ಬೆಂಗಳೂರು ಅವಳಿ ಸುರಂಗ ಯೋಜನೆಗೆ ಹೊಸ ವೇಗ; ಭೂಗತ ರಸ್ತೆ ಎಂಟ್ರಿ - ಎಕ್ಸಿಟ್ ಪಾಯಿಂಟ್ ಸೇರಿ ನೀವು ತಿಳಿಯಬೇಕಾದ 10 ಅಂಶಗಳಿವು
Bengaluru Twin Tunnel Project: ಸಂಚಾರದಟ್ಟಣೆ ಕಡಿಮೆ ಮಾಡುವ ಉದ್ದೇಶದ ಬೆಂಗಳೂರು ಅವಳಿ ಸುರಂಗ ಯೋಜನೆಗೆ ಹೊಸ ವೇಗ ಸಿಕ್ಕಿದೆ. ಬಿಬಿಎಂಪಿಯು ಬ್ರಾಂಡ್ ಬೆಂಗಳೂರು ಉಪಕ್ರಮದಲ್ಲಿ ಕೈಗೆತ್ತಿಕೊಂಡ ಈ ಭೂಗತ ರಸ್ತೆ ಎಂಟ್ರಿ - ಎಕ್ಸಿಟ್ ಪಾಯಿಂಟ್ ಸೇರಿ ನೀವು ತಿಳಿಯಬೇಕಾದ 10 ಅಂಶಗಳ ವಿವರ ಇಲ್ಲಿದೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೂರು ವರ್ಷಗಳ ಕಾಲಮಿತಿಯಲ್ಲಿ 18 ಕಿ.ಮೀ ಉದ್ದದ ಅವಳಿ ಸುರಂಗ ಮಾರ್ಗ ಯೋಜನೆ ಪೂರ್ಣಗೊಳಿಸುವುದಕ್ಕೆ ಮುಂದಾಗಿದೆ. ಈ ಅವಳಿ ಸುರಂಗ ಮಾರ್ಗ ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ ಸಂಪರ್ಕ ಕಲ್ಪಿಸುವಂಥದ್ದಾಗಿದ್ದು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಇದಕ್ಕೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಅನ್ನು ರೋಡಿಕ್ ಕನ್ಸಲ್ಟಂಟ್ಸ್ ಸಿದ್ದಪಡಿಸಿದ್ದು, 9.5 ಕೋಟಿ ರೂಪಾಯಿ ಯೋಜನಾ ವೆಚ್ಚವನ್ನು ಅಂದಾಜಿಸಿದೆ. ಈ ವಿಸ್ತೃತ ಯೋಜನಾ ವರದಿಯನ್ನು ರೋಡಿಕ್ ಕನ್ಸಲ್ಟಂಟ್ಸ್ ಈಗಾಗಲೇ ಬಿಬಿಎಂಪಿಗೆ ಸಲ್ಲಿಸಿದೆ. ಇದರಂತೆ, ಸುರಂಗ ಕೊರೆಯುವ ಆರು ಯಂತ್ರಗಳನ್ನು ಬಳಸಿಕೊಳ್ಳುವುದಕ್ಕೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ವರದಿ ಹೇಳಿದೆ.
ಬೆಂಗಳೂರು ಅವಳಿ ಸುರಂಗ ಯೋಜನೆ; ನೀವು ತಿಳಿದಿರಬೇಕಾದ 10 ಅಂಶಗಳು
1) ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವುದಕ್ಕಾಗಿ 18 ಕಿ.ಮೀ ಉದ್ದದ ಅವಳಿ ಸುರಂಗ ಮಾರ್ಗ ಯೋಜನೆ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ರೋಡಿಕ್ಸ್ ಕನ್ಸಲ್ಟಂಟ್ಸ್ ಇದಕ್ಕೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿದೆ.
2) ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆಯಲ್ಲಿ ಭೂಗತ ರಸ್ತೆಯ ಎಂಟ್ರಿ ಪಾಯಿಂಟ್ ಒಂದು ಬದಿಯಿಂದ ಹೆಬ್ಬಾಳ ಎಸ್ಟೀಮ್ ಮಾಲ್ ಜಂಕ್ಷನ್ ಮತ್ತು ಇನ್ನೊಂದು ಬದಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಆಗಿದೆ. ಅದೇ ರೀತಿ, ಎಕ್ಸಿಟ್ ಪಾಯಿಂಟ್ ಒಂದು ಬದಿಯಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಇನ್ನೊಂದು ಬದಿಯಲ್ಲಿ ಹೆಬ್ಬಾಳ ಎಸ್ಟೀಮ್ ಮಾಲ್ ಜಂಕ್ಷನ್ ಆಗಿರಲಿದೆ.
3) ಅವಳಿ ಸುರಂಗ ಮಾರ್ಗ ಯೋಜನೆ ಪೂರ್ಣಗೊಳಿಸುವುದಕ್ಕೆ 3 ವರ್ಷ ಕಾಲಮಿತಿ ನಿಗದಿ ಮಾಡಲಾಗಿದ್ದು, ಅಂದಾಜು ವೆಚ್ಚ 9.5 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಇದನ್ನು, ಬಿಬಿಎಂಪಿಯ ಸಲಹಾ ಸಂಸ್ಥೆ ರೋಡಿಕ್ ಕನ್ಸಲ್ಟಂಟ್ಸ್ ಸಲ್ಲಿಸಿದ ವಿಸ್ತೃತ ಯೋಜನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
4) ಬಿಬಿಎಂಪಿಯ ಸಲಹಾ ಸಂಸ್ಥೆಯು ಡಿಪಿಆರ್ ಪೂರ್ಣಗೊಳಿಸಿ ಸಲ್ಲಿಸಿದೆ. ಅದನ್ನು ಅಂತಿಮಗೊಳಿಸುವ ಮೊದಲು ಪರಿಷ್ಕರಣೆ ಮಾಡಲಾಗುತ್ತಿದೆ. ಇದಲ್ಲದೆ, ಅಲ್ಟಿನೋಕ್ ಸಲಹಾ ಸಂಸ್ತೆ ಪೂರ್ವ ಕಾರ್ಯಸಾಧ್ಯತೆ ವರದಿಯ ಭಾಗವಾಗಿ ಸಂಚಾರ ನಿರ್ವಹಣೆ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿಎಸ್ ಪ್ರಹ್ಲಾದ್ ಹೇಳಿದ್ದಾಗಿ ವರದಿ ಹೇಳಿದೆ.
5) ಈ ಯೋಜನೆಗೆ ಆರು ಸುರಂಗ ಕೊರೆಯುವ ಯಂತ್ರ ಬಳಸುವುದಕ್ಕೆ ಶಿಫಾರಸು ಮಾಡಲಾಗಿದೆ. ಆದಾಗ್ಯೂ, ಸುರಂಗ ಕೊರೆಯವ ಯಂತ್ರಗಳ ಸಂಖ್ಯೆ ಮತ್ತು ಅವುಗಳನ್ನು ನಿಯೋಜಿಸುವ ಸ್ಥಳಗಳ ಮೇಲೆ ಯೋಜನೆ ಪೂರ್ಣಗೊಳಿಸುವ ಅಂತಿಮ ಗಡುವು ನಿರ್ಧಾರವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿಎಸ್ ಪ್ರಹ್ಲಾದ್ ಹೇಳಿದ್ದಾಗಿ ವರದಿ ಹೇಳಿದೆ.
6) ಮೂರು ವರ್ಷದ ಕಾಲಮಿತಿ ಅಂದಾಜಿಸುವುದಕ್ಕೆ ಸುರಂಗ ಕೊರೆಯುವ ಯಂತ್ರಗಳ ಸಾಮರ್ಥ್ಯವನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆ. ಒಂದು ವರ್ಷಕ್ಕೆ 7.2 ಕಿ.ಮೀ. ಸುರಂಗ ಕೊರೆಯುವ ಕೆಲಸ ಪೂರ್ಣವಾಗಲಿದೆ. ಈ ದರದಲ್ಲಿ ಮುಂದುವರಿದರೆ ಮೂರು ವರ್ಷದಲ್ಲಿ ಅವಳಿ ಸುರಂಗ ಮಾರ್ಗ ರಚನೆ ಕಾರ್ಯ ಪೂರ್ಣಗೊಳ್ಳಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾಗಿ ವರದಿ ವಿವರಿಸಿದೆ.
7) ಮೂರು ವರ್ಷ ಕಾಲಮಿತಿ ಇದ್ದರೂ ಒಂದು ವರ್ಷ ಹೆಚ್ಚುವರಿ ಅವಧಿಯನ್ನು ಇರಿಸಿಕೊಳ್ಳಲಾಗುತ್ತಿದ್ದು, ಅಷ್ಟರೊಳಗೆ ಸುರಂಗ ಮಾರ್ಗ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. 2025ರ ಜನವರಿಯಲ್ಲಿ ಅವಳಿ ಸುರಂಗ ಮಾರ್ಗ ಯೋಜನೆಯ ಟೆಂಡರ್ ಕರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
8) ಬೆಂಗಳೂರು ಮೆಟ್ರೋ ಕಾಮಗಾರಿ ಗಮನಿಸಿದರೆ ಅದರ ಪ್ರಗತಿಯ ಅಂದಾಜಿನ ಪ್ರಕಾರ, ಈ ಅವಳಿ ಸುರಂಗ ಮಾರ್ಗ ಯೋಜನೆ ಮೂರು ವರ್ಷದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ. ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಡಿಪಿಆರ್ ಅನ್ನು ಪರಿಶೀಲಿಸುತ್ತದೆ ಮತ್ತು ಅಂತಿಮಗೊಳಿಸುವ ಮೊದಲು ಸೂಕ್ತ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಆಡಳಿತಗಾರ ಎಸ್ ಆರ್ ಉಮಾಶಂಕರ್ ತಿಳಿಸಿದ್ದಾರೆ.
9) ಬ್ರಾಂಡ್ ಬೆಂಗಳೂರು ಉಪಕ್ರಮದ ಭಾಗವಾಗಿ ಈ ಅವಳಿ ಸುರಂಗ ಮಾರ್ಗ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ನಡುವಿನ 18 ಕಿಮೀ ಅವಳಿ ಸುರಂಗ ಮಾರ್ಗಕ್ಕೆ ಕರ್ನಾಟಕ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಮುಂಬೈನಲ್ಲಿ ಮತ್ತು ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಗಳ ಪ್ರಕಾರ ಅವಳಿ ಜೋಡಿ ಸುರಂಗ ಮಾರ್ಗವನ್ನು ಕ್ಯಾಬಿನೆಟ್ ಅನುಮೋದಿಸಿತು. ಬಿಲ್ಡ್, ಆಪರೇಟ್ ಮತ್ತು ಟ್ರಾನ್ಸ್‌ಫರ್ (ಬಿಒಟಿ) ವಿಧಾನವನ್ನು ಬಳಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ.
10) ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆಗೆ ಸಾಧ್ಯವಾದಷ್ಟೂ ಸರ್ಕಾರಿ ಜಮೀನನ್ನೇ ಬಳಸಲಾಗುತ್ತದೆ. ಖಾಸಗಿ ಜಮೀನು ಬಳಕೆ ಕಡಿಮೆ ಇರಲಿದೆ. ಬಹುತೇಕ ಈ ಯೋಜನೆ ಭೂಗತ ರಸ್ತೆಗೆ ಸಂಬಂಧಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ಬೇಕಾಗಲ್ಲ. ಈ ರಸ್ತೆಯ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳು ಕೂಡ ಸರ್ಕಾರಿ ಜಮೀನಿನಲ್ಲೇ ಇರಲಿವೆ. ಒಂದೊಮ್ಮೆ ಖಾಸಗಿ ಜಮೀನು ಬೇಕಾದರೆ ಕಾನೂನು ಪ್ರಕಾರ ಅದೂ ನಡೆಯಲಿದೆ ಎಂದು ಉಮಾಶಂಕರ್ ಹೇಳಿದ್ದಾಗಿ ವರದಿ ತಿಳಿಸಿದೆ.