ಶಾಲೆಗಳು ಆರಂಭ: ಉಲ್ಬಣಿಸಿದ ಟ್ರಾಫಿಕ್ ಸಮಸ್ಯೆ, ಅಗೆದ ಗುಂಡಿ ಬಿದ್ದ ರಸ್ತೆಗಳು; ಶಾಲೆ ತಲುಪುವುದೇ ಹರಸಾಹಸ ಎಂದ ಮಕ್ಕಳು
ಶಾಲೆ ಆರಂಭವಾಗಿದ್ದು, ಕಳಪೆ ರಸ್ತೆಯಿಂದಾಗಿ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಸಮಸ್ಯೆಯಾಗುತ್ತಿದೆ. ಹೀಗಾಗಿ ರಸ್ತೆ ಸರಿಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಪೋಷಕರಿಗೆ ಆಡಳಿತ ಮಂಡಳಿ ಸಲಹೆ ನೀಡಿದೆ. (ವರದಿ: ಎಚ್.ಮಾರುತಿ)

ಬೆಂಗಳೂರು: ನಗರದಲ್ಲಿ ಶಾಲೆಗಳು ಆರಂಭವಾಗಿವೆ, ಇನ್ನೂ ಕೆಲವು ಶಾಲೆಗಳು ಜೂನ್ ಮೊದಲ ವಾರದಲ್ಲಿ ಆರಂಭವಾಗಲಿವೆ. ಆದರೆ ಬೆಂಗಳೂರಿನ ರಸ್ತೆಗಳು ಶಾಲಾ ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿವೆಯೇ ಎಂಬ ಪ್ರಶ್ನೆಗೆ ನಕಾರಾತ್ಮಕ ಉತ್ತರ ದೊರೆಯುತ್ತದೆ. ನಗರದ ಯಾವುದೇ ಭಾಗಕ್ಕೆ ಹೋದರೂ ರಸ್ತೆಗಳನ್ನು ಅಗೆದಿರುವ ದೃಶ್ಯಗಳನ್ನು ಧಾರಾಳವಾಗಿ ಕಾಣಬಹುದು. ಜತೆಗೆ ಮಳೆಗಾಲ ಆರಂಭವಾಗಿದ್ದು, ರಸ್ತೆಗಳು ಮತ್ತಷ್ಟು ಹಾಳಾಗಿವೆ. ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಶಾಲೆಗಳ ಆಡಳಿತ ಮಂಡಳಿ ಮತ್ತು ಪೋಷಕರೂ ದಿಗಿಲುಪಡುತ್ತಿದ್ದಾರೆ. ಶಾಲೆಗಳನ್ನು ತಲುಪುವುದು ಮಕ್ಕಳಿಗೆ ಸವಾಲಾಗಿ ಪರಿಣಮಿಸಿದೆ. ಈ ಮಧ್ಯೆ ಮಲ್ಲಸಂದ್ರದ ಶ್ರೀ ಕುಮಾರನ್ ಶಾಲೆಯ ಆಡಳಿತ ಮಂಡಳಿ ರಸ್ತೆಗಳನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಪೋಷಕರಿಗೆ ಸಲಹೆ ನೀಡಿದೆ. ಅಂತಹ ಒತ್ತಡ ಹೇರಿದಕ್ಕಾದರೂ ರಸ್ತೆಗಳನ್ನು ಸರಿಪಡಿಸಬಹುದು ಎಂಬ ನಿರೀಕ್ಷೆ ಅವರದ್ದು.
ನಗರದ ಬಹುತೇಕ ಭಾಗಗಳಲ್ಲಿ ವೈಟ್ ಟಾಪಿಂಗ್ ನಡೆಯುತ್ತಿದ್ದು ಅನೇಕ ಮುಖ್ಯ ರಸ್ತೆಗಳನ್ನು ಮುಚ್ಚಲಾಗಿದೆ. ಎಂಜಿ ರಸ್ತೆ, ರೆಸಿಡೆನ್ಸಿ, ಸೆಂಟ್ ಮಾರ್ಕ್ ರಸ್ತೆ, ಬಿಗೇಡ್ ರಸ್ತೆ ಸುತ್ತಮುತ್ತ ಪ್ರತಿಷ್ಠಿತ 14 ಶಾಲೆಗಳಿವೆ. ಈ ರಸ್ತೆಗಳಲ್ಲಿ ವೈಟ್ ಟಾಪಿಂಗ್ ನಡೆಯುತ್ತಿದ್ದು, ಪರ್ಯಾಯ ಮಾರ್ಗಗಳೂ ಇಲ್ಲವಾಗಿದೆ. ಪರಿಸ್ಥಿತಿ ಕುರಿತು ಪೋಷಕರಿಗೂ ವಿವರಣೆ ನೀಡಿರುವುದಾಗಿ ಆಡಳಿತ ಮಂಡಲಿಗಳು ಹೇಳಿವೆ. ಸಂತ ಜೋಸೆಫ್ ಬಾಲಕರ ಶಾಲೆಯ ಪ್ರಿನ್ಸಿಪಾಲ್ ಸುನಿಲ್ ಫರ್ನಾಂಡೀಸ್ ಅವರು ಪ್ರತಿಕ್ರಿಯೆ ನೀಡುತ್ತಾ ನಮ್ಮ ಶಾಲೆ ಬಿಎಂಟಿಸಿ ಬಸ್ ಗಳನ್ನು ಗುತ್ತಿಗೆಗೆ ಪಡೆದಿದ್ದೇವೆ. ಪೋಷಕರು ಮಕ್ಕಳನ್ನು ಕಳುಹಿಸಲು ಈ ಬಸ್ ಗಳನ್ನು ಬಳಸಬೇಕೇ ಹೊರತು ತಮ್ಮ ಕಾರ್ ಗಳನ್ನು ಬಳಸಬಾರದು ಎಂದು ಮನವಿ ಮಾಡಿಕೊಂಡಿರುವುದಾಗಿ ಹೇಳುತ್ತಾರೆ. ಇಡೀ ಶಾಲೆಯ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿ ತೊಂದರೆಯಾಗಲಿದೆ ಎಂದು ಮತ್ತೊಂದು ಶಾಲೆಯೊಂದರ ಪ್ರಿನ್ಸಿಪಾಲ್ ಹೇಳುತ್ತಾರೆ. ಶಾಲೆಗಳು ಆರಂಭವಾಗಿದ್ದು, ಅನೇಕ ಬಾರಿ ತಡವಾಗಿ ತಲುಪುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳೇ ಹೇಳುತ್ತಾರೆ.
ರಸ್ತೆಗಳು ಹಾಳಾಗಿವೆ. ವರ್ತೂರು-ಸರ್ಜಾಪುರ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆ ತುಂಬಾ ನೀರು ಮತ್ತು ಕೆಸರಿನಿಂದ ತುಂಬಿಕೊಂಡಿರುತ್ತದೆ. ರಸ್ತೆ ಎಂದು ಕರೆಯಲು ಸಾಧ್ಯವೇ ಇಲ್ಲ. ವಾಹನಗಳು ಮಂದಗತಿಯಲ್ಲಿ ಸಾಗುತ್ತಿವೆ. ಕಳೆದ ವರ್ಷ ಮಳೆ ಬಂದ ಕಾರಣಕ್ಕೆ ಈ ರಸ್ತೆಯ ಕೆಲವು ಶಾಲೆಗಳನ್ನು ಬಂದ್ ಮಾಡಿ ಆನ್ ಲೈನ್ ಮೂಲಕ ಪಾಠ ಮಾಡಲಾಗುತ್ತಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಶಾಲೆಗಳು ಆರಂಭವಾಗಿರುವುದರಿಂದ ನೂರಾರು ಶಾಲಾ ಬಸ್‌ಗಳು ರಸ್ತೆಗಿಳಿಯಲಿದ್ದು ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ರಸ್ತೆಗಳನ್ನು ಅಗೆದು ಪೈಪ್‌ಗಳನ್ನು ಹಾಕಲಾಗಿದೆ. ಸರಿಯಾಗಿ ಮುಚ್ಚಿರುವುದಿಲ್ಲ. ಇಲ್ಲವೇ ಅಗೆದು ಬಿಟ್ಟಿರುತ್ತಾರೆ. ಅನೇಕ ಶಾಲೆಗಳ ಎದುರು 200 ಮೀಟರ್ ಸಾಗಲು ಅರ್ಧ ಗಂಟೆ ಬೇಕಾಗುತ್ತದೆ. ಮಕ್ಕಳನ್ನು ಶಾಲೆಗೆ ಬಿಟ್ಟು ಕಚೇರಿ ತಲುಪಲು ಸಾಹಸಪಡಬೇಕಾಗುತ್ತದೆ ಎಂದು ಪೋಷಕರು ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ.
ಯಾವುದೇ ಪಕ್ಷದ ಸರ್ಕಾರ ಅಧಿಕಾರ ನಡೆಸಿದರೂ ಗೋಳು ತಪ್ಪಿದ್ದಲ್ಲ. ಶಾಲಾ ಬಸ್‌ಗಳನ್ನು ನಂಬುವಂತಿಲ್ಲ. ಗುಂಡಿಗಳ ಮಧ್ಯೆ ಬಸ್ ನಿಂತುಹೋಗುತ್ತವೆ. ಶಾಲಾ ಬಸ್ ಬಳಸಿದರೆ ಮಕ್ಕಳನ್ನು ಬೇಗ ಕಳುಹಿಸಬೇಕಾಗುತ್ತದೆ ಮತ್ತು ತಡವಾಗಿ ಮನೆಗೆ ಬರುತ್ತಾರೆ. ಅವರು ಮರಳುವವರೆಗೆ ಆತಂಕ ಇದ್ದೇ ಇರುತ್ತದೆ ಎಂದೂ ಪೋಷಕರು ಹೇಳುತ್ತಾರೆ. ನಡೆದುಕೊಂಡು ಮಕ್ಕಳನ್ನು ಬಿಟ್ಟು ಬರೋಣ ಎಂದರೆ ಪಾದಾಚಾರಿ ರಸ್ತೆಗಳೇ ಸರಿಯಾಗಿಲ್ಲ. ದಾರಿಯುದ್ದಕ್ಕೂ ಕಟ್ಟಡಗಳ ನಿರ್ಮಾಣ ನಡೆಯುತ್ತಿದ್ದು ದೂಳು ತುಂಬಿರುತ್ತದೆ. ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿರುವ ಸರ್ಕಾರ ಕನಿಷ್ಠ ರಸ್ತೆಗಳನ್ನಾದರೂ ಸರಿಪಡಿಸಲಿದೆಯೇ ಎಂದು ಕಾದು ನೋಡಬೇಕಿದೆ.