ಬೆಂಗಳೂರು ತ್ಯಾಜ್ಯ ವಿಲೇವಾರಿ: ಮನೆ, ರಸ್ತೆಗಳಲ್ಲೇ ಕಸ, ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ- 5 ಮುಖ್ಯ ಅಂಶ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ತ್ಯಾಜ್ಯ ವಿಲೇವಾರಿ: ಮನೆ, ರಸ್ತೆಗಳಲ್ಲೇ ಕಸ, ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ- 5 ಮುಖ್ಯ ಅಂಶ

ಬೆಂಗಳೂರು ತ್ಯಾಜ್ಯ ವಿಲೇವಾರಿ: ಮನೆ, ರಸ್ತೆಗಳಲ್ಲೇ ಕಸ, ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ- 5 ಮುಖ್ಯ ಅಂಶ

Bengaluru Garbage Problem: ಬೆಂಗಳೂರು ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿದ್ದು, ಕಣ್ಣೂರು ಗ್ರಾಮದ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಸ ಸುರಿಯಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. 300 ಟ್ರಕ್‌ಗಳನ್ನು ತಡೆಹಿಡಿದಿರುವುದಾಗಿ ಗ್ರಾಮಸ್ಥರು ಹೇಳಿದ್ದು, ಬೆಂಗಳೂರಿನ ಕೆಲವು ಕಡೆ ಮನೆ, ರಸ್ತೆಗಳಲ್ಲೇ ಕಸ ಉಳಿದಿದೆ.

ಬೆಂಗಳೂರು ತ್ಯಾಜ್ಯ ವಿಲೇವಾರಿ ಸಮಸ್ಯೆ ಕಾಡಿದೆ. ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ ಕಾರಣ ಬೆಂಗಳೂರು ನಗರದ ಮನೆ, ರಸ್ತೆಗಳಲ್ಲೇ ಕಸ ಉಳಿದುಕೊಂಡಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ತ್ಯಾಜ್ಯ ವಿಲೇವಾರಿ ಸಮಸ್ಯೆ ಕಾಡಿದೆ. ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ ಕಾರಣ ಬೆಂಗಳೂರು ನಗರದ ಮನೆ, ರಸ್ತೆಗಳಲ್ಲೇ ಕಸ ಉಳಿದುಕೊಂಡಿದೆ. (ಸಾಂಕೇತಿಕ ಚಿತ್ರ) (‍X)

ಬೆಂಗಳೂರು: ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ ಕಾರಣ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳಲ್ಲಿರುವ ತ್ಯಾಜ್ಯ ವಿಲೇವಾರಿ ಆಗದೇ, ಬೆಂಗಳೂರು ಮಹಾ ನಗರದ ಹಲವೆಡೆ ಮನೆ, ರಸ್ತೆಗಳಲ್ಲಿ ಕಸ ಉಳಿದುಕೊಂಡಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಮನೆ, ರಸ್ತೆಗಳಲ್ಲಿ ಕಸ ಉಳಿದುಕೊಂಡಿದ್ದು, ತ್ಯಾಜ್ಯ ವಿಲೇವಾರಿ ಸಂಕಷ್ಟ ತಲೆದೋರಿದೆ. ಇದು ಇನ್ನೂ 5 ಅಥವಾ 6 ದಿನ ಮುಂದುವರಿಯುವ ಸಾಧ್ಯತೆಗಳು ಗೋಚರಿಸಿದೆ.

ಬೆಂಗಳೂರು ತ್ಯಾಜ್ಯ ವಿಲೇವಾರಿ ಸಮಸ್ಯೆ - 5 ಮುಖ್ಯ ಅಂಶಗಳು

1) ಬೆಂಗಳೂರು ನಗರ ತ್ಯಾಜ್ಯ ವಿಲೇವಾರಿ: ವಿವಿಧ ವಾರ್ಡುಗಳ ಬಡಾವಣೆಗಳಲ್ಲಿ ಕಸ ಸಂಗ್ರಹ ಕಾರ್ಯಕ್ಕೆ ಪೌರ ಕಾರ್ಮಿಕರನ್ನು ಬಿಬಿಎಂಪಿ ನೇಮಕ ಮಾಡಿದೆ. ಕೆಲವು ಬಡಾವಣೆಗಳಲ್ಲಿ ನಿತ್ಯ ಕಸ ಸಂಗ್ರಹವಾದರೆ ಇನ್ನು ಕೆಲವು ಬಡಾವಣೆಗಳಲ್ಲಿ ವಾರಕ್ಕೊಮ್ಮೆ, ಮೂರ್ನಾಲ್ಕು ದಿನಗಳಿಗೆ ಒಮ್ಮೆ ಕಸ ಸಂಗ್ರಹವಾಗುತ್ತಿದೆ. ಬಡಾವಣೆ ನಿವಾಸಿಗಳು ಪೌರಕಾರ್ಮಿಕರಿಗೆ ಹಣ ಕೊಡುವುದಿಲ್ಲ ಎಂಬ ಕಾರಣವೂ ಸೇರಿ ಇದಕ್ಕೆ ಕಾರಣಗಳು ಹಲವು.

2) ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶಕ್ಕೆ ಸಾಗಣೆ: ಬೆಂಗಳೂರು ಮಹಾನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿಗೆ ಕಣ್ಣೂರು ಗ್ರಾಮದ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದೆ. ‘ನಗರದಿಂದ ತ್ಯಾಜ್ಯ ವಿಲೇವಾರಿ ಆಗುತ್ತಿದೆ. ಸದ್ಯಕ್ಕೆ ಸಮಸ್ಯೆ ಆಗಿಲ್ಲ. ಕಾಂಪ್ಯಾಕ್ಟರ್‌ಗಳಲ್ಲಿರುವ ತ್ಯಾಜ್ಯವೂ ವಿಲೇವಾರಿ ಆಗುತ್ತಿದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಲೋಕೇಶ್‌ ತಿಳಿಸಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.

3) ಕೆಲವು ಕಡೆ ಕಸ ಸಂಗ್ರಹ ಸ್ಥಗಿತ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದಾಗಿ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಸಮಸ್ಯೆ ಉಂಟಾಗಿದೆ. ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಡಿ’ ಎಂದು ತ್ಯಾಜ್ಯ ತುಂಬಿದ ಸುಮಾರು 300 ಕಾಂಪ್ಯಾಕ್ಟರ್‌ಗಳನ್ನು ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರು ಮಂಗಳವಾರ ಬೆಳಿಗ್ಗೆಯಿಂದ ತಡೆ ಹಿಡಿದಿದ್ದಾರೆ. ಕಣ್ಣೂರು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವ ಕಾರಣ, ಕಸ ಸಾಗಿಸುವ ಕಾಂಪ್ಯಾಕ್ಟರ್ ವಾಹನಗಳು ಗ್ರಾಮದ ಹೊರಗೆ ಸಾಲುಗಟ್ಟಿ ನಿಂತುಕೊಂಡಿವೆ. ಸಣ್ಣ ಸಣ್ಣ ವಾಹನಗಳಲ್ಲಿ ವಾರ್ಡುಗಳಿಂದ ಸಂಗ್ರಹಿಸಿದ ಕಸ ಅದೇ ವಾಹನದಲ್ಲಿ ತುಂಬಿಕೊಂಡಿರುವ ಕಾರಣ ಬೆಂಗಳೂರಿನ ಕೆಲವು ಕಡೆ ಗುರುವಾರದಿಂದ ಕಸ ಸಂಗ್ರಹ ಸ್ಥಗಿತವಾಗಿದೆ.

4) ಮಾರ್ಚ್ 19ಕ್ಕೆ ಸ್ಥಳ ಪರಿಶೀಲನೆ: ಬೆಂಗಳೂರು ತ್ಯಾಜ್ಯ ವಿಲೇವಾರಿ ಮಾಡುವ ಕಣ್ಣೂರು ಗ್ರಾಮದ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದ ಪರಿಶೀಲನೆಯನ್ನು ಮಾರ್ಚ್ 19ಕ್ಕೆ ಮಾಡಲಾಗುತ್ತದೆ. ಸ್ಥಳೀಯರ ಸಮಸ್ಯೆಯನ್ನೂ ಆಲಿಸಲಾಗುತ್ತದೆ ಎಂದು ಬೆಂಗಳೂರು ಜಿಲ್ಲಾ ಪಂಚಾಯಿತಿ ಸಿಇಒ ಲತಾ ಕುಮಾರಿ ತಿಳಿಸಿದ್ದಾಗಿ ವರದಿ ಹೇಳಿದೆ.

5) ಅವೈಜ್ಞಾನಿಕವಾಗಿ ಕಸ ವಿಲೇವಾರಿ: ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ನಡೆಯುತ್ತಿದೆ. ಅದು ನಿಲ್ಲುವವರೆಗೂ ಈ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳಿಂದ ಕಸ ತ್ಯಾಜ್ಯ ವಿಲೇವಾರಿಗೆ ಅವಕಾಶ ಕೊಡಲ್ಲ. 300 ಕಾಂಪ್ಯಾಕ್ಟರ್ ಕಸ ವಿಲೇವಾರಿ ವಾಹನ ತಡೆದಿದ್ದೇವೆ ಎಂದು ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌. ಅಶೋಕ್‌ ಹೇಳಿದ್ದಾರೆ.

ಬೆಂಗಳೂರು ತ್ಯಾಜ್ಯ ವಿಲೇವಾರಿ ಸಮಸ್ಯೆ; ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ 4 ಮುಖ್ಯ ಅಂಶ

1) ಅವೈಜ್ಞಾನಿಕವಾಗಿ ಕಸ ವಿಲೇವಾರಿ: ಕಸವನ್ನು ಸಂಸ್ಕರಿಸದೇ ವಿಲೇವಾರಿ ಮಾಡಲಾಗುತ್ತದೆ. ಕಾಂಪ್ಯಾಕ್ಟರ್ ವಾಹನದಲ್ಲಿ ಬೆಂಗಳೂರಿನ ತ್ಯಾಜ್ಯವನ್ನು ತಂದು ಹಾಗೆಯೇ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ. ಇದು ಸುತ್ತಮುತ್ತ ಪ್ರದೇಶದ ನೀರು, ಮಣ್ಣನ್ನು ಕಲುಷಿತಗೊಳಿಸುತ್ತಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಣ್ಣೂರು ಗ್ರಾಮಸ್ಥರು ಆರೋಪಿಸಿದ್ದಾರೆ.

2) ರಾಸಯನಿಕ ತ್ಯಾಜ್ಯ: ಪ್ರಾಣಿ ತ್ಯಾಜ್ಯ, ಕೋಳಿ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯವಲ್ಲದೆ, ಕಾರ್ಖಾನೆಗಳ ವಿಷಪೂರಿತ ರಾಸಾಯನಿಕ ಅಂಶವಿರುವ ತ್ಯಾಜ್ಯವನ್ನು ಇಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದು ಈ ಭಾಗದ ಪರಿಸರದ ಮೇಲೆ ಪರಿಣಾಮ ಬೀರಿದೆ ಎಂಬುದು ಕಣ್ಣೂರು ಗ್ರಾಮಸ್ಥರ ಆರೋಪ.

3) ಆರೋಗ್ಯಕ್ಕೆ ತೊಂದರೆ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದಾಗಿ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದ ಭರ್ತಿಯಾಗಿದ್ದು, ದುರ್ನಾತದ ಜತೆಗೆ ನೊಣಗಳ ಕಾಟ ಶುರುವಾಗಿದೆ. ಇತ್ತೀಚೆಗೆ ಕಸ ತಂದು ಸುರಿದಾಗ ಅದರಲ್ಲಿ ಶವ ಕೂಡಾ ಪತ್ತೆಯಾಗಿದೆ. ಅಂತರ್ಜಲ ಸಹ ಕಲುಷಿತವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೆಟ್ಟ ಗಾಳಿ ಬೀಸುತ್ತಿದೆ. ವೃದ್ಧರು ಮತ್ತು ಮಕ್ಕಳು ಚರ್ಮ ಹಾಗೂ ಉಸಿರಾಟದ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

4) ಸರ್ಕಾರಕ್ಕೂ ಪತ್ರ: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್‌ ಅವರು ಪತ್ರ ಬರೆದಿದ್ದು, ‘ಬೆಂಗಳೂರು ನಗರದ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಬೇಕು. ಸ್ಥಳೀಯರ ಆರೋಗ್ಯ ಕಾಪಾಡಬೇಕು’ ಎಂದು ಕೋರಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner