂ ದುಡ್ಡು ಕೊಟ್ಟರೆ, ಅದನ್ನು ಪಡೆದುಕೊಂಡು ಅವರು ಹೋಗುತ್ತಾರೆ. ನಂತರ ನಿಮ್ಮ ಸಂಪರ್ಕಕ್ಕೆ ಅವರು ಸಿಗುವುದೇ ಇಲ್ಲ. ಇಂತಹ ಒಂದು ವಂಚನೆಯ ಪ್ರಯತ್ನವನ್ನು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ವಿವರಿಸಲಾಗಿದೆ. ಆ ವಿವರಣೆ ಹೀಗಿದೆ-
ಹೊಸ ವಂಚನಾ ವಿಧಾನದ ಬಗ್ಗೆ ತಿಳ್ಕೊಂಡು ಜಾಗರೂಕರಾಗಿರಿ
"ಹಲೋ, ನಾನು ಬೆಂಗಳೂರಿನಲ್ಲಿ ನಡೆಯುತ್ತಿರುವ ಹೊಸ ಹಗರಣದ ಬಗ್ಗೆ ನಿಮ್ಮ ಗಮನಸೆಳೆಯಲು ಬಯಸುತ್ತೇನೆ. ನಾನು ಬೆಳ್ಳಂದೂರು ಪ್ರದೇಶದಲ್ಲಿ 2ಬಿಎಚ್‌ಕೆ ಮನೆಯನ್ನು ಹುಡುಕುತ್ತಿದ್ದೆ. ಆನ್‌ಲೈನ್‌ನಲ್ಲಿ ಪರಿಚಿತರಾದ ಒಬ್ಬ ವ್ಯಕ್ತಿ ನನ್ನ ಬಳಿಗೆ ಬಂದು 2ಬಿಎಚ್‌ಕೆ ಮನೆಯ ತುಂಬಾ ಸುಂದರಮತ್ತು ಆಕರ್ಷಕ ಚಿತ್ರವನ್ನು ಹಂಚಿಕೊಂಡರು.
ಆ 2ಬಿಎಚ್‌ಕೆ ಫ್ಲ್ಯಾಟ್ ಬೆಳ್ಳಂದೂರಿನ ಶೋಭಾ ಜಾಸ್ಮಿನ್ ಕಮ್ಯೂನಿಟಿ ಬಿಲ್ಡಿಂಗ್‌ನಲ್ಲಿದೆ ಎಂದು ಹೇಳಿದವರು, ಅದನ್ನು ಬ್ಲಾಕ್ ಮಾಡಲು ಮುಂಗಡ ಹಣ ಪಾವತಿಸಬೇಕು ಎಂದರು. ಆ ಫ್ಲ್ಯಾಟ್‌ನ ಮಾಲೀಕರು ಹೊಸ ವರ್ಷ ಆಚರಣೆಗಾಗಿ ಬೆಂಗಳೂರಿನಿಂದ ಹೊರಕ್ಕೆ ಹೋಗಿದ್ದಾರೆ. ಆ ಫ್ಲ್ಯಾಟ್‌ಗೆ ಬಹಳ ಬೇಡಿಕೆ ಇದೆ. ಈಗಾಗಲೇ ತುಂಬ ಜನ ಬಂದು ಕೇಳಿದ್ದು, ನಿಮಗೆ ಬೇಕಾದರೆ ಕೂಡಲೇ ಮುಂಗಡ ಹಣ ಪಾವತಿಸಿ. ನಿಮಗೆ ಇದು ಇಷ್ಟವಾಗಿದ್ದರೆ ಈಗಲೇ ಬುಕ್ ಮಾಡಿ ಎಂದು ಹೇಳಿದರು.
ಟೋಕನ್ ಅಡ್ವಾನ್ಸ್ ಆಗಿ 5000 ರೂಪಾಯಿ ಪಾವತಿಸಿ. ಮನೆಗೆ ಭೇಟಿ ನೀಡಿ ನೋಡಿದ ಬಳಿಕ ಇಷ್ಟವಾಗದೇ ಇದ್ದರೆ ಅದನ್ನು ಹಿಂದಿರುಗಿಸಲಾಗುವುದು ಎಂದು ಹೇಳಿದರು. ನನಗದು ಸಮಂಜಸವೆನಿಸಲಿಲ್ಲ. ಆಗ ಆತ 2000 ರೂಪಾಯಿ ಪಾವತಿಸುವಂತೆ ಕೇಳಿದ. ಬೆಳ್ಳಂದೂರಿನ ಶೋಭಾ ಜಾಸ್ಮಿನ್ ಕಮ್ಯೂನಿಟಿಗೆ ಹೋಗಿ ಫ್ಲ್ಯಾಟ್ ನೋಡಿದ ಬಳಿಕ ಟೋಕನ್ ಅಡ್ವಾನ್ಸ್ ಕೊಡುವುದಾಗಿ ಹೇಳಿದೆ.
ಕೊನೆಗೆ ಅಲ್ಲಿ ಹೋಗಿ ನೋಡಿದರೆ, 2ಬಿಎಚ್‌ಕೆ ಮನೆಗಳಲ್ಲೇ ಅದರಲ್ಲಿ ಇರಲಿಲ್ಲ. 3 ಬಿಎಚ್ಕೆ ಮತ್ತು 4 ಬಿಎಚ್‌ಕೆ ಮನೆಗಳಷ್ಟೇ ಇದ್ದವು. ಅದೃಷ್ಟವಶಾತ್ ನಾನು ಮುಂಚಿತವಾಗಿ ದುಡ್ಡುಕೊಟ್ಟಿರಲಿಲ್ಲ" ಎಂದು ಆ ವ್ಯಕ್ತಿ ಉಲ್ಲೇಖಿಸಿರುವುದನ್ನು ಇನ್‌ಸ್ಟಾಗ್ರಾಂನ ನಮ್ಮ ಬೆಂಗಳೂರು ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಇದೇ ವೇಳೆ, ಅನೇಕರು ತಮಗೆ ಅಗಿರುವ ಇದೇ ರೀತಿಯ ಅನುಭವಗಳನ್ನು ಕಾಮೆಂಟ್‌ಗಳ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಪೊಲೀಸರು ಇಂತಹ ವಂಚಕರ ಮೇಲೆ ಕಣ್ಣಿಡಬೇಕು ಎಂದು ಆಗ್ರಹಿಸಿದ್ದಾರೆ.
“ನನಗೂ ಇದೇ ರೀತಿ ಅನುಭವವಾಯಿತು. ನಾನು ಪರಿಶೀಲಿಸಿದ ಫ್ಲಾಟ್ ಜೆಪಿ ನಗರದಲ್ಲಿರುವ ಆದರ್ಶ್ ವಿಹಾರ್ ಆಗಿತ್ತು. ಮ್ಯಾಜಿಕ್‌ಬ್ರಿಕ್ಸ್‌ನಲ್ಲಿ ನೋಡಿದ ಮಾಹಿತಿ ಆಧರಿಸಿ ಅಲ್ಲಿ ಹೋಗಿದ್ದೆ. ಮನೆ ಭೇಟಿಗೂ ನಾನು ಖರ್ಚು ಮಾಡಿರಲಿಲ್ಲ. ಹಾಗಾಗಿ ಬಚಾವ್” ಎಂದು ಬೆಂಗಳೂರು ನಿವಾಸಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಗಮನಿಸಿ - ಹಿಂದೂಸ್ತಾನ್ ಟೈಮ್ಸ್ ಕನ್ನಡ ಬಳಗಕ್ಕೆ ಈ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿರುವ ಘಟನೆ ನಿಜವಾದುದಾ ಅಥವಾ ಅಲ್ಲವೇ ಎಂಬುದನ್ನು ದೃಢೀಕರಿಸುವುದು ಸಾಧ್ಯವಾಗಿಲ್ಲ. ಬಹಳಷ್ಟು ಜನ ಪೋಸ್ಟ್‌ಗೆ ಸ್ಪಂದಿಸಿರುವ ಕಾರಣ ಜಾಗೃತಿಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ.