ಬೆಂಗಳೂರು ಟ್ರಾಫಿಕ್ ನಿರ್ವಹಣೆಗಾಗಿ ಟೆಕ್ ಪಾರ್ಕ್‌ ಗೇಟ್ ಮುಚ್ಚಿದ ಪೊಲೀಸರು, ಕಂಗಾಲಾದ್ರು ಹೊರವರ್ತುಲ ರಸ್ತೆಯ ಟೆಕ್ಕಿಗಳು- ವೈರಲ್ ವಿಡಿಯೋ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಟ್ರಾಫಿಕ್ ನಿರ್ವಹಣೆಗಾಗಿ ಟೆಕ್ ಪಾರ್ಕ್‌ ಗೇಟ್ ಮುಚ್ಚಿದ ಪೊಲೀಸರು, ಕಂಗಾಲಾದ್ರು ಹೊರವರ್ತುಲ ರಸ್ತೆಯ ಟೆಕ್ಕಿಗಳು- ವೈರಲ್ ವಿಡಿಯೋ

ಬೆಂಗಳೂರು ಟ್ರಾಫಿಕ್ ನಿರ್ವಹಣೆಗಾಗಿ ಟೆಕ್ ಪಾರ್ಕ್‌ ಗೇಟ್ ಮುಚ್ಚಿದ ಪೊಲೀಸರು, ಕಂಗಾಲಾದ್ರು ಹೊರವರ್ತುಲ ರಸ್ತೆಯ ಟೆಕ್ಕಿಗಳು- ವೈರಲ್ ವಿಡಿಯೋ

ಬೆಂಗಳೂರು ಮಳೆಯ ಕಾರಣ ಹೊರ ವರ್ತುಲ ರಸ್ತೆಯಲ್ಲಿ ಮಂಗಳವಾರ ಮುಸ್ಸಂಜೆ ಸಂಚಾರ ದಟ್ಟಣೆ ಭಾರಿ ಪ್ರಮಾಣದಲ್ಲಿತ್ತು. ಟ್ರಾಫಿಕ್ ನಿರ್ವಹಣೆಗಾಗಿ ಟೆಕ್ ಪಾರ್ಕ್‌ ಗೇಟ್ ಮುಚ್ಚಿದ ಪೊಲೀಸರ ಕ್ರಮದಿಂದಾಗಿ ಹೊರವರ್ತುಲ ರಸ್ತೆಯ ಟೆಕ್ಕಿಗಳು ಕಂಗಾಲಾಗಿದ್ದರು. ಸಂಚಾರ ದಟ್ಟಣೆ ಮತ್ತು ಗೇಟ್ ಬಂದ್ ಮಾಡಿದ್ದರ ವೈರಲ್ ವಿಡಿಯೋ ಗಮನಸೆಳೆದವು.

ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ನಿರ್ವಹಣೆಗಾಗಿ ಮಂಗಳವಾರ ಸಂಜೆ  ಇಕೋ ಸ್ಪೇಸ್ ಮತ್ತು ಇಕೋ ವರ್ಲ್ಡ್‌ನಂತಹ ಕೆಲವು ದೊಡ್ಡ ಟೆಕ್ ಪಾರ್ಕ್‌ಗಳ ಗೇಟ್ ಮುಚ್ಚಿದ ಘಟನೆ ನಡೆಯಿತು. (ಸಂಚಾರ ದಟ್ಟಣೆಯ ಸಾಂಕೇತಿಕ ಚಿತ್ರ ಬಳಸಲಾಗಿದೆ)
ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ನಿರ್ವಹಣೆಗಾಗಿ ಮಂಗಳವಾರ ಸಂಜೆ ಇಕೋ ಸ್ಪೇಸ್ ಮತ್ತು ಇಕೋ ವರ್ಲ್ಡ್‌ನಂತಹ ಕೆಲವು ದೊಡ್ಡ ಟೆಕ್ ಪಾರ್ಕ್‌ಗಳ ಗೇಟ್ ಮುಚ್ಚಿದ ಘಟನೆ ನಡೆಯಿತು. (ಸಂಚಾರ ದಟ್ಟಣೆಯ ಸಾಂಕೇತಿಕ ಚಿತ್ರ ಬಳಸಲಾಗಿದೆ) (HT News)

ಬೆಂಗಳೂರು: ಸತತ ಭಾರಿ ಮಳೆಯ ಕಾರಣ ಜಲಾವೃತಗೊಂಡ ರಸ್ತೆಗಳಲ್ಲಿ ಸಂಚಾರ ದಟ್ಟಣೆ ವಾಹನ ಸವಾರರನ್ನು ಕಂಗಾಲುಗೊಳಿಸಿದೆ. ಈ ನಡುವೆ, ಸದಾ ಸಂಚಾರ ದಟ್ಟಣೆ ಇರುವಂತಹ ಬೆಂಗಳೂರು ಹೊರವರ್ತುಲ ರಸ್ತೆಯಲ್ಲಿ ಮಂಗಳವಾರ ಮುಸ್ಸಂಜೆ ವೇಳೆ ಉಂಟಾದ ತೀವ್ರ ಸಂಚಾರ ದಟ್ಟಣೆ ನಿರ್ವಹಿಸುವುದಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು, ಕೆಲ ಹೊತ್ತು ಟೆಕ್ ಪಾರ್ಕ್‌ನ ಗೇಟ್ ಅನ್ನು ಬಂದ್ ಮಾಡಿದ್ದರು. ಇದರಿಂದಾಗಿ ಅಲ್ಲಿನ ಟೆಕ್ಕಿಗಳು ಕಂಗಾಲಾಗಿ ಹೋದರು. ಕೆಲವು ಗಂಟೆ ಕಾಲ ಅವರು ಅಲ್ಲಿಂದ ಹೊರ ಹೋಗುವುದು ಸಾಧ್ಯವಾಗದೇ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅಸಮಾಧಾನ, ಹತಾಶೆಯನ್ನು ಹೊರಹಾಕಿದ ಘಟನೆ ನಡೆಯಿತು. ಇದಕ್ಕೂ ಮೊದಲೇ ಮಂಗಳವಾರ ಸಂಜೆ ಎಲ್ಲ ಕಂಪನಿಗಳೂ ಸಂಚಾರ ಪೊಲೀಸರು ಸಂದೇಶ ರವಾನಿಸಿದ್ದು, ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವುದಕ್ಕಾಗಿ ಟೆಕ್ ಪಾರ್ಕ್‌ನ ಎಲ್ಲ ಗೇಟ್ ಮುಚ್ಚಲಾಗುತ್ತದೆ. ಸಹಕರಿಸಬೇಕು" ಎಂದು ಮನವಿ ಮಾಡಿದ್ದರು.

ಟ್ರಾಫಿಕ್ ನಿರ್ವಹಣೆಗಾಗಿ ಟೆಕ್ ಪಾರ್ಕ್‌ ಗೇಟ್ ಮುಚ್ಚಿದ ಬೆಂಗಳೂರು ಸಂಚಾರ ಪೊಲೀಸರು

ಭಾರಿ ಮಳೆಯ ಕಾರಣ ಹೊರ ವರ್ತುಲ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಇದೆ. ಇಕೋ ಸ್ಪೇಸ್‌ ಸಮೀಪ ಈ ಸಂಚಾರ ದಟ್ಟಣೆ ನಿರ್ವಹಣೆ ಮಾಡುವುದಕ್ಕಾಗಿ ಟೆಕ್ ಪಾರ್ಕ್‌ನ ಎಲ್ಲ ಗೇಟ್‌ಗಳನ್ನು ಬಂದ್‌ ಮಾಡಬೇಕಾಗುತ್ತದೆ. ಆ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದ್ದು, ಎಲ್ಲ ಟೆಕ್ ಕಂಪನಿಗಳು ಸಹಕರಿಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಮಂಗಳವಾರ ಸಂಜೆ ಸಂದೇಶ ರವಾನಿಸಿದ್ದರು.

ಬೆಂಗಳೂರು ಹೊರ ವರ್ತುಲ ರಸ್ತೆಯ ಪ್ರದೇಶದಲ್ಲಿ ಇಕೋ ಸ್ಪೇಸ್, ಇಕೋ ವರ್ಲ್ಡ್‌ ಮತ್ತು ಇತರೆ ಟೆಕ್ ಪಾರ್ಕ್‌ಗಳಿದ್ದು ಹಲವಾರು ಐಟಿ ಕಂಪನಿಗಳು ಇಲ್ಲೇ ಇವೆ. ಈ ಕಂಪನಿಗಳ ಉದ್ಯೋಗಿಗಳು ತಮ್ಮ ಕೆಲಸದ ಅವಧಿ ಮುಗಿದ ಕೂಡಲೇ ಹೊರ ಬಂದಿದ್ದು, ಟೆಕ್ ಪಾರ್ಕ್‌ ಗೇಟ್ ಬಂದ್ ಆಗಿರುವುದು ನೋಡಿ ಗಾಬರಿಯಾಗಿದ್ದರು. ಮನೆಗೆ ಬೇಗ ತಲುಪುವ ಅವರ ಆಶಯ ಈಡೇರದ ಕಾರಣ ಅಸಮಾಧಾನಕ್ಕೆ ಒಳಗಾಗಿದ್ದರು. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಈ ಬಗ್ಗೆ ವ್ಯಾಪಕ ಟೀಕೆಗಳೂ ವ್ಯಕ್ತವಾಗಿದೆ.

ಹೊರ ವರ್ತುಲ ರಸ್ತೆಯಲ್ಲಿ ಎರಡೂವರೆ ಗಂಟೆಯಲ್ಲಿ 4 ಕಿ.ಮೀ. ಸಂಚಾರ

“ಕಾಡುಬೀಸನಹಳ್ಳಿ ಭಾಗದ ಹೊರವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಗಂಭೀರವಾಗಿದೆ. ನನ್ನ ಅನೇಕ ಸಹೋದ್ಯೋಗಿಗಳು ವಾಪಸ್ ಕಚೇರಿಗೆ ಬಂದಿದ್ದು, ಒಂದು ಗಂಟೆಗೂ ಹೆಚ್ಚು ಹೊತ್ತು ಹೊರ ಹೋಗುವುದು ಸಾಧ್ಯವಾಗಲಿಲ್ಲ. ಟೆಕ್ ಪಾರ್ಕ್‌ ಗೇಟ್ ಮುಚ್ಚಿದ ಕಾರಣ ಎಲ್ಲರೂ ಇಲ್ಲಿ ಬಂಧಿಯಾಗಿದ್ದಾರೆ” ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಹೊರ ವರ್ತುಲ ರಸ್ತೆಯಲ್ಲಿ ಹಿಂದೆಂದೂ ಕಾಣದ ಸಂಚಾರ ದಟ್ಟಣೆ ಈ ಸಂಜೆ ಕಾಣಿಸಿತು. ಕಳೆದ ಎರಡೂವರೆ ಗಂಟೆಯಿಂದ ಇದೇ ರಸ್ತೆಯಲ್ಲಿದ್ದು ಕೇವಲ 4 ಕಿಮೀ ಸಂಚರಿಸಿದ್ದೇನೆ. ಈ ರೀತಿ ಅವಸ್ಥೆ ಯಾರಿಗೂ ಬರಬಾರದು ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.

ಇಂದು (ಅಕ್ಟೋಬರ್ 23) ಮನೆಯಿಂದಲೇ ಕೆಲಸ ಮಾಡಿ ಎಂದು ಐಟಿ,ಬಿಟಿ ಮತ್ತು ಇಲೆಕ್ಟ್ರಾನಿಕ್ಸ್ ಇಲಾಖೆ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ, ಆಡಳಿತ ಮಂಡಳಿಗೆ ಸಲಹೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ ಇಂದು ಕೂಡ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ನೀಡಿರುವುದು ಆತಂಕವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ನಾಳೆ (ಅಕ್ಟೋಬರ್ 24) ಬೆಳಗ್ಗೆ 8.30ರ ತನಕದ ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಅದೇ ರೀತಿ ಬಹುತೇಕ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಇದೇ ರೀತಿ ಮೋಡ ಕವಿದ ವಾತಾವರಣ ಮತ್ತು ಬಹುತೇಕ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಬಹುದು, ಎರಡೂ ಜಿಲ್ಲೆಗಳಲ್ಲಿ ತಾಪಮಾನ ಗರಿಷ್ಠ 30 ಮತ್ತು ಕನಿಷ್ಠ 20 ಇರಬಹುದು.