Bengaluru Rural News: ಚಾಲಕ ಕಂ ನಿರ್ವಾಹಕ ನೇಣು ಬಿಗಿದುಕೊಂಡು ಆತ್ಮಹತ್ಯೆ
ದೇವನಹಳ್ಳಿ ಪಟ್ಟಣದ ಸಂತೆ ಬೀದಿಗೆ ಹೊಂದಿಕೊಂಡಿರುವ ಬಿಎಂಟಿಸಿ ಬಸ್ ಡಿಪೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಕಂ ನಿರ್ವಾಹಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸಂತೆ ಬೀದಿಗೆ ಹೊಂದಿಕೊಂಡಿರುವ ಬಿಎಂಟಿಸಿ ಬಸ್ ಡಿಪೊದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಕಂ ನಿರ್ವಾಹಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರು ಆವತಿ ಗ್ರಾಮದ ನಾಗೇಶ್ (45) ಎಂದು ತಿಳಿದು ಬಂದಿದೆ. ಅವರಿಗೆ ಹೆಂಡತಿ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ಸೋಮವಾರ ಮಧ್ಯರಾತ್ರಿ ಡಿಪೊಗೆ ಆಗಮಿಸಿದ್ದ ನಾಗೇಶ್ ಡಿಪೊ ಮ್ಯಾನೇಜರ್ ಕೊಠಡಿಯ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದೃಶ್ಯವನ್ನು ಗಮನಿಸಿದ ಬೆಳಗಿನ ಪಾಳಿಯ ಕೆಲಸಕ್ಕೆ ಬಂದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಾಗೇಶ್ ಹಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಜೊತೆಗೆ ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸ್ಥಳಕ್ಕೆ ದೇವನಹಳ್ಳಿ ಟೌನ್ ಪೊಲೀಸರು ಭೇಟಿ ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.