ಬೆಂಗಳೂರು: ಜಾಮಿಟ್ರಿ ಬ್ರ್ಯೂವರಿ ಅಂಡ್ ಕಿಚನ್‌ಗೆ ನುಗ್ಗಿ ಆತಂಕ ಸೃಷ್ಟಿಸಿದ ಆಗಂತುಕ, ಬಾಗಿಲು ಒಡೆದು ಹಣ ದೋಚಿದ ಖದೀಮ
ಬೆಂಗಳೂರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನ ವೇಳೆ ಪಬ್‌ನ ಬಾಗಿಲು ಮುರಿದು ಒಳನುಗ್ಗಿದ್ದ ಆಗಂತುಕ, ಪಿಸ್ತೂಲ್ ತೋರಿಸಿ ಆತಂಕ ಸೃಷ್ಟಿಸಿದ್ದು, ಅಲ್ಲಿಂದ 50,000 ರೂಪಾಯಿಂದ 60,000 ರೂಪಾಯಿ ಹಣ ದೋಚಿರುವುದಾಗಿ ಮೂಲಗಳು ಹೇಳಿವೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಆಗಂತುಕನೊಬ್ಬ ಪಬ್‌ವೊಂದಕ್ಕೆ ನುಗ್ಗಿ ಗನ್ ತೋರಿಸಿ ನಗದು ಹಣದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನ ವೇಳೆ ನಡೆದಿದೆ. ಪಬ್‌ನ ಬಾಗಿಲು ಮುರಿದು ಒಳನುಗ್ಗಿದ್ದ ಆಗಂತುಕ, ಪಿಸ್ತೂಲ್ ತೋರಿಸಿ ಆತಂಕ ಸೃಷ್ಟಿಸಿದ್ದು, ಅಲ್ಲಿಂದ 50,000 ರೂಪಾಯಿಂದ 60,000 ರೂಪಾಯಿ ಹಣ ದೋಚಿಕೊಂಡು ಹೋಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಜಾಮಿಟ್ರಿ ಬ್ರ್ಯೂವರಿ ಅಂಡ್ ಕಿಚನ್‌ಗೆ ನುಗ್ಗಿ ಆತಂಕ ಸೃಷ್ಟಿಸಿದ ಆಗಂತುಕ
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಾಮಿಟ್ರಿ ಬ್ರ್ಯೂವರಿ ಅಂಡ್ ಕಿಚನ್‌ಗೆ ಸೋಮವಾರ ಮುಂಜಾನೆ 3.30ರಿಂದ 4 ಗಂಟೆ ನಡುವೆ ನುಗ್ಗಿದ ಆಗುಂತಕ ಈ ಕೃತ್ಯ ನಡೆಸಿದ್ದಾಗಿ ಮೂಲಗಳು ತಿಳಿಸಿವೆ. ಪಬ್‌ನ ಭದ್ರತಾ ಸಿಬ್ಬಂದಿ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿದ್ದು, ಅವರು ಸ್ಥಳಕ್ಕೆ ಬರುತ್ತಿದ್ದಂತೆ ಆಗತುಂಕ ಅಲ್ಲಿಂದ ಹಣ ದೋಚಿಕೊಂಡು ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.
ನೆಲ ಮಹಡಿಯ ಹಿಂಬಾಗಿಲನ್ನು ಮುರಿದು 3 ನೇ ಮಹಡಿಗೆ ತೆರಳಿ ಅಲ್ಲಿನ ಕ್ಯಾಷ್ ಕೌಂಟರ್ ನಲ್ಲಿದ್ದ ಸುಮಾರು 50,000 ರೂಪಾಯಿಂದ 60,000 ರೂ ಕಳವು ಮಾಡಿ ಪರಾರಿಯಾಗಿದ್ದಾನೆ. ಜತೆಗೆ ಕೆಲವು ಸಿಸಿಟಿವಿ ಕ್ಯಾಮೆರಾಗಳನ್ನೂ ನಾಶ ಪಡಿಸಿದ್ದಾನೆ. ಘಟನೆ ಗಮನಕ್ಕೆ ಬಂದ ಕೂಡಲೇ ಭದ್ರತಾ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ, ಸ್ಥಳಪರಿಶೀಲನೆ ನಡೆಸಿದರು.
ಆಗಂತುಕನನ್ನು ಕೂಡಿ ಹಾಕಿದ್ದ ಭದ್ರತಾ ಸಿಬ್ಬಂದಿ; ಆದರೂ ಪರಾರಿ
ಆಗಂತುಕ ಪಬ್ ಒಳಗೆ ನುಗ್ಗಿ ರಂಪಾಟ ನಡೆಸುತ್ತಿರುವಾಗಲೇ ಭದ್ರತಾ ಸಿಬ್ಬಂದಿ ಕೂಡಲೇ ಎಲ್ಲ ಬಾಗಿಲುಗಳನ್ನು ಮುಚ್ಚಿದ್ದರು. ಆದರೂ ಆತ ಬಂದ ದಾರಿಯಲ್ಲೇ ಪರಾರಿಯಾಗಿದ್ದಾನೆ. ಆತನ ಕೈಯಲ್ಲಿ ಪಿಸ್ತೂಲಿನಂತಹ ವಸ್ತು ಇತ್ತು ಎಂದು ಭದ್ರತಾ ಸಿಬ್ಬಂದಿಯೊಬ್ಬ ತಿಳಿಸಿದ್ದಾನೆ. ಇಡೀ ಕಟ್ಟಡವನ್ನು ಸುತ್ತುವರೆದು ತಪಾಸಣೆ ನಡೆಸಿದರೂ ಯಾವುದೇ ವ್ಯಕ್ತಿ ಪತ್ತೆಯಾಗಿಲ್ಲ. ಪೊಲೀಸರು ಬರುವ ವೇಳೆಗೆ ಆತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದು ಅಕ್ಕಪಕ್ಕದ ನೂರಾರು ಮಂದಿ ಪಬ್ ಎದುರು ಜಮಾಯಿಸಿದ್ದರು.
ಭದ್ರತಾ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಲಾಯಿತು. ಪಬ್ ಒಳಗೆ ಯಾವುದೇ ವ್ಯಕ್ತಿ ಪತ್ತೆಯಾಗಿಲ್ಲ. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸ ಲಾಗುತ್ತಿದೆ. ತನಿಖೆಯ ಬಳಿಕ ಕಳ್ಳತನ ಮಾಡಿದ್ದ ವ್ಯಕ್ತಿಯ ಕೈಯಲ್ಲಿ ಪಿಸ್ತೂಲ್ ಇತ್ತೇ ಇಲ್ಲವೇ ಎಂಬುದು ಗೊತ್ತಾಗಲಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಆಗಂತುಕನು ಕಪ್ಪು ಬಟ್ಟೆ ಧರಿಸಿದ್ದು ಕೈಗಳಿಗೆ ಗ್ಲೋವ್ಸ್ ಹಾಕಿಕೊಂಡಿದ್ದ. ಆತ ಕೈಯಲ್ಲಿ ಪಿಸ್ತೂಲ್ ಇತ್ತು ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾನೆ. ಸಿಸಿಟಿವಿಯಲ್ಲಿ ವ್ಯಕ್ತಿಯೊಬ್ಬನ ಚಲನೆ ಕಂಡು ಬಂದಿದೆಯಾದರೂ ನಂತರ ಯಾವುದೇ ದೃಶ್ಯ ರೆಕಾರ್ಡ್ ಆಗಿಲ್ಲ. ಆಗಂತುಕನು ಹಿಂಬಾಗಿಲನ್ನು ಮುರಿದು ನೇರವಾಗಿ ಮೂರನೇ ಮಹಡಿ ಪ್ರವೇಶಿಸಿರುವುದು ಅನುಮಾನ ಮೂಡಿಸಿದೆ. ಪಬ್ ಮಾಲೀಕರು ದೂರು ನೀಡಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
(ಎಚ್. ಮಾರುತಿ, ಬೆಂಗಳೂರು)