ಕನ್ನಡ ಸುದ್ದಿ  /  Karnataka  /  Bengaluru Rolls Out National Common Mobility Card For Namma Metro

NCMC: ಮಾ.30 ರಿಂದ ನಮ್ಮ ಮೆಟ್ರೋ ಎಲ್ಲ ನಿಲ್ದಾಣಗಳಲ್ಲಿ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌

ಮಾರ್ಚ್ 30 ರಿಂದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಆರ್‌ಬಿಎಲ್‌ ಬ್ಯಾಂಕ್‌ ರುಪೇ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಪ್ರಯಾಣಿಕರು ಪಡೆಯಬಹುದು ಎಂದು ನಮ್ಮ ಮೆಟ್ರೋ ಸಂಸ್ಥೆ ತಿಳಿಸಿದೆ.

ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌
ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌

ಬೆಂಗಳೂರು: ಮಾರ್ಚ್ 30 ರಿಂದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಆರ್‌ಬಿಎಲ್‌ ಬ್ಯಾಂಕ್‌ ರುಪೇ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಪ್ರಯಾಣಿಕರು ಪಡೆಯಬಹುದು ಎಂದು ನಮ್ಮ ಮೆಟ್ರೋ ಸಂಸ್ಥೆ ತಿಳಿಸಿದೆ.

ಈ ವಿಶಿಷ್ಟ ಪ್ರಿಪೇಯ್ಡ್ ಟ್ರಾನ್ಸಿಟ್ ಕಮ್ ಮಲ್ಟಿಪರ್ಪಸ್ ಕಾರ್ಡ್ ಭಾರತ ಸರ್ಕಾರದ 'ಒಂದು ರಾಷ್ಟ್ರ ಒಂದು ಕಾರ್ಡ್' ಉಪಕ್ರಮಕ್ಕೆ ಅನುಗುಣವಾಗಿದೆ. ಬೆಂಗಳೂರಿನಲ್ಲಿ ಶನಿವಾರ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ ಪರಿಚಯ ಆಗಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಕಾರ್ಡ್​ ಬಳಸಿ ಪ್ರಯಾಣ ಮಾಡಿದ್ದರು.

ಮಾ.30ರಿಂದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಎನ್‌ಸಿಎಂಸಿ ಕಾರ್ಡನ್ನು ಖರೀದಿಸಬಹುದು ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್ ಹೇಳಿದ್ದಾರೆ. ಮೆಟ್ರೊ ನಿಲ್ದಾಣ, ಆರ್‌ಬಿಎಲ್‌ ಬ್ಯಾಂಕ್‌ ಶಾಖೆಗಳಲ್ಲಿಈ ಕಾರ್ಡ್‌ ಲಭ್ಯವಿರಲಿದೆ.

ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಮೆಟ್ರೋ ಕಾರ್ಡ್ ಅನ್ನು ಹಿಂದಿರುಗಿಸಿ ಮತ್ತು ಯಾವುದೇ ಶುಲ್ಕವಿಲ್ಲದೆ ಎನ್‌ಸಿಎಂಸಿ ಕಾರ್ಡ್​ ಅನ್ನು ಖರೀದಿಸಬಹುದು. ಮೆಟ್ರೋ ಬಳಕೆದಾರರು ಬಿಎಂಟಿಸಿ ಬಸ್‌ಗಳು ಸೇರಿದಂತೆ ಎಲ್ಲಾ ಸಾರಿಗೆ ವಿಧಾನಗಳಲ್ಲಿ ಕಾರ್ಡ್ ಅನ್ನು ಬಳಸಬಹುದು. ಆದ್ದರಿಂದ ಇದು ತಡೆರಹಿತ ಪ್ರಯಾಣದ ಅನುಭವವಾಗಿರುತ್ತದೆ. ಆದರೆ ಬಿಎಂಟಿಸಿ ಬಸ್​ಗಳಲ್ಲಿ ಬಳಸಲು ಸ್ವಲ್ಪ ದಿನ ಕಾಯಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ವೈಟ್‌ಫೀಲ್ಡ್‌ - ಕೆ.ಆರ್‌.ಪುರ ಮೆಟ್ರೋ ರೈಲು ಮಾರ್ಗದಲ್ಲಿ ಭಾನುವಾರ ಬೆಳಗ್ಗೆ 7 ರಿಂದ ವಾಣಿಜ್ಯ ಸಂಚಾರ ಆರಂಭವಾಗಿದೆ. ನಿತ್ಯ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ಮೆಟ್ರೋ ರೈಲಿನ ಸೇವೆ ಲಭ್ಯವಿರಲಿದೆ. ರಾತ್ರಿ 11ಕ್ಕೆ ವೈಟ್‌ಫೀಲ್ಡ್‌ - ಕೆ.ಆರ್‌.ಪುರ ಎರಡೂ ನಿಲ್ದಾಣಗಳಲ್ಲಿ ಕೊನೆಯ ಮೆಟ್ರೋ ರೈಲುಗಳು ಸಂಚರಿಸಲಿವೆ. ಪ್ರಯಾಣಿಕರು ಪ್ರತ್ಯೇಕ ಟೋಕನ್‌, ಮೊಬೈಲ್‌ ಕ್ಯೂಆರ್‌ ಟಿಕೆಟ್‌, ಸ್ಮಾರ್ಟ್ ಕಾರ್ಡ್‌ ಬಳಸಿ ಟಿಕೆಟ್‌ ಖರೀದಿಸಿ ಪ್ರಯಾಣ ಮಾಡಬಹುದು. 10-12 ನಿಮಿಷಕ್ಕೊಂದರಂತೆ ರೈಲುಗಳು ಸಂಚರಿಸುತ್ತಿವೆ ಎಂದು ಬಿಎಂಆರ್​ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ವೈಟ್‌ಫೀಲ್ಡ್‌ - ಕೆ.ಆರ್‌.ಪುರ ಮಾರ್ಗದ ಕಾಮಗಾರಿ ಸಾಕಷ್ಟು ಸವಾಲಿನಿಂದ ಕೂಡಿತ್ತು. ಪ್ರತಿದಿನ ಇಲ್ಲಿ 1400 ನೌಕರರು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಮೆಟ್ರೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದ್ದಾರೆ. ಈ ಮಾರ್ಗದ ಮುಂದಿನ 2 ಕಿ.ಮೀ. ವರೆಗೆ ಅಂದರೆ ಬೈಯ್ಯಪ್ಪನಹಳ್ಳಿವರೆಗಿನ ಕಾಮಗಾರಿ ಜೂನ್‌ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಇದು ಕೂಡ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಅಂಜುಮ್‌ ಪರ್ವೇಜ್ ಹೇಳಿದ್ದಾರೆ.

6 ನಿಲ್ದಾಣ ಮರುನಾಮಕರಣ:

ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳಿವೆ. ಕನ್ನಡಿಗರ ಒತ್ತಾಸೆ ಮೇರೆಗೆ ಕೆ.ಆರ್‌. ಪುರಂ ನಿಲ್ದಾಣವನ್ನು ಕೃಷ್ಣರಾಜಪುರಎಂದು ಬದಲಿಸಲಾಗಿದೆ. ಇನ್ನು, ಮಹದೇವಪುರ ಮೆಟ್ರೋ ನಿಲ್ದಾಣವನ್ನು ಸಿಂಗಯ್ಯಪ್ಪನಪಾಳ್ಯ ನಿಲ್ದಾಣ, ಹೂಡಿ ಜಂಕ್ಷನ್‌ ಮೆಟ್ರೋ ನಿಲ್ದಾಣವನ್ನು ಹೂಡಿ, ಕಾಡುಗೋಡಿ ಮೆಟ್ರೋ ನಿಲ್ದಾಣವನ್ನು ಕಾಡುಗೋಡಿ ಟ್ರೀ ಪಾರ್ಕ್ ಹಾಗೂ ಚನ್ನಸಂದ್ರವನ್ನು ಹೊಪ್ ಫಾರ್ಮ್ ಚನ್ನಸಂದ್ರ ಎಂದು ಮರುನಾಮಕರಣ ಮಾಡಲಾಗಿದೆ. ಉಳಿದಂತೆ ನಲ್ಲೂರು ಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಗರುಡಾಚಾರಪಾಳ್ಯ, ಪಟ್ಟಂದೂರು ಅಗ್ರಹಾರ, ಶ್ರೀ ಸಾಯಿ ಆಸ್ಪತ್ರೆ ನಿಲ್ದಾಣಗಳಲ್ಲಿ ನಮ್ಮ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ.

IPL_Entry_Point