ತೆಂಗಿನಕಾಯಿ ಬೆಲೆ ಝೆಪ್ಟೋ, ಬ್ಲಿಂಕಿಟ್‌ಗಿಂತ ನಮ್ಮಲ್ಲೇ ಕಡಿಮೆ, ಬೆಂಗಳೂರು ವ್ಯಾಪಾರಿಯ ಪೋಸ್ಟರ್ ವೈರಲ್
ಬೆಂಗಳೂರು ನಿತ್ಯವಸ್ತುಗಳ ಬೆಲೆ ಏರಿಕೆ ಸಹಜವಾಗಿಯೆ ಕಳವಳಕಾರಿ. ತರಕಾರಿ, ತೆಂಗಿನಕಾಯಿ ಬೆಲೆ ಏರುತ್ತಿರುವ ಕಾರಣ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ, ವ್ಯಾಪಾರಿಗಳ ಸಮಸ್ಯೆ ಬೇರೆಯೇ ರೀತಿಯದ್ದು. “ತೆಂಗಿನಕಾಯಿ ಬೆಲೆ ಝೆಪ್ಟೋ, ಬ್ಲಿಂಕಿಟ್‌ಗಿಂತ ನಮ್ಮಲ್ಲೇ ಕಡಿಮೆ” ಎಂಬ ಬೆಂಗಳೂರು ವ್ಯಾಪಾರಿಯ ಪೋಸ್ಟರ್ ವೈರಲ್ ಆಗಿದೆ.
ಬೆಂಗಳೂರು: ವ್ಯಾಪಾರ ಮಾಡುವುದು ಕೂಡ ಒಂದು ಕಲೆ, ಅದೊಂದು ಕೌಶಲ ಕೂಡ ಹೌದು. ಬೆಂಗಳೂರಿನ ತೆಂಗಿನಕಾಯಿ ವ್ಯಾಪಾರಿಯೊಬ್ಬರ ವಿನೂತನ ಜಾಹೀರಾತು ಬಹುಬೇಗ ಜನಮನಗೆದ್ದು, ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿಬಿಟ್ಟಿತು. ವ್ಯಾಪಾರಿ ತನ್ನ ಮಳಿಗೆ ಸಮೀಪ ಒಂದು ಪೋಸ್ಟರ್ ಅಂಟಿಸಿದ್ದರು. ಝೆಪ್ಟೋ, ಬ್ಲಿಂಕಿಟ್, ಬಿಗ್‌ಬಾಸ್ಕೆಟ್‌ಗಳಲ್ಲಿ 70 ರೂಪಾಯಿ - 80 ರೂಪಾಯಿ ಆಸುಪಾಸಿನಲ್ಲಿದೆ ತೆಂಗಿನಕಾಯಿ ದರ. ಆದರೆ ನಮ್ಮ ಅಂಗಡಿಯಲ್ಲಿ ಬಹಳ ಕಡಿಮೆ ಎಂಬ ಸಂದೇಶ ಆ ಪೋಸ್ಟರ್‌ನಲ್ಲಿತ್ತು. ತೆಂಗಿನಕಾಯಿ ದರ ವ್ಯತ್ಯಾಸ ಬಹುಬೇಗ ಗಮನಸೆಳೆಯಿತು. ಸೋಷಿಯಲ್ ಮೀಡಿಯಾದಲ್ಲಿ ಜನ ತೆಂಗಿನಕಾಯಿ ದರದ ವಿಚಾರ ಮಾತನಾಡಲಾರಂಭಿಸಿದರು. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಪೀಕ್ ಬೆಂಗಳೂರು ಖಾತೆಯಲ್ಲಿ ಈ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಕ್ವಿಕ್ ಕಾಮರ್ಸ್ ಬೀದಿಬದಿ ತೆಂಗಿನಕಾಯಿ ವ್ಯಾಪಾರಿಗಳ ಮೇಲೆ ಪರಿಣಾಮ ಬೀರುವುದೇ ಎಂಬ ಸ್ಟೇಟಸ್ ಗಮನಸೆಳದಿದೆ.
ಮನೆಬಾಗಿಲಿಗೆ ಕ್ಷಿಪ್ರವಾಗಿ ಉತ್ಪನ್ನ ತಲುಪಿಸುವ ಆಪ್‌ಗಳಿಗಿಂತ ನಮ್ಮಲ್ಲೇ ಕಡಿಮೆ ದರ: ಪೋಸ್ಟರ್
ತ್ವರಿತ ವಾಣಿಜ್ಯ ಅಪ್ಲಿಕೇಶನ್‌ಗಳು ತ್ವರಿತವಾಗಿ ಉತ್ಪನ್ನಗಳನ್ನು ತಲುಪಿಸುವ ಮೂಲಕ ಶಾಪಿಂಗ್ ಅನ್ನು ಹೆಚ್ಚು ಅನುಕೂಲಕರವಾಗಿಸಿದೆ. ಆದರೆ, ಅವುಗಳ ಮೂಲಕ ಮನೆಗೆ ಉತ್ಪನ್ನ ತರಿಸಬೇಕಾದರೆ ಆ ಉತ್ಪನ್ನಗಳ ಬೆಲೆಯು ಸ್ಥಳೀಯ ಮಾರಾಟಗಾರರಿಗೆ ಹೋಲಿಸಿದರೆ ಹೆಚ್ಚಿನ ಬೆಲೆ ಕೊಡಬೇಕಾಗುತ್ತದೆ.ಈ ಪ್ಲಾಟ್‌ಫಾರಂಗಳು ಸಣ್ಣ ವ್ಯಾಪಾರಗಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದು ಕಳವಳಕ್ಕೆ ಕಾರಣವಾಗಿದೆ.
ಈ ಸೃಜನಶೀಲ ಜಾಹೀರಾತಿನ ಮೂಲಕ ಸಮುದಾಯದೊಂದಿಗೆ ಸಂಪರ್ಕ ಸಾಧಿಸುವ ವ್ಯಾಪಾರಿಯ ಪ್ರಯತ್ನ ಹಾಗೂ ಕಡಿಮೆ ಬೆಲೆಗೆ ತೆಂಗಿನಕಾಯಿ ಒದಗಿಸುವ ರೀತಿ ಮತ್ತು ಮಾರಾಟಗಾರರ ಸಾಮರ್ಥ್ಯದಿಂದಾಗಿ ಅನೇಕ ಗ್ರಾಹಕರು ಪ್ರಭಾವಿತರಾಗಿರುವುದು ಕಂಡುಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರತಿಕ್ರಿಯೆ ಹೀಗಿದೆ
ಹೌದು, ದೆಹಲಿಯಲ್ಲಿ ರಸ್ತೆ ಬದಿ ತೆಂಗಿನಕಾಯಿ ಬೆಲೆ 80 ರೂಪಾಯಿ ಇದೆ. ಬ್ಲಿಂಕಿಟ್‌ನಲ್ಲಿ ಅದಕ್ಕೂ ಕಡಿಮೆ ಇದೆ ಎಂದು ಒಬ್ಬ ಬಳಕೆದಾರರು (@learn_x1) ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು (@shilpamurthy81) ಸೃಜನಶೀಲ ಮನಸ್ಸನ್ನು ಪ್ರಶಂಸಿಸಿದ್ದು, ಕೊನೆಯಲ್ಲಿ ಹಾಕಿರುವ ಸ್ಮೈಲಿ ಗಮನಸೆಳೆಯಿತು. ಇಷ್ಟವಾಯಿತು ಎಂದಿದ್ದಾರೆ. ಪೀಕ್ ಬೆಂಗಳೂರು ಖಾತೆಯಲ್ಲಿ ಈ ಪೋಸ್ಟರ್ ಫೋಟೋ ನಿನ್ನೆ (ನವೆಂಬರ್ 7) ಸಂಜೆ ಪೋಸ್ಟ್ ಆಗಿದ್ದು, ಬಹಳ ಜನ ವೀಕ್ಷಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ, ಯುನೈಡೆಟ್ ಅರಬ್ ಎಮಿರೇಟ್ಸ್‌ನ ವ್ಯಕ್ತಿಯೊಬ್ಬರು ಕೇವಲ 23 ನಿಮಿಷಗಳಲ್ಲಿ PS5 ಅನ್ನು ಹೇಗೆ ತಮ್ಮ ಮನೆಗೆ ತಲುಪಿಸಬಹುದು ಎಂಬುದರ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಆದಾಗ್ಯೂ, ಅವರ ಹಂಚಿಕೆಯು ದೇಸಿ ಎಕ್ಸ್ ಬಳಕೆದಾರರಿಗೆ ಸರಿಯಾಗಿ ಹೊಂದಿಕೆಯಾಗಲಿಲ್ಲ. ಆದರೆ, ಬೆಂಗಳೂರಲ್ಲಿ ಝೊಮಾಟೊದ ಬ್ಲಿಂಕಿಟ್ ಅದೇ ಉತ್ಪನ್ನವನ್ನು ಕಡಿಮೆ ಸಮಯದಲ್ಲಿ ತ್ವರಿತವಾಗಿ ತಲುಪಿಸುತ್ತಿದೆ ಎಂದು ಗಮನಸೆಳೆದರು.