ಬೆಂಗಳೂರು: ಪುಷ್ಪ 2 ಸಿನಿಮಾ ನೋಡುವ ಆತುರದಲ್ಲಿ ಹಳಿ ದಾಟಿದವನಿಗೆ ರೈಲು ಡಿಕ್ಕಿ, ಪ್ರಾಣ ಕಳೆದುಕೊಂಡ ಅಲ್ಲು ಅರ್ಜುನ್ ಅಭಿಮಾನಿ
ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ಕ್ರೇಜ್‌ಗೆ ಇಬ್ಬರು ಅಲ್ಲು ಅರ್ಜುನ್ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಒಬ್ಬ ಯುವ ಅಭಿಮಾನಿ ರೈಲು ಡಿಕ್ಕಿಯಾಗಿ ಮೃತಪಟ್ಟರೆ, ಹೈದರಾಬಾದ್‌ನಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರು/ಹೈದರಾಬಾದ್: ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಸಿನಿಮಾ ಡಿಸೆಂಬರ್ 5 ರಂದು ತೆರೆ ಕಂಡಿದೆ. ಅದನ್ನು ನೋಡುವ ಆತುರದಲ್ಲಿ ರೈಲು ಹಳಿ ದಾಟಿದ 19 ವರ್ಷದ ಯುವಕನಿಗೆ ರೈಲು ಡಿಕ್ಕಿ ಹೊಡೆದು, ಆತ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿ ಹಳ್ಳಿಯಲ್ಲಿ ಗುರುವಾರ (ಡಿಸೆಂಬರ್ 5) ಬೆಳಗ್ಗೆ 9 ಗಂಟೆಗೆ ಸುಮಾರಿಗೆ ಈ ದುರಂತ ನಡೆದಿದೆ. ಮೃತ ಯುವಕ ಅಲ್ಲು ಅರ್ಜುನ್ ಅಭಿಮಾನಿಯಾಗಿದ್ದು, ಆಂಧ್ರ ಪ್ರದೇಶದ ಶ್ರೀಕಾಕುಳಂ ಮೂಲದ ಪ್ರವೀಣ್ ತಾಮಚಲಂ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಬಾಶೆಟ್ಟಿಹಳ್ಳಿಯಲ್ಲಿ ದುರಂತ
ಶ್ರೀಕಾಕುಳಂನ ಪ್ರವೀಣ್ ಗುರುವಾರ (ಡಿಸೆಂಬರ್ 5) ಬೆಳಗ್ಗೆ 10 ಗಂಟೆಯ ಪುಷ್ಪ 2 ಸಿನಿಮಾ ಪ್ರದರ್ಶನ ನೋಡುವ ಆತುರದಲ್ಲಿದ್ದ. ಆತ ತನ್ನ ಸ್ನೇಹಿತರೊಂದಿಗೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಐಟಿಐ ಡಿಪ್ಲೊಮಾ ಪದವೀಧರನಾಗಿದ್ದ ಪ್ರವೀಣ್, ಗಾಂಧಿನಗರದ ವೈಭವ್ ಥಿಯೆಟರ್‌ಗೆ ಹೋಗುವುದಕ್ಕಾಗಿ ಬೆಳಗ್ಗೆ 9 ಗಂಟೆಗೆ ಸ್ನೇಹಿತರೊಂದಿಗೆ ರೈಲು ಹಳಿ ದಾಟಿದ್ದ. ಹಳಿ ದಾಟುವ ಗಡಿಬಿಡಿಯಲ್ಲಿ ರೈಲು ಬರುತ್ತಿರುವುದನ್ನು ಗಮನಿಸುವಲ್ಲಿ ಪ್ರವೀಣ್ ವಿಫಲನಾಗಿದ್ದ. ವೇಗವಾಗಿ ಬಂದಿದ್ದ ರೈಲು ಆತನಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಆತನ ಜತೆಗಿದ್ದ ಇಬ್ಬರು ಸ್ನೇಹಿತರು ಮೂಕ ಪ್ರೇಕ್ಷಕರಾಗಿ ಆಘಾತಕ್ಕೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ದುರಂತದ ಕುರಿತು ಪ್ರವೀಣ್‌ನ ತಂದೆ ತಾಯಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾಗಿ ವರದಿ ಹೇಳಿದೆ.
ಹೈದರಾಬಾದ್‌ನಲ್ಲಿ ಪುಷ್ಪ 2 ಸಿನಿಮಾ; ಕಾಲ್ತುಳಿತಕ್ಕೆ ಮಹಿಳೆ ಬಲಿ
ಹೈದರಾಬಾದ್‌ನಲ್ಲಿ ಇನ್ನೊಂದು ದುರಂತ ಸಂಭವಿಸಿದ್ದು, ನಟ ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಅಲ್ಲಿ 35 ವರ್ಷದ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅವರ ಒಂಬತ್ತು ವರ್ಷದ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ರಾತ್ರಿ ಚಿತ್ರದ ಪ್ರದರ್ಶನದ ವೇಳೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
“ ಅಲ್ಲು ಅರ್ಜುನ್ ಅಥವಾ ಸಿನಿಮಾ ತಂಡ ಥಿಯೇಟರ್‌ಗೆ ಭೇಟಿ ನೀಡುವುದಾಗಿ ಥಿಯೇಟರ್ ಆಡಳಿತ ಅಥವಾ ನಟರ ತಂಡದಿಂದ ಯಾವುದೇ ಸೂಚನೆ ಬಂದಿಲ್ಲ. ಥಿಯೇಟರ್ ಮ್ಯಾನೇಜ್‌ಮೆಂಟ್ ಜನಸಂದಣಿಯನ್ನು ನಿರ್ವಹಿಸುವುದಕ್ಕೆ ಮತ್ತು ಭದ್ರತೆಗೆ ಸಂಬಂಧಿಸಿ ಯಾವುದೇ ಮನವಿ ನೀಡಿಲ್ಲ. ಮಾಹಿತಿಯನ್ನೂ ಕೊಟ್ಟಿಲ್ಲ. ಅವರು ಸ್ವತಃ ಯಾವುದೇ ತಯಾರಿಯನ್ನೂ ಮಾಡಿಕೊಂಡಿರಲಿಲ್ಲ. ಅಲ್ಲು ಅರ್ಜುನ್ ಅಥವಾ ಪುಷ್ಪ ಸಿನಿಮಾ ತಂಡದ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಪ್ರವೇಶ ದ್ವಾರದ ವ್ಯವಸ್ಥೆಯೂ ಇರಲಿಲ್ಲ. ಆದರೆ, ಥಿಯೇಟರ್ ಆಡಳಿತ ಮಂಡಳಿಗೆ ಎಲ್ಲ ಮಾಹಿತಿಯೂ ಇತ್ತು" ಎಂದು ಹೈದರಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.