ವಿಮಾನದೊಳಗೆ ಕುಳಿತು ಊಟೋಪಹಾರ ಸೇವಿಸುವ ಆಸೆಯೇ, ಹಾಗಾದರೆ ಅದರಲ್ಲಿ ಪ್ರಯಾಣಿಸಬೇಕಿಲ್ಲ, ಬೆಂಗಳೂರಿನ ಈ ರೆಸ್ಟೋರೆಂಟ್‌ಗೆ ಹೋದರೆ ಸಾಕು
ವಿಮಾನದೊಳಗೆ ಕುಳಿತು ಊಟೋಪಹಾರ ಸೇವಿಸುವ ಆಸೆಯೇ, ಹಾಗಾದರೆ ಅದರಲ್ಲಿ ಪ್ರಯಾಣಿಸಬೇಕಿಲ್ಲ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಅದಕ್ಕೆ ಕಾರಣ ಬೆಂಗಳೂರಿನ ಈ ರೆಸ್ಟೋರೆಂಟ್.

ಬೆಂಗಳೂರು: ಜೀವನದಲ್ಲೊಮ್ಮೆ ವಿಮಾನವೇರಿ ಅದರಲ್ಲಿ ಕುಳಿತು ಊಟೋಪಹಾರ ಸೇವಿಸಬೇಕು ಎಂಬ ಆಸೆ ಇತ್ತೆಂದರೆ ಈಗ ಪೂರೈಸೋದು ಬಹಳ ಸುಲಭ. ಇದಕ್ಕಾಗಿ ವಿಮಾನದಲ್ಲಿ ಪ್ರಯಾಣಿಸಬೇಕಾಗಿಲ್ಲ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿದರೆ ಸಾಕು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿದೆ. ಶ್ರೀಹರಿ ಕಾರಂತ ಎಂಬುವವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಅವರು “ಟೈಗರ್ ಏರೋ ರೆಸ್ಟೋರೆಂಟ್” ಬಗ್ಗೆ ಮಾಹಿತಿ ನೀಡಿದ್ದಾರೆ.
ಬನ್ನೇರುಘಟ್ಟ ರಸ್ತೆಯಲ್ಲಿರುವ ‘ಟೈಗರ್ ಏರೋ ರೆಸ್ಟೋರೆಂಟ್’
‘ಟೈಗರ್ ಏರೋ ರೆಸ್ಟೋರೆಂಟ್’ ಗ್ರಾಹಕರಿಗೆ ನೈಜ ವಿಮಾನಕ್ಕೆ ಕಾಲಿಡಲು ಅನುವು ಮಾಡಿಕೊಡುತ್ತದೆ. ಆಸನ ವ್ಯವಸ್ಥೆಗಳು ವಿಮಾನಯಾನ ಅನುಭವವನ್ನು ಅನುಕರಿಸುತ್ತವೆ. ವಿಮಾನದ ಥೀಮ್ ಹೊಂದಿರುವ ರೆಸ್ಟೋರೆಂಟ್ ಆದರ ಕಾರಣ, ಆಸನ ಕಾಯ್ದಿರಿಸುವಿಕೆ, ಬೋರ್ಡಿಂಗ್ ಪಾಸ್ ಮುಂತಾಗಿ ಎಲ್ಲವೂ ವಿಮಾನ ಏರುವ ಅನುಭವವನ್ನೇ ನೀಡುತ್ತವೆ ಎಂದು ಅವರು ವಿವರಿಸಿದ್ದಾರೆ.
‘ಟೈಗರ್ ಏರೋ ರೆಸ್ಟೋರೆಂಟ್’ ಹೊರ ನೋಟಕ್ಕೂ ವಿಮಾನವೇ ಆಗಿದ್ದು, ಒಳಾಂಗಣದಲ್ಲೂ ವಿಮಾನದ ವಿನ್ಯಾಸವನ್ನು ಹೊಂದಿದೆ ಎಂಬುದರ ಕಡೆಗೂ ಶ್ರೀಹರಿ ಕಾರಂತ ಅವರು ಗಮನಸೆಳೆದಿದ್ದಾರೆ.
ವಿಮಾನದೊಳಗೆ ಕುಳಿತು ಊಟೋಪಹಾರ ಸೇವಿಸುವ ಆಸೆಯೇ
ಬೆಂಗಳೂರಲ್ಲಿ ಇದ್ದು ವಿಮಾನದಲ್ಲಿ ಕುಳಿತು ಊಟೋಪಹಾರ ಸೇವಿಸುವ ಆಸೆ ಈಡೇರಿಸಿಕೊಳ್ಳುವುದಕ್ಕೆ ಟೈಗರ್ ಏರೋ ರೆಸ್ಟೋರೆಂಟ್ ಉತ್ತಮ ಅವಕಾಶ ನೀಡಿದೆ. ವಿಮಾನದಲ್ಲಿರುವಂತೆಯೇ ಇಲ್ಲೂ ಆಹಾರದ ಮೆನುವಿನಲ್ಲಿ ಕೆಲವೇ ಕೆಲವು ಐಟಂಗಳಿವೆಯಷ್ಟೆ. ಆದರೆ, ಮಕ್ಕಳಿಗೆ ವಿಮಾನದ ಅನುಭವ ಮಾಡಿಕೊಡಲು ಇದು ಉತ್ತಮ ಪರಿಕಲ್ಪನೆ ಎಂದು ಶ್ರೀಹರಿ ಕಾರಂತ್ ವಿವರಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರತಿಕ್ರಿಯೆ ಹೀಗಿತ್ತು
ಟೈಗರ್ ಏರೋ ರೆಸ್ಟೋರೆಂಟ್ ಕುರಿತ ಈ ಟ್ವೀಟ್‌ಗೆ ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಕುತೂಹಲಿಗಳಾಗಿದ್ದರೆ, ಇನ್ನೂ ಅನೇಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಟೈಗರ್ ಏರೋ ರೆಸ್ಟೋರೆಂಟ್ ಬಹಳ ವಿಶಿಷ್ಟವಾಗಿದೆ. ಫುಡ್ ಮೆನು ಸರಾಸರಿ ಉತ್ತಮವಾಗಿದೆ. ಆಹಾರಗಳ ಆಯ್ಕೆ ಬಹಳ ಕಡಿಮೆ. ಆದರೆ, ಮಕ್ಕಳಿಗೆ ಉತ್ತಮ ಅನುಭವ ಕೊಡಬಲ್ಲ ರೆಸ್ಟೋರೆಂಟ್ ಇದು. ವಿಮಾನದೊಳಗಿನ ಆಸನದಂತೆಯೇ ಇರುವ ಆಸನಗಳಿವೆ. ಬಿಜಿನೆಸ್ ಕ್ಲಾಸ್‌ಗೆ ಹೊರತಾಗಿ, ಐಷಾರಾಮಿ ಆಸನ ವಿನ್ಯಾಸ ಇದ್ದು, ಒಳಾಂಗಣ ವಿಮಾನದ ಒಳಾಂಗಣವನ್ನು ಹೋಲುತ್ತದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಈ ರೆಸ್ಟೋರೆಂಟ್‌ನಲ್ಲಿ ಜನ ತುಂಬಿತುಳುಕುತ್ತಿದ್ದು, ಆಹಾರ ತಂದು ಕೊಡುವುದು ನಿಧಾನವಾಗಿದೆ. ಇದು ಈ ಉದ್ಯಮ ಆರಂಭಿಸಿದವರಿಗೂ ಹೊಸತು ಎಂದೆನಿಸುತ್ತದೆ. ಸಾಕಷ್ಟು ಸುಧಾರಣೆ ಆಗಬೇಕಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಟೀಕೆಗಳ ಹೊರತಾಗಿಯೂ, ನವೀನತೆಯ ಅಂಶವು ಗಮನಸೆಳೆಯವಂತೆ ಉಳಿದಿದೆ. ಕೆಲವು ಗ್ರಾಹಕರು ಆಧುನಿಕ ವಿಮಾನಯಾನದ ಡೈನಿಂಗ್‌ಗೆ ಇದನ್ನು ಹೋಲಿಸಿದ್ದಾರೆ. ವಿಮಾನಯಾನದಲ್ಲಿ ಆಹಾರ ಬೇಕಾದರೆ ಹೆಚ್ಚುವರಿ ಹಣ ಪಾವತಿಸಬೇಕು. ಇಲ್ಲಿ ಅದಿಲ್ಲ ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಮತ್ತೊಬ್ಬರು. ಇತ್ತೀಚಿನ ದಿನಗಳಲ್ಲಿ ವಿಮಾನದ ಟಿಕೆಟ್ ಜತೆಗೆ ಆಹಾರ ನೀಡಲಾಗುತ್ತಿಲ್ಲ. ಅದಕ್ಕಾಗಿ ಪ್ರತ್ಯೇಕ ಹಣ ಪಾವತಿಸಬೇಕು. ಇಲ್ಲಿ ನೀವು ಟೇಕಾಫ್ ಆಗದ ವಿಮಾನವನ್ನು ಏರುತ್ತೀರಿ. ಅದೂ ಆಹಾರ ಸೇವಿಸುವುದಕ್ಕಾಗಿ ಎಂಬುದು ವಿಶೇಷವಾದುದು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ವಿಮಾನ ರೆಸ್ಟೋರೆಂಟ್‌ನ ಒಳಾಂಗಣ ವಿನ್ಯಾಸವೂ ಆಕರ್ಷಕವಾಗಿದೆ. ದೆಹಲಿಯಲ್ಲಿ ಆರಂಭವಾಗಿ ಕೆಟ್ಟ ಪರಿಸ್ಥಿತಿಗೆ ತಲುಪಿರುವ ವಿಮಾನ ರೆಸ್ಟೋರೆಂಟ್ ಮಾದರಿಯಂತೆ ಬೆಂಗಳೂರಿನ ಈ ರೆಸ್ಟೋರೆಂಟ್ ಇಲ್ಲ. ನಿಜವಾದ ವಿಮಾನದೊಳಗೆ ಲೆಗ್ ಸ್ಪೇಸ್ ಕಡಿಮೆ ಇರುತ್ತದೆ. ಈ ವಿಮಾನ ರೆಸ್ಟೋರೆಂಟ್‌ನಲ್ಲಿ ಲೆಗ್‌ಸ್ಪೇಸ್ ಸಮಸ್ಯೆಗೆ ಪರಿಹಾರ ಕೊಟ್ಟಿದ್ದಾರೆ ಎಂದು ಇನ್ನೊಬ್ಬ ಗ್ರಾಹಕರು ಹೇಳಿಕೊಂಡಿದ್ದಾರೆ.
