ಬೆಂಗಳೂರು: ಕೇರಳ ಮೂಲಕ 6 ಡ್ರಗ್ ಪೆಡ್ಲರ್‌ಗಳ ಬಂಧನ,80 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳ ವಶ;ಮತೊಂದು ಪ್ರಕರಣದಲ್ಲಿ ಕೊಲೆ ಆರೋಪಿಗಳು ಅರೆಸ್ಟ್
Bengaluru Crime: ಮಾದಕ ವಸ್ತುಗಳನ್ನು ಮಾರುತ್ತಿದ್ದ ಕೇರಳ ಮೂಲಕದ ಡ್ರಗ್ ಪೆಡ್ಲರ್‌ಗಳು, ಹಣದ ವಿಚಾರಕ್ಕೆ ಬಿಹಾರ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪಿಗಳು, ದ್ವಿಚಕ್ರ ವಾಹನ, ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡುತ್ತಿದ್ದವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟದ ಭರಾಟೆ ಜೋರಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಅಪರಾಧ ವಿಬಾಗದ ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಕೊಡಿಗೆಹಳ್ಳಿ ಪೊಲೀಸರು ಕೇರಳ ಮೂಲದ ವ್ಯಕ್ತಿ ಸೇರಿ 6 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ಅವರಿಂದ 80 ಲಕ್ಷ ರೂ.ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕುಮಾರಸ್ವಾಮಿ ಲೇಔಟ್‌ನ ಚಂದ್ರಾನಗರದಲ್ಲಿನ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ 15.05 ಗ್ರಾಂ ಎಂಡಿಎಂಎ ಕ್ರಿಸ್ಟಲ್, 520 ಗ್ರಾಂ ಹೈಡ್ರೋ ಗಾಂಜಾ, 2 ಕೆಜಿಗೂ ಹೆಚ್ಚು ಗಾಂಜಾ, ತೂಕದ ಯಂತ್ರ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೇರಳದಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಓರ್ವ ಆರೋಪಿಯ ಸೂಚನೆಯಂತೆ ಇವರು ಪೋರ್ಟಲ್ ಮೂಲಕ ಗಾಂಜಾ ಡೆಲಿವರಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಗಾಂಜಾ ಮಾರುತ್ತಿದ್ದ ಗೆಳೆಯರ ಬಂಧನ
ಮತ್ತೊಂದು ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಗೆಳೆಯರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್, ಅಜಿತ್, ಕಾರ್ತಿಕ್ ಮತ್ತು ರಾಕೇಶ್ ಬಂಧಿತ ಆರೋಪಿಗಳು. ಈ ಆರೋಪಿಗಳು ಈ ಹಿಂದೆ ಕಳ್ಳತನ ಮಾಡುತ್ತಿದ್ದರು. ಕಳ್ಳತನ ಬಹಳ ಕಷ್ಟ ಎಂದು ನಂತರ ಈ ನಾಲ್ವರೂ ಗಾಂಜಾ ಮಾರಾಟ ಮಾಡಲು ಆರಂಭಿಸಿದ್ದರು. ಒಡಿಶಾದಿಂದ ಗಾಂಜಾ ತರಿಸಿಕೊಂಡು ಆಟೋ ರಿಕ್ಷಾದಲ್ಲಿ ಮಾರಾಟಕ್ಕೆ ಮುಂದಾದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 8 ಕೆಜಿ 600 ಗ್ರಾಂ ಗಾಂಜಾ ಹಾಗೂ ಆಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.
ಹಣಕ್ಕಾಗಿ ಕೊಲೆ ಮಾಡಿದ್ದ ಆರೋಪಿಗಳ ಬಂಧನ
ಹಣಕ್ಕಾಗಿ ಯುವಕನೊಬ್ಬನನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿ ಎಂಟು ಮಂದಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ಬಿಹಾರ ಮೂಲದ ಅಖಿಲೇಶ್ ಯಾದವ್ ಎಂಬಾತನನ್ನು ಕೊಲೆ ಮಾಡಿದ್ದರು. ಪ್ರಕರಣ ನಡೆದ 40 ದಿನಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಅಕ್ಟೋಬರ್ 19ರಂದು ಅಖಿಲೇಶ್ ಎಂಬಾತನನ್ನು ಕಾರಿನಲ್ಲಿ ಅಪಹರಿಸಿದ್ದರು. ಆರೋಪಿಯೊಬ್ಬ ಅಖಿಲೇಶ್‌ನಿಂದ 3,500 ರೂ. ಸಾಲ ಪಡೆದುಕೊಂಡಿದ್ದ. ಹಿಂತಿರುಗಿಸುವಂತೆ ಕೇಳಿದಾಗ ಆತನನ್ನು ಆರೋಪಿಗಳು ಅಪಹರಿಸಿದ್ದಾರೆ.
ರಾಮಗೊಂಡನಹಳ್ಳಿಯ ಮನೆಯೊಂದರಲ್ಲಿ ಕೊಲೆ ಮಾಡಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಸಮೀಪದ ಅರಣ್ಯದಲ್ಲಿ ಬಿಸಾಡಿ ಬಂದಿದ್ದರು. ನಂತರ ಕುರಿಗಾಹಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗುರುತು ಪತ್ತೆಯಾಗದ ಕಾರಣ ಪೊಲೀಸರೇ ಅಂತ್ಯಸಂಸ್ಕಾರ ನಡೆಸಿದ್ದರು. ಅಖಿಲೇಶ್ ಕುಟುಂಬದ ಸದಸ್ಯರು ಕಾಣೆಯಾದ ದೂರು ದಾಖಲಿಸಿದ್ದರು. ಅಂತಿಮವಾಗಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದ್ವಿಚಕ್ರ, ಗ್ಯಾಸ್ ಸಿಲಿಂಡರ್ ಕಳ್ಳರ ಬಂಧನ
ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ, ಗ್ಯಾಸ್ ಸಿಲಿಂಡರ್ ಹಾಗೂ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಜೆಪಿ ನಗರ ನಿವಾಸಿಗಳಾದ ಫಯಾಜ್ ಖಾನ್ (27) ಹಾಗೂ ಇಲಿಯಾಸ್ ನಗರದ ನಿವಾಸಿ ಮಹ್ಮದ್ ಉಮರ್ ಷರೀಫ್ (26) ಬಂಧಿತರು. ಇವರಿಂದ 11 ದ್ವಿಚಕ್ರ ವಾಹನಗಳು, 40 ಗ್ಯಾಸ್ ಸಿಲಿಂಡರ್ ಹಾಗೂ 28 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 15 ಲಕ್ಷ ರೂ. ಎಂದು ಪೊಲೀಸರು ಹೇಳಿದ್ದಾರೆ.
ತಿಲಕ್ ನಗರದ ಬಟ್ಟೆ ಅಂಗಡಿಯ ಮಾಲೀಕರೊಬ್ಬರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ದ್ವಿಚಕ್ರ ವಾಹನ, ಗ್ಯಾಸ್ ತುಂಬಿದ ಹಾಗೂ ಖಾಲಿ ಸಿಲಿಂಡರ್ ಹಾಗೂ ಅಂಗಡಿಗಳಲ್ಲಿ ಬ್ಯಾಟರಿಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇವರಿಂದ ಬ್ಯಾಟರಿ ಹಾಗೂ 12 ಗ್ಯಾಸ್ ಸಿಲಿಂಡರ್‌ಗಳನ್ನು ಖರೀದಿಸಿದ್ದ ಗೊಟ್ಟಿಗೆರೆ ರಸ್ತೆಯ ನಿವಾಸಿಯೊಬ್ಬರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಬೆಟ್ಟದಾಸನಪುರದಲ್ಲಿ ವಾಸವಿರುವ ಮಹಿಳೆಯೊಬ್ಬರು ಕೂಡಾ ಆರೋಪಿಗಳಿಂದ 4 ಸಿಲಿಂಡರ್‌ಗಳನ್ನು ಖರೀದಿ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವರದಿ: ಎಚ್. ಮಾರುತಿ, ಬೆಂಗಳೂರು