ವಿಧಾನಸೌಧ ಆವರಣದಲ್ಲೇ ಬೀದಿ ನಾಯಿಗಳಿಗೆ ಆಶ್ರಯ;‌ ಸ್ಪೀಕರ್ ಯುಟಿ ಖಾದರ್‌ ನೇತೃತ್ವದಲ್ಲಿ ಮಹತ್ವದ ನಿರ್ಧಾರ
ಕನ್ನಡ ಸುದ್ದಿ  /  ಕರ್ನಾಟಕ  /  ವಿಧಾನಸೌಧ ಆವರಣದಲ್ಲೇ ಬೀದಿ ನಾಯಿಗಳಿಗೆ ಆಶ್ರಯ;‌ ಸ್ಪೀಕರ್ ಯುಟಿ ಖಾದರ್‌ ನೇತೃತ್ವದಲ್ಲಿ ಮಹತ್ವದ ನಿರ್ಧಾರ

ವಿಧಾನಸೌಧ ಆವರಣದಲ್ಲೇ ಬೀದಿ ನಾಯಿಗಳಿಗೆ ಆಶ್ರಯ;‌ ಸ್ಪೀಕರ್ ಯುಟಿ ಖಾದರ್‌ ನೇತೃತ್ವದಲ್ಲಿ ಮಹತ್ವದ ನಿರ್ಧಾರ

ವಿಧಾನಸೌಧದ ಆವರಣದಲ್ಲಿ ನಾಯಿಗಳಿಗಾಗಿ ಒಂದು ಪ್ರತ್ಯೇಕ ಸ್ಥಳವನ್ನು ನಿಗದಿ ಮಾಲಾಗುತ್ತದೆ. ಅವುಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಎನ್‌ಜಿಒಗಳಿಗೆ ವಹಿಸಲಾಗುತ್ತದೆ ಎಂದು ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಹೇಳಿದ್ದಾರೆ.

ವಿಧಾನಸೌಧ ಆವರಣದಲ್ಲೇ ನಾಯಿಗಳಿಗೆ ಆಶ್ರಯ;‌ ಯುಟಿ ಖಾದರ್‌ ನೇತೃತ್ವದಲ್ಲಿ ಮಹತ್ವದ ನಿರ್ಧಾರ (ಸಾಂದರ್ಭಿಕ ಚಿತ್ರ)
ವಿಧಾನಸೌಧ ಆವರಣದಲ್ಲೇ ನಾಯಿಗಳಿಗೆ ಆಶ್ರಯ;‌ ಯುಟಿ ಖಾದರ್‌ ನೇತೃತ್ವದಲ್ಲಿ ಮಹತ್ವದ ನಿರ್ಧಾರ (ಸಾಂದರ್ಭಿಕ ಚಿತ್ರ) (Pixabay)

ಬೆಂಗಳೂರು: ವಿಧಾನಸೌಧದ ಸುತ್ತಮುತ್ತ ಬೀದಿ ನಾಯಿಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಶ್ವಾನಗಳು ಶಕ್ತಿಸೌಧದ ಆವರಣ ಪ್ರವೇಶಿಸಿ‌ ಆಶ್ರಯ ಪಡೆಯುತ್ತಿರುತ್ತವೆ. ನಾಯಿಗಳ ಸಂಖ್ಯೆ ಮಿತಿ ಮೀರಿದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನಾಯಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ, ಅವುಗಳ ಸುರಕ್ಷತೆಯ ನಿಟ್ಟಿನಲ್ಲಿ ವಿಧಾನಸೌಧದ ಆವರಣದಲ್ಲೇ ಆಶ್ರಯ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ.

ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಇಂದು (ಫೆ.4, ಮಂಗಳವಾರ) ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮತ್ತು ಶ್ವಾನಗಳ ರಕ್ಷ‌ಣೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಯಿತು. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡಾ ಪಾಲ್ಗೊಂಡಿದ್ದರು. ಇವರೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯ ಬಳಿಕ ಮಾತನಾಡಿದ ಖಾದರ್, ಮನುಷ್ಯರಿಗೆ ಬದುಕುವ ಹಕ್ಕು ಇರುವಂತೆಯೇ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ವಿಧಾನಸೌಧದ ಆವರಣದಲ್ಲಿ ಶ್ವಾನಗಳ ಸಂಖ್ಯೆ ಹೆಚ್ಚಾದ ಕಾರಣಕ್ಕೆ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಸಭೆ ನಡೆಸಿದೆವು. ಈ ಸಂಬಂಧ ತಜ್ಞರು ವರದಿ ಸಲ್ಲಿಸ್ತಾರೆ. ವಿಧಾನಸೌಧ ವ್ಯಾಪ್ತಿಯಲ್ಲಿ ಎಷ್ಟು ನಾಯಿಗಳಿವೆ. ಅದರ ವಯಸ್ಸು ಎಷ್ಟು ಹಾಗೂ ಅದರ ಸುರಕ್ಷತೆ ಬಗ್ಗೆ ವರದಿ ಸಿಗಲಿದೆ. ಆ ಮಾಹಿತಿಯ ಆಧಾರದಲ್ಲಿ ಅವುಗಳಿಗೆ ವಿಧಾನಸೌಧದ ಆವರಣದಲ್ಲಿ ಒಂದು ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಲಾಗುತ್ತದೆ. ಅವುಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಎನ್‌ಜಿಒ ಅಥವಾ ಪ್ರಾಣಿ ದಯಾ ಸಂಘಕ್ಕೆ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಎನ್‌ಜಿಒ, ಪ್ರಾಣಿ ದಯಾ ಸಂಘ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳಿವೆ. ಇಂತಹ ಸಂಸ್ಥೆಗಳಿಗೆ ಈ ಬೀದಿ ನಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗುತ್ತದೆ. ವಿಧಾನಸೌಧಕ್ಕೆ ಆಗಮಿಸುವವರಿಗೆ ಯಾವುದೇ ರೀತಿಯ ತೊಂದರೆಯಾದಂತೆ ಸೂಕ್ತ ವ್ಯವಸ್ಥೆ ಮಾಡಲು ನಾವು ತೀರ್ಮಾನಿಸಿದ್ದೇವೆ ಎಂದು ಖಾದರ್‌ ಹೇಳಿದ್ದಾರೆ. ಒಟ್ಟಿನಲ್ಲಿ ನಾಯಿಗಳಿಗೆ ಶಕ್ತಿಸೌಧದ ಆವರಣದಲ್ಲೇ ಆಶ್ರಯ ಸಿಗಲಿದೆ.

ವಿಧಾನಸೌಧದಲ್ಲಿ ಸಾಕುವ ಐತಿಹಾಸಿಕ ತೀರ್ಮಾನ

ಯುಟಿ ಖಾದರ್‌ ಮಾತಿಗೆ ದನಿಗೂಡಿಸಿದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸೌಧದ ಆವರಣದಲ್ಲಿ ಬೀದಿ ನಾಯಿಗಳನ್ನು ಸಾಕಲು ತೀರ್ಮಾನ ಮಾಡಿದ್ದೇವೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಯಿಗಳನ್ನು ವಿಧಾನಸೌಧದಲ್ಲಿ ಸಾಕುವ ತೀರ್ಮಾನಕ್ಕೆ ಬರಲಾಗಿದೆ. ಅದಕ್ಕಾಗಿ ಪ್ರತ್ಯೇಕ ಸ್ಥಳ ನಿರ್ಮಾಣ ಮಾಡಲಾಗುತ್ತದೆ. ನಾಯಿಗಳಿಂದ ಜನರಿಗೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಈ ನಿರ್ಧಾರ ಎಂದು ಅವರು ಹೇಳಿದ್ದಾರೆ.

ನಾಯಿಗಳ ಹಾವಳಿ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ್ದ ಯುಟಿ ಖಾದರ್‌, ವಿಧಾನಸೌಧ ಬಳಿ ಹಿಂದಿನಿಂದಲೂ ನಾಯಿಗಳ ಹಾವಳಿ ಇದೆ. ಈ ಬಗ್ಗೆ ಸಾರ್ವಜನಿಕರ ಭಿನ್ನ ಅಭಿಪ್ರಾಯಗಳಿದೆ. ಕೆಲವರು ನಾಯಿಯಿಂದ ಯಾವುದೇ ಸಮಸ್ಯೆ ಇಲ್ಲವೆಂದರೆ, ಇನ್ನೂ ಕೆಲವರು ನಾಯಿಗಳಿಂದ ಸಮಸ್ಯೆ ಆಗುತ್ತದೆ ಎನ್ನುತ್ತಾರೆ. ಬೆಳಗ್ಗಿನ ಸಮಯದಲ್ಲಿ ವಾಕಿಂಗ್ ಬರುವವರಿಗೂ ನಾಯಿಗಳು ತೊಂದರೆ ಕೊಡುತ್ತವೆ ಎಂಬ ಅಭಿಪ್ರಾಯವಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಅದರಂತೆ ಮಹತ್ವದ ನಿರ್ಧಾರ ಹೊರಬಂದಿದೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner