ಬೆಂಗಳೂರು ನೀರಿನ ಸಮಸ್ಯೆ; ಶೌಚಕ್ಕೂ ನೀರಿಲ್ಲ ಎನ್ನುತ್ತ ಉದ್ಯೋಗವನ್ನು ಬಿಟ್ಟು ದೆಹಲಿಗೆ ಹೊರಟ ಟೆಕ್ಕಿ
ಬೆಂಗಳೂರು ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು, ತಿಂಗಳಿಗೆ 40 ಸಾವಿರಕ್ಕೂ ಹೆಚ್ಚು ರೂಪಾಯಿ ಬಾಡಿಗೆ ಕೊಟ್ಟರೂ ಶೌಚಕ್ಕೆ ನೀರಿಲ್ಲ. ಹೀಗೆ ಹತಾಶರಾಗಿ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ದೆಹಲಿಯಲ್ಲಿ ಉದ್ಯೋಗ ಸೇರಿದ ಟೆಕ್ಕಿಯೊಬ್ಬರು ಹಂಚಿಕೊಂಡ ವಿವರವನ್ನು ಸಿಟಿಜೆನ್ಸ್ ಮೂವ್‌ಮೆಂಟ್, ಈಸ್ಟ್ ಬೆಂಗಳೂರು ಹಂಚಿಕೊಂಡಿದೆ.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕಾರಣ ಜನಜೀವನ ಸಂಕಷ್ಟಕ್ಕೆ ಒಳಗಾಗಿದ್ದು, ನಿತ್ಯವೂ ಒಬ್ಬೊಬ್ಬರ ಜೀವನಾನುಭವದ ಚಿತ್ರಣ ಬಹಿರಂಗವಾಗುತ್ತಿದೆ. ಬೃಹತ್ ಅಪಾರ್ಟ್‌ಮೆಂಟ್ ಸಂಕೀರ್ಣಗಳು, ಐಷಾರಾಮಿ ಅಪಾರ್ಟ್‌ಮೆಂಟ್‌ಗಳು ನೀರಿನ ಬಳಕೆಗೆ ನಿರ್ಬಂಧ ಹೇರಿದ್ದು ಇದು ಜನರನ್ನು ಇನ್ನಷ್ಟು ಹೈರಾಣಾಗುವಂತೆ ಮಾಡಿದೆ.
ಬೆಂಗಳೂರಿನ ಹರಳೂರು ಪ್ರದೇಶದ ನಿವಾಸಿಯೊಬ್ಬರು ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ತಾವು ಎದುರಿಸುತ್ತಿರುವ ಅಗ್ನಿಪರೀಕ್ಷೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ದುಬಾರಿ ಹಣ ಪಾವತಿಸಿ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದರೆ ಅದು ಹರಿಯುವ ನೀರಿನಲ್ಲಿ ಹುಣಸೆಹಣ್ಣು ತೊಳೆದಂತಾಗಬಹುದು ಎಂಬ ಆತಂಕದೊಂದಿಗೆ ಯೋಜನೆ ಕೈಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಹತಾಶ ಪರಿಸ್ಥಿತಿಯನ್ನು ಸಿಟಿಜೆನ್ಸ್ ಮೂವ್‌ಮೆಂಟ್, ಈಸ್ಟ್ ಬೆಂಗಳೂರು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಅದು ಬೆಂಗಳೂರು ನೀರಿನ ಸಮಸ್ಯೆಯನ್ನು ವಿವರಿಸಿರುವುದು ಹೀಗೆ-
“ನಮ್ಮ ಸ್ವಯಂಸೇವಕರಲ್ಲಿ ಒಬ್ಬರಿಗೆ ಹರಳೂರು ಪ್ರದೇಶದ ಬೃಹತ್ ಅಪಾರ್ಟ್‌ಮೆಂಟ್ ಸಂಕೀರ್ಣದಿಂದ ಒಬ್ಬರು ಕರೆ ಮಾಡಿದರು. ಅವರು ಬಹಳ ಹತಾಶರಾಗಿದ್ದರು. ಅವರ ಮಾತಿನ ಸಾರ ಹೀಗಿದೆ -'ನನ್ನ ಬದುಕಿನಲ್ಲೇ ಇಂಥದ್ದೊಂದು ಸನ್ನಿವೇಶವನ್ನು ಎಂದೂ ಎದುರಿಸಿರಲಿಲ್ಲ. ನಾನು ಇಂದು ಶೌಚಾಲಯಕ್ಕೆ ಹೋಗಲಿಲ್ಲ. ಕಾರಣ ಅಲ್ಲಿ ನೀರು ಇಲ್ಲ. ಈ 2 ಬಿಎಚ್‌ಕೆ ಮನೆಗೆ ಪ್ರತಿ ತಿಂಗಳು 40 ಸಾವಿರ ರೂಪಾಯಿ ಮತ್ತು ತಿಂಗಳ ನಿರ್ವಹಣಾ ವೆಚ್ಚ ಪಾವತಿಸುತ್ತಿದ್ದೇನೆ. ಆದರೆ ನೀರು ಸಿಗುತ್ತಿಲ್ಲ. ಬೆಳಗ್ಗೆ 30 ನಿಮಿಷ ನೀರು ಬಂದಿತ್ತು. ರಾತ್ರಿ ಪಾಳಿ ಮುಗಿಸಿ ಬಂದು ಮಲಗಿದ್ದ ಕಾರಣ ಆ ಸಮಯದಲ್ಲಿ ನನಗೆ ಎದ್ದೇಳುವುದು ಸಾಧ್ಯವಾಗಲಿಲ್ಲ. ನಾನಿಲ್ಲಿ ಪ್ರಾಪರ್ಟಿ ಖರೀದಿಸಬೇಕು ಎಂದು ಯೋಜಿಸಿಕೊಂಡಿದ್ದೆ. ಆದರೆ ಈಗ ಖಚಿತವಾಗಿಯೂ ಇನ್ನು ಮುಂದೆ ಕೂಡ ಇಲ್ಲಿ ಪ್ರಾಪರ್ಟಿ ಖರೀದಿ ಮಾಡುವುದಿಲ್ಲ. ಈ ನೀರಿಲ್ಲದ ಬೆಂಗಳೂರಿನಲ್ಲಿರುವುದಕ್ಕಿಂತ ನನಗೆ ನನ್ನ ಗ್ರಾಮವೇ ಆದೀತು.'”
ಮಾತು ಮುಂದುವರಿಸಿದ ಆ ವ್ಯಕ್ತಿ “ಬದುಕಿಗಾಗಿ ದುಬಾರಿ ಮೊತ್ತವನ್ನು ಬಾಡಿಗೆಯನ್ನಾಗಿದರೂ ನೀರು ಮತ್ತು ಮೂಲಸೌಕರ್ಯ ಇಲ್ಲದ ಊರಿನಲ್ಲಿ ಇರುವುದಕ್ಕಿಂತ ಬಿಟ್ಟು ಬೇರೆಡೆಗೆ ಹೋಗುವುದೇ ಉತ್ತಮ. ಬ್ರ್ಯಾಂಡ್ ಬೆಂಗಳೂರಿಗೆ ಆಧಾರ ಸ್ತಂಭವಾಗಿರುವ ರಿಯಲ್ ಎಸ್ಟೇಟ್ ಇಂತಹ ಸನ್ನಿವೇಶವನ್ನು ಎದುರಿಸುವುದಕ್ಕೆ ಸಜ್ಜಾಗಿಲ್ಲ ಎಂದಾದರೆ ಬಹಳ ಕಷ್ಟ” ಎಂದು ಹೇಳಿರುವುದಾಗಿ ಎಕ್ಸ್ ಪೋಸ್ಟ್ ವಿವರಿಸಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ಟ್ಯಾಗ್ ಮಾಡಲಾಗಿದೆ.
ದೆಹಲಿಯಲ್ಲಿ ಉದ್ಯೋಗ ಸಿಕ್ತು, ಬೆಂಗಳೂರಿಗೆ ವಿದಾಯ
ಸಿಟಿಜೆನ್ಸ್ ಮೂವ್‌ಮೆಂಟ್, ಈಸ್ಟ್ ಬೆಂಗಳೂರು ಎಕ್ಸ್ ಖಾತೆಯಲ್ಲಿ ಈ ಪೋಸ್ಟ್‌ನ ಅಪ್ಡೇಟ್ ಕೂಡ ಪ್ರಕಟವಾಗಿದ್ದು, ಆ ವ್ಯಕ್ತಿಗೆ ದೆಹಲಿಯಲ್ಲಿ ಉದ್ಯೋಗ ಸಿಕ್ಕಿದೆ. ಹೀಗಾಗಿ ಬೆಂಗಳೂರು ಬಿಟ್ಟು ದೆಹಲಿಗೆ ಸ್ಥಳಾಂತರವಾಗುತ್ತಿದ್ದಾರೆ ಎಂದು ಅದು ಹೇಳಿದೆ.
ಹರಳೂರಿನ ಟೆಕ್ಕಿ ದೆಹಲಿಯಲ್ಲಿ ಕೆಲಸ ಪಡೆದಿದ್ದು, ಮುಂದಿನ ಎರಡು ತಿಂಗಳಲ್ಲಿ ಅಲ್ಲಿಗೆ ಸ್ಥಳಾಂತರಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ, ಪ್ರಸ್ತುತ ಉದ್ಯೋಗದಾತರಿಗೆ ರಾಜೀನಾಮೆ ನೋಟಿಸ್ ನೀಡಿದ್ದಾರೆ. ದೆಹಲಿಗೆ ಸ್ಥಳಾಂತರವಾಗುವ ಟೆಕ್ಕಿಯ ನಿರ್ಧಾರವು ಬೆಂಗಳೂರಿನ ನೀರಿನ ಸಮಸ್ಯೆಯಿಂದ ಪ್ರೇರಿತವಾಗಿದೆ ಎಂದು ಆ ಪೋಸ್ಟ್ ವಿವರಿಸಿದೆ.
ಮಳೆಯ ಕೊರತೆ, ಬೆಂಗಳೂರಿನಲ್ಲೂ ಬರಪರಿಸ್ಥಿತಿ
ಈ ಸಲದ ಮುಂಗಾರು ಮತ್ತು ಹಿಂಗಾರುಗಳಲ್ಲಿ ಮಳೆಯ ಕೊರತೆಯಿಂದಾಗಿ ಕರ್ನಾಟಕವು ಈ ವರ್ಷ ತೀವ್ರ ಬರಗಾಲವನ್ನು ಎದುರಿಸುತ್ತಿದೆ. ಇದರಿಂದ, ಬೆಂಗಳೂರು ತೀವ್ರ ನೀರಿನ ತೊಂದರೆ ಅನುಭವಿಸುತ್ತಿದೆ. ನಗರದ ಬಹುತೇಕ ಕೊಳವೆಬಾವಿಗಳು ಬತ್ತಿ ಹೋಗಿದ್ದು, ಅನೇಕ ಮನೆಗಳು ಸಂಪೂರ್ಣವಾಗಿ ನೀರಿನ ಟ್ಯಾಂಕರ್ ಗಳ ಮೇಲೆ ಅವಲಂಬಿತವಾಗಿವೆ.
ಏತನ್ಮಧ್ಯೆ, ನೀರಿನ ಸಮಸ್ಯೆಯಿಂದ ಪಾರಾಗಲು ಬೆಂಗಳೂರನ್ನು ತೊರೆದು ತಮ್ಮ ಊರುಗಳಿಂದ ವರ್ಕ್ ಫ್ರಂ ಹೋಮ್ ಆಯ್ಕೆ ನೀಡುವಂತೆ ಟೆಕ್ಕಿಗಳು ಬೇಡಿಕೆ ಇಡತೊಡಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, "ಮನೆಯಿಂದ ಕೆಲಸ ಮಾಡುವಂತೆ ಕಂಪನಿಗಳಿಗೆ ಹೇಳುವುದು ನನ್ನ ಕೆಲಸವಲ್ಲ. ಪರಿಸ್ಥಿತಿ ಸುಧಾರಿಸಲಿದೆ. ಜಲಾಶಯಗಳಲ್ಲಿ ಸಾಕಷ್ಟು ನೀರು ಇರುವುದರಿಂದ ಎಲ್ಲ ನಿವಾಸಿಗಳಿಗೆ ನೀರು ನೀಡಲಾಗುವುದು" ಎಂದು ಹೇಳಿದ್ದರು.
(This copy first appeared in Hindustan Times Kannada website. To read more like this please logon to kannada.hindustantimes.com)