ಸರ್ಕಾರಿ ಸ್ವತ್ತು ದುರ್ಬಳಕೆ ಮಾಡದಿರಿ; ಬಿಎಂಟಿಸಿ ಟಿಕೆಟ್ನಲ್ಲಿ ಬಿಲ್ ಪ್ರಿಂಟ್ ಮಾಡಿ ಸಿಕ್ಕಿಬಿದ್ದ ತರಕಾರಿ ವ್ಯಾಪಾರಿ
ಬೆಂಗಳೂರಿನ ತರಕಾರಿ ವ್ಯಾಪಾರಿಯೊಬ್ಬ ತನ್ನ ತರಕಾರಿ ಖರೀದಿ ಮಾಡುತ್ತಿದ್ದವರಿಗೆ ಬಿಲ್ ನೀಡಲು ಬಿಎಂಟಿಸಿ ಬಸ್ ಟಿಕೆಟ್ ರೋಲ್ ಬಳಸುತ್ತಿದ್ದ. ಆ ಮೂಲಕ ಸಾರ್ವಜನಿಕ ಸ್ವತ್ತನ್ನು ದುರ್ಬಳಕೆ ಮಾಡುತ್ತಿದ್ದ. ಆದರೆ, ಕೊನೆಗೆ ಆತ ಸಿಕ್ಕಿಬಿದ್ದಿದ್ದಾನೆ. ಸರ್ಕಾರದ ಸ್ವತ್ತುಗಳನ್ನು ದುರ್ಬಳಕೆ ಮಾಡಬಾರದು ಎಂಬ ಪಾಠ ಇಲ್ಲಿದೆ.
ಸರ್ಕಾರಿ ಸವಲತ್ತು, ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಕೆಲವು ಜನರು ದುರ್ಬಳಕೆ ಮಾಡುವುದು ಆಗಾಗ ವರದಿಯಾಗುತ್ತಿರುತ್ತದೆ. ರೇಷನ್ ಅಕ್ಕಿಯ ಅಕ್ರಮ ಮಾರಾಟ, ಅಂಗನವಾಡಿಗೆ ಪೂರೈಕೆಯಾಗುವ ವಸ್ತುಗಳಲ್ಲಿ ಕಳ್ಳಾಟ, ಸರ್ಕಾರಿ ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು ಹೀಗೆ ಸರ್ಕಾರದ ಸವಲತ್ತುಗಳ ದುರ್ಬಳಕೆಗೆ ಮಿತಿಯೇ ಇಲ್ಲದಂತಾಗಿದೆ. ಎಲ್ಲಾ ಜನರಿಗೆ ಸೇರಬೇಕಾದ ಸಾರ್ವಜನಿಕ ಸ್ವತ್ತುಗಳನ್ನು ಈ ರೀತಿ ಖಾಸಗಿಯಾಗಿ ಬಳಸುವುದು ಅಪರಾಧ. ಇದಕ್ಕೆ ಶಿಕ್ಷೆಯೂ ಆಗುತ್ತದೆ. ಹೀಗಾಗಿ ಸಾರ್ವಜನಿಕರಿಗೆ ಸೇರಿದ ವಸ್ತುಗಳನ್ನು ದುರ್ಬಳಕೆ ಮಾಡುವಾಗ ಎಚ್ಚರದಿಂದ ಇರಬೇಲು. ಇಂತಹದೇ ಪ್ರಕರಣವೊಂದು ಕೆಲವು ವಾರಗಳ ಹಿಂದೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿತ್ತು. ಇದು ಎಲ್ಲೆಡೆ ವೈರಲ್ ಆಗಿದೆ.
ತರಕಾರಿ ಮಾರಾಟಗಾರನೊಬ್ಬ ಬಿಎಂಟಿಸಿ ಬಸ್ ಟಿಕೆಟ್ ರೋಲ್ ಬಳಸಿ, ತನ್ನಿಂದ ತರಕಾರಿ ಖರೀದಿ ಮಾಡುತ್ತಿದ್ದವರಿಗೆ ಬಿಲ್ ನೀಡುತ್ತಿದ್ದ. ಈ ಕುರಿತು ಬಿಎಂಟಿಸಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿದ ನಂತರ, ಅಧಿಕಾರಿಯೊಬ್ಬರು ಸಾಮಾನ್ಯ ನಾಗರಿಕನಂತೆ ಮಾರುವೇಷದಲ್ಲಿ ಹೋಗಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಬಿಎಂಟಿಸಿ ಸೇರಿದಂತೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವವರಿಗೆ ಕಂಡಕ್ಟರ್ ಟಿಕೆಟ್ ನೀಡುತ್ತಾರೆ. ಇದು ಟಿಕೆಟ್ ವಿತರಣೆಗಾಗಿ ಮಾತ್ರ ಬಳಸಬಹುದಾದ ಸರ್ಕಾರಿ ಸ್ವತ್ತು. ಹಾಗಂತಾ ಅದನ್ನು ಯಾರೂ ಖಾಸಗಿ ಅಗತ್ಯಗಳಿಗೆ ಉಪಯೋಗಿಸುವಂತಿಲ್ಲ. ಆದರೆ, ಯಲಹಂಕದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ತರಕಾರಿ ವ್ಯಾಪಾರಿಯು ಟಿಕೆಟಿಂಗ್ ಚೀಟಿಯನ್ನು ಬಳಸಿ ಸಿಕ್ಕಿಬಿದ್ದಿದ್ದಾನೆ. ಬಿಲ್ ಸಿಕ್ಕಿದ ಬಗ್ಗೆ ಕೇಳಿದಾಗ, ಆತ ರಸ್ತೆಬದಿಯಲ್ಲಿ ಸಿಕ್ಕಿದ್ದಾಗಿ ಹೇಳಿಕೊಂಡಿದ್ದ. ಬಿಲ್ ಏನೋ ಸಿಗಬಹುದು. ಆದರೆ, ಆ ಬಿಲ್ ನೀಡಲು ಬಳಸುವ ಯಂತ್ರ ಸಿಕ್ಕಿದ್ದು ಹೇಗೆ ಎಂಬುದಕ್ಕೆ ಉತ್ತರವಿಲ್ಲ.
ಸಾಮಾನ್ಯ ನಾಗರಿಕನಂತೆ ವೇಷ ಧರಿಸಿದ ಬಿಎಂಟಿಸಿ ಸದಸ್ಯರೊಬ್ಬರು, ತರಕಾರಿ ಮಾರಾಟಗಾರನಿಂದ ತರಕಾರಿಗಳನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ, ವ್ಯಾಪಾರಿಯು ಬಿಎಂಟಿಸಿ ಹೆಸರು ಹಾಗೂ ಲೋಗೋ ಇರುವ ಬಿಲ್ ನೀಡಿದ್ದಾನೆ. ತಕ್ಷಣ ಮಾರಾಟಗಾರನನ್ನು ಹಿಡಿದು ಟಿಕೆಟ್ ರೋಲ್ ಮತ್ತು ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರದ (ETM) ಬಗ್ಗೆ ಕೇಳಿದ್ದಾರೆ. ಆರೋಪಿಯು ತನ್ನಲ್ಲೇ ಇದ್ದ ಯಂತ್ರದ ಸಹಾಯದಿಂದ ಬಿಲ್ ನೀಡಿದ್ದಾನೆ ಎಂಬುದು ನಂತರ ತಿಳಿದುಬಂತು. ಈ ಬಗ್ಗೆ ಟೈಮ್ಸ್ ನೌ ವರದಿ ಮಾಡಿದೆ.
ಟಿಕೆಟ್ ರೋಲ್ ಬಳಕೆಗೂ ಲೆಕ್ಕವಿದೆ
ಬಿಎಂಟಿಸಿ ಟಿಕೆಟ್ಗೆ ಬಳಸುವ ಚೀಟಿಗಳನ್ನು ಹೊರಗುತ್ತಿಗೆ ಮುದ್ರಣಾಲಯಗಳ ಮೂಲಕ ಡಿಪೋಗಳಿಗೆ ವಿತರಿಸಲಾಗುತ್ತದೆ. ಪ್ರತಿ ಡಿಪೋಗಳು ಅಗತ್ಯಕ್ಕೆ ತಕ್ಕಂತೆ ಆ ರೋಲ್ಗಳನ್ನು ಪಡೆಯುತ್ತವೆ. ಬಸ್ ಕಂಡಕ್ಟರ್ಗಳು ಸಾಮಾನ್ಯವಾಗಿ ಪ್ರಯಾಣಿಕರ ಸಂಖ್ಯೆ ಮತ್ತು ಟ್ರಿಪ್ ಅವಲಂಬಿಸಿ ಪ್ರತಿದಿನ 3ರಿಂದ 5 ರೋಲ್ಗಳನ್ನು ಬಳಸುತ್ತಾರೆ. ಟಿಕೆಟ್ ನೀಡಲು ಈ ರೋಲ್ ಅತ್ಯಗತ್ಯ. ಪ್ರತಿಯೊಂದು ರೋಲ್ಗಳ ರವಾನೆ ಮತ್ತು ಬಳಕೆಗೂ ಸೂಕ್ತ ದಾಖಲೆ ನಿರ್ವಹಿಸಲಾಗುತ್ತದೆ. ಇಂಥಾ ಪ್ರತಿ ಟಿಕೆಟ್ ರೋಲ್ಗಳ ಬೆಲೆ 9 ರೂ. ಎಂದು ಬಿಎಂಟಿಸಿ ಮೂಲಗಳು ಮಾಹಿತಿ ನೀಡಿವೆ. ಒಂದು ರೋಲ್ನಲ್ಲಿ 90ರಿಂದ 100 ಟಿಕೆಟ್ಗಳನ್ನು ನೀಡಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ.