ನೀರಿನ ದರ ಶೇ 40 ಹೆಚ್ಚಳದ ಸುಳಿವು ನೀಡಿದ ಬೆಂಗಳೂರು ಜಲ ಮಂಡಳಿ ಅಧ್ಯಕ್ಷ, 10 ವರ್ಷಗಳ ಬಳಿಕ ಶುಲ್ಕ ಏರಿಕೆಗೆ ಹೆಚ್ಚಿದ ಒತ್ತಡ
BWSSB bill: ಕಳೆದ 10 ವರ್ಷಗಳಲ್ಲಿ ನೀರಿನ ದರ ಪರಿಷ್ಕರಣೆ ಆಗಿಲ್ಲ ಎಂದು ಹೇಳಿರುವ ಬೆಂಗಳೂರು ಜಲ ಮಂಡಳಿ, ಶೀಘ್ರವೇ ನೀರಿನ ದರ ಶೇ 40 ಹೆಚ್ಚಳದ ಸುಳಿವು ನೀಡಿದೆ. ಶುಲ್ಕ ಏರಿಕೆಗೆ ಒತ್ತಡ ಹೆಚ್ಚಾಗಿದ್ದು, ಈ ತಿಂಗಳ ಎರಡನೇ ವಾರ ಪರಿಷ್ಕರಣೆ ಅಂತಿಮವಾಗಲಿದೆ.
BWSSB bill: ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಬೆನ್ನಿಗೆ ನೀರಿನ ಬಿಲ್ ಏರಿಕೆಯ ವಿಚಾರ ಈಗ ಗಮನಸೆಳೆದಿದೆ. ಬೆಂಗಳೂರು ಜಲ ಮಂಡಳಿ ಅಧ್ಯಕ್ಷರು, ನೀರಿನ ಬಿಲ್ ದರ ಶೇಕಡ 40 ಹೆಚ್ಚಳದ ಸುಳಿವು ನೀಡಿದ್ದಾರೆ. ಬೆಂಗಳೂರು ಜಲ ಮಂಡಳಿಯು ನೀರಿನ ದರ ಪರಿಷ್ಕರಣೆ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಬೆಂಗಳೂರಿನ ಎಲ್ಲಾ ಶಾಸಕರಿಗೆ ಜಲ ಮಂಡಳಿಯ ಆರ್ಥಿಕ ಪರಿಸ್ಥಿತಿ ಕುರಿತಂತೆ ಈಗಾಗಲೇ ಪತ್ರ ಬರೆದಿದ್ದು, ನೀರಿನ ದರ ಏರಿಕೆಯ ಅನಿವಾರ್ಯತೆ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಅಧ್ಯಕ್ಷರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜನವರಿ ಎರಡನೇ ವಾರದಲ್ಲಿ ನೀರಿನ ದರ ಪರಿಷ್ಕರಣೆ ಅಂತಿಮ ಸಾಧ್ಯತೆ
ಕಳೆದ 10 ವರ್ಷಗಳಿಂದ ನೀರಿನ ದರ ಪರಿಷ್ಕರಣೆಯಾಗದೇ ಇರುವ ಕಾರಣ, ಬೆಂಗಳೂರು ಜಲ ಮಂಡಳಿ ಕಷ್ಟದಲ್ಲಿದೆ. ಕಳೆದೊಂದು ವರ್ಷದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾವಹಾರಿಕ ನಷ್ಟ ಅನುಭವಿಸುತ್ತಲೇ ಇದೆ. ಹೀಗಾಗಿ ನೀರಿನ ದರ ಏರಿಕೆ ಬಗ್ಗೆ ಡಿಸೆಂಬರ್ ತಿಂಗಳಲ್ಲಿ ಸುಳಿವು ನೀಡಿತ್ತು.
ಸಂಸ್ಥೆಯ ಕೆಲಸ ಕಾರ್ಯಗಳ ನಿರ್ವಹಣೆಗೆ ಕಷ್ಟವಾಗಿದೆ ಎಂದು ಹೇಳಿರುವ ಜಲ ಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್, ಬೆಲೆ ಏರಿಕೆಗೆ ಬೆಂಬಲ ನೀಡುವಂತೆ ಬೆಂಗಳೂರು ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ 27 ಶಾಸಕರಿಗೆ ಜಲಮಂಡಳಿ ಮನವಿ ಮಾಡಲಾಗಿದೆ ಎಂದಿದ್ದಾರೆ. ಜಲ ಮಂಡಲಿಯ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಈ ತಿಂಗಳ ಎರಡನೇ ವಾರದಲ್ಲಿ ನೀರಿನ ದರ ಪರಿಷ್ಕರಣೆ ಅಂತಿಮವಾಗಬಹುದು ಎಂದು ಹೇಳಲಾಗುತ್ತಿದೆ. ನೀರಿನ ದರ ಏರಿಕೆ ಬಗ್ಗೆ ಸುಳಿವು ನೀಡಿರುವ ಜಲಮಂಡಳಿ ಅಧ್ಯಕ್ಷ, ಜನವರಿ ಎರಡನೇ ವಾರದಲ್ಲಿ ಬೆಂಗಳೂರು ಶಾಸಕರ ಜೊತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಸಭೆ ನಡೆಸಲಿದ್ದು, ಅಲ್ಲಿ ಎಲ್ಲವೂ ಅಂತಿಮವಾಗಲಿದೆ ಎಂದಿದ್ದಾರೆ.
ಸಂಕ್ರಾಂತಿ ಆಸುಪಾಸಲ್ಲೇ ನೀರಿನ ದರ ಹೆಚ್ಚಳ; ಶೇ 40 ಹೆಚ್ಚಳ ಸಾಧ್ಯತೆ
ಬೆಂಗಳೂರಿನಲ್ಲಿ ಜನರಿಗೆ ನೀರು ಪೂರೈಸುತ್ತಿರುವ ಬೆಂಗಳೂರು ಜಲ ಮಂಡಳಿಗೆ ಸಂಬಂಧಿಸಿ, ನೀರು ಪೂರೈಸುವ ಕಾರ್ಯಕ್ಕೆ 2014ರ ನವೆಂಬರ್-2024ರ ಮಾರ್ಚ್ ನಡುವೆ ವಿದ್ಯುತ್ ವೆಚ್ಚ ಶೇ.107.3ರಷ್ಟು ಹೆಚ್ಚಾಗಿದೆ. ಶೇ.122.5 ನಿರ್ವಹಣಾ ವೆಚ್ಚ ಮತ್ತು ಶೇ.61.3ರಷ್ಟು ವೇತನ ಮತ್ತು ಪಿಂಚಣಿ ವೆಚ್ಚ ಹೆಚ್ಚಳವಾಗಿದೆ. ಜಲಮಂಡಳಿಯ ಪ್ರತಿ ತಿಂಗಳ ವೆಚ್ಚ 170 ಕೋಟಿ ರೂ. ಆಗಿದ್ದರೆ, ಸಂಗ್ರಹಣೆ ಆಗುತ್ತಿರುವ ಪ್ರತಿ ತಿಂಗಳ ಆದಾಯ ಕೇವಲ 129 ಕೋಟಿ ರೂ.ಗಳಾಗಿದೆ. ಹೀಗಾಗಿ ನಷ್ಟ ಹೆಚ್ಚಾಗಿದ್ದು, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ನೀರಿನ ದರ ಏರಿಸಲು ಕರ್ನಾಟಕ ಸರ್ಕಾರ ಸಿದ್ದತೆ ನಡೆಸಿದೆ.
ಸದ್ಯ 1000 ಲೀಟರ್ ನೀರನ್ನು 22 ರೂಪಾಯಿಗೆ ನೀಡಲಾಗುತ್ತಿದೆ. ಮುಂದೆ ಇದನ್ನು 30 ರೂಪಾಯಿಗೆ ಏರಿಸುವ ಚಿಂತನೆ ನಡೆದಿದೆ. ಶೇಕಡ 40 ಹೆಚ್ಚಳವನ್ನು ನಿರೀಕ್ಷಿಸಲಾಗುತ್ತಿದೆ. ಸಾಮಾನ್ಯವಾಗಿ 1000 ಲೀಟರ್ ನೀರು ಪೂರೈಕೆ ಮಾಡಬೇಕೆಂದರೆ 52 ರೂಪಾಯಿ ಖರ್ಚಾಗುತ್ತದೆ. 25 ರೂಪಾಯಿಂದ 40 ರೂಪಾಯಿ ತನಕ ವಾಪಸ್ ಬರುತ್ತಿದೆ. ಇದರಿಂದಾಗಿ ಜಲಮಂಡಳಿಗೆ 41 ಕೋಟಿ ರೂಪಾಯಿ ನಷ್ಟವಾಗುತ್ತಿದ್ದು, ಕಾವೇರಿ 5ನೇ ಹಂತ ಜಾರಿಯಾದ ಬಳಿಕ ಇದು 82 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಬೆಂಗಳೂರು ಜಲ ಮಂಡಳಿ ಮೂಲಗಳು ತಿಳಿಸಿವೆ.