ಬೆಂಗಳೂರಿನಿಂದ ಪಂಢರಪುರಕ್ಕೆ ರೈಲಿನಲ್ಲಿ ಹೋಗುವುದು ಹೇಗೆ; ಕರ್ನಾಟಕದ ಯಾವ ನಿಲ್ದಾಣಗಳಲ್ಲಿ ನಿಲ್ಲುತ್ತೆ? ಟಿಕೆಟ್ ದರ ಸಹಿತ ಸಮಗ್ರ ಮಾಹಿತಿ
ದೇಶದಲ್ಲಿ ವಿಠ್ಠಲ ಸ್ಮರಣೆ ಜೋರಾಗಿದೆ. ಪಂಢರಪುರ ಯಾತ್ರೆಗೆ ದೇಶದ ವಿವಿಧ ಮೂಲೆಗಳಿಂದ ಭಕ್ತರು ಹೊರಟಿದ್ದು, ಮಹಾರಾಷ್ಟ್ರದ ದಕ್ಷಿಣ ಕಾಶಿ ಎನಿಸಿಕೊಂಡಿರುವ ಪಾಂಢರಪುರದಲ್ಲಿ ಆಷಾಢ ಏಕಾದಶಿ ಕಳೆಗಟ್ಟಿದೆ. ವಿಠಲ-ರುಕ್ಮಿಣಿ ಮಂದಿರಕ್ಕೆ ಕರ್ನಾಟಕದಿಂದ ಹೊರಡುವ ಭಕ್ತರ ಯಾತ್ರೆಗೆ ನೆರವಾಗುವಂತೆ ರಾಜ್ಯದ ರೈಲು ವಿವರಗಳು ಹೀಗಿವೆ.
ಆಷಾಢ ಏಕಾದಶಿಗೆ ಪಂಢರಪುರ ಸಜ್ಜಾಗಿದೆ. ವಿಶೇಷ ದಿನದಂದು ಮಹಾರಾಷ್ಟ್ರದ ದಕ್ಷಿಣ ಕಾಶಿಯ ವಿಠ್ಠಲನ ದರ್ಶನಕ್ಕೆ ದೇಶ-ವಿದೇಶಗಳಿಂದ ಬರಲು ಭಕ್ತರು ಕಾಯುತ್ತಿದ್ದಾರೆ. ಈ ವರ್ಷ ಆಷಾಢ ಏಕಾದಶಿಯನ್ನು ಜುಲೈ 17ರಂದು ಆಚರಿಸಲಾಗುತ್ತಿದೆ. ಮಹಾರಾಷ್ಟ್ರ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದ ಭಕ್ತರು ಪಂಢರಪುರಕ್ಕೆ ಯಾತ್ರೆ ಮಾಡಲಿದ್ದಾರೆ. ಈಗಾಗಲೇ ಆಷಾಢ ಏಕಾದಶಿ ಪ್ರಯುಕ್ತ ಕೇಂದ್ರ ರೈಲ್ವೆ 64 ವಿಶೇಷ ರೈಲುಗಳನ್ನು ದೇಶಾದ್ಯಂತ ಓಡಿಸುವುದಾಗಿ ಹೇಳಿದೆ. ಈ ನಡುವೆ ಕರ್ನಾಟಕದ ಭಕ್ತರು ರಾಜ್ಯದಿಂದ ಮಹಾರಾಷ್ಟ್ರದ ಪಂಢರಪುರಕ್ಕೆ ತೆರಳಲು ಏನು ಮಾಡಬೇಕು? ರಾಜಧಾನಿ ಬೆಂಗಳೂರಿನಿಂದ ಹೋಗುವುದು ಹೇಗೆ? ರೈಲು ಟಿಕೆಟ್ ದರ ಎಷ್ಟಿರುತ್ತದೆ ಎಂಬ ವಿವರಗಳನ್ನು ನೋಡೋಣ.
ಪಂಢರಪುರ ಭಾರತದ ಪ್ರಮುಖ ಯಾತ್ರಾಸ್ಥಳವಾಗಿದ್ದು, ಈ ಪಟ್ಟಣವು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸೋಲಾಪುರ ನಗರದ ಸಮೀಪದಲ್ಲಿದೆ. ಚಂದ್ರಭಾಗಾ ನದಿಯ ದಡದಲ್ಲಿರುವ ವಿಠ್ಠಲ ದೇವಸ್ಥಾನಕ್ಕೆ ಆಷಾಢದಲ್ಲಿ ತೀರ್ಥಯಾತ್ರೆ ಕೈಗೊಳ್ಳಲಾಗುತ್ತದೆ. ಪ್ರತಿವರ್ಷ ಆಷಾಢ ಏಕಾದಶಿ ಸಮಯದಲ್ಲಿ ಮಿಲಿಯನ್‌ಗಟ್ಟಲೆ ಜನರು ಇಲ್ಲಿಗೆ ಬರುತ್ತಾರೆ.
ಬೆಂಗಳೂರಿನಿಂದ ಪಂಢರಪುರಕ್ಕೆ ಪ್ರತಿದಿನ ಒಂದು ರೈಲು ಓಡಾಡುತ್ತದೆ. ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲು ಮೈಸೂರಿನಿಂದ ಪ್ರಯಾಣ ಆರಂಭಿಸಿ, ಬೆಂಗಳೂರಿನ ಮೂಲಕವಾಗಿ ಪಂಢರಪುರ ತಲುಪುತ್ತದೆ. ಒಟ್ಟು 18 ಗಂಟೆಗಳ ಈ ಪ್ರಯಾಣದಲ್ಲಿ ರೈಲು 22 ನಿಲ್ದಾಣಗಳಲ್ಲಿ ನಿಲ್ಲಲಿದೆ. ಬಹುತೇಕ ಕರ್ನಾಟಕದ ಪ್ರಮುಖ ನಿಲ್ದಾಣಗಳ ಮೂಲಕ ಹಾದು ಹೋಗುತ್ತದೆ. ಹೀಗಾಗಿ ರಾಜ್ಯದ ಭಕ್ತರು ವಿಠ್ಠಲನ ದರ್ಶನಕ್ಕೆ ಈ ರೈಲಿನಲ್ಲಿ ತೆರಳಬಹುದು.
ಜುಲೈ 16ರಂದು ಹೊರಡುವ ರೈಲು
ಜುಲೈ 16ರ ಮಂಗಳವಾರ ನೋಡುವುದಾದರೆ, ಮಧ್ಯಾಹ್ನ 3:45ಕ್ಕೆ ಮೈಸೂರು ರೈಲು ನಿಲ್ದಾಣದಿಂದ ಹೊರಡುವ ರೈಲು; ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ಬಿಡದಿ, ಕೆಂಗೇರಿ ಮಾರ್ಗವಾಗಿ ಬೆಂಗಳೂರಿಗೆ ಬರಲಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದು 10 ನಿಮಿಷ ನಿಲ್ಲುವ ಈ ರೈಲು ಸಂಜೆ 6.35ಕ್ಕೆ ಹೊರಡಲಿದೆ. ಜುಲೈ 17ರಂದು ಮಧ್ಯಾಹ್ನ 12:25ಕ್ಕೆ ಪಂಢರಪುರ ತಲುಪಲಿದೆ.
ಕರ್ನಾಟಕದ ಯಾವ ನಿಲ್ದಾಣಗಳಲ್ಲಿ ನಿಲ್ಲುತ್ತೆ?
ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಯಶವಂತಪುರ ರೈಲು ನಿಲ್ದಾಣಕ್ಕೆ 6.45ಕ್ಕೆ ಬರಲಿದೆ. ಇಲ್ಲಿಂದ ಹೊರಟ ಬಳಿಕ ತುಮಕೂರು, ತಿಪಟೂರು, ಅರಸೀಕೆರೆ ಜಂಕ್ಷನ್, ಬಿರೂರು, ಚಿಕ್ಕಜಾಜೂರು,ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ ಜಂಕ್ಷನ್, ಗದಗ ಜಂಕ್ಷನ್, ಹೊಳೆ ಆಲೂರು, ಬಾದಾಮಿ, ಗುಳೇದಗುಡ್ಡ, ಬಾಗಲಕೋಟೆ, ಆಲಮಟ್ಟಿ, ಬಾಗೇವಾಡಿ, ವಿಜಯಪುರ, ಇಂಡಿ ರಸ್ತೆ ಮೂಲಕ ಮಹಾರಾಷ್ಟ್ರ ಪ್ರವೇಶಿಸಲಿದೆ. ಸೋಲಾಪುರ ಜಂಕ್ಷನ್ ಮೂಲಕ ಪಂಢರಪುರಕ್ಕೆ ತಲುಪಲಿದೆ.
ಟಿಕೆಟ್ ಬೆಲೆ ಎಷ್ಟು?
ಬೆಂಗಳೂರಿನಿಂದ ಪಂಢರಪುರಕ್ಕೆ ಸ್ಲೀಪರ್ ಕ್ಲಾಸ್ ದರ 470 ರೂಪಾಯಿ ಇದ್ದು, ಎಸಿ ಕೋಚ್ 3 ಟೈರ್ ಟಿಕೆಟ್ ದರವು 1265, 1630, 1815 ಹಾಗೂ 2340 ರೂಪಾಯಿವರೆಗೆ ಇದೆ. ಫಸ್ಟ್ ಕ್ಲಾಸ್ ಕೋಚ್ ಟಿಕೆ ಬೆಲೆಯು 3060 ರೂಪಾಯಿ ಇದೆ.
ಬೆಂಗಳೂರಿನಿಂದ ವಿಶೇಷ ರೈಲುಗಳ ಓಡಾಟ
ಆಶಾಡ ಏಕಾದಶಿಯಂದು ಹೆಚ್ಚು ಭಕ್ತರು ಪಂಢರಪುರಕ್ಕೆ ಪ್ರಯಾಣಿಸುವುದರಿಂದಾಗಿ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮತ್ತು ಪಂಢರಪುರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ಜುಲೈ 15ರಂದು ರೈಲು ಸಂಖ್ಯೆ 06295 ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಹೊರಟು ಮರುದಿನ ಸಂಜೆ 06:20ಕ್ಕೆ ಪಂಢರಪುರ ನಿಲ್ದಾಣ ತಲುಪುತ್ತದೆ. ಈ ವಿಶೇಷ ರೈಲು ಎಸಿ ಟು ಟೈರ್-1, ಎಸಿ ತ್ರೀ ಟೈರ್-1, ಸ್ಲೀಪರ್ ಕ್ಲಾಸ್-12, ಜನರಲ್ ಸೆಕೆಂಡ್ ಕ್ಲಾಸ್-4, ಎಸ್ ಎಲ್ ಆರ್ ಡಿ-2 ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.
- ರೈಲು ಸಂಖ್ಯೆ 06296 ಜುಲೈ 16ರಂದು ರಾತ್ರಿ 8 ಗಂಟೆಗೆ ಪಂಢರಪುರ ನಿಲ್ದಾಣದಿಂದ ಹಿಂದಿರುಗಲಿ. ಮರುದಿನ ಮಧ್ಯಾಹ್ನ 12:30ಕ್ಕೆ ಬೆಂಗಳೂರು ತಲುಪುತ್ತದೆ.
ಈ ವಿಶೇಷ ರೈಲು ತುಮಕೂರು, ಗುಬ್ಬಿ, ನಿಟ್ಟೂರು, ತಿಪಟೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.
- ರೈಲು ಸಂಖ್ಯೆ 06297 ಬೆಂಗಳೂರಿನಿಂದ ಪಂಢರಪುರಕ್ಕೆ ತೆರಳಲಿದೆ. ಇದು ತುಮಕೂರು, ಅರಸೀಕೆರೆ ಮತ್ತು ಹುಬ್ಬಳ್ಳಿ ಮೂಲಕ ತೆರಳಲಿದೆ. ಈ ವಿಶೇಷ ರೈಲು SMVT ಬೆಂಗಳೂರಿನಿಂದ ಜುಲೈ 16ರಂದು ರಾತ್ರಿ 10 ಗಂಟೆಗೆ ಹೊರಟು ಮರುದಿನ ಸಂಜೆ 6:20ಕ್ಕೆ ಪಂಢರಪುರ ನಿಲ್ದಾಣ ತಲುಪಲಿದೆ. ಇದು ತುಮಕೂರು, ಗುಬ್ಬಿ, ನಿಟ್ಟೂರು, ತಿಪಟೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ ರಸ್ತೆ, ಘಟಪ್ರಭಾ, ಘಟಪ್ರಭಾ, ಘಟಪ್ರಭಾ, ಚಿಂಚಲಿ, ಕುಡಚಿ, ಉಗಾರ ಖುರ್ದ್, ಮೀರಜ್, ಕವಠೆ-ಮಹಂಕಲ್, ಢಲಗಾಂವ್ ಮತ್ತು ಸಂಗೋಳ ನಿಲ್ದಾಣಗಳಲ್ಲಿ ನಿಲ್ಲಲಿದೆ.
- ರೈಲು ಸಂಖ್ಯೆ 06298 ಪಂಢರಪುರದಿಂದ ಬೆಂಗಳೂರಿನ SMVTಗೆ ಬರಲಿದೆ. ಇದು ಅರಸೀಕೆರೆ, ಹಾಸನ ಮತ್ತು ಕುಣಿಗಲ್ ಮೂಲಕ ಬರುತ್ತದೆ. ಈ ವಿಶೇಷ ರೈಲು ಜುಲೈ 17ರಂದು ರಾತ್ರಿ 8 ಗಂಟೆಗೆ ಪಂಢರಪುರದಿಂದ ಹೊರಟು ಮರುದಿನ ಮಧ್ಯಾಹ್ನ 3:10ಕ್ಕೆ ಬೆಂಗಳೂರು ತಲುಪಲಿದೆ.
ಸೋಲಾಪುರದಿಂದ ಪಂಢರಾಪುರಕ್ಕೆ ಸುಲಭ ಪ್ರಯಾಣ
ಉಳಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಸೋಲಾಪುರಕ್ಕೆ ಹಲವು ರೈಲುಗಳಿವೆ. ಸೋಲಾಪುರಕ್ಕೆ ತೆರಳಿದರೆ ಅಲ್ಲಿಂದ ಪಂಡರಾಪುರಕ್ಕೆ ಬಸ್ ಅಥವಾ ಇತರ ವಾಹನಗಳ ಮೂಲಕವೂ ತೆರಳಬಹುದು. ಉತ್ತರ ಕರ್ನಾಟಕದ ವಿವಿಧ ನಗರಗಳಿಂದ ಸೋಲಾಪುರಕ್ಕೆ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಹೀಗಾಗಿ ಸೋಲಾಪುರದಿಂದ ಸುಲಭವಾಗಿ ಪಂಢರಾಪುರಕ್ಕೆ ಪ್ರಯಾಣಿಸಬಹುದು. ಒಂದೂವರೆ ಗಂಟೆಯೊಳಗೆ ಪಂಢರಾಪುರ ತಲುಪಬಹುದು. ದಕ್ಷಿಣ ಕರ್ನಾಟಕದಿಂದ ಹಾಸನ-ಸೋಲಾಪುರ ಎಕ್ಸ್‌ಪ್ರೆಸ್, ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್ ಓಡಾಡಲಿದೆ. ಇದರಲ್ಲೂ ಪ್ರಯಾಣಿಸಬಹುದು.
ದೇವಸ್ಥಾನಗಳ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ