ಬೆಂಗಳೂರು- ಕಲಬುರಗಿ ಹೊಸ ರೈಲು ಜಸ್ಟ್ ಬಿಟ್ಟಾರ್‍ರೀ; ಈಗ್ಲೇ ಟಿಕೆಟ್ ಬುಕ್ ಮಾಡಿ.. ದೀಪಾವಳಿಗೆ ಅಂತ ಕಾಯಬೇಡಿ
ದೀಪಾವಳಿ ಹಬ್ಬ ಹತ್ತಿರ ಬಂತು ಅಲ್ವ. ಬೆಂಗಳೂರಿಗರು ವಿಶೇಷವಾಗಿ ಕಲಬುರಗಿ ಕಡೆಗೆ ಹೋಗುವವರು ನವರಾತ್ರಿ, ದಸರಾ ಹಬ್ಬಕ್ಕೆ ಟಿಕೆಟ್ ಸಿಗದವರು ದೀಪಾವಳಿಗೆ ಊರಿಗೆ ಹೋಗುವ ಕಾತರದಲ್ಲಿರಬಹುದು. ಪ್ರಯಾಣಿಕ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ಬೆಂಗಳೂರು- ಕಲುಬರಗಿ ಎರಡು ವಿಶೇಷ ರೈಲು ಸಂಚಾರ ಪ್ರಕಟಿಸಿದೆ. ಇದರ ಬುಕ್ಕಿಂಗ್ ಶುರುವಾಗಿದೆ. ಆ ವಿವರ ಇಲ್ಲಿದೆ.

ಬೆಂಗಳೂರು: ನವರಾತ್ರಿ, ದಸರಾ ರಜೆಗೆ ಊರಿಗೆ ಹೋಗದಕ್ಕೆ ಸಾಧ್ಯವಾಗಿಲ್ವ, ರೈಲು ಟಿಕೆಟ್ ಸಿಗದೆ ಬಹಳ ಬೇಜಾರಾಗಿತ್ತಾ, ಹಾಗಾದ್ರೆ ಇನ್ನು ಬೇಸರ ಮಾಡಿಕೊಳ್ಳಬೇಡಿ, ದೀಪಾವಳಿಗೆ ಊರಿಗೆ ಹೋಗಬಹುದು. ನೈಋತ್ಯ ರೈಲ್ವೆ ಸ್ವಲ್ಪ ಹೊತ್ತು ಮೊದಲು ಬೆಂಗಳೂರು -ಕಲಬುರಗಿ ವಿಶೇಷ ರೈಲು ಸಂಚಾರವನ್ನು ಪ್ರಕಟಿಸಿದೆ. ಎರಡು ಟ್ರಿಪ್ ಎರಡೂ ಕಡೆಯಿಂದ ಇರಲಿದ್ದು, ಟಿಕೆಟ್ ಬುಕ್ಕಿಂಗ್ ಶುರುವಾಗಿದೆ ಎಂದು ವಿವರ ಪ್ರಕಟಿಸಿದೆ.
ಎಸ್‌ಎಂವಿಟಿ ಬೆಂಗಳೂರು - ಕಲಬುರಗಿ ವಿಶೇಷ ರೈಲು (ರೈಲು ಸಂಖ್ಯೆ 06533)
ಬೆಂಗಳೂರು ಮತ್ತು ಕಲಬುರಗಿ ನಡುವಿನ ಈ ವಿಶೇಷ ರೈಲು ಅಕ್ಟೋಬರ್ 30 ಮತ್ತು ನವೆಂಬರ್ 2 ರಂದು ಸಂಚರಿಸಲಿದೆ. ಇದು ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ರಾತ್ರಿ 9.15ಕ್ಕೆ ಹೊರಡಲಿದ್ದು, ಮಾರನೇ ದಿನ ಬೆಳಗ್ಗೆ 7.40ಕ್ಕೆ ಕಲಬುರಗಿ ತಲುಪಲಿದೆ. ನಡುವೆ, ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಅದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ, ಶಾಹಬಾದ್ ನಿಲ್ದಾಣದಲ್ಲಿ ನಿಲುಗಡೆಯೂ ಇರಲಿದೆ.
ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲು (ರೈಲು ಸಂಖ್ಯೆ 06534)
ಇದೇ ರೀತಿ ಕಲುಬರಗಿ- ಬೆಂಗಳೂರು ವಿಶೇಷ ರೈಲು ಕಲಬುರಗಿ ನಿಲ್ದಾಣದಿಂದ ಅಕ್ಟೋಬರ್ 31ರಂದು ಮತ್ತು ನವೆಂಬರ್ 3 ರಂದು ಸಂಚರಿಸಲಿದೆ. ಈ ದಿನಾಂಕಗಳಲ್ಲಿ ಬೆಳಗ್ಗೆ 9.35 ಗಂಟೆಗೆ ಹೊರಡಲಿದ್ದು, ಅದೇ ದಿನ ರಾತ್ರಿ 8 ಗಂಟೆಗೆ ಬೆಂಗಳೂರು ತಲುಪಲಿದೆ. ಈ ರೈಲು ಕಲಬುರಗಿಯಿಂದ ಹೊರಟ ಬಳಿಕ ಶಾಹಬಾದ್, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯ ರಸ್ತೆ, ಅದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಯಲಹಂಕಗಳಲ್ಲಿ ನಿಲುಗಡೆ ಹೊಂದಿದೆ.
ಈ ವಿಶೇಷ ರೈಲುಗಳಲ್ಲಿ ಒಟ್ಟು 19 ಬೋಗಿಗಳು ಇರಲಿವೆ. ಇದರಲ್ಲಿ 12 ಜನರಲ್ ಸೆಕೆಂಡ್ ಕ್ಲಾಸ್ ಕೋಚ್, 3 ಸ್ಲೀಪರ್, ಎರಡು 3ಎಸಿ ಟೈರ್ ಕೋಚ್‌ಗಳು, 1 ಲಗೇಜ್/ಬರ್ಕೆ ವ್ಯಾನ್, 1 ಸೆಕೆಂಡ್ ಕ್ಲಾಸ್ ಲಗೇಜ್ ಬೋಗಿಗಳು ಇರಲಿವೆ.