ಬೆಂಗಳೂರಿನಲ್ಲಿ ಬಾಡಿಗೆ ಮನೆ ಅಷ್ಟೇ ದುಬಾರಿ ಅಲ್ಲ: ಮನೆ ಖಾಲಿ ಮಾಡಿದ್ರೆ ಪೇಂಟಿಂಗ್‌ಗಾಗಿ ಕೊಡಬೇಕಾದ ಹಣನೂ ದುಬಾರಿ
ಬೆಂಗಳೂರಿನಲ್ಲಿ ಮನೆ ಖಾಲಿ ಮಾಡಿದರೆ ಪೇಂಟಿಂಗ್ ಗಾಗಿ ಒಂದು ತಿಂಗಳ ಬಾಡಿಗೆ ಕೊಡಬೇಕೇ? ಸುಣ್ಣ ಬಣ್ಣಕ್ಕೆ ಅಷ್ಟೊಂದು ವೆಚ್ಚ ತಗುಲುತ್ತದೆಯೇ? ಹೌದು ಎನ್ನುತ್ತಾರೆ ಮನೆ ಮಾಲೀಕರು, ದುಬಾರಿ ಎನ್ನುತ್ತಾರೆ ಬಾಡಿಗೆದಾರರು. (ವರದಿ: ಎಚ್. ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ಮನೆ ನಿವೇಶನ ಖರೀದಿ ಮಾಡುವುದು, ಮನೆ ಕಟ್ಟುವುದು ಎರಡೂ ಬಹಳ ಕಷ್ಟ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗೆಯೇ ಬಾಡಿಗೆದಾರರ ಕಷ್ಟಸುಖಗಳಿಗೇನೂ ಕೊರತೆ ಇಲ್ಲ. ಒಂದು ಬಾರಿ ಅಡ್ವಾನ್ಸ್ ಕೊಟ್ಟು ಮನೆ ಸೇರಿ ಮತ್ತೆ ಖಾಲಿ ಮಾಡಿದಾಗ ಪೂರ್ಣ ಅಡ್ವಾನ್ಸ್ ಸಿಗುವುದೇ ಇಲ್ಲ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕನಿಷ್ಠ ಅವಧಿ 11 ತಿಂಗಳಿನಿಂದ ಹಿಡಿದು ಯಾವಾಗ ಮನೆ ಖಾಲಿ ಮಾಡಿದರೂ ಪೇಂಟಿಂಗ್, ರಿಪೇರಿ ಕ್ಲೀನಿಂಗ್ ಹೆಸರಿನಲ್ಲಿ ಒಂದು ತಿಂಗಳ ಬಾಡಿಗೆ ಹಿಡಿದುಕೊಳ್ಳಲಾಗುತ್ತದೆ. ಆಕಸ್ಮಿಕವಾಗಿ 11 ತಿಂಗಳಿಗಿಂತ ಮುಂಚಿತವಾಗಿ ಮನೆ ಖಾಲಿ ಮಾಡಿದರೂ ಒಂದು ತಿಂಗಳ ಬಾಡಿಗೆ ಕಡಿತ ಆಗುತ್ತದೆ. ಬಾಡಿಗೆ ಕರಾರು ಒಪ್ಪಂದಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ.
ಪೇಂಟಿಂಗ್ ಹಾಳಾಗದಿದ್ದರೂ, ಮನೆ ಸ್ವಚ್ಛವಾಗಿದ್ದರೂ ಹೊಸದಾಗಿ ಬರುವ ಬಾಡಿಗೆದಾರರು ಹೊಸ ಪೇಂಟಿಂಗ್ ಮಾಡಿಸಿಕೊಡಬೇಕು ಎಂದು ಬಯಸುತ್ತಾರೆ. ಇತ್ತೀಚೆಗೆ ಬಾಡಿಗೆದಾರರು ಈ ಸಂಬಂಧ ಆಪಾದನೆ ಮಾಡುತ್ತಿರುವುದು ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಬಾಡಿಗೆ ಕಡಿಮೆ ಇದ್ದರೆ ಸಹಿಸಿಕೊಳ್ಳಬಹುದು. ಆದರೆ ಕೆಲವು ಪ್ರತಿಷ್ಠಿತ ಬಡಾವಣೆಗಳಲ್ಲಿ 2 ಬಿಎಚ್ ಕೆ ಮನೆಗೆ 30-50 ಸಾವಿರ ರೂ ವರೆಗೆ ಬಾಡಿಗೆ ಇರುತ್ತದೆ. ಐದಾರು ವರ್ಷಗಳು ಒಂದೇ ಮನೆಯಲ್ಲಿ ಬಾಡಿಗೆಗಿದ್ದರೆ ಬಿಟ್ಟು ಬರುವಾಗ ಒಂದು ತಿಂಗಳ ಬಾಡಿಗೆಯನ್ನು ಸುಣ್ಣ ಬಣ್ಣಕ್ಕೆ ಕೊಡಬಹುದು. ಆದರೆ 11 ತಿಂಗಳು ಅಥವಾ ಅದಕ್ಕಿಂತಲೂ ಮುಂಚಿತವಾಗಿ ಮನೆ ಖಾಲಿ ಮಾಡಿದರೆ 20-30 ಸಾವಿರ ರೂ. ಹಣವನ್ನು ಪೇಂಟಿಂಗ್ ಗೆ ನೀಡುವುದು ಕಣ್ಣಲ್ಲಿ ನೀರು ತರಿಸುವುದು ಸುಳ್ಳಲ್ಲ. ಜತೆಗೆ ರಿಪೇರಿಯೂ ಬಾಡಿಗೆದಾರರ ಜವಾಬ್ದಾರಿಯಾಗಿರುತ್ತದೆ. ಒಮ್ಮೊಮ್ಮೆ ಫ್ಯಾನ್, ಕಮೋಡ್, ನಲ್ಲಿ, ಸ್ವಿಚ್, ಬಾಗಿಲು ಚಿಲಕ ಹಾಳಾಗಿರುತ್ತವೆ. ಬಾಡಿಗೆದಾರರ ಮನೆಯಲ್ಲಿ ಮಕ್ಕಳಿದ್ದರಂತೂ ಹಾಳಾಗುವುದು ಸರ್ವೇಸಾಮಾನ್ಯವಾಗಿರುತ್ತದೆ. ಒಂದು ನಿರ್ದಿಷ್ಟ ಬಡಾವಣೆ, ರಸ್ತೆಯಲ್ಲಿಯೇ ಮನೆ ಬೇಕಾಗಿದ್ದಾಗ ಬಾಡಿಗೆ ಎಷ್ಟೇ ಆದರೂ ಕಂಡೀಷನ್‌ಗಳೇನೇ ಇದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ. ಅಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಅಲ್ಲಿಯ ಶಾಲೇ, ಕಾಲೇಜು, ಆಸ್ಪತ್ರೆ, ಮೆಟ್ರೋ, ಬಸ್ ನಿಲ್ದಾಣ ಮಾಲ್ ಗೆ ಸಮೀಪವಾಗಿದ್ದರೆ ಒಳ್ಳೆಯದು ಎಂಬ ಭಾವನೆ ಇರುತ್ತದೆ.
ಕೆಲವೊಂದು ಬಾಡಿಗೆದಾರರು ಒಂದು ತಿಂಗಳ ಬಾಡಿಗೆ ಏಕೆ ಎಂದು ಪ್ರಶ್ನಿಸುತ್ತಾರೆ. ಸುಣ್ಣ ಬಣ್ಣಕ್ಕೆ ಅಷ್ಟೊಂದು ವೆಚ್ಚವಾಗುತ್ತದೆಯೇ? ನಾವು ಹಾಳು ಮಾಡಿಲ್ಲವಲ್ಲ ಎಂದು ಪ್ರಶ್ನಿಸುವುದು ಸಹಜ. ಮನೆ ಮಾಲೀಕರ ಪ್ರಕಾರ ಈ ಹಣವೂ ಸಾಕಾಗುವುದಿಲ್ಲ. ಹೊಸ ಬಾಡಿಗೆದಾರರು ಮನೆಯನ್ನು ಒಪ್ಪಿಕೊಳ್ಳಬೇಕಾದರೆ ಮನೆ ಸ್ವಚ್ಛವಾಗಿರಬೇಕು. ಯಾವುದೇ ವಸ್ತು ಹಾಳಾಗಿರಬಾರದು. ಬಣ್ಣದ ಬೆಲೆ ಮತ್ತು ಕೂಲಿ ಏರುತ್ತಲೇ ಇರುತ್ತದೆ. ಹಾಗಾಗಿ ಒಂದು ತಿಂಗಳ ಬಾಡಿಗೆಯನ್ನು ಹಿಡಿದುಕೊಳ್ಳುವುದು ಅನಿವಾರ್ಯ ಎಂದು ವಾದಿಸುತ್ತಾರೆ.
ಪೇಂಟಿಂಗ್ ಚಾರ್ಜ್ ಎಂದರೆ ಪೇಂಟಿಂಗ್ ಮಾತ್ರ ಅಗಿರುವುದಿಲ್ಲ. ಕ್ಲೀನಿಂಗ್, ವಾಷ್ ರೂಂಗಳ ಆಸಿಡ್ ವಾಷ್ ಮತ್ತು ರಿಪೇರಿಯನ್ನೂ ಒಳಗೊಂಡಿರುತ್ತದೆ. ಸುರಕ್ಷತಾ ಕ್ರಮವಾಗಿ ಪ್ರತಿ ಬಾರಿ ಮನೆ ಖಾಲಿಯಾದಾಗಲೆಲ್ಲಾ ಡೋರ್ ಲಾಕ್ ಗಳನ್ನು ಬದಲಾಯಸುತ್ತೇವೆ ಎಂದು ಮನೆ ಮಾಲೀಕರೊಬ್ಬರು ಹೇಳುತ್ತಾರೆ. 700-800 ಚ.ಅಡಿ ಮನೆಗೆ ಪೇಂಟಿಂಗ್ ಮಾಡಿಸಲು 15-20 ಸಾವಿರ ವೆಚ್ಚ ತಗುಲುತ್ತದೆ. ಒಮ್ಮೊಮ್ಮೆ ಮಾಲೀಕರಿಗೆ ಹಣ ಉಳಿಯುವ ಸಂದರ್ಭಗಳೂ ಉಂಟು. ಹಾಗೆಯೇ ಮನೆ ಮಾಲೀಕರ ಜೇಬಿಗೆ ಕತ್ತರಿ ಬೀಳುವ ಸಂದರ್ಭಗಳನ್ನೂ ಕಂಡಿದ್ದೇವೆ ಎಂದು ದಳ್ಳಾಳಿಗಳು ಹೇಳುತ್ತಾರೆ. ಇದೇ ಕಾರಣಕ್ಕೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಒಮ್ಮೊಮ್ಮೆ ಕಲಹಕ್ಕೂ ನಾಂದಿ ಆಗುವುದುಂಟು. ಸೌಹಾರ್ದ ಸಂಬಂಧವಿದ್ದರೆ ಸಮಸ್ಯೆಯೇನೂ ಉದ್ಭವಿಸುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಬಾಡಿಗೆ 70 ಸಾವಿರದಿಂದ 1.25 ಲಕ್ಷದವರೆಗೂ ಇರುತ್ತದೆ. ಅಂತಹ ಮನೆಗಳಲ್ಲಿ ಬಾಡಿಗೆದಾರರೇ ಪೇಂಟಿಂಗ್ ಮಾಡಿಸಿಕೊಡುತ್ತಾರೆ.
ವಿಭಾಗ