ಬೆಂಗಳೂರು ಇಂದಿರಾ ನಗರದಲ್ಲಿ ಪೊಲೀಸ್ ಅಧಿಕಾರಿಯ ಕಾಲಿಗೊದ್ದು ಕೂಗಾಡಿದ ಮಹಿಳೆ, ಎಫ್‌ಐಆರ್ ದಾಖಲು; ಹೈಡ್ರಾಮಾದ ವೈರಲ್‌ ವಿಡಿಯೋ ನೀವು ನೋಡಿಲ್ವ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಇಂದಿರಾ ನಗರದಲ್ಲಿ ಪೊಲೀಸ್ ಅಧಿಕಾರಿಯ ಕಾಲಿಗೊದ್ದು ಕೂಗಾಡಿದ ಮಹಿಳೆ, ಎಫ್‌ಐಆರ್ ದಾಖಲು; ಹೈಡ್ರಾಮಾದ ವೈರಲ್‌ ವಿಡಿಯೋ ನೀವು ನೋಡಿಲ್ವ

ಬೆಂಗಳೂರು ಇಂದಿರಾ ನಗರದಲ್ಲಿ ಪೊಲೀಸ್ ಅಧಿಕಾರಿಯ ಕಾಲಿಗೊದ್ದು ಕೂಗಾಡಿದ ಮಹಿಳೆ, ಎಫ್‌ಐಆರ್ ದಾಖಲು; ಹೈಡ್ರಾಮಾದ ವೈರಲ್‌ ವಿಡಿಯೋ ನೀವು ನೋಡಿಲ್ವ

ಬೆಂಗಳೂರು ಮತ್ತು ಬೆಂಗಳೂರಿಗರಿಗೆ ಸಂಚಾರ ದಟ್ಟಣೆ ಹೊಸದಲ್ಲ. ನಿತ್ಯವೂ ಒಂದಿಲ್ಲೊಂದು ಘಟನೆ ಅಲ್ಲಿ ನಡೆಯುತ್ತಲೇ ಇರುತ್ತದೆ. ಈಗೇನು ಅಂತೀರಾ, ಬೆಂಗಳೂರು ಇಂದಿರಾ ನಗರದಲ್ಲಿ ಪೊಲೀಸ್ ಅಧಿಕಾರಿಯ ಕಾಲಿಗೊದ್ದು ಕೂಗಾಡಿದ ಮಹಿಳೆ ಹೈಡ್ರಾಮಾ ಮಾಡಿದ್ದರು. ಆ ವೈರಲ್‌ ವಿಡಿಯೋ ನೀವು ನೋಡಿಲ್ವ. ಇಲ್ಲಿದೆ ಆ ವಿವರ.

ಇಂದಿರಾ ನಗರ ಇಎಸ್‌ಐ ಆಸ್ಪತ್ರೆ ಜಂಕ್ಷನ್‌ನಲ್ಲಿ ಪೊಲೀಸರ ವಿರುದ್ಧ ಕೂಗಾಡಿದ ಮಹಿಳೆ (ವಿಡಿಯೋದಿಂದ ತೆಗೆದ ದೃಶ್ಯ)
ಇಂದಿರಾ ನಗರ ಇಎಸ್‌ಐ ಆಸ್ಪತ್ರೆ ಜಂಕ್ಷನ್‌ನಲ್ಲಿ ಪೊಲೀಸರ ವಿರುದ್ಧ ಕೂಗಾಡಿದ ಮಹಿಳೆ (ವಿಡಿಯೋದಿಂದ ತೆಗೆದ ದೃಶ್ಯ) (X)

ಬೆಂಗಳೂರು: ಸಂಚಾರ ದಟ್ಟಣೆ ಬೆಂಗಳೂರು ನಗರದಲ್ಲಿ ನಿತ್ಯಗೋಳು. ಅದೇನೂ ಹೊಸದಲ್ಲ. ಆದರೆ ಈ ಸಂಚಾರ ದಟ್ಟಣೆಯ ನಡೆಯುವ ಘಟನೆಗಳು ಕೆಲವು ಬಹುಬೇಗ ಗಮನ ಸೆಳೆದು ಬಿಡುತ್ತವೆ. ಅಂತಹ ಒಂದು ಘಟನೆ ಇದು. ಬೆಂಗಳೂರಿನ ಇಂದಿರಾನಗರದಲ್ಲಿ ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿ ಕಾಲಿಗೆ ಒದ್ದು, ಕೂಗಾಡುತ್ತಿದ್ದ ದೃಶ್ಯ ಅಲ್ಲಿದ್ದವರ ಗಮನಸೆಳೆದಿತ್ತು. ಇದರ ವಿಡಿಯೋ ವೈರಲ್ ಕೂಡ ಆಗಿದೆ. ಇದು ಇಂದಿರಾನಗರದ ಇಎಸ್‌ಐ ಆಸ್ಪತ್ರೆ ಜಂಕ್ಷನ್‌ನಲ್ಲಿ ನಡೆದಿದೆ. ಕೂಗಾಡಿ ರಂಪಾಟ ಮಾಡಿದ ಮಹಿಳೆಯ ವಿರುದ್ಧ ಪೊಲೀಸರು ಕೇಸ್ ದಾಖಲಿಸಿ ಎಫ್‌ಐಆರ್ ಕೂಡ ಹಾಕಿದ್ದಾರೆ.

ಏನಿದು ಘಟನೆ- ವೈರಲ್ ವಿಡಿಯೋದಲ್ಲಿರುವುದೇನು

ಬೆಂಗಳೂರು ಇಂದಿರಾನಗರದ ಇಎಸ್‌ಐ ಆಸ್ಪತ್ರೆ ಜಂಕ್ಷನ್ ಸಮೀಪ ಮಹಿಳೆಯೊಬ್ಬರು ಸಂಚಾರ ದಟ್ಟಣೆ ನಡುವೆ ಪೊಲೀಸರ ಜೊತೆಗೆ ಏರುದನಿಯಲ್ಲಿ ಮಾತನಾಡುವ ದೃಶ್ಯ ವಿಡಿಯೋದಲ್ಲಿದೆ. ಇದೇ ವೇಳೆ ಪೊಲೀಸ್ ವಾಹನ ಹಿಂದಕ್ಕೆ ಬರುವುದೂ ಕಾಣುತ್ತದೆ. ಅದಾಗುತ್ತಿದ್ದಂತೆ ಮೂವರು ಪೊಲೀಸ್ ಅಧಿಕಾರಿಗಳ ಬೆನ್ನು ಕಾಣಿಸುತ್ತದೆ. ಅವರ ಎದುರು ಇದ್ದ ಮಹಿಳೆ ಜೋರಾಗಿ ಕಿರಿಚಾಡುತ್ತ, ಕೂಗಾಡುತ್ತ ಹೈಡ್ರಾಮಾ ಮಾಡುತ್ತಿರುವುದು ಕಂಡುಬಂತು. ನಂತರ ಆಕ್ರಮಣಕಾರಿ ಸ್ವಭಾವ ತೋರಿಸುತ್ತಿದ್ದ ಮಹಿಳೆ ಪೊಲೀಸ್ ಸಿಬ್ಬಂದಿ ಮೈಮೇಲಿದ್ದ ಬಾಡಿ ಕ್ಯಾಮೆರಾಕ್ಕೆ ಕೈ ಹಾಕಿದ್ದು, ಅವರ ಕಾಲಿಗೆ ಒದ್ದು ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂತು. ಹಿಂದಿ ಭಾಷೆಯಲ್ಲಿ ಕೂಗಾಡುತ್ತಿದ್ದ ಮಹಿಳೆ ಬಳಿಕ ಸಂಚಾರ ಪೊಲೀಸ್ ಹತ್ತಿರ ಬಂದು ಏರುದನಿಯಲ್ಲಿ ಮಾತನಾಡುತ್ತ ಅಧಿಕಾರಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸುತ್ತಿದ್ದುದು ಗಮನಸೆಳೆಯಿತು.

ಈ ಘಟನೆ ಆನ್‌ಲೈನ್‌ನಲ್ಲಿ ಗಮನ ಸೆಳೆದಿದೆ. ಈ ಘರ್ಷಣೆಗೆ ಕಾರಣವಾಗುವ ನಿಖರವಾದ ಸನ್ನಿವೇಶ ಏನು ಎಂಬುದು ಇನ್ನೂ ತಿಳಿದಿಲ್ಲ, ಆಕೆಯ ಆಕ್ರಮಣಕಾರಿ ನಡವಳಿಕೆಯ ಹಿಂದಿನ ಪ್ರೇರಣೆಗಳ ಬಗ್ಗೆ ಕೂಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂಡಿಯಾ ಟುಡೇ ವರದಿ ಪ್ರಕಾರ, ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಕೇಸ್ ದಾಖಲಾಗಿದೆ. ವೈರಲ್ ವಿಡಿಯೋದ ಸಾಚಾತವನ್ನು ದೃಢೀಕರಿಸುವುದು ಹಿಂದೂಸ್ತಾನ್ ಟೈಮ್ಸ್ ಕನ್ನಡದಿಂದ ಸಾಧ್ಯವಾಗಿಲ್ಲ.

ಎಕ್ಸ್‌ನಲ್ಲಿ ಜನರ ಪ್ರತಿಕ್ರಿಯೆ ಹೀಗಿತ್ತು

ವೈರಲ್ ವಿಡಿಯೋಕ್ಕೆ ಹಲವರು ಸ್ಪಂದಿಸಿದ್ದು, ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರನು ಉದ್ವೇಗದಲ್ಲಿದ್ದ ಮಹಿಳೆಯ ಮುಂದೆ ಪೊಲೀಸರ ಶಾಂತ ವರ್ತನೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, "ಕನ್ನಡಿಗನೊಬ್ಬ ಈ ರೀತಿ ಕಿರುಚುತ್ತಿದ್ದರೆ, ಪೊಲೀಸರ ವರ್ತನೆಯೇ ಬೇರೆ ರೀತಿಯಲ್ಲಿರುತ್ತಿತ್ತು" ಎಂದು ಆಟೋ ಚಾಲಕನನ್ನು ಒಳಗೊಂಡ ಹಿಂದಿನ ವೈರಲ್ ವೀಡಿಯೊವನ್ನು ಉಲ್ಲೇಖಿಸಿ ಹೇಳಿದ್ದಾರೆ.

ಸಂದರ್ಭ, ಸನ್ನಿವೇಶ ಏನೋ ಗೊತ್ತಿಲ್ಲ ಹೀಗಾಗಿ ಅದನ್ನು ಪೊಲೀಸರಿಗೇ ಬಿಟ್ಟುಬಿಡೋಣ ಎಂದು ದಿನೇಶ್ ಎಂಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಶಶಿ ಎಂಬುವವರು, ಬೆಂಗಳೂರಿನಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯ ಕಾಲರ್ ಪಟ್ಟಿಯನ್ನು ಸಾರ್ವಜನಿಕವಾಗಿ ಹಿಡಿದ ಸನ್ನಿವೇಶ ಇದು. ಪೊಲೀಸರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಆಶಿಸೋಣ ಎಂದಿದ್ದಾರೆ.

ಏತನ್ಮಧ್ಯೆ, ಶಿವಮೊಗ್ಗದಲ್ಲಿ, ಸಹ್ಯಾದ್ರಿ ಕಾಲೇಜು ಸಮೀಪ ಸಾಮಾನ್ಯ ತಪಾಸಣೆಗಾಗಿ ವಾಹನವನ್ನು ನಿಲ್ಲಿಸಲು ಟ್ರಾಫಿಕ್ ಪೊಲೀಸ್‌ ಪ್ರಯತ್ನಿಸಿದಾಗ ಅವರನ್ನೇ ಗುದ್ದಿ ಬಾನೆಟ್‌ ಮೇಲೆ ಬಿದ್ದ ಅವರನ್ನು ಕೆಲ ದೂರ ಕೊಂಡೊಯ್ದ ಘಟನೆ ಗಮನಸೆಳದಿದೆ. ಆರೋಪಿ ಚಾಲಕ, ಕೇಬಲ್ ಆಪರೇಟರ್ ಮಿಥನ್ ಜಗದಾಳೆ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಯತ್ನದ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾರ, ಸಹ್ಯಾದ್ರಿ ಕಾಲೇಜು ಎದುರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ನಿತ್ಯ ತಪಾಸಣೆ ನಡೆಸುತ್ತಿದ್ದಾಗ ಅಧಿಕಾರಿಗಳು ಭದ್ರಾವತಿಯಿಂದ ಬರುತ್ತಿದ್ದ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ, ಚಾಲಕನು ವೇಗವನ್ನು ಹೆಚ್ಚಿಸಿ ಸ್ಥಳದಿಂದ ಪರಾರಿಯಾಗುವ ಮೊದಲು ಅಧಿಕಾರಿಯನ್ನು 100 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದಿದ್ದಾನೆ ಎಂದು ಎಎನ್‌ಐ ವರದಿ ಮಾಡಿದೆ.

Whats_app_banner