ಕ್ಯಾಬ್ ಚಾಲಕನಿಗೆ ನಿದ್ದೆ, ಬೆಂಗಳೂರಿನಲ್ಲಿ ಪ್ರಯಾಣಿಕನೇ ಟ್ಯಾಕ್ಸಿ ಓಡಿಸಿಕೊಂಡು ಬಂದ ಕಥೆ ಕೇಳಿ ಅಯ್ಯೋ ಪಾಪ ಎಂದ ನೆಟ್ಟಿಗರು
Bengaluru Viral News: ಬೆಂಗಳೂರಿನಲ್ಲಿ ಐಐಟಿ ಪದವೀಧರ ಮಿಲಿಂದ್ ಚಂದ್ವಾನಿಗೆ ವಿನೂತನ ಅನುಭವವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಬಂದಾಗ ಚಾಲಕ ನಿದ್ದೆಗಣ್ಣಿನಲ್ಲಿದ್ದನು. ಈ ಸಮಯದಲ್ಲಿ ತಾನೇ ಕಾರು ಚಲಾಯಿಸಿಕೊಂಡು ಬರಬೇಕಾಯಿತು ಎಂದು ಹೇಳಿದ್ದಾರೆ. ಈ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ನೆಟ್ಟಿಗರಿಂದ ನಾನಾ ಪ್ರತಿಕ್ರಿಯೆಗಳು ಬಂದಿವೆ.
ಬೆಂಗಳೂರು ಟ್ಯಾಕ್ಸಿ ಚಾಲಕರು ಹಗಲು ರಾತ್ರಿ ಎಂಬ ಪರಿವೆಯೇ ಇಲ್ಲದೆ ಹೊಟ್ಟೆಪಾಡಿಗಾಗಿ ಕಾರು ಓಡಿಸುತ್ತಾ ಇರುತ್ತಾರೆ. ಈ ಸಮಯದಲ್ಲಿ ಕೆಲವು ಚಾಲಕರಿಗೆ ನಿದ್ದೆ ತಡೆಯಲಾಗುವುದಿಲ್ಲ. ಆಗಾಗ ಟೀ ಕುಡಿಯುತ್ತ ಕಾರು ನಿಲ್ಲಿಸುತ್ತಾ ಹೇಗೋ ಚಾಲನೆ ಮಾಡುತ್ತ ಇರುತ್ತಾರೆ. ಇಂತಹ ಘಟನೆಗಳು ಯಾರಿಗಾದರೂ ಅನುಭವಕ್ಕೆ ಬಂದಿರಬಹುದು. ಇದೀಗ ಕ್ಯಾಂಪ್ ಡೈರೀಸ್ ಬೆಂಗಳೂರು ಎಂಬ ಸಂಸ್ಥೆಯ ಸ್ಥಾಪಕ, ಐಐಟಿ ಪದವೀಧರ ಮಿಲಿಂದ್ ಚಂದ್ವಾ ಇವರಿಗೂ ಇಂತಹದ್ದೇ ಅನುಭವವಾಗಿದೆ. ಇವರು ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ, ತಾನು ಕಾರು ಚಾಲನೆ ಮಾಡುತ್ತಿರುವ ಮತ್ತು ಟ್ಯಾಕ್ಸಿ ಚಾಲಕ ಪಕ್ಕದಲ್ಲಿ ಪ್ರಯಾಣಿಕ ಸೀಟಿನಲ್ಲಿ ನಿದ್ದೆ ಮಾಡಿರುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
ನಿದ್ದೆಗಣ್ಣಿನ ಚಾಲಕ
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಮಿಲಿಂದ್ ಚಂದ್ವಾನಿ ಹೀಗೆ ಬರೆದಿದ್ದಾರೆ. "ಕಳೆದ ರಾತ್ರಿ 3 ಗಂಟೆಗೆ ನಾನು ಬೆಂಗಳೂರು ವಿಮಾನ ನಿಲ್ದಾಣದಿಂದ ವಾಪಸ್ ಬರುತ್ತಿದ್ದೆ. ಆ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬೇರೆ ಕೆಲಸ ಮಾಡಬೇಕಾಗಿ ಬಂತು. ನಾನು ಪ್ರಯಾಣಿಸುತ್ತಿದ್ದ ಕ್ಯಾಬ್ ಚಾಲಕ ನಿದ್ದೆ ಮೂಡ್‌ನಲ್ಲಿದ್ದ. ಕಷ್ಟಪಟ್ಟು ಕಣ್ಣು ತೆರೆದು ಕಾರು ಚಲಾಯಿಸುತ್ತಿದ್ದ. ಒಂದು ಸಾರಿ ಆತ ಚಹಾ ಮತ್ತು ಸಿಗರೇಟಿಗಾಗಿ ನಿಲ್ಲಿಸಿದ. ಇಷ್ಟೆಲ್ಲ ಮಾಡಿದರೂ ಆತನಿಗೆ ಕಣ್ಣು ತೆರೆಯಲು ಸಾಧ್ಯವಾಗುತ್ತಿರಲಿಲ್ಲ" ಎಂದು ಮಿಲಿಂದ್ ತನ್ನ ಪೋಸ್ಟ್‌ನಲ್ಲಿ ಬರೆದಿದ್ದಾರೆ. "ಈ ಸಮಯದಲ್ಲಿ ನಾನು ಕಾರು ಡ್ರೈವ್ ಮಾಡ್ಲಾ ಎಂದು ಕೇಳಿದೆ. ನಾನು ಕೇಳಿದ್ದೇ ತಡ ಆತ ತಕ್ಷಣ ಕೀ ನನಗೆ ಕೊಟ್ಟ. ನನಗೆ ಆಶ್ಚರ್ಯವಾಯಿತು" ಎಂದು ಅವರು ಬರೆದಿದ್ದಾರೆ.
"ನನಗೆ ಆ ಸಮಯದಲ್ಲಿ ಪಾಪ ಅನಿಸ್ತು. ಅವನು ಏನೂ ಯೋಚನೆ ಮಾಡದೆ ನನ್ನ ಮೇಲೆ ನಂಬಿಕೆ ಇಟ್ಟು ಕೀಲಿಕೈ ಕೊಟ್ಟ. ನಾನು ಈ ಕೆಲಸಕ್ಕೆ ಅರ್ಹ ಎಂದು ಆತ ತತ್‌ಕ್ಷಣ ಅಂದಾಜಿಸಿದ. ನನಗೆ ಡ್ರೈವಿಂಗ್ ಗೊತ್ತು ಎಂದು ಆತನಿಗೆ ಮೊದಲೇ ತಿಳಿದಂತೆ ಕೀ ಕೊಟ್ಟ. ಆತನಿಗೆ ನೂರು ರೂಪಾಯಿ ಟಿಪ್ಸ್ ಕೊಟ್ಟೆ. ಆತನ ಡ್ರೈವಿಂಗ್‌ಗೆ ನಾನು ಫೈವ್ ಸ್ಟಾರ್ ರೇಟಿಂಗ್ ಕೊಡಬೇಕು ಅಲ್ಲವೇ" ಎಂದು ಮಿಲಂದ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದ್ದಾರೆ.
"ಜೀವನ ಎನ್ನುವುದು ಸಾಕಷ್ಟು ಅನಿರೀಕ್ಷಿತಗಳಿಂದ ಕೂಡಿರುತ್ತವೆ. ಇಂತಹ ಸನ್ನಿವೇಶದಲ್ಲಿ ದಯೆ ಹಾಗೂ ಪರಾನುಭೂತಿಯಿಂದ ವರ್ತಿಸಿ. ಬಹುಶಃ ನಿಮ್ಮ ಚಾಲನಾ ಕೌಶಲ್ಯ ಹೆಚ್ಚಬಹುದು. ಕಥೆಯ ಪ್ರಮುಖ ನೀತಿ ಏನು? ನೀವು ಏನಾದರೂ ನೀಡಲು ಮುಂದಾದರೆ, ಆ ಕಡೆಯವರು ನೀಡುವುದನ್ನು ಪಡೆಯಲು ರೆಡಿಯಾಗಿರಿ" ಎಂದು ಮಿಲಿಂದ್ ತನ್ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಅಯ್ಯೋ ಪಾಪ ಎಂದು ನೆಟ್ಟಿಗರು
ಈ ವಿಡಿಯೋದಲ್ಲಿ ಕಾರು ಚಾಲಕ ಪ್ರಯಾಣಿಕ ಸೀಟಿನಲ್ಲಿ ಒರಗಿದ್ದ. ಆತ ಆ ಸೀಟನ್ನು ಹಿಂದೆ ಮಾಡಿ ಆರಾಮವಾಗಿ ನಿದ್ದೆ ಮಾಡುತ್ತಿದ್ದ. ಚಂದ್ವಾನಿ ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸುತ್ತಿದ್ದರು. ಈ ವಿಡಿಯೋಗೆ ಸೋಷಿಯಲ್ ಮೀಡಿಯಾ ಬಳಕೆದಾರರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಈಗಾಗಲೇ 7.5 ದಶಲಕ್ಷ ವೀಕ್ಷಣೆ ಪಡೆದಿದೆ.
"ಈ ವಿಡಿಯೋ ಉಲ್ಲಾಸದಾಯಕವಾಗಿದೆ. ಆದರೆ, ಚಾಲಕರ ಕೆಲಸದ ಅವಧಿಯ ಕುರಿತು ಪರಾಮರ್ಶಿಸುವ ಸಮಯ ಇದು" ಎಂದು ಒಬ್ಬರು ಪೋಸ್ಟ್ ಮಾಡಿದ್ದಾರೆ. "ಆತ ನಿಮ್ಮಲ್ಲಿ ತೋರಿದ ನಂಬಿಕೆಯು ಹೃದಯಸ್ಪರ್ಶಿ" "ಮಿಲಿಂದ್ ಅವರು ಹೊಸ ಸ್ಕಿಲ್ ಸೆಟ್ ಕಲಿತಿದ್ದಾರೆ- ಬೆಂಗಳೂರು ಟ್ರಾಫಿಕ್ ನ್ಯಾವಿಗೇಟರ್" "ನೀವು ಈ ಸಮಯವನ್ನು ಪರಾನುಭೂತಿಯ ಕ್ಷಣವಾಗಿ ಬದಲಾಯಸಿದ್ದೀರಿ" "ಅಯ್ಯೋ ಪಾಪ ಚಾಲಕ ನಿದ್ದೆಯಿಂದ ಎದ್ದು ಬಂದಾನೋ, ಸರಿಯಾಗಿ ಹಲವು ದಿನಗಳಿಂದ ನಿದ್ದೆ ಮಾಡಿಲ್ಲವೋ" ಎಂದೆಲ್ಲ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.