ಬೆಂಗಳೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಈ ಭಾಗದಲ್ಲಿ ಬಹುತೇಕ ಖಚಿತ: ಹೊಸೂರು ಏರ್ಪೋರ್ಟ್‌ಗೆ ಠಕ್ಕರ್ ನೀಡಲು ಸಿದ್ದತೆ
ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಈ ಭಾಗದಲ್ಲಿ ಬಹುತೇಕ ಖಚಿತವಾಗಲಿದೆ. ಹೊಸೂರು ವಿಮಾನ ನಿಲ್ಧಾಣಕ್ಕೆ ಠಕ್ಕರ್ ನೀಡಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದ್ದು ಒಂದೆರಡು ವಾರಗಳಲ್ಲಿ ನಿರ್ಧಾರ ಅಂತಿಮವಾಗಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚುತ್ತಿರುವುದರಿಂದ ಬೆಂಗಳೂರು ಸುತ್ತಮುತ್ತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಬೇಕೆಂಬ ಒತ್ತಡ ಹೆಚ್ಚುತ್ತಿದೆ. ಕೆಲವು ತಿಂಗಳ ಹಿಂದೆ ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ ಚರ್ಚೆಗಳನ್ನು ಆರಂಭಿಸಿದ್ದರಾದರೂ ಹಗರಣಗಳು, ಉಪ ಚುನಾವಣೆ ಮತ್ತು ನೆರೆ ರಾಜ್ಯಗಳ ಚುನಾವಣೆಗಳ ಹಿನ್ನಲೆಯಲ್ಲಿ ಅದೆಲ್ಲವೂ ಸ್ಥಗಿತಗೊಂಡಿತ್ತು. ಇದೀಗ ಚುನಾವಣೆಗಳು ಪೂರ್ಣಗೊಂಡಿದ್ದು ಮತ್ತೆ ಚರ್ಚೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಯಾವ ಭಾಗದಲ್ಲಿ ಸ್ಥಾಪಿಸಬೇಕು ಎಂಬ ಬಗ್ಗೆ ಮಾತ್ರ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮೂಲಭೂತ ಸೌಕರ್ಯಗಳ ಇಲಾಖೆ ಮಾಹಿತಿ ನೀಡಿದೆ.
ಹೊಸೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದರೆ ಬೆಂಗಳೂರಿಗೆ ಹೊಡೆತ
ಮತ್ತೊಂದು ಕಡೆ ರಾಜ್ಯಕ್ಕೆ ಹೊಂದಿಕೊಂಡಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ತಮಿಳುನಾಡು ಸರ್ಕಾರ ತುದಿಗಾಲಲ್ಲಿ ನಿಂತಿದ್ದು ಪ್ರಕ್ರಿಯೆಗಳನ್ನು ಆರಂಭಿಸಿದೆ. ಒಂದು ವೇಳೆ ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದರೆ ಬೆಂಗಳೂರಿನ ವಿಮಾನ ನಿಲ್ದಾಣದ ಸ್ಥಾಪನೆಗೆ ಧಕ್ಕೆ ಉಂಟಾಗಲಿದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಡದಿ ಅಥವಾ ಹಾರೋಹಳ್ಳಿ ಸಮೀಪ ಸ್ಥಾಪಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಶಿರಾ ಮತ್ತು ಚಿತ್ರದುರ್ಗ ನಡುವೆ ಮತ್ತು ಮಾಗಡಿ ಶಾಸಕ ಬಾಲಕೃಷ್ಣ ಅವರು ಮಾಗಡಿ, ಸೋಲೂರು ಅಥವಾ ದಾಬಸ್ ಪೇಟೆ ಬಳಿ ಸ್ಥಾಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ತಜ್ಞರು ಈಗಾಗಲೇ ಅಸ್ತಿತ್ವದಲ್ಲಿದ್ದ ಎಚ್ಎಎಲ್ ವಿಮಾನ ನಿಲ್ಧಾಣವನ್ನೇ ಮರು ಆರಂಭಿಸುವಂತೆಯೂ ಸಲಹೆ ನೀಡಿದ್ದಾರೆ.
ತಮಿಳುನಾಡು ಹೊಸೂರು ಬಳಿ ಹಸಿರು ವಿಮಾನ ನಿಲ್ದಾಣ ಸ್ಥಾಪನೆಗೆ ಒಲವು ತೋರಿದ್ದು, ಕರ್ನಾಟಕ ಪ್ರಸ್ತಾವನೆಯನ್ನು ಶೀಘ್ರವಾಗಿ ಅಂತಿಮಗೊಳಿಸಬೇಕಿದೆ. ಬೆಂಗಳೂರು ದಕ್ಷಿಣ ಬಾಗದಲ್ಲಿ ಸ್ಥಾಪನೆ ಮಾಡುವುದಾದರೆ ಹೊಸೂರು ಸಹಾ ಇದೇ ಭಾಗದಲ್ಲಿರುವುದು ತೊಡಕಾಗಬಹುದು. ಅಲ್ಲದೆ 150 ಕಿಮೀ ಅಂತರದದೊಳಗೆ ಎರಡು ವಿಮಾನ ನಿಲ್ದಾಣಗಳ ಸ್ಥಾಪನೆಗೆ ಅನುಮತಿಯೂ ಸಿಗಲಾರದು. ಈ ನಿಟ್ಟಿನಲ್ಲಿ ರಾಜ್ಯ ತುರ್ತಾಗಿ ಕಾರ್ಯ ನಿರ್ವಹಿಸಬೇಕಿದೆ. ತಮಿಳುನಾಡು ಕಠಿಣ ಸ್ಪರ್ಧೆ ಒಡ್ಡಲಿದೆ ಎನ್ನುವುದು ತಿಳಿದಿದೆ. ಯಾವುದೇ ವಿಳಂಬ ಮಾಡದೆ ತ್ವರಿತವಾಗಿ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ಐಟಿಬಿಟಿ ಸಚಿವ ಪ್ರಿಯಂಕ್ ಖರ್ಗೆ ತಿಳಿಸಿದ್ದಾರೆ.
ಸ್ಕೈಡೆಕ್ ಇದ್ದರೆ ವಿಮಾನ ನಿಲ್ದಾಣ ಸ್ಥಾಪನೆ ಕಷ್ಟ
ಕೆಂಪೇಗೌಡ ವಿಮಾನ ನಿಲ್ದಾಣ ಇರುವ ಬೆಂಗಳೂರು ಉತ್ತರ ಭಾಗದ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕಾದರೆ ಬೆಂಗಳೂರು ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ. ಮತ್ತೊಂದು ಕಡೆ ಇದೇ ಭಾಗದ ಹೆಮ್ಮಿಗೆಪುರ ಸಮೀಪ ಸ್ಕೈಡೆಕ್ ಸ್ಥಾಪಿಸಲು ತೀರ್ಮಾನ ಮಾಡಲಾಗಿದೆ. ಸ್ಕೈಡೆಕ್ ನ ಎತ್ತರ ವಿಮಾನಗಳ ಹಾರಾಟಕ್ಕೆ ಅಡ್ಡಿ ಉಂಟು ಮಾಡಲಿದ್ದು, ತೊಂದರೆಯಾಗಲಿದೆ. ವಿಮಾನ ನಿಲ್ದಾಣ ಇಲ್ಲವೇ ಸ್ಕೈಡೆಕ್ ಎರಡರಲ್ಲಿ ಒಂದನ್ನು ಸ್ಥಳಾಂತರಿಸಬೇಕಿದೆ. ಸ್ಕೈಡೆಕ್ ಸಂಬಂಧ ಬಿಬಿಎಂಪಿ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಿತ್ತು. ಸುಮಾರು 300 ಕ್ಕೂ ಹೆಚ್ಚು ಸಲಹೆಗಳು ಬಂದಿದ್ದು, ಸ್ಕೈಡೆಕ್ ಗಾಗಿ ಪರ್ಯಾಯ ಸ್ಥಳಗಳ ಹುಡುಕಾಟ ನಡೆದಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಒಂದೆರಡು ವಾರಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರದ ಮೂಲಗಳು ಖಚಿತಪಡಿಸಿವೆ. ಒಮ್ಮೆ ಸ್ಥಳ ನಿಗದಿಯಾದರೆ ಭೂಮಿ ವಶ, ಪರಿಹಾರ ಸೇರಿದಂತೆ ವಿಮಾನ ನಿಲ್ದಾಣದ ಸ್ಥಾಪನೆಯ ಪ್ರಕ್ರಿಯೆಗಳು ಆರಂಭವಾಗಲಿವೆ.
ಕೇಂದ್ರ ಸರ್ಕಾರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಡುವೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ 2033 ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯಾಪ್ತಿಯ 150 ಕಿಮೀ ಸುತ್ತ ಮತ್ತೊಂದು ವಿಮಾನ ನಿಲ್ದಾಣವನ್ನು ಸ್ಥಾಪಿಸುವಂತಿಲ್ಲ. ಈಗಿನಿಂದಲೇ ತಯಾರಿ ನಡೆಸಿದರೆ ತ್ವರಿತಗತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸ್ತಾಪನೆ ತುರ್ತಾಗಿ ಆಗಲಿದೆ ಎನ್ನುವುದು ಸರ್ಕಾರದ ಅಭಿಪ್ರಾಯವಾಗಿದೆ. ಈಗಿನಿಂದಲೇ ಕಾರ್ಯಪ್ರವೃತರಾದರೆ ಮುಂದಿನ 8 ವರ್ಷಗಳಲ್ಲಿ ಪ್ರಗತಿ ಸಾಧಿಸಬಹುದು ಎಂಬ ಉದ್ದೇಶ ಸರ್ಕಾರದ್ದು.
ವಿಮಾನ ನಿಲ್ದಾಣಕ್ಕೆ ದಶಕದ ಅವಶ್ಯಕತೆ ಇರುತ್ತದೆ. ಸಾವಿರಾರು ಎಕರೆ ಭೂಮಿಯ ಅವಶ್ಯಕ ಇರುತ್ತದೆ. ಹತ್ತಾರು ಪ್ರಕ್ರಿಯೆಗಳನ್ನು ಪೂರಣಗೊಳಿಸಬೇಕಾಗುತ್ತದೆ. ಪೂರ್ವಭಾವಿ ಕೆಲಸಗಳೇ ವರ್ಷಗಟ್ಟಲೆ ಹಿಡಿಯತ್ತದೆ. ಭೂ ಮಾಲೀಕರಿಗೆ ಪರಿಹಾರ ವಿತರಿಸಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ತಯಾರಿ ಆರಂಭಿಸಲಾಗಿದೆ ಎಂದು ಕರ್ನಾಟಕ ಸರ್ಕಾರದ ಮೂಲಗಳು ಹೇಳುತ್ತಿವೆ.
(ವರದಿ- ಎಚ್.ಮಾರುತಿ, ಬೆಂಗಳೂರು)