ಬೆಂಗಳೂರು ನೀರಿನ ಸಮಸ್ಯೆ; ನೀರು ದುರ್ಬಳಕೆ ತಡೆಗೆ ಬೆಂಗಳೂರು ಜಲಮಂಡಳಿಯಿಂದ 6 ಚಟುವಟಿಕೆಗಳ ನಿಷೇಧ; ಕನಿಷ್ಠ ದಂಡ 5000 ರೂ
ಬೆಂಗಳೂರು ನೀರಿನ ಸಮಸ್ಯೆ ತೀವ್ರಗೊಂಡಿರುವ ಕಾರಣ, ನೀರು ದುರ್ಬಳಕೆ ತಡೆಯುವುದಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆರು ಚಟುವಟಿಕೆಗಳನ್ನು ನಿಷೇಧಿಸಿದೆ. ಅಲ್ಲದೆ, ನೀರಿನ ದುರ್ಬಳಕೆಗೆ ಕನಿಷ್ಠ 5000 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಸಿದೆ. ಆರು ಚಟುವಟಿಕೆಗಳು ಯಾವುವು, ದಂಡ ವಿಧಿಸುವ ಕ್ರಮವೇನು ಎಂಬ ವಿವರ ಇಲ್ಲಿದೆ.
ಬೆಂಗಳೂರು ನೀರಿ ಸಮಸ್ಯೆ ನಿರ್ವಹಿಸುವುದಕ್ಕಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಮಾರ್ಗಸೂಚಿ ಪ್ರಕಟಿಸಿದ್ದು, ನೀರಿನ ದುರ್ಬಳಕೆ ತಡೆಗೆ ಆರು ಅಂಶಗಳ ನಿಷೇಧಿತ ಕಾರ್ಯಗಳ ವಿವರ ಬಿಡುಗಡೆ ಮಾಡಿದೆ.
ಬಿಡಬ್ಲ್ಯುಎಸ್‌ಎಸ್‌ಬಿಯ ಪ್ರಕಟಣೆಯಲ್ಲಿ ಬೆಂಗಳೂರಿನ ಪ್ರಸಕ್ತ ಸನ್ನಿವೇಶ ವಿವರಿಸಿದ್ದು, ಬಳಿಕ ನೀರು ದುರ್ಬಳಕೆ ಎಂದು ಗುರುತಿಸಿದ ಚಟುವಟಿಕೆಗಳನ್ನು ಉಲ್ಲೇಖಿಸಿದೆ. ಇದಲ್ಲದೆ, ನೀರಿನ ದುರ್ಬಳಕೆಗೆ ಆರಂಭದಲ್ಲಿ ಕನಿಷ್ಠ 5,000 ರೂಪಾಯಿ ದಂಡ ಘೋಷಿಸಿದೆ. ಪುನರಾವರ್ತಿತ ಅಪರಾಧಕ್ಕೆ ಕನಿಷ್ಠ ದಂಡ ಶುಲ್ಕದ ಮೇಲೆ 500 ರೂಪಾಯಿ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಬೆಂಗಳೂರು ಜಲ ಮಂಡಳಿಯ ಪ್ರಕಟಣೆಯಲ್ಲಿ ಏನಿದೆ?
ಬೆಂಗಳೂರು ಮಹಾನಗರದಲ್ಲಿ ಖಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದು, ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಹೇಳಿದೆ.
ನೀರು ದುರ್ಬಳಕೆ ತಡೆಗೆ ನಿಷೇಧಿತ 6 ಚಟುವಟಿಕೆಗಳು
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಈ ಕೆಳಕಂಡ ಚಟುವಟಿಕೆಗಳಿಗೆ ಬಳಸಬಾರದು ಎಂದು ಬೆಂಗಳೂರು ಜಲ ಮಂಡಳಿ ಆದೇಶ ಹೊರಡಿಸಿದೆ. ಚಟುವಟಿಕೆಗಳ ವಿವರ ಹೀಗಿದೆ
1. ವಾಹನಗಳ ಸ್ವಚ್ಛತೆಗೆ
2. ಕೈದೋಟಕ್ಕೆ
3. ಕಟ್ಟಡ ನಿರ್ಮಾಣಕ್ಕೆ
4. ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ
5. ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ
6. ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ
ಬೆಂಗಳೂರು ಜಲಮಂಡಳಿಯ ಈ ನಿಷೇಧ ಆದೇಶ ಉಲ್ಲಂಘಿಸಿ ಮೇಲೆ ಉಲ್ಲೇಖಿಸಿದ ಚಟುವಟಿಕೆಗಳಿಗಾಗಿ ನೀರು ಬಳಸಿದರೆ, ಅಂಥವರ ವಿರುದ್ಧ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ 5000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ 5000 ರೂಪಾಯಿ ಜೊತೆಗೆ ಹೆಚ್ಚುವರಿಯಾಗಿ 500 ರೂಪಾಯಿ ಪ್ರತಿದಿನದಂತೆ ದಂಡ ಹಾಕಲಾಗುವುದು ಎಂದು ಜಲ ಮಂಡಳಿ ಎಚ್ಚರಿಸಿದೆ.
ಅದೇ ರೀತಿ, ಮೇಲೆ ಉಲ್ಲೇಖಿಸಿದ ಆರು ಚಟುವಟಿಕೆಗಳಿಗೆ ಯಾರಾದರೂ ನೀರು ಬಳಸಿದ್ದು ಕಂಡುಬಂದರೆ, ಕೂಡಲೇ ಜಲ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ : 1916 ಗೆ ಕರೆ ಮಾಡಿ ತಿಳಿಸಬೇಕು ಎಂದು ಬೆಂಗಳೂರು ಜಲಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)