ಇನ್ವೆಸ್ಟ್ ಕರ್ನಾಟಕ: ಹೊಸಕೋಟೆಯಲ್ಲಿ 1400 ಕೋಟಿ ರೂ ಹೂಡಿಕೆಗೆ ಮುಂದಾದ ವೋಲ್ವೋ, 2000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ
25 ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಹೂಡಿಕೆ ಮಾಡಿರುವ ವೋಲ್ವೋ ಕಂಪನಿ, ಈ ಬಾರಿ ಮತ್ತೆ 1400 ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಇದರಿಂದ 2000ಕ್ಕೂ ಹೆಚ್ಚು ನೇರ ಉದ್ಯೋಗಗಳ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಸ್ವೀಡನ್ ಮೂಲದ ಬಸ್ ಮತ್ತು ಟ್ರಕ್ ತಯಾರಕ ಕಂಪನಿ ವೋಲ್ವೋ (Volvo), ಸಿಲಿಕಾನ್ ಸಿಟಿ ಬೆಂಗಳೂರು ನಗರದ ಪಕ್ಕದಲ್ಲೇ ಇರುವ ಹೊಸಕೋಟೆಯಲ್ಲಿ ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಲು ನಿರ್ಧರಿಸಿದೆ. ಇದಕ್ಕಾಗಿ ಬರೋಬ್ಬರಿ 1,400 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಗುರುವಾರ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬೃಹತ್ ಪ್ರಮಾಣದ ಈ ಹೂಡಿಕೆಯಿಂದ 2000ಕ್ಕೂ ಹೆಚ್ಚು ನೇರ ಉದ್ಯೋಗಗಳ ಸೃಷ್ಟಿಯಾಗುತ್ತದೆ ಎಂಬ ನಿರೀಕ್ಷೆ ಕಂಪನಿಯದ್ದು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರ ಉಪಸ್ಥಿತಿಯಲ್ಲಿ ಒಪ್ಪಂದ ಪ್ರಕ್ರಿಯೆ ಪೂರ್ಣಗೊಂಡಿತು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವೋಲ್ವೋ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಅವರು ಇನ್ವೆಸ್ಟ್ ಕರ್ನಾಟಕ-2025 ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, 25 ವರ್ಷಗಳ ಹಿಂದೆಯೇ ವೋಲ್ವೋ ಸಂಸ್ಥೆ ರಾಜ್ಯಕ್ಕೆ ಬಂದು ಹೂಡಿಕೆ ಮಾಡಿದೆ. ರಾಜ್ಯದಲ್ಲಿ ಬಹಳಷ್ಟು ಬದಲಾವಣೆ ತಂದಿದೆ. ವೋಲ್ವೋ ದೇಶದ ಉತ್ತಮ ಗುಣಮಟ್ಟದ ಬಸ್‌ಗಳಿಗೆ ಹೆಸರಾಗಿದೆ. ರಾಜ್ಯದಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ವೋಲ್ವೋಗೆ ಭರವಸೆ ನೀಡಿದರು. ಅಗತ್ಯ ಸೌಲಭ್ಯಗಳು ಮತ್ತು ಸಹಾಯ ಒದಗಿಸುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಯಾಗಿ, ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು. ಆ ಮೂಲಕ ಸ್ಥಳೀಯರು ಭದ್ರತೆ ಮತ್ತು ಆರ್ಥಿಕ ಬೆಳವಣಿಗೆ ಎರಡನ್ನೂ ಸಾಧಿಸಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದರು.
ವರ್ಷಕ್ಕೆ 20,000 ಬಸ್ಸು ಮತ್ತು ಟ್ರಕ್ ತಯಾರಿ
ವೋಲ್ವೋ ಸಿಇಒ ಮಾರ್ಟಿನ್ ಲುಂಡ್ ಅವರು, ಸ್ಟೆಡ್ ಕಂಪನಿಯು ಪೀಣ್ಯ, ಹೊಸಕೋಟೆ ಮತ್ತು ಧಾರವಾಡ ಬಳಿಯ ಪಿತಾಂಪುರದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ ಎಂದು ಹೇಳಿದರು. “ಈಗ ನಾವು ವರ್ಷಕ್ಕೆ 3,000 ಬಸ್ಸುಗಳು ಮತ್ತು ಟ್ರಕ್‌ಗಳನ್ನು ಇಲ್ಲಿ ತಯಾರಿಸುತ್ತಿದ್ದೇವೆ. ಹೊಸಕೋಟೆ ಸ್ಥಾವರದ ವಿಸ್ತರಣೆಯ ನಂತರ ನಾವು ವರ್ಷಕ್ಕೆ 20,000 ಬಸ್ಸುಗಳು ಮತ್ತು ಟ್ರಕ್‌ಗಳನ್ನು ತಯಾರಿಸಬಹುದು. ಈ ಸಾಮರ್ಥ್ಯ ಹೆಚ್ಚಳದೊಂದಿಗೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯ. ಆ ಮೂಲಕ ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತ ಮತ್ತು ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸಬಹುದು. ಇದಲ್ಲದೆ, ಸ್ಥಳೀಯ ಮಾರುಕಟ್ಟೆಯ ಅಗತ್ಯಗಳನ್ನು ಸರಾಗವಾಗಿ ಪೂರೈಸಲು ಸಾಧ್ಯವಾಗುತ್ತದೆ” ಎಂದು ವೋಲ್ವೋ ಸಿಇಒ ಹೇಳಿದ್ದಾರೆ.
ಬೆಂಗಳೂರು ವಿಶ್ವದಲ್ಲೇ ನಾಲ್ಕನೇ ದೊಡ್ಡ ತಾಣ
ಬೆಂಗಳೂರು ವೋಲ್ವೋದ ನಾಲ್ಕನೇ ಅತಿದೊಡ್ಡ ಅಂತಾರಾಷ್ಟ್ರೀಯ ಸ್ಥಳವಾಗಿದೆ ಎಂದು ಅವರು ಹೇಳಿದರು. ಇಲ್ಲಿನ ಜಾಗತಿಕ ಸಾಮರ್ಥ್ಯ ಕೇಂದ್ರವು 3,500ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ಸಂಶೋಧನೆ ಮತ್ತು ಅಭಿವೃದ್ಧಿ, ಸಂಗ್ರಹಣೆ, ಲಾಜಿಸ್ಟಿಕ್ಸ್ ಮತ್ತು ಹಣಕಾಸು ಸೇವೆಗಳನ್ನು ನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ. ಕಂಪನಿಯು ಮಧ್ಯಪ್ರದೇಶದಲ್ಲಿಯೂ ಜಂಟಿ ಉದ್ಯಮವನ್ನು ಹೊಂದಿದೆ ಎಂದು ಮುಖ್ಯಮಂತ್ರಿಗೆ ತಿಳಿಸಿದ ಅವರು, ಕಂಪನಿಯ ವಹಿವಾಟು ಈಗ ವರ್ಷಕ್ಕೆ 50 ಬಿಲಿಯನ್ ಡಾಲರ್ ದಾಟಿದೆ ಎಂದರು.
ಹೊಸ ಸೌಲಭ್ಯದಿಂದಾಗಿ 2,000ಕ್ಕೂ ಹೆಚ್ಚು ನೇರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ. ರಫ್ತು ಪ್ರಮಾಣ ಗಮನಾರ್ಹ ಏರಿಕೆಯಾಗಲಿದೆ. ಹೊಸಕೋಟೆಯ ಘಟಕದಲ್ಲಿ ಉತ್ಪಾದನಾ ಸಾಮರ್ಥ್ಯವು ವಾರ್ಷಿಕವಾಗಿ 3,000 ದಿಂದ 20,000ಕ್ಕೆ ಏರಲಿದೆ (ಬಸ್ ಮತ್ತು ಟ್ರಕ್).
