ಬೆಂಗಳೂರು ಕೃಷ್ಣದೇವರಾಯ ರಂಗಮಂದಿರದಲ್ಲಿ ಭರತನಾಟ್ಯ ರಂಗಾರೋಹಣಕ್ಕೆ ಶ್ರೀನಿಧಿ ಹೆಗಡೆ ಸಜ್ಜು, ಇಂದು ಸಂಜೆ ಕಾರ್ಯಕ್ರಮ
Bharatanatyam Rangarohana: ಬೆಂಗಳೂರು ಕೃಷ್ಣದೇವರಾಯ ರಂಗಮಂದಿರದಲ್ಲಿ ಭರತನಾಟ್ಯ ರಂಗಾರೋಹಣಕ್ಕೆ ಶ್ರೀನಿಧಿ ಹೆಗಡೆ ಸಜ್ಜಾಗಿದ್ದು ಇಂದು ಸಂಜೆ 5ಕ್ಕೆ ಕಾರ್ಯಕ್ರಮ ನಡೆಯಲಿದೆ. ಗುರು ಸುಪರ್ಣಾ ವೆಂಕಟೇಶ್ ಸಾರಥ್ಯದ ಈ ಕಾರ್ಯಕ್ರಮದ ಮೂಲಕ ಶ್ರೀನಿಧಿ ಹೆಗಡೆ ಭರತನಾಟ್ಯ ರಂಗಯಾನ ಶುರುವಾಗಲಿದೆ. (ಲೇಖನ- ಶಿವಮೊಗ್ಗ ರಾಮ್)
Bharatanatyam Rangarohana: ನೃತ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ್ ಅವರ ಶಿಷ್ಯೆ, ಕ್ರಿಯಾಶೀಲ ನರ್ತಕಿ ಶ್ರೀನಿಧಿ ಹೆಗಡೆ ಅವರು ಡಿ.1ರಂದು ಭರತನಾಟ್ಯ ರಂಗಾರೋಹಣಕ್ಕೆ ಸಿದ್ಧರಾಗಿದ್ದಾರೆ. ನಗರದ ವೈಯಾಳಿ ಕಾವಲಿನಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣದೇವರಾಯ ರಂಗಮಂದಿರದಲ್ಲಿ ಭಾನುವಾರ ಸಂಜೆ 5ಕ್ಕೆ ಶ್ರೀನಿಧಿ ಹೆಗಡೆ ರಂಗ ಪ್ರವೇಶಕ್ಕೆ ಹಿರಿಯ ಕಲಾವಿದೆ ಸುನಂದಾದೇವಿ, ಪ್ರಖ್ಯಾತರಂಗ ಕರ್ಮಿ ಪ್ರಸಾದ್, ಕರ್ನಾಟಕ ಸಂಸ್ಕೃತ ವಿವಿ ಡೀನ್ ಪಿ. ವಿನಯ್ ಸಾಕ್ಷಿಯಾಗಲಿದ್ದಾರೆ. ಡಾ. ಮಧುರಾ ಹೆಗಡೆ ಮತ್ತು ಗಂಗಾಧರ ಹೆಗಡೆ, ಗುರು ಸುಪರ್ಣಾ, ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್ ಹಾಜರಿರುತ್ತಾರೆ. ಹಿಂದುಸ್ತಾನಿ ಸಂಗೀತ, ಕಥಮ್ ಮತ್ತು ಭರತನಾಟ್ಯ ಕಲೆಗಳ ಯುವ ಸಂಗಮವೇ ಆಗಿದ್ದಾರೆ ಶ್ರೀನಿಧಿ ಹೆಗಡೆ. ಮನೆಯ ಪರಿಸರ- ಗುರುವಿನ ಸಮರ್ಥ ಮಾರ್ಗದರ್ಶನ ಮತ್ತು ಸ್ವಯಂ ಆಸಕ್ತಿಗಳೇ ಈಕೆಯನ್ನು ಒಬ್ಬ ಕ್ರಿಯಾಶೀಲ ಕಲಾವಿದೆಯನ್ನಾಗಿ ರೂಪಿಸಿವೆ. ಗುರು ಸುಪರ್ಣಾ ಬಳಿ 13 ವರ್ಷದಿಂದ ಭರತನಾಟ್ಯ ಕಲಿತ ಈಕೆ ಕಲಾರಂಗದಲ್ಲಿ ಹಿಂದಿರುಗಿ ನೋಡಲೇ ಇಲ್ಲ. ಸ್ವಯಂ ಆಸಕ್ತಿ ಇದ್ದ ಕಾರಣಕ್ಕಾಗಿ ಶಾಲಾ ಪಠ್ಯದೊಂದಿಗೆ ನರ್ತನವೂ ಬಹು ಬೇಗ ಒಲಿಯಿತು. ನೃತ್ಯದ ಪಟ್ಟುಗಳನ್ನು ಸಮರ್ಥವಾಗಿ ಕಲಿತ ನಂತರ ಪ್ರಯೋಗಕ್ಕೆ ಇಳಿದದ್ದು ಶ್ರೀನಿಧಿ ಸಾಧನೆ. ಭರತನಾಟ್ಯ ಕಲಿಕೆಯೊಂದಿಗೆ ಕಥಕ್ ನೃತ್ಯವನ್ನೂ ಕಲಿತಿದ್ದಾರೆ ಶ್ರೀನಿಧಿ. ಕಳೆದ 4 ವರ್ಷಗಳಿಂದ ಕಥಕ್ ಅಭ್ಯಾಸ ಸಾಂಗವಾಗಿ ಸಾಗಿದೆ. ಇದರ ಫಲವಾಗಿ ಅಂತರ ಕಾಲೇಜು ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಹತ್ತಾರು ಬಹುಮಾನ ದೊರಕಿವೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ವೇದಿಕೆಗಳಲ್ಲಿ ಗುರುವಿನೊಂದಿಗೆ ಹೆಜ್ಜೆ ಹಾಕಿದ್ದಾರೆ. ಸಾಯಿ ನೃತ್ಯೋತ್ಸವದಲ್ಲಿ ಕಲೆಯನ್ನು ಮೆರೆಸಿದ್ದಾರೆ.
ವಿವಿಧೆಡೆ ನರ್ತನ ಪ್ರಸ್ತುತಿ ನೀಡಿದ್ದಾರೆ ಶ್ರೀನಿಧಿ ಹೆಗಡೆ
ವಿವಿಧೆಡೆ ನರ್ತನ ಪ್ರಸ್ತುತಿ: ಇಸ್ಕಾನ್ ಬ್ರಹ್ಮೋತ್ಸವ, ಗುರುವಾಯೂರು ಸನ್ನಿಧಿಗಳಲ್ಲಿ ಶ್ರೀನಿಧಿ ನೃತ್ಯ ಕಲಾ ಪ್ರದರ್ಶನಗೊಂಡಿರುವುದು ದೈವ ಕೃಪೆಯ ಪ್ರತೀಕವಾಗಿದೆ. ಮೈಸೂರು ದಸರಾ ಯುವ ಸಂಭ್ರಮ, ನಂದಿ ಬೆಟ್ಟದ ಶಿವರಾತ್ರಿ ಉತ್ಸವದಲ್ಲಿ ನರ್ತನ ಪ್ರದರ್ಶಿಸಿ ಕಲಾರಸಿಕರಿಂದ ಸೈ ಎನಿಸಿಕೊಂಡಿರುವುದು ಇವರ ಬೆಳವಣಿಗೆಯೇ ಆಗಿದೆ.
ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿ: ಶಾಲಾ- ಕಾಲೇಜು ಪರೀಕ್ಷೆಗಳ ಜತೆ ಜತೆಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಭರತನಾಟ್ಯ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿದ್ದಾರೆ ಶ್ರೀನಿಧಿ. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ನಡೆಸುವ ಕಥಕ್ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆಯಲ್ಲಿ 3 ಹಂತಗಳನ್ನು ಯಶಸ್ವಿಯಾಗಿ ಈಕೆ ತೇರ್ಗಡೆ ಹೊಂದಿರುವುದು ಸಾಧನೆಯಾಗಿದೆ.
ಪ್ರಶಸ್ತಿ- ಪುರಸ್ಕಾರ: ನೃತ್ಯ ಕಲಾ ರಂಗದಲ್ಲಿ ಬಹುಮುಖಿಯಾಗಿ ಬೆಳೆಯುತ್ತಿರುವ ಕಲಾವಿದೆ ಶ್ರೀನಿಧಿಗೆ ಹಲವು ಪ್ರಶಸ್ತಿ- ಪುರಸ್ಕಾರ ಭೂಷಣವಾಗಿವೆ. ಕರ್ನಾಟಕ ರಾಜ್ಯ ಶಿಕ್ಷಕರ ಸಂಘದಿಂದ ನಾಟ್ಯಕಲಾರತ್ನ, ರಾಜ್ಯ ವಕೀಲರ ಸಂಘದಿಂದ ಇಂಡೋ ಇಂಟರ್ ನ್ಯಾಷನಲ್ ಪ್ರಭ ಪ್ರಶಸ್ತಿಗಳು ಈಕೆಗೆ ಅಲಂಕರಿಸಿವೆ. ಇವುಗಳೊಂದಿಗೆ ಶರೀರ ಮತ್ತು ಶಾರೀರ, ಗುರು- ಹಿರಿಯರ ಆಶೀರ್ವಾದ ಮತ್ತು ಕಲಾ ಪ್ರೇಮಿಗಳ ಉತ್ತೇಜನವೂ ಶ್ರೀನಿಧಿಗೆ ದೊಡ್ಡ ಶಕ್ತಿಯಾಗಿವೆ.
ಗುರು ಅನುಗ್ರಹ ಮತ್ತು ಪಾಲಕರ ಬೆಂಬಲದೊಂದಿಗೆ ಭರತನಾಟ್ಯ ಪಯಣ
ಗುರು ಸುಪರ್ಣಾ ವೆಂಕಟೇಶ, ಕಲಾ ಪ್ರೇಮಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗಳ ದಿಗ್ಗಜ ಸಾಯಿ ವೆಂಕಟೇಶ್ ಅವರ ನಿರಂತರ ಪ್ರೋತ್ಸಾಹ, ಅಭಿಮಾನಗಳೂ ಶಿಷ್ಯ ವಾತ್ಸಲ್ಯವೂ ಶ್ರೀನಿಧಿ ಕಲಾಯಾನಕ್ಕೆ ಬೆನ್ನೆಲುಬಾಗಿದೆ. ಹಾಗಾಗಿ ಈಕೆ ಭರವಸೆಯ ಹೆಜ್ಜೆಗಳನ್ನು ಇಡಲು ಪೂರಕವಾಗಿದೆ ಎಂಬ ಸಂಗತಿಗಳು ಗಮನೀಯ. ಅದೇ ರೀತಿ, ತಾಯಿ ಡಾ. ಮಧುರಾ ಹೆಗಡೆ ಮತ್ತು ತಂದೆ ಗಂಗಾಧರ ಹೆಗಡೆ ತಮ್ಮ ಪ್ರೀತಿಯ ಪುತ್ರಿಯ ಕ್ರಿಯಾಶೀಲ ಚಟುವಟಿಕೆಗಳಿಗೆ ನೀಡುತ್ತಿರುವ ನಿರಂತರ ಪ್ರೋತ್ಸಾಹ ಮಾದರಿ. ಕಲಾರಂಗಕ್ಕೆ ಇಂಥ ಕ್ರಿಯಾಶೀಲ ಯುವಜನರು ಹೆಚ್ಚು ಹೆಚ್ಚಾಗಿ ಬರಬೇಕು. ಇವುಗಳು ನಮ್ಮ ಸನಾತನ ಸಂಸ್ಕೃತಿ, ಸಂಸ್ಕಾರಗಳ ಉಳಿವು ಮತ್ತು ಬೆಳವಣಿಗೆಗೆ ಅತ್ಯಗತ್ಯವಾಗಿದೆ.
ಕಲಾವಿದರ ತಂಡ: ಶ್ರೀನಿಧಿ ಹೆಗಡೆ ಭರತನಾಟ್ಯ ರಂಗ ಪ್ರವೇಶವನ್ನು ಮತ್ತಷ್ಟು ರಂಗುಗೊಳಿಸಲು ನಟವಾಂಗದಲ್ಲಿ ಗುರು ಡಾ. ಸುಪರ್ಣಾ, ಗಾಯನದಲ್ಲಿ ನಂದಕುಮಾರ ಉನ್ನಿ ಕೃಷ್ಣನ್, ಮೃದಂಗದಲ್ಲಿ ಶ್ರೀಹರಿ , ವೀಣೆಯಲ್ಲಿ ಆರ್. ಪಿ. ಪ್ರಶಾಂತ, ರಿದಂ ಪ್ಯಾಡ್ ನಲ್ಲಿ ಕಾರ್ತಿಕ್ ವಿದ್ಯಾರ್ಥಿ ಸಾಥ್ ನೀಡಲಿದ್ದಾರೆ.
(ಲೇಖನ- ಶಿವಮೊಗ್ಗ ರಾಮ್)