ಬೆಂಗಳೂರು ಜನರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಬಿಎಂಟಿಸಿ; 4 ಹೊಸ ನಮ್ಮ ಮೆಟ್ರೊ ಫೀಡರ್ ಬಸ್ ಸೇವೆ ಆರಂಭ
Bengaluru: ಪ್ರಯಾಣಿಕರಿಗೆ ಅನುಕೂಲವಾಗುವಂತೆ ಜನವರಿ 1 ರಿಂದ ನಾಲ್ಕು ಹೊಸ ನಮ್ಮ ಮೆಟ್ರೊ ಫೀಡರ್ ಬಸ್ ಸೇವೆಗಳನ್ನು ಪರಿಚಯಿಸುವುದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದೆ. ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣದಿಂದ ಆಚಾರ್ಯ ಇನ್‌ಸ್ಟಿಟ್ಯೂಟ್‌ವರೆಗೆ ಎಂಎಫ್-49 ಬಸ್ ಸೇವೆಗಳು ಕಾರ್ಯ ನಿರ್ವಹಿಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2025ರ ಜನವರಿ 1 ರಿಂದ ನಾಲ್ಕು ಹೊಸ ನಮ್ಮ ಮೆಟ್ರೊ ಫೀಡರ್ ಬಸ್ ಸೇವೆಗಳನ್ನು ಪರಿಚಯಿಸುವುದಾಗಿ ಗುರುವಾರ (ಡಿಸೆಂಬರ್ 26) ಪ್ರಕಟಿಸಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಾದಾವರ, ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣಗಳಲ್ಲಿ ಈ ಬಸ್ ಸೇವೆ ಲಭ್ಯ ಇರಲಿವೆ. ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಟ್ರಿಪ್‌ಗಳನ್ನು ಓಡಿಸಲು ಬಿಎಂಟಿಸಿ ನಿರ್ಧರಿಸಿದೆ.
ಬಸ್ ಮಾರ್ಗಗಳು ಈ ರೀತಿ ಇವೆ
ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣದಿಂದ ಆಚಾರ್ಯ ಇನ್‌ಸ್ಟಿಟ್ಯೂಟ್‌ವರೆಗೆ ಎಂಎಫ್-49 ಬಸ್ ಸೇವೆಗಳು ಕಾರ್ಯ ನಿರ್ವಹಿಸಲಿವೆ. ತೋಟದ ಗುಡ್ಡದಹಳ್ಳಿ ಮತ್ತು ತಮ್ಮೇನಹಳ್ಳಿಗೂ ಬಸ್‌ಗಳು ಇರಲಿವೆ. ಒಂದು ಬಸ್ ಪ್ರತಿದಿನ 26 ಟ್ರಿಪ್‌ಗಳನ್ನು ಮಾಡಲಿದೆ ಎಂದು ಸಾರಿಗೆ ನಿಗಮ ತಿಳಿಸಿದೆ. ಇದಲ್ಲದೆ ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣದಿಂದ ತೋಟದಗುಡ್ಡದಹಳ್ಳಿ, ಕುದುರೆಗೆರೆ ಕಾಲೋನಿ, ಮಾದನಾಯಕನಹಳ್ಳಿ ಮಾರ್ಗವಾಗಿ ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣಕ್ಕೆ ಎಂಎಫ್-50 ಬಸ್ ಸೇವೆಗಳು ಕಾರ್ಯನಿರ್ವಹಿಸಲಿವೆ. ಇದರ ಜೊತೆಗೆ ಈ ಮಾರ್ಗದಲ್ಲಿ ಎರಡು ಬಸ್‌ಗಳು ಪ್ರತಿದಿನ 26 ಟ್ರಿಪ್‌ಗಳನ್ನು ಮಾಡುತ್ತವೆ.
ಮಾದಾವರ ಮೆಟ್ರೋ ನಿಲ್ದಾಣದಿಂದ ಲಕ್ಷ್ಮೀಪುರ, ವಡ್ಡರಹಳ್ಳಿ, ಜನಪ್ರಿಯ ಟೌನ್‌ಶಿಪ್ ಮೂಲಕ ಕಡಬಗೆರೆ ಕ್ರಾಸ್‌ವರೆಗೆ ಎಂಎಫ್-51 ಬಸ್ ಸೇವೆಗಳು ಕಾರ್ಯ ನಿರ್ವಹಿಸಲಿವೆ. ಈ ಮಾರ್ಗದಲ್ಲಿ ಎರಡು ಬಸ್‌ಗಳು ಕಾರ್ಯ ನಿರ್ವಹಿಸಲು ಸಿದ್ಧವಾಗಿದ್ದು, ಅವು ಪ್ರತಿದಿನ 24 ಟ್ರಿಪ್‌ಗಳನ್ನು ಮಾಡಲಿವೆ. M-52 ಬಸ್ ಸೇವೆಗಳು ಮಾದಾವರ ಮೆಟ್ರೋ ನಿಲ್ದಾಣದಿಂದ ಲಕ್ಷ್ಮೀಪುರ, ಗಂಗೊಂಡನಹಳ್ಳಿ ಕ್ರಾಸ್, ಕಿತ್ತನಹಳ್ಳಿ, ಮಲ್ಲಸಂದ್ರ ಮತ್ತು ವರ್ತೂರು ಮೂಲಕ ತಾವರೆಕೆರೆಗೆ ಕಾರ್ಯ ನಿರ್ವಹಿಸುತ್ತವೆ. ಎರಡು ಬಸ್‌ಗಳು ಪ್ರತಿದಿನ 18 ಟ್ರಿಪ್‌ಗಳನ್ನು ಮಾಡಲಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
ಮೆಟ್ರೋ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆ
ಬೆಂಗಳೂರು ಮೆಟ್ರೋ ಪ್ರಯಾಣ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಮುಂದಿನ ಕೆಲವು ದಿನಗಳಲ್ಲಿ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಸಜ್ಜಾಗಿದೆ ಎಂದು ದಿ ಹಿಂದೂ, ಬುಧವಾರ (ಡಿಸೆಂಬರ್ 25) ವರದಿ ಮಾಡಿದೆ. ಎಫ್‌ಎಫ್‌ಸಿ ಸಂಭವನೀಯ ಟಿಕೆಟ್ ದರ ಹೆಚ್ಚಳ ಕುರಿತು ಸಾರ್ವಜನಿಕ ಸಲಹೆಗಳನ್ನು ಆಹ್ವಾನಿಸಲಾಗಿದೆ. ಬಿಎಂಆರ್ ಸಿಎಲ್ ಪ್ರಸ್ತುತ 10 ರಿಂದ 15 ಪ್ರತಿಶತದಷ್ಟು ಪ್ರಯಾಣ ದರವನ್ನು ಹೆಚ್ಚಿಸಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.