Bachelor tenants: "ಅತಿಥಿಗಳಿಗೆ ರಾತ್ರಿ ಪ್ರವೇಶವಿಲ್ಲ, ಬಾಲ್ಕನಿಯಲ್ಲಿ...." ಬೆಂಗಳೂರಿನಲ್ಲಿ ಬ್ಯಾಚುಲರ್ ಮನೆ ಬಾಡಿಗೆದಾರರಿಗೆ ಹೊಸ ನಿಯಮ
ಯಾರಾದರೂ ಈ ನಿಯಮವನ್ನು ಅನುಸರಿಸದೆ ಇದ್ದರೆ ಅಂತಹ ಬಾಡಿಗೆದಾರರ ಮೇಲೆ 1000 ರೂಪಾಯಿ ದಂಡ ವಿಧಿಸುವುದಾಗಿ ಅಸೋಸಿಯೇಷನ್ ತಿಳಿಸಿದೆ.
ಬೆಂಗಳೂರು: ಫ್ಲಾಟ್ ಮಾಲೀಕರ ಅಥವಾ ಬಾಡಿಗೆದಾರರ ಒಲಿತಿಗಾಗಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಮಾಲೀಕರ ಸಂಘಗಳು ಹಲವು ನಿಯಮ ಮತ್ತು ನಿಬಂಧನೆಗಳನ್ನು ರೂಪಿಸುತ್ತವೆ. ಅಪಾರ್ಟ್‌ಮೆಂಟ್ ಆವರಣದಲ್ಲಿ ಶಿಸ್ತು ಕಾಪಾಡಿಕೊಳ್ಳಲು, ಸುರಕ್ಷತೆ ಕಾಪಾಡಿಕೊಳ್ಳಲು ಇಂತಹ ರೂಲ್ಸ್ ಮಾಡಲಾಗುತ್ತದೆ. ಕೆಲವೊಂದು ಫ್ಲಾಟ್‌ಗಳ ನಿಯಮಗಳಿಂದ ಅಲ್ಲಿ ವಾಸಿಸುವವರಿಗೆ ನಾವು ಫ್ಲಾಟ್‌ನಲ್ಲಿದ್ದೇವಾ? ಜೈಲಿನಲ್ಲಿದ್ದೇವಾ? ಎಂದೆನಿಸಬಹುದು. ಬೆಂಗಳೂರು ಕೂಡ ಇಂತಹ ನಿಯಮಗಳಿಂದ ಆಗಾಗ ಸುದ್ದಿಯಾಗುವುದುಂಟು.
ಬೆಂಗಳೂರಿನ ಕುಂದನಹಳ್ಳಿ ಗೇಟ್ ನೈಬರ್‌ವುಡ್‌ನ ವಸತಿ ಸಮಾಜವು (ರೆಸಿಡೆನ್ಶಿಯಲ್ ಸೊಸೈಟಿ) ಬ್ಯಾಚುಲರ್ (ಅವಿವಾಹಿತ ಪುರುಷರು) ಮತ್ತು ಸ್ಪಿನ್‌ಸ್ಟರ್ (ಅವಿವಾಹಿತ ಮಹಿಳೆಯರು)ಗಳಿಗೆ ಹೊಸ ನಿಯಮ ರೂಪಿಸಿದೆ. ಈ ಬಾಡಿಗೆದಾರರು ರಾತ್ರಿ ಹತ್ತು ಗಂಟೆಯ ಬಳಿಕ ತಮ್ಮ ಮನೆಗೆ ಅತಿಥಿಗಳನ್ನು ಕರೆದುಕೊಂಡು ಬರಬಾರದು ಎಂದು ಹೊಸ ನಿಯಮ ರೂಪಿಸಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿದೆ.
ಈ ಕುರಿತು ಬಳಕೆದಾರರೊಬ್ಬರು ರಿಡ್‌ಇಟ್ (Reddit)ನಲ್ಲಿ ರೆಸಿಡೆನ್ಸಿಯಲ್ ಸೊಸೈಟಿಯ ಸೂಚನೆಯನ್ನು ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ "ರಾತ್ರಿ 10 ಗಂಟೆಯ ನಂತರ ಫ್ಲಾಟ್‌ನಲ್ಲಿ ಅತಿಥಿಗಳು ಇರಲು ಬ್ಯಾಚುಲರ್‌ಗಳು ಮತ್ತು ಸ್ಪಿನ್‌ಸ್ಟರ್‌ಗಳಿಗೆ ಅನುಮತಿಸಲಾಗುವುದಿಲ್ಲ. ಅತಿಥಿಗಳು ರಾತ್ರಿ ಉಳಿಯಬೇಕಾದರೆ, ಮನೆ ಮಾಲೀಕರಿಂದ ಇಮೇಲ್ ಮೂಲಕ ಅನುಮತಿ ಪಡೆಯಬೇಕು. ಗೆಸ್ಟ್‌ಗಳ ಐಡಿ ಪುರಾವೆಗಳನ್ನು ಮತ್ತು ಅತಿಥಿಗಳು ಇರುವ ಅವಧಿಯ ಮಾಹಿತಿಯನ್ನು ಮ್ಯಾನೇಜರ್ ಅಥವಾ ಅಸೋಸಿಯೇಷನ್ ಕಛೇರಿಯಲ್ಲಿ ಸಲ್ಲಿಸಬೇಕು" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಯಾರಾದರೂ ಈ ನಿಯಮವನ್ನು ಅನುಸರಿಸದೆ ಇದ್ದರೆ ಅಂತಹ ಬಾಡಿಗೆದಾರರ ಮೇಲೆ 1000 ರೂಪಾಯಿ ದಂಡ ವಿಧಿಸುವುದಾಗಿ ಅಸೋಸಿಯೇಷನ್ ತಿಳಿಸಿದೆ. ಇದರೊಂದಿಗೆ ಇನ್ನೂ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅಂದರೆ, ರಾತ್ರಿ ಹತ್ತು ಗಂಟೆಯ ಬಳಿಕ ಜೋರಾಗಿ ಮ್ಯೂಸಿಕ್ ಹಾಕಬಾರದು. ತಡ ರಾತ್ರಿ ಪಾರ್ಟಿ ಮಾಡಬಾರದು. ರಾತ್ರಿ ಹತ್ತು ಗಂಟೆಯ ಬಳಿಕ ಫೋನ್‌ನಲ್ಲಿ ಮಾತನಾಡಲು ಫ್ಲಾಟ್‌ನ ಕಾರಿಡಾರ್‌ಗಳನ್ನು ಮತ್ತು ಬಾಲ್ಕನಿಗಳನ್ನು ಬಳಸಬಾರದು" ಎಂಬಿತ್ಯಾದಿ ಹಲವು ನಿಯಮಗಳನ್ನು ಹಾಕಲಾಗಿದೆ.
ರಿಡ್‌ಇಟ್‌ನಲ್ಲಿ ಹಂಚಲಾದ ಈ ಪೋಸ್ಟ್‌ಗೆ ಸಾಕಷ್ಟು ನೆಟ್ಟಿಗರು ಅಸಮಧಾನ ವ್ಯಕ್ತಪಡಿಸಿದ್ದಾರೆ. "ಇವರ ನಿಯಮವು ಹಾಸ್ಟೆಲ್‌ಗಿಂತ ಕೆಟ್ಟದಾಗಿದೆ. ಫ್ಲ್ಯಾಟ್ ಪಡೆಯಲು ನೀವು ಬಾಡಿಗೆ ಹಣ ನೀಡುವಿರಿ. ಬಾಡಿಗೆ ಒಪ್ಪಂದಗಳ ಪ್ರಕಾರ ನೀವು ಬಾಡಿಗೆ ನೀಡುವಷ್ಟು ದಿನ ಅದು ನಿಮ್ಮ ಫ್ಲ್ಯಾಟ್ ಆಗಿರುತ್ತದೆ. ನಿಮ್ಮ ಫ್ಲ್ಯಾಟ್‌ಗೆ ಯಾರು ಬರುತ್ತಾರೆ, ಬಾಲ್ಕನಿಯಲ್ಲಿ ಏನು ಮಾಡುವಿರಿ ಎನ್ನುವುದು ನಿಮಗೆ ಬಿಟ್ಟದು. ಸೊಸೈಟಿಗಳು ಇತ್ತೀಚಿನ ದಿನಗಳಲ್ಲಿ ಹೇರುವ ನಿಯಮಗಳು ಹಾಸ್ಯಾಸ್ಪದವಾಗಿದೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಸೊಸೈಟಿಯು ಸೂಚಿಸಿದ ನಿಯಮಗಳಲ್ಲಿ ಮೊದಲ ಭಾಗವು ಕೆಟ್ಟದಾಗಿದೆ. ರಾತ್ರಿ ಹತ್ತು ಗಂಟೆಯ ಬಳಿಕ ಬಾಲ್ಕನಿಗಳಲ್ಲಿ, ಕಾರಿಡಾರ್‌ಗಳಲ್ಲಿ ಫೋನ್‌ನಲ್ಲಿ ಮಾತನಾಡಬಾರದು ಎನ್ನುವುದು ಕೆಲವೊಂದು ಸಂದರ್ಭದಲ್ಲಿ ಸರಿಯೆನಿಸಬಹುದು. ಇದು ಜೋರಾಗಿ ಫೋನ್‌ನಲ್ಲಿ ಮಾತನಾಡುವವರಿಗೆ ಅನ್ವಯಿಸಬಹುದು" ಎಂದು ಇನ್ನೊಬ್ಬರು ಬಳಕೆದಾರರು ರಾತ್ರಿ ಹತ್ತು ಗಂಟೆಯ ಬಳಿಕ ಬಾಲ್ಕನಿ/ಕಾರಿಡಾರ್‌ಗಳಲ್ಲಿ ಫೋನ್ ಬಳಸುವ ನಿಯಮದ ಕುರಿತು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
"ಇದೇ ಕಾರಣಕ್ಕೆ ನಾನು ರೆಸಿಡೆನ್ಸಿಯಲ್ ಸೊಸೈಟಿ ಮನೆಗಳಲ್ಲಿ ವಾಸಿಸುವುದನ್ನು ದ್ವೇಷಿಸುವೆ. ಇದರ ಬದಲು ಪ್ರತ್ಯೇಕವಾಗಿರುವ 3-5 ಮಹಡಿಯ ಸಾಮಾನ್ಯ ಕಟ್ಟಡಗಳು ಉತ್ತಮ. ಸೊಸೈಟಿಗಳ ಮನೆಗಳ ಬಾಡಿಗೆಗೆ ಹೋಲಿಸಿದರೆ ಸೊಸೈಟಿಗಳು ಇಲ್ಲದ ನಿವಾಸಗಳೇ ಉತ್ತಮ" ಎಂದು ಇನ್ನೊಬ್ಬರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.