ಏನೇ ಮಾಡಿದರೂ ತಗ್ಗುತ್ತಿಲ್ಲ ಟ್ರಾಫಿಕ್ ಸಮಸ್ಯೆ; 4 ಕಿಮೀ ಪ್ರಯಾಣಕ್ಕೆ ಬೇಕು 1 ಗಂಟೆ, ಈ ರಸ್ತೆಯಲ್ಲಿ ಸಾಗುವುದಕ್ಕೂ ಮುನ್ನ ಯೋಚಿಸಿ!
ಕನ್ನಡ ಸುದ್ದಿ  /  ಕರ್ನಾಟಕ  /  ಏನೇ ಮಾಡಿದರೂ ತಗ್ಗುತ್ತಿಲ್ಲ ಟ್ರಾಫಿಕ್ ಸಮಸ್ಯೆ; 4 ಕಿಮೀ ಪ್ರಯಾಣಕ್ಕೆ ಬೇಕು 1 ಗಂಟೆ, ಈ ರಸ್ತೆಯಲ್ಲಿ ಸಾಗುವುದಕ್ಕೂ ಮುನ್ನ ಯೋಚಿಸಿ!

ಏನೇ ಮಾಡಿದರೂ ತಗ್ಗುತ್ತಿಲ್ಲ ಟ್ರಾಫಿಕ್ ಸಮಸ್ಯೆ; 4 ಕಿಮೀ ಪ್ರಯಾಣಕ್ಕೆ ಬೇಕು 1 ಗಂಟೆ, ಈ ರಸ್ತೆಯಲ್ಲಿ ಸಾಗುವುದಕ್ಕೂ ಮುನ್ನ ಯೋಚಿಸಿ!

Bengaluru Traffic: ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ದಿನದಿಂದ ದಿನಕ್ಕೆ ತಲೆ ದೋರುತ್ತಿದೆ. ಹೆಬ್ಬಾಳ ಪೊಲೀಸ್‌ ಠಾಣೆಯಿಂದ ಎಸ್ಟೀಮ್‌ ಮಾಲ್​ವರೆಗಿನ 4 ಕಿಮೀ ಸಾಗಲು 40 ನಿಮಿಷದಿಂದ 60 ನಿಮಿಷ (1 ಗಂಟೆ) ಪ್ರಯಾಣ ಬೆಳೆಸಬೇಕಿದೆ. (ವರದಿ: ಎಚ್.ಮಾರುತಿ)

ಏನೇ ಮಾಡಿದರೂ ತಗ್ಗುತ್ತಿಲ್ಲ ಟ್ರಾಫಿಕ್ ಸಮಸ್ಯೆ; 4 ಕಿಮೀ ಪ್ರಯಾಣಕ್ಕೆ ಬೇಕು 1 ಗಂಟೆ, ಈ ರಸ್ತೆಯಲ್ಲಿ ಸಾಗುವುದಕ್ಕೂ ಮುನ್ನ ಯೋಚಿಸಿ!
ಏನೇ ಮಾಡಿದರೂ ತಗ್ಗುತ್ತಿಲ್ಲ ಟ್ರಾಫಿಕ್ ಸಮಸ್ಯೆ; 4 ಕಿಮೀ ಪ್ರಯಾಣಕ್ಕೆ ಬೇಕು 1 ಗಂಟೆ, ಈ ರಸ್ತೆಯಲ್ಲಿ ಸಾಗುವುದಕ್ಕೂ ಮುನ್ನ ಯೋಚಿಸಿ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆಗೆ ಪರಹಾರ ಕಂಡುಕೊಂಡರೂ ಸಂಚಾರ ದಟ್ಟಣೆಗೆ ಮಾತ್ರ ಪರಿಹಾರ ರೂಪಿಸಲು ಸಾಧ್ಯವಿಲ್ಲವೇನೋ? ರಸ್ತೆಗಳ ಅಗಲೀಕರಣ, ಮೆಟ್ರೋ ವಿಸ್ತರಣೆ, ಬಸ್​ಗಳ ಸಂಖ್ಯೆ ಹೆಚ್ಚಳ, ಹೊರ ವರ್ತುಲ ರಸ್ತೆಗಳ ನಿರ್ಮಾಣ ಸೇರಿ ಹತ್ತಾರು ಯೋಜನೆಗಳನ್ನು ರೂಪಿಸಿದರೂ ಪ್ರಯೋಜನವಾಗುತ್ತಿಲ್ಲ. ನಿರಂತರವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ನಗರದ ಮೇಲೆ ಹೆಚ್ಚುತ್ತಿರುವ ಒತ್ತಡ, ವಲಸಿಗರ ಸಂಖ್ಯೆ ಮೂಲ ಕಾರಣಗಳಾಗಿವೆ.

ಪ್ರತಿದಿನ ಅಂದಾಜು 1000 ವಾಹನಗಳು ಬೆಂಗಳೂರಿನಲ್ಲಿ ನೋಂದಣಿಯಾಗುತ್ತಿವೆ. ಜತೆಗೆ ಹೊರಭಾಗದಿಂದ ಆಗಮಿಸುವ ವಾಹನಗಳಿಗೇನೂ ಬರವಿಲ್ಲ. ಬೆಂಗಳೂರಿನ ಅತಿ ದೊಡ್ಡ ಪಾರ್ಕಿಂಗ್‌ ತಾಣ ಎಂಬ ಪ್ರಶ್ನೆಗೆ ತಮಾಷೆಗಾಗಿ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಎಂದು ಉತ್ತರಿಸುವುದುಂಟು. ಇದರ ಜೊತೆಗೆ ಬಳ್ಳಾರಿ ರಸ್ತೆಯೂ ಹೊಸ ಸೇರ್ಪಡೆಯಾಗಿದೆ. ವಿಮಾನ ನಿಲ್ದಾಣ, ಹೊರ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹೆಬ್ಬಾಳ ಮೇಲ್ಸೇತುವೆ ಮೇಲೆ ಅಂದಾಜು 2.5 ಲಕ್ಷ ವಾಹನಗಳು ಸಂಚರಿಸುತ್ತವೆ.

ಮೇಲ್ಸೇತುವೆ ಮೇಲಿನ ಸಾಮರ್ಥ್ಯವನ್ನೂ ಮೀರಿ ವಾಹನಗಳು ಮೇಲ್ಸೇತುವೆ ಪ್ರವೇಶಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಬೆಂಗಳೂರು ಉತ್ತರ ಭಾಗದ ಬಳ್ಳಾರಿ ರಸ್ತೆಯಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುವ ದೃಶ್ಯ ಹೀಗಿದೆ. ಬೆಳಗಿನ ಹೊತ್ತು, ಸಾವಿರಾರು ವಾಹನಗಳು ಏಕಕಾಲಕ್ಕೆ ನಗರದೊಳಗೆ ದಾಂಗುಡಿಯಿಡುವ ಸಮಯ. ಇಬ್ಬರು ಪೊಲೀಸ್‌ ಪೇದೆಗಳು ಹೆಬ್ಬಾಳ ಮೇಲ್ಸೇತುವೆ ಮೇಲೆ ಆಂಬುಲೆನ್ಸ್​ವೊಂದಕ್ಕೆ ದಾರಿ ಮಾಡಿಕೊಡಲು ಹೆಣಗಾಡುತ್ತಿದ್ದರು.

ನಾಲ್ಕು ಕಿಮೀಗೆ ಒಂದು ಗಂಟೆ ಬೇಕು

ಬಳ್ಳಾರಿ ರಸ್ತೆ, ಸರ್ವೀಸ್‌ ರಸ್ತೆ, ಕೆಆರ್ ಪುರಂ ಸೇರಿದಂತೆ 9 ಲೇನ್​​​ಗಳಲ್ಲಿ ಆಗಮಿಸುವ ವಾಹನಗಳು ಮೇಲ್ಸೇತುವೆಯ 2 ಲೇನ್​​ನಲ್ಲೇ ಸಾಗಬೇಕು. ಅದರಲ್ಲೂ ಕಾರುಗಳಲ್ಲಿ ಒಬ್ಬೊಬ್ಬರೇ ಡೈವ್‌ ಮಾಡಿಕೊಂಡು ಬರುವ ಸಾವಿರಾರು ವಾಹನಗಳನ್ನು ಕಾಣಬಹುದು. ಕಾರ್‌ ಪೂಲಿಂಗ್​​ಗೆ ಈ ಹಿಂದೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆದಿದ್ದವಾದರೂ ಯಶಸ್ಸು ಕಾಣಲಿಲ್ಲ. ಬೆಂಗಳೂರಿನ 8 ದಿಕ್ಕುಗಳಿಂದ ಒಬ್ಬೊಬ್ಬರೇ ಇರುವ ಲಕ್ಷಾಂತರ ಕಾರುಗಳು ನಗರದೊಳಗೆ ಪ್ರವೇಶ ಪಡೆಯುತ್ತವೆ. ಇದೂ ಕೂಡಾ ವಾಹನ ದಟ್ಟಣೆಗೆ ಕಾರಣವಾಗಿದೆ.

ಎಸ್ಟೀಮ್‌ ಮಾಲ್​​ನಿಂದ ಬ್ಯಾಪ್ಟಿಸ್ಟ್‌ ಆಸ್ಪತ್ರೆವರೆಗೆ ಮೇಲ್ಸೇತುವೆ ಮೇಲೆ ಮತ್ತೊಂದು ಮಾರ್ಗವನ್ನು ನಿರ್ಮಿಸುತ್ತಿದೆ. ಕೆಆರ್‌ ಪುರಂನಿಂದ ಆಗಮಿಸುವ ವಾಹನಗಳಿಗೆ ದಾರಿ ಮಾಡಿಕೊಡಲು ಹೆಬ್ಬಾಳ ಕಡೆಯಿಂದ ಆಗಮಿಸುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ವಾಹನಗಳೆಲ್ಲವೂ ಸರ್ವೀಸ್‌ ರಸ್ತೆಯಲ್ಲಿ ಸಾಗಬೇಕಿದ್ದವು. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು. ಹೆಬ್ಬಾಳ ಪೊಲೀಸ್‌ ಠಾಣೆಯಿಂದ ಎಸ್ಟೀಮ್‌ ಮಾಲ್​ವರೆಗಿನ 4 ಕಿಮೀ ಪ್ರಯಾಣಿಸಲು 40 ನಿಮಿಷದಿಂದ 60 ನಿಮಿಷ (1 ಗಂಟೆ) ಸಮಯ ತೆಗೆದುಕೊಳ್ಳುತ್ತದೆ.

ಆಫೀಸ್ ಅವಧಿಯಲ್ಲಂತೂ ವಾಹನ ಸವಾರರಿಗೆ ನರಕ

ಮೇಲ್ಸೇತುವೆ ಹತ್ತುವ 900 ಮೀಟರ್‌ ರ್ಯಾಂಪ್‌ ಹತ್ತಲು 13 ನಿಮಿಷಗಳ ಅವಧಿ! ದ್ವಿಚಕ್ರ ವಾಹನದಲ್ಲಿ ಈ ಪರಿಸ್ಥಿತಿಯಾದರೆ ಕಾರುಗಳ ಪರಿಸ್ಥಿತಿ ಹೇಗಿರಬೇಡ? ಕಚೇರಿ ಸಮಯ ಅಂದರೆ ಬೆಳಗ್ಗೆ 8.30ರಿಂದ 11.30ರವರೆಗೆ ಈ ಮಾರ್ಗದಲ್ಲಿ ವಾಹನಗಳ ದಟ್ಟಣೆ ವಿಪರೀತವಾಗಿರುತ್ತದೆ. ವಾರದ ದಿನಗಳಲ್ಲೂ ಇದೇ ಪರಿಸ್ಥಿತಿ ಇದೆ ಎನ್ನುವುದು ಆಟೋ ಚಾಲಕರು ಅಭಿಪ್ರಾಯಪಡುತ್ತಾರೆ. ಎಸ್ಟೀಮ್‌ ಮಾಲ್​ನಿಂದ ಮೇಲ್ಸೇತುವೆ ತಲುಪಲು 20 ನಿಮಿಷ ಬೇಕಾಗುತ್ತವೆ. ಮೇಲ್ಸೇತುವೆ ದಾಟಲು ಮತ್ತೆ 20 ನಿಮಿಷಗಳು.

ಸುಸ್ಥಿರ ಸಂಚಾರ ನಿರ್ವಹಣೆಗಾಗಿ ಕ್ರಿಯಾಶೀಲ ಇಂಟೆಲಿಜೆನ್ಸ್ (ಅಸ್ತ್ರಂ) ಅಡಿಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ನಡೆಸಿರುವ ಸಮೀಕ್ಷೆ ಪ್ರಕಾರ ಕೆ ಆರ್‌ ಪುರಂ ರ್ಯಾಂಪ್‌ ನಿರ್ಮಾಣ ಪ್ರಾರಂಭವಾದಾಗಿನಿಂದ ಕೊಡಿಗೆಹಳ್ಳಿ ಜಂಕ್ಷನ್‌ ನಿಂದ ಹೆಬ್ಬಾಳ ಜಂಕ್ಷನ್‌ ನಡುವೆ ವಾಹನ ದಟ್ಟಣೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ವೀರಣ್ಣ ಜಂಕ್ಷನ್​ನಿಂದ ಹೆಬ್ಬಾಳ ಜಂಕ್ಷನ್​ವರೆಗಿನ ಸಂಚಾರದ ಮೇಲೂ ಪರಿಣಾಮ ಬೀರಿದ್ದು, ಸರಾಸರಿ ಪ್ರಯಾಣದ ಅವಧಿಯಲ್ಲಿ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಮೇಖ್ರಿ ವೃತ್ತದಿಂದ ಹೆಚ್ಚುವರಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಮಗಾರಿಗಳು ಬಿರುಸಿನಿಂದ ನಡೆದು ರಸ್ತೆಗಳು ಸಂಚಾರ ಮುಕ್ತವಾದರೆ ಬೆಂಗಳೂರಿನ ಕಳೆ ಮತ್ತಷ್ಟು ಹೆಚ್ಚುವುದರಲ್ಲಿ ಸಂಶಯಗಳಿಲ್ಲ.

Whats_app_banner