ಬೆಂಗಳೂರು: ತಿಂಗಳಿಗೆ 80 ರಿಂದ 85 ಸಾವಿರ ದುಡೀತೇನ್ರಿ ಎಂದ ಉಬರ್ ರಾಪಿಡೋ ಬೈಕ್ ಚಾಲಕ, ಹುಬ್ಬೇರಿಸಿದ್ರು ಅನೇಕರು
ದೇಶದ ವಾಣಿಜ್ಯ ನಗರಿ ಮುಂಬಯಿಯಂತೆಯೇ ಬೆಂಗಳೂರು ಕೂಡ ದುಡಿಮೆಗೆ ಪ್ರಾಧಾನ್ಯ ನೀಡುವ ನಗರ. ಇಲ್ಲಿ ಸಣ್ಣ ಸಣ್ಣ ಕೆಲಸ ಮಾಡುವವರು ಕೂಡ ತಿಂಗಳಿಗೆ ಸಾವಿರಾರು ರೂಪಾಯಿ ದುಡಿಯುತ್ತಾರೆ. ಅದಕ್ಕೆ, ತಿಂಗಳಿಗೆ 80 ರಿಂದ 85 ಸಾವಿರ ದುಡೀತೇನ್ರಿ ಎಂಬ ಉಬರ್ ರಾಪಿಡೋ ಬೈಕ್ ಚಾಲಕನ ಮಾತುಗಳೇ ಸಾಕ್ಷಿ. ಅನೇಕರು ವಿಡಿಯೋ ನೋಡಿ ಹುಬ್ಬೇರಿಸಿದ್ದಾರೆ. ನೀವೂ ನೋಡಿ ಒಮ್ಮೆ.
ಬೆಂಗಳೂರು: ಬೈಕ್ ಟ್ಯಾಕ್ಸಿ ಪರಿಕಲ್ಪನೆ ಇತ್ತೀಚಿನ ವರ್ಷಗಳಲ್ಲಿ ಅನೇಕರಿಗೆ ಮುಖ್ಯ ಆದಾಯ ಮೂಲವನ್ನೇ ಒದಗಿಸಿದೆ. ಭಾರತದ ಉದ್ದಗಲಕ್ಕೂ ಈ ದುಡಿಮೆಯನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿರುವವರು ಅನೇಕರು. ದೇಶದ ಉದ್ದಗಲಕ್ಕೂ ಇರುವ ಜನರಿಗೆ ಆಶ್ರಯ ನೀಡಿರುವ ಬೆಂಗಳೂರಿನಲ್ಲಿ ಕೂಡ ಉಬರ್, ರಾಪಿಡೋ ಮುಂತಾದ ಕಂಪನಿಗಳು ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಿದೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ, ಬೈಕ್ ಟ್ಯಾಕ್ಸಿ ಚಲಾಯಿಸುವ ವ್ಯಕ್ತಿಯ ತಿಂಗಳ ದುಡಿಮೆ ಕೇಳಿದ ವ್ಯಕ್ತಿ ದಂಗಾಗಿ ಹೋದ ವಿಚಾರ ಗಮನಸೆಳೆದಿದೆ.
ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ಮಾತು ಕೇಳಿ ಹುಬ್ಬೇರಿಸಿದ್ರು ಜನ
ಉಬರ್- ರಾಪಿಡೋ ಜತೆಗೆ ಒಪ್ಪಂದ ಮಾಡಿಕೊಂಡು ಬೈಕ್ ಟ್ಯಾಕ್ಸಿ ಚಲಾಯಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಅದರಲ್ಲ ಅವರು, ತಿಂಗಳಿಗೆ 80,000 ರೂಪಾಯಿಯಿಂದ 85,000 ರೂಪಾಯಿ ಆರಾಮಾಗಿ ದುಡಿಯುತ್ತಿದ್ದೇನೆ ಎಂದು ಖುಷಿಯಿಂದ ಹೇಳಿಕೊಂಡಿರುವುದು ಕಂಡುಬಂದಿದೆ. ನನ್ನ ಪರಿಶ್ರಮ ನನ್ನ ದುಡಿಮೆ. ನನ್ನನ್ನು ಯಾರೂ ಕೇಳುವವರಿಲ್ಲ ಈಗ ಎಂದು ಹೇಳಿರುವುದು ಮತ್ತು ಪ್ರಶ್ನೆ ಕೇಳಿದ ವ್ಯಕ್ತಿ ದಂಗಾಗಿರುವುದು ಅವರ ಧ್ವನಿಯಲ್ಲಿ ವ್ಯಕ್ತವಾಗಿದ್ದು, ಸಾಕಷ್ಟು ಚರ್ಚೆಗೆ ಒಳಗಾಗಿದೆ. ದಿನಕ್ಕೆ 13 ಗಂಟೆ ದುಡಿಮೆ ಮಾಡುತ್ತಿರುವುದಾಗಿ ವ್ಯಕ್ತಿ ಹೇಳಿಕೊಂಡಿದ್ದು ಈ ವಿಡಿಯೋವನ್ನು ಕರ್ನಾಟಕ ಪೋರ್ಟ್‌ಫೋಲಿಯೋ ಡಿಸೆಂಬರ್ 4 ರಂದು ಶೇರ್ ಮಾಡಿಕೊಂಡಿದೆ. ಪ್ರಶ್ನೆ ಕೇಳಿದ ವ್ಯಕ್ತಿ ಹೇಳಿದ್ದು ಇಷ್ಟೆ - ನಾವಂತೂ ಇಷ್ಟು ಆದಾಯ ಗಳಿಸ್ತಾ ಇಲ್ಲ ಬ್ರದರ್ …
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಉಬರ್ ರಾಪಿಡೋ ಬೈಕ್ ಚಾಲಕನ ಮಾತಿಗೆ ಹುಬ್ಬೇರಿಸಿದ್ರು ಅನೇಕರು
ಈ ವಿಡಿಯೋದಲ್ಲಿ ಉಬರ್ ರಾಪಿಡೋ ಬೈಕ್ ಚಾಲಕನ ಮಾತು ಕೇಳಿ ಅನೇಕರು ಹುಬ್ಬೇರಿಸಿದ್ರು. ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಕೂಡ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ಟೆಕ್ ಆಧಾರಿತ ಗಿಗ್ ಎಕಾನಮಿ (ಕಿರು ಅರ್ಥ ವ್ಯವಸ್ಥೆ) ಬೆಳವಣಿಗೆಯನ್ನು ಪ್ರಶಂಸಿದ್ದರೆ. “ಭಾರತದ ಹೊಸ-ಯುಗದ ತಂತ್ರಜ್ಞಾನ ಸಂಸ್ಥೆಗಳು ಉದ್ಯೋಗ ಸೃಷ್ಟಿ ವಿಚಾರದಲ್ಲಿ ಕ್ರಾಂತಿಯನ್ನು ಹುಟ್ಟುಹಾಕಿವೆ. ನಮ್ಮ ಸ್ಥಳೀಯ ಆರ್ಥಿಕತೆಗೆ ಶಕ್ತಿ ತುಂಬುವ ಕೋಟಿಗಟ್ಟಲೆ ಉತ್ತಮ ಸಂಬಳದ ಉದ್ಯೋಗಗಳನ್ನು ಸೃಷ್ಟಿಸಿದೆ. ಈ ಸಹೋದ್ಯೋಗಿಗಳು ಜಗತ್ತು ಮೆಚ್ಚುವ ಡಿಜಿಟಲ್ ಸೇವಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದಾರೆ ಎಂದು ಗಿಗ್ ಕೆಲಸಗಾರರ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ತಮ್ಮ ಪೋಸ್ಟ್ ಅನ್ನು, ನಾವು ಹೊಸಬರಿದ್ದೇವೆ. ಇನ್ನೂ ಹಳೆಯ ಶೈಲಿಯನ್ನೇ ಯಾಕೆ ಅನುಸರಿಸಬೇಕು ಎಂದು ಕೊನೆಗೊಳಿಸಿದ್ದಾರೆ.
ಈ ವೈರಲ್ ವಿಡಿಯೋ ಈಗಾಗಲೇ 6.7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಸೋಷಿಯಲ್ ಮೀಡಿಯಾ ಚರ್ಚೆಯನ್ನು ಇನ್ನೂ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ. ಕಾಮೆಂಟ್‌ಗಳು ಒಂದಕ್ಕಿಂತ ಒಂದು ಹುಬ್ಬೇರಿಸುವಂತೆ ಇವೆ. ಒಬ್ಬ ಬಳಕೆದಾರರು, "ಇದು ಡಿಜಿಟಲ್ ಇಂಡಿಯಾದ ಶಕ್ತಿ!" ಇನ್ನೊಬ್ಬರು ಸುದೀರ್ಘ ಕೆಲಸದ ಸಮಯವನ್ನು ಪ್ರಶ್ನಿಸಿದರು, "ಆದರೆ ಆರೋಗ್ಯ ಮತ್ತು ವೈಯಕ್ತಿಕ ಜೀವನಕ್ಕೆ ಸಮಯ ಹೊಂದಾಣಿಕೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಮೂರನೆಯವನು ತಿಳಿ ಹಾಸ್ಯದೊಂದಿಗೆ, "ನಾನು ವೃತ್ತಿಯನ್ನು ಬದಲಾಯಿಸಿ ಬಿಡುವೆ ಹಾಗಾದರೆ ಎಂದು ಹೇಳಿಕೊಂಡಿದ್ದಾರೆ.
ಭಾರತೀಯರು ಕೆಲಸದ ಘನತೆಯನ್ನು ಅರ್ಥಮಾಡಿಕೊಳ್ಳಬೇಕು. ಕೆಲಸ ಯಾವುದಾದರೂ ಸರಿ. ಅದಕ್ಕೆ ಘನತೆ ಮುಖ್ಯ. ಜನರು ಗಿಗ್ ಕೆಲಸಗಳನ್ನು ತೀರಾ ಸಣ್ಣದು ಎಂಬ ಭಾವದೊಂದಿಗೆ ಕೇವಲವಾಗಿ ನೋಡುತ್ತಾರೆ. ಆ ರೀತಿ ಕೆಲಸ ಮಾಡುವವರಿಗೆ ಗೌರವವನ್ನೂ ಕೊಡುವುದಿಲ್ಲ. ಈ ವಿಡಿಯೋ ನೋಡಿದ ಬಳಿಕ ಭಾರತವು ಶೀಘ್ರದಲ್ಲೇ ಉತ್ತಮಗೊಳ್ಳಲಿದೆ ಎಂಬ ಆಶಾಭಾವನೆ ಮೂಡಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.