ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಗೋಡೆ ಉದ್ಯಾನ ಟೈಗರ್ ವಿಂಗ್ಸ್ ಅನಾವರಣ, ಜನಮನ ಸೆಳೆಯುತ್ತಿದೆ ಲಂಬ ಉದ್ಯಾನ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಅತಿದೊಡ್ಡ “ವರ್ಟಿಕಲ್ ಗಾರ್ಡನ್" ಅನಾವರಣವಾಗಿದೆ. ಹೊಸ ಗೋಡೆ ಉದ್ಯಾನ ಟೈಗರ್ ವಿಂಗ್ಸ್ ಹಲವು ವಿಶೇಷ ಅಂಶಗಳನ್ನು ಹೊಂದಿದೆ. ಈ ಲಂಬ ಉದ್ಯಾನ ಜನಮನ ಸೆಳೆಯುತ್ತಿದ್ದು, ಮುಖ್ಯ ವಿವರಗಳು ಇಲ್ಲಿವೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿವಿಧ ವಿಷಯಗಳ ಕಾರಣ ಜಾಗತಿಕ ಗಮನಸೆಳೆಯುತ್ತದೆ. ಈ ಬಾರಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (BLR ವಿಮಾನ ನಿಲ್ದಾಣ) ಟರ್ಮಿನಲ್ 2 ನಲ್ಲಿ 'ಟೈಗರ್ ವಿಂಗ್ಸ್' ಶೀರ್ಷಿಕೆಯ ಲಂಬ ಉದ್ಯಾನ (ವರ್ಟಿಕಲ್ ಗಾರ್ಡನ್)ವನ್ನು ಅನಾವರಣಗೊಳಿಸಿದ್ದು, ಎಲ್ಲರ ಗಮನ ಅದರ ಕಡೆಗೆ ತಿರುಗಿದೆ. ಫ್ರಾನ್ಸ್‌ನ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಸಹಯೋಗದಲ್ಲಿ ನಿರ್ಮಾಣಗೊಂಡ ಉದ್ಯಾನ ಇದು. ವಿಮಾನ ನಿಲ್ದಾಣದ ಟರ್ಮಿನಲ್ 2 (T2) ರಲ್ಲಿ ಈ ಉದ್ಯಾನ ಇದೆ. ಪ್ಯಾಟ್ರಿಕ್ ಬ್ಲಾಂಕ್ ಅವರು ಭಾರತದಲ್ಲಿ ಇಷ್ಟು ದೊಡ್ಡ ಲಂಬ ಉದ್ಯಾನ ನಿರ್ಮಿಸಿದ್ದು ಇದೇ ಮೊದಲು. ಮೂಲ ಸೌಕರ್ಯಗಳೊಂದಿಗೆ ಪ್ರಕೃತಿಯನ್ನು ಸೆರೆ ಹಿಡಿದಂತ ಸುಂದರ ದೃಶ್ಯಾವಳಿಗಳೊಂದಿಗೆ ಈ ಗೋಡೆ ಉದ್ಯಾನ ಕಂಗೊಳಿಸಲಿದೆ. ಈ ಮೂಲಕ ಟಿ2 ನ ಅಡಿಪಾಯದ ಮೂಲತತ್ತ್ವವನ್ನು ಉದಾರಿಸಿದೆ. ಟರ್ಮಿನಲ್ 2 ನಾಲ್ಕು ಮೂಲ ತತ್ವಗಳಿಂದ ನಿರ್ಮಿಸಲ್ಪಟ್ಟಿದೆ, ಉದ್ಯಾನವದಲ್ಲಿ ಟರ್ಮಿನಲ್, ತಂತ್ರಜ್ಞಾನ, ಕಲೆ ಮತ್ತು ಸುಸ್ಥಿರತೆ ಈ ನಾಲ್ಕು ತತ್ತ್ವಗಳ ಮೂಲಕ ಬೆಂಗಳೂರಿನ ನೈಜ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ.
ಜನಮನ ಸೆಳೆಯುತ್ತಿದೆ ಲಂಬ ಉದ್ಯಾನ; ಟಿ2 ಗೋಡೆ ಉದ್ಯಾನದ ವಿಶೇಷ ಅಂಶಗಳಿವು
1) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಈ ವರ್ಟಿಕಲ್ ಗಾರ್ಡನ್ ಅನ್ನು 30 ಅಡಿ ಎತ್ತರ ಹಾಗೂ 160 ಅಡಿ ಅಗಲ (2 ಗೋಡೆಗಳಿದ್ದು, ಪ್ರತಿ ಗೊಡೆ 80 ಅಡಿ ಅಗಲವಿದೆ)ದಲ್ಲಿ ವಿಸ್ತೃತವಾಗಿ ಬೆಳೆಸಲಾಗಿದೆ.
2) 'ಟೈಗರ್ ವಿಂಗ್ಸ್' ನ ಈ ವರ್ಟಿಕಲ್ ಗಾರ್ಡನ್‌ನಲ್ಲಿ 153 ವಿವಿಧ ಜಾತಿಗಳ 15,000 ಕ್ಕೂ ಹೆಚ್ಚು ಸಸ್ಯಗಳಿಂವೆ. ಪ್ಯಾಟ್ರಿಕ್ ಬ್ಲಾಂಕ್ ಅವರು ಕರ್ನಾಟಕ ಸೇರಿ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳ ಕಾಡುಗಳಿಗೆ ತೆರಳಿ, ಅಪರೂಪದ ಆಯ್ದ ಸಸ್ಯ ಪ್ರಭೇದಗಳನ್ನು ಸಂಗ್ರಹಿಸಿ, ಈ ಗೋಡೆ ಉದ್ಯಾನ ನಿರ್ಮಿಸಿದ್ದಾರೆ.
3) 4000 ಚದರ ಅಡಿಗಳಲ್ಲಿ ನಿರ್ಮಿಸಲಾದ ಇದು ಮಣ್ಣುರಹಿತ ಗೋಡೆ ಉದ್ಯಾನವಾಗಿದೆ. ಇದಕ್ಕೆ ಬಳಸಿದ ತಂತ್ರಜ್ಞಾನವನ್ನು ಜರ್ಮನಿಯಿಂದ ಆಮದು ಮಾಡಲಾಗಿದೆ.
4) ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯ ಶಕ್ತಿ ಮತ್ತು ಅದರ ಗಾಂಭೀರ್ಯವನ್ನು ಪ್ರತಿಬಿಂಬಿಸುವಂತೆ ಈ ಗೋಡೆ ಉದ್ಯಾನ ನಿರ್ಮಾಣಗೊಂಡಿದೆ. ಹಾಗಾಗಿಯೆ ಈ ಲಂಬ ಗಾರ್ಡನ್‌ಗೆ 'ಟೈಗರ್ ವಿಂಗ್ಸ್' ಎಂದು ಹೆಸರಿಡಲಾಗಿದೆ.
5) ಶತಾವರಿ ಗಿಡಗಳು ವಿಮಾನದ ರೆಕ್ಕೆಗಳ ಸಿಲೂಯೆಟ್ ಅನ್ನು ಸಂಕೇತಿಸುತ್ತದೆ. ಇನ್ನು, ಕೆಂಪು, ಕಿತ್ತಳೆ, ಹಳದಿ ಮತ್ತು ಬಿಳಿ ಇಕ್ಸೋರಾ ಹೂವುಗಳು ಹುಲಿ ಬಣ್ಣಗಳನ್ನು ಪ್ರತಿನಿಧಿಸುತ್ತವೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವರ್ಟಿಕಲ್ ಗಾರ್ಡನ್ ಬಗ್ಗೆ ಯಾರು ಏನಂದರು
ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮಾರಾರ್ ಮಾತನಾಡಿ, “ಬೆಂಗಳೂರಿನಲ್ಲಿ ಸುಸ್ಥಿರತೆ, ಕಲಾತ್ಮಕತೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಹೊಸ ದೃಷ್ಟಿಕೋನವನ್ನು ತರಲು ಬಯಸಿದ್ದೇವೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ಯಾಟ್ರಿಕ್‌ನ ಅವರ ಹೊಸ ವಿಧಾನದಿಂದ ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳನ್ನು ಬೆಳೆಯುವಂತೆಯೇ ಈ ಗೋಡೆ ಉದ್ಯಾನದಲ್ಲೂ ಬೆಳೆಯಲು ಅನುವು ಮಾಡಿಕೊಟ್ಟಿದೆ ಎಂದರು.
"ಟೈಗರ್ ವಿಂಗ್ಸ್” ಪ್ರಕೃತಿ ಮತ್ತು ವಾಸ್ತುಶಿಲ್ಪದ ನಡುವಿನ ಸಂಬಂಧ ಸಾಕಾರಗೊಳಿಸುವ ಸ್ವಪ್ನ ಪೂರ್ತಿಯಾಗಿದೆ. ವಿಶೇಷ ಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ, ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳು ಬೆಳೆಯುವ ವಾತಾವರಣವನ್ನು ಇಲ್ಲಿ ಒದಗಿಸಲಾಗಿದೆ. ಈ ಯೋಜನೆಯು ಬೆಂಗಳೂರು ವಿಮಾನ ನಿಲ್ದಾಣದ ನೋಟದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ, ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಅನುಭವವನ್ನು ಇನ್ನಷ್ಟು ಉಲ್ಲಾಸಗೊಳಿಸಲಿದೆ. ನಮ್ಮ ಸುತ್ತಲೂ ಪರಿಸರವೇ ತುಂಬಿರುವ ಸಂತಸ ನೀಡಲಿದೆ ಎಂದು ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ವಿವರಿಸಿದರು.