ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿ; 22 ಹೈಡೆನ್ಸಿಟಿ ಮತ್ತು 75 ಪ್ರಮುಖ ಜಂಕ್ಷನ್ ಗಳಲ್ಲಿ ಟೋಯಿಂಗ್
ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಯಾಗಿದ್ದು, 22 ಹೈಡೆನ್ಸಿಟಿ ಮತ್ತು 75 ಪ್ರಮುಖ ಜಂಕ್ಷನ್‌ಗಳಲ್ಲಿ ಟೋಯಿಂಗ್ ಶುರುವಾಗಿದೆ. ಪ್ರತಿ ವಾಹನಕ್ಕೆ 1,750 ರೂ ದಂಡ ಸಂಗ್ರಹ ಮಾಡಲಾಗುತ್ತಿದ್ದು, ವಾಹನ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ನೋ ಪಾರ್ಕಿಂಗ್ ಪ್ರದೇಶಗಳಿಂದ ವಾಹನಗಳ ಟೋಯಿಂಗ್ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ. ರಸ್ತೆಗಳ ಎರಡೂ ಬದಿ ಮತ್ತು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ರಸ್ತೆ ಶಿಸ್ತನ್ನು ಪಾಲಿಸಲು ಈ ನಿಟ್ಟಿನಲ್ಲಿ ನಗರದ ಕೆಲವು ಭಾಗಗಳಲ್ಲಿ ಟೋಯಿಂಗ್ ಜಾರಿ ಮಾಡುತ್ತಿರುವುದಾಗಿ ಸರ್ಕಾರ ಪ್ರತಿಪಾದಿಸುತ್ತಿದೆ.
ಈ ಹಿಂದೆಯೂ ಟೋಯಿಂಗ್ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ ಭ್ರಷ್ಟಾಚಾರದ ವಾಸನೆ ಬಡಿದಿದ್ದರಿಂದ ಫೆಬ್ರವರಿಯಲ್ಲಿ 2022ರಲ್ಲಿ ನಿಲ್ಲಿಸಲಾಗಿತ್ತು. “ಟೈಗರ್” ಹೆಸರಿನಲ್ಲಿ ಇದುವರೆಗೂ ಖಾಸಗಿ ಗುತ್ತಿಗೆದಾರರು ಈ ಟೋಯಿಂಗ್ ವ್ಯವಸ್ಥೆಯನ್ನು ನಿಭಾಯಿಸುತ್ತಿದ್ದರು. ಇನ್ನು ಮುಂದೆ ಪೊಲೀಸ್ ಇಲಾಖೆಯೇ ಟೋಯಿಂಗ್ ವ್ಯವಸ್ಥೆಯನ್ನು ನಿರ್ವಹಿಸಲಿದೆ. ವಾಹನ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್ ನಿಯಂತ್ರಿಸಲು ಟೋಯಿಂಗ್ ಮರಳಿ ಬರುತ್ತಿದೆ.
ಟೋಯಿಂಗ್ ಶುಲ್ಕ ನಿಗದಿ
ಪ್ರಸ್ತುತ ವಾಹನ ನಿಲುಗಡೆ ನಿಷೇಧ ಪ್ರದೇಶಗಳಲ್ಲಿ ನೋ ಪಾರ್ಕಿಂಗ್ ದಂಡ 1000 ರೂಪಾಯಿ ನಿಗದಿಯಾಗಿದ್ದು, ಟೋಯಿಂಗ್ ಜಾರಿಯಾದರೆ ಟೋಯಿಂಗ್ ಶುಲ್ಕ ಸೇರಿ 1,500 ರೂಪಾಯಿಯಿಂದ 1,750 ರೂ ಸಂಗ್ರಹಿಸಲಾಗುತ್ತದೆ. ಮಾಹಿತಿಗಳ ಪ್ರಕಾರ 22 ಹೈಡೆನ್ಸಿಟಿ ಪ್ರದೇಶ ಮತ್ತು 75 ಪ್ರಮುಖ ಜಂಕ್ಷನ್ ಗಳಲ್ಲಿ ಟೋಯಿಂಗ್ ವ್ಯವಸ್ಥೆ ಜಾರಿಯಾಗುವ ನಿರೀಕ್ಷೆ ಇದೆ.ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದಕ್ಕೆ 16 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿತ್ತು. 2021ರಲ್ಲೇ 4.2 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ.
ವಾಹನಗಳ ಟೋಯಿಂಗ್ ಮಾಡುವುದನ್ನು ಈ ಹಿಂದೆ ಖಾಸಗಿ ಏಜೆನ್ಸಿಗಳಿಗೆ ವಹಿಸಲಾಗಿತ್ತು. ಖಾಸಗಿಯವರಿಂದ ವಾಹನಗಳ ಚಾಲಕರಿಗೆ ಶೋಷಣೆಯಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಟೋಯಿಂಗ್ ವ್ಯವಸ್ಥೆಯಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಆರೋಪ ಕೇಳಿ ಬಂದಿದ್ದರಿಂದ ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ 2022ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಟೋಯಿಂಗ್ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬ ಮಹಿಳೆಯನ್ನು ರಸ್ತೆಯಲ್ಲೇ ಎಳೆದಾಡಿದ ವಿಡಿಯೋ ವೈರಲ್ ಆಗಿ ಪೊಲೀಸ್ ಬೆಂಗಳೂರು ಪೊಲೀಸರ ಮುಖಕ್ಕೆ ಮಸಿ ಬಳಿದಂತಾಗಿತ್ತು.
ಸಂಚಾರ ದಟ್ಟಣೆ ತಡೆಗೆ ಕ್ರಮ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಕುರಿತು ಅಧಿಕಾರಿಗಳ ಸಭೆ ನಡೆದಾಗ 19 ಪ್ರದೇಶಗಳಲ್ಲಿ ವ್ಯಾಪಕ ಟ್ರಾಫಿಕ್ ಜಾಮ್ ಆಗುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಸಂಬಂಧ ಕಟ್ಟಕಡೆಯ ಪರಿಹಾರ ಸೂಚಿಸುವಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸೂಚಿಸಿ ಪೊಲೀಸ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಮನ್ವಯ ಸಾಧಿಸಿ ಕೆಲಸ ಮಾಡುವಂತೆ ಸಲಹೆ ನೀಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತೊಂದು ಸುತ್ತಿನ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಟೋಯಿಂಗ್ ವ್ಯವಸ್ಥೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಲ್ಲೇಶ್ವರಂ, ಬ್ರಿಗೇಡ್ ರೋಡ್ ಮತ್ತು ಕಮರ್ಷಿಯಲ್ ಸ್ಟ್ರೀಟ್ ವ್ಯಾಪಾರಿಗಳು ಸ್ವಾಗತಿಸಿದ್ದಾರೆ. ಆದರೆ ವಾಹನಗಳ ಮಾಲೀಕರು ಟೋಯಿಂಗ್ ವ್ಯವಸ್ಥೆಗೆ ದಂಡಕ್ಕಿಂತ ವಾಹನಗಳ ಪರಿಸ್ಥಿತಿ ಏನಾಗಬಹುದು ಎಂದು ಭಯಪಡುತ್ತಿದ್ದಾರೆ.
ಟೋಯಿಂಗ್ ಮಾಡುವುದರಿಂದ ಬಹುತೇಕ ದ್ವಿಚಕ್ರ ವಾಹನಗಳ ಟೈರ್ ಗಳು ಪಂಕ್ಚರ್ ಆಗುತ್ತವೆ. ಮಿರರ್ ಒಡೆದುಹೋಗುತ್ತವೆ. ದಂಡದ ಜತೆಗೆ ಮತ್ತೆ ರಿಪೇರಿ ಖರ್ಚು ಭರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಪಾರ್ಕಿಂಗ್ ಮಾಡಬಾರದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವುದು, ಕಾನೂನಿನ ಭಯ ಇಲ್ಲದಿರುವುದು ಮತ್ತು ಹದಗೆಟ್ಟ ರಸ್ತೆಗಳ ಕಾರಣಕ್ಕೆ ಬೆಂಗಳೂರು ನಗರದೊಳಗೆ ಪ್ರತಿ ಗಂಟೆಗೆ 18 ಕಿಮೀ ವೇಗದಲ್ಲಿ ವಾಹನಗಳು ಚಲಿಸುತ್ತಿವೆ.
(ವರದಿ- ಎಚ್.ಮಾರುತಿ, ಬೆಂಗಳೂರು)