ರೇಣುಕಾಸ್ವಾಮಿ ಕೊಲೆ ಕೇಸ್: ಎಲ್ಲ 17 ಆರೋಪಿಗಳು ಕೋರ್ಟ್‌ಗೆ ಹಾಜರು, ದರ್ಶನ್, ಪವಿತ್ರಾ ಗೌಡ ಮುಖಾಮುಖಿ, ಫೆ 25ಕ್ಕೆ ವಿಚಾರಣೆ ಮುಂದೂಡಿಕೆ
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ 17 ಆರೋಪಿಗಳು ಇಂದು (ಜನವರಿ 10) ಕೋರ್ಟ್‌ಗೆ ಹಾಜರಾದರು. ಜಾಮೀನು ಪಡೆದು ಹೊರಬಂದ ಬಳಿಕ ಕೋರ್ಟ್ ಸಮೀಪ ಆರೋಪಿಗಳಾದ ದರ್ಶನ್, ಪವಿತ್ರ ಗೌಡ ಮುಖಾಮುಖಿಯಾದರು. ಈ ಕೇಸ್ ವಿಚಾರಣೆ ಫೆ.25ಕ್ಕೆ ಮುಂದೂಡಿಕೆಯಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಸೇರಿದಂತೆ ಎಲ್ಲ 17 ಆರೋಪಿಗಳು ಇಂದು (ಜನವರಿ 10) ಬೆಂಗಳೂರಿನ ಸಿಸಿಎಚ್- 57ರ ಕೋರ್ಟ್‌ಗೆ ಹಾಜರಾದರು. ಈ ಪ್ರಕರಣದ 1ನೇ ಆರೋಪಿ ಪವಿತ್ರಾ ಗೌಡ, ಪ್ರದೋಶ್ ಸೇರಿ ಕೆಲವು ಆರೋಪಿಗಳು ಮುಂಚಿತವಾಗಿಯೇ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಟ ದರ್ಶನ್ ಮಾತ್ರ ತಡವಾಗಿ ಆಗಮಿಸಿದರು. ಆರೋಪಿಗಳೆಲ್ಲರಿಗೂ ಜಾಮೀನು ದೊರೆತ ನಂತರ ಇದೇ ಮೊದಲ ಬಾರಿಗೆ ಒಟ್ಟಿಗೆ ನ್ಯಾಯಾಲಯದಲ್ಲಿ ಮುಖಾಮುಖಿಯಾಗಿದ್ದಾರೆ.
ಈ ಹಿಂದೆ ರೆಗ್ಯುಲರ್ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಆರೋಪಿಗಳು ಪ್ರತಿ ತಿಂಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಅದರಂತೆ ಇಂದು ಹಾಜರಾಗಲು ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಹಾಗಾಗಿ ಇಂದು ಎಲ್ಲ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಮುಂಚಿತವಾಗಿ ಆಗಮಿಸಿದ್ದ ಪವಿತ್ರಾ ಗೌಡ, ತಮ್ಮ ವಕೀಲರೊಂದಿಗೆ ನ್ಯಾಯಾಲಯದ ಆವರಣದಲ್ಲಿ ಚರ್ಚಿಸುತ್ತಾ ನಿಂತಿದ್ದು ಕಂಡುಬಂತು.
ರೇಣುಕಾಸ್ವಾಮಿ ಕೊಲೆ ಕೇಸ್: 17 ಆರೋಪಿಗಳು ಕೋರ್ಟ್‌ಗೆ ಹಾಜರು
ನಟ ದರ್ಶನ್ ಅವರು ಮತ್ತೊಬ್ಬ ನಟ ಧನ್ವೀರ್ ಜೊತೆ ನ್ಯಾಯಾಲಯಕ್ಕೆ ಆಗಮಿಸಿದರು. ಅವರೊಂದಿಗೆ ಅವರ ವಕೀಲರೂ ಇದ್ದರು. ದರ್ಶನ್, ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮತ್ತು ಮಾಧ್ಯಮಗಳು ಸುತ್ತುವರೆದರು. ವಿಶೇಷ ಎಂದರೆ ದರ್ಶನ್ ಸಾಮಾನ್ಯರಂತೆ ನಡೆದುಕೊಂಡೇ ನ್ಯಾಯಾಲಯದ ಒಳಗೆ ಹೋದರು. ಆರೋಪಿಗಳೆಲ್ಲರೂ ನ್ಯಾಯಾಲಯಕ್ಕೆ ಹಾಜರಾದ ನಂತರ ಹಾಜರಿ ಪಡೆದುಕೊಂಡ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿ ಆದೇಶಿಸಿದರು. ಅಂದು ಮತ್ತೆ ಎಲ್ಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಈ ಮಧ್ಯೆ ಪವಿತ್ರಾಗೌಡ ರಾಜ್ಯ ಬಿಟ್ಟು ಹೊರಗೆ ಹೋಗಲು 1 ತಿಂಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ದರ್ಶನ್, ಪವಿತ್ರಾ ಗೌಡ ಮುಖಾಮುಖಿ, ಸಾಂತ್ವನ
ಜಾಮೀನು ಸಿಕ್ಕರೂ ಪವಿತ್ರಾಗೌಡ ಮತ್ತು ದರ್ಶನ್ ಮುಖಾಮುಖಿ ಭೇಟಿಯಾಗಿರಲಿಲ್ಲ. ಈ ಹಿಂದೆ ವಿಚಾರಣೆಯ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಮುಖಾಮುಖಿಯಾಗಿದ್ದರು. ನಂತರ ಇಬ್ಬರೂ ದೂರವೇ ಉಳಿದಿದ್ದರು. ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಮಂದಿಗೆ ಹೈಕೋರ್ಟ್ ಡಿ. 13 ರಂದು ಜಾಮೀನು ಮಂಜೂರು ಮಾಡಿತ್ತು.
ನ್ಯಾಯಾಲಯದ ಅನುಮತಿ ಇಲ್ಲದೇ ಬೆಂಗಳೂರು ಬಿಟ್ಟು ಹೋಗುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗಿತ್ತು. ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ ನಟ ದರ್ಶನ್ ಅವರು ಬೆಂಗಳೂರಿನಿಂದ ಮೈಸೂರಿಗೆ ತೆರಳಿ ತಮ್ಮ ಫಾರ್ಮ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಬೆಂಗಳೂರು ಬಿಟ್ಟು ಹೊರ ಹೋಗುವಂತಿಲ್ಲ ಎಂದು ಹೈಕೋರ್ಟ್ ಷರತ್ತು ವಿಧಿಸಿತ್ತು. ದರ್ಶನ್ ಮನವಿ ಮಾಡಿಕೊಂಡ ನಂತರ ಮೈಸೂರಿಗೆ ತೆರಳಲು ಅನುಮತಿ ನೀಡಿತ್ತು.
ದರ್ಶನ್, ಪವಿತ್ರ ಗೌಡ ಮತ್ತು ಇತರ ಆರೋಪಿಗಳಿಗೆ ರೆಗ್ಯುಲರ್ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಜನವರಿ 6 ರಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ದರ್ಶನ್, ಪವಿತ್ರಗೌಡ, ಪ್ರದೂಶ್, ಲಕ್ಷ್ಮಣ್, ಅನುಕುಮಾರ್, ನಾಗರಾಜು ಹಾಗೂ ಜಗದೀಶ್ ಅವರಿಗೆ ಹೈಕೋರ್ಟ್ ನಿಯಮಿತ (ರೆಗ್ಯುಲರ್) ಜಾಮೀನು ಮಂಜೂರು ಮಾಡಿತ್ತು. ಉಳಿದ ಹತ್ತು ಮಂದಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈಗ ನಿಯತ ಜಾಮೀನು ಆದೇಶ ಕೋರಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ವಿಚಾರಣೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ
ಜೂನ್ 8 ರಂದು 33 ವರ್ಷದ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ಮಾಗಡಿ ರಸ್ತೆಯ ಚರಂಡಿಯಲ್ಲಿ ರೇಣುಕಸ್ವಾಮಿ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಇದು ಕೊಲೆ ಎನ್ನುವುದು ಖಚಿತವಾದ ನಂತರ ಮೈಸೂರಿನಲ್ಲಿ ದರ್ಶನ್ ಅವರನ್ನು ಜೂನ್ 11ರಂದು ಬಂಧಿಸಿದ್ದರು. ತನ್ನ ಆಪ್ತೆಯಾಗಿರುವ ಪವಿತ್ರಾಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ದರ್ಶನ್ ಸಿಟ್ಟಿಗೆದ್ದಿದ್ದರು. ದರ್ಶನ್ ಸಹಚರರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಪುಸಲಾಯಿಸಿ ಬೆಂಗಳೂರಿಗೆ ಕರೆ ತಂದಿದ್ದರು. ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಲಾಗಿತ್ತು. ಇದರಿಂದ ಆತ ಮೃತಪಟ್ಟಿದ್ದ.
(ವರದಿ- ಎಚ್. ಮಾರುತಿ, ಬೆಂಗಳೂರು)