ಅಯ್ಯೋ ದೇವರೇ, ಮಳೆಯ ಬೆನ್ನಿಗೆ ಬೆಂಗಳೂರು ಟ್ರಾಫಿಕ್; ಇಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೇಯೇ ಜಾಗರಣೆ, ವೈರಲ್ ವಿಡಿಯೋ
ಬೆಂಗಳೂರು ಮತ್ತು ಬೆಂಗಳೂರಿಗರ ಸಂಕಷ್ಟ, ಸಂಕಟಗಳು ಒಂದೆರಡಲ್ಲ. ಭಾರಿ ಮಳೆಯ ಬೆನ್ನಿಗೆ ಈಗ ಮತ್ತೆ ಬೆಂಗಳೂರು ಟ್ರಾಫಿಕ್ ಎದುರಾಗಿದೆ. ಸಾವಿರಾರು ಸವಾರರು ಇಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೇಯೇ ಇಡೀ ರಾತ್ರಿ ಜಾಗರಣೆ ಮಾಡಿದ ಘಟನೆ ಗಮನಸೆಳೆದಿದೆ. ಇದರ ವೈರಲ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಗಿವೆ.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಸದಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಭಾರಿ ಮಳೆಯ ಕಾರಣ ಬೆಂಗಳೂರಿನ ಉತ್ತರ ಮತ್ತು ಪೂರ್ವ ಭಾಗದ ಜನರು ತೊಂದರೆಗೆ ಒಳಗಾಗಿದ್ದರು. ನಿನ್ನೆ ಸಂಜೆಯಿಂದ ದೊಡ್ಡ ಮಟ್ಟದ ಟ್ರಾಫಿಕ್ ಸಮಸ್ಯೆ ಇಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಭಾಗದಲ್ಲಿ ಉಂಟಾಗಿದ್ದು, ಸಾವಿರಾರು ಸವಾರರು ಎರಡು ಮೂರು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆಯಲ್ಲೇ ಸಿಲುಕಿದ ಘಟನೆ ಗಮನಸೆಳೆದಿದೆ. ಈ ಫ್ಲೈ ಓವರ್ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಇದರಿಂದಾಗಿ ಸಾವಿರಾರರು ಸವಾರರು ಹತಾಶೆ, ಅಸಮಾಧಾನ, ಆಕ್ರೋಶಗಳನ್ನು ಹೊರಹಾಕುವಂತಾಯಿತು. ಸೋಷಿಯಲ್ ಮೀಡಿಯಾಗಳಲ್ಲಿ ಈ ಸಂಚಾರ ದಟ್ಟಣೆಯ ವಿಡಿಯೋಗಳು ವೈರಲ್ ಆಗಿವೆ. ಫೈಓವರ್ ಮೇಲೆ ಮತ್ತು ಕೆಳಗೆ ಕಿಲೋಮೀಟರ್ ಉದ್ದಕ್ಕೆ ವಾಹನಗಳು ಸರದಿ ನಿಂತಿರುವ ದೃಶ್ಯ ವಿಡಿಯೋಗಳಲ್ಲಿ ಕಂಡುಬಂದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಫ್ಲೈಓವರ್‌ನಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ವಿಫಲವಾದ ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ, ಆಕ್ರೋಶವನ್ನು ವ್ಯಕ್ತಪಡಿಸಿಲು ಬಹುತೇಕರು ಸೋಷಿಯಲ್ ಮೀಡಿಯಾವನ್ನು ನೆಚ್ಚಿಕೊಂಡಿದ್ದರು.
ಹಿಂದೆಂದೂ ಕಂಡಿರದ ಬೆಂಗಳೂರು ಟ್ರಾಫಿಕ್; ಇಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಸಂಚಾರ ದಟ್ಟಣೆ
ಬೆಂಗಳೂರು ಟ್ರಾಫಿಕ್ ಕುಖ್ಯಾತಿ ಪಡೆದುಕೊಂಡಿರುವಂಥದ್ದು ನಿಜ. ಆದರೆ, ಇಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಸಂಚಾರ ದಟ್ಟಣೆ ಬೆಂಗಳೂರಿಗರಿಗೆ ಹಿಂದೆಂದೂ ಕಂಡಿರದ ಸಂಚಾರ ದಟ್ಟಣೆಯ ಅನುಭವವನ್ನು ನಿನ್ನೆ ಒದಗಿಸಿತು. ಎಕ್ಸ್ ಬಳಕೆದಾರ ಶಫಾತ್ ಖಾನ್ ಎಂಬುವವರು ಟ್ರಾಫಿಕ್ ಜಾಮ್‌ನ ವಿಸ್ತೃತ ನೋಟ ಒದಗಿಸುವ ಫೋಟೋ ಶೇರ್ ಮಾಡಿದ್ದು, ಅದು ಗಮನಸೆಳೆದಿದೆ. ಅವರು “ಬೆಂಗಳೂರು ಟ್ರಾಫಿಕ್ ಜಾಮ್, ಭಾರಿ ಮಳೆ, ವಿಮಾನ ಯಾನ ರದ್ದಾಯಿತು, ಮನೆಯಿಂದಲೇ ಕೆಲಸ ಶುರುವಾಯಿತು, ಶಾಲೆ, ಕಾಲೇಜುಗಳಿಗೆ ರಜೆ ಸಿಕ್ಕಿತು. ವೈಫೈ, ವಿದ್ಯುತ್ ಕೂಡ ಕಣ್ಣಾಮುಚ್ಚಾಲೆ ಆಡೋದಕ್ಕೆ ಶುರುವಮಾಡಿದೆ” ಎಂದು ಬರೆದು ಈ ಫೋಟೋ ಹಂಚಿಕೊಂಡಿದ್ದಾರೆ.
ಒಂದೂವರೆ ಗಂಟೆಗೂ ಹೆಚ್ಚು ಕಾಲದ ಫ್ಲೈಓವರ್ ಮೇಲೆ ಬಾಕಿ..
ಪ್ರತೀಕ್ ಎಂಬುವವರು ಟ್ವೀಟ್ ಮಾಡಿ, ಸಂಜೆ 5.20ಕ್ಕೆ ಕಚೇರಿ ಬಿಟ್ಟಿದ್ದೇನೆ. ಮನೆ 30 ಕಿ.ಮೀ. ದೂರದಲ್ಲಿದೆ. ಇಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಕಳೆದ ಒಂದೂವರೆ ಗಂಟೆಗೂ ಹೆಚ್ಚು ಸಮಯದಿಂದ ಬಾಕಿ ಆಗಿದ್ದೇವೆ. ಟ್ರಾಫಿಕ್ ಜಾಮ್ ಕಾರಣ ವಾಹನಗಳು ಮುಂದೆ ಹೋಗುತ್ತಿಲ್ಲ. ವಿವಿಧ ಕಂಪನಿಗಳ ಉದ್ಯೋಗಿಗಳು ಮನೆಗೆ ಹೋಗುವ ಸಂದರ್ಭದಲ್ಲಿ ಎದುರಾದ ಸಂಕಷ್ಟ, ಸಂಕಟ ಇದು. ಎಲ್ಲರೂ ಹತಾಶರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಎರಡು ಮೂರು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಅನುಭವ
ಎರಡು ಮೂರು ಗಂಟೆಗೂ ಹೆಚ್ಚು ಹೊತ್ತು ಇಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಇದರ ವಿಡಿಯೋವನ್ನು ಬಿಟಿಎಂ ಲೇಔಟ್ ಡಬ್ಲ್ಯುಎಫ್‌ಎ ಕೂಡ ಟ್ವೀಟ್ ಮಾಡಿದೆ.
ಸಿಲ್ಕ್ ಬೋರ್ಡ್‌ನ ಕಡೆಗೆ ಇಸಿಟಿಯ ಮೇಲ್ಸೇತುವೆಯಲ್ಲಿ ಒಂದು ಇಂಚು ಕೂಡ ಚಲಿಸದೆ ಕಳೆದ 20 ನಿಮಿಷ ಆಯಿತು. ಸ್ವಲ್ಪ ತುಂತುರು ಮಳೆ ಸುರಿಯುತ್ತಿದೆ. ಮುಂದೆ ನೀರು ನಿಲ್ಲುವ ಸಮಸ್ಯೆಯಿರುವಂತೆ ತೋರುತ್ತಿದೆ. ಆದ್ದರಿಂದ ನಿಧಾನವಾಗಿ ಚಲಿಸಲು ಬಯಸುತ್ತಾರೆ. ಆದ್ದರಿಂದ ಇನ್ನು ಹೊರಡುವವರು ಸ್ವಲ್ಪ ಸಮಯದ ನಂತರ ನಿಮ್ಮ ಪ್ರಯಾಣವನ್ನು ಯೋಜಿಸಿ ಎಂದು ಶಿಲ್ಪಾ ರಾವ್ ಅವರು ಸಂಜೆ 6.30 ಸುಮಾರಿಗೆ ಟ್ವೀಟ್ ಮಾಡಿದ್ದರು. ಇನ್ನೂ ಅನೇಕರು ಕ್ಯಾಬ್‌ಗಳಿಂದ ಇಳಿದು ಮೇಲ್ಸೇತುವೆಯಲ್ಲೇ ನಡೆದು ಹೋಗುತ್ತಿದ್ದ ದೃಶ್ಯವೂ ಕಂಡುಬಂತು.
