ಕನ್ನಡ ಸುದ್ದಿ  /  Karnataka  /  Bengaluru Water Crisis Bwssb Mandates Aerator Installation In Water Taps To Prevent Water Wastage Bengaluru News Mrt

ಬೆಂಗಳೂರು ನೀರಿನ ಸಮಸ್ಯೆ; ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ, 10 ದಿನ ಕಾಲಾವಕಾಶ, ಮನೆಗಳಲ್ಲೂ ಅಳವಡಿಸಲು ಮನವಿ

ಬೆಂಗಳೂರಿನ ನೀರಿನ ಸಮಸ್ಯೆಗೆ ಕಡಿವಾಣ ಹಾಕಲು, ನೀರು ಉಳಿತಾಯಕ್ಕೆ ಹೊಸ ಮಾರ್ಗವನ್ನು ಕಂಡುಕೊಳ್ಳಲಾಗಿದೆ. ವಾಣಿಜ್ಯ ಮಳಿಗೆ, ಕೈಗಾರಿಕೆ, ಅಪಾರ್ಟ್‌ಮೆಂಟ್‌, ಐಷಾರಾಮಿ ಹೋಟೆಲ್, ರೆಸ್ಟೋರೆಂಟ್‌ಗಳ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ ಎಂದ ಬೆಂಗಳೂರು ಜಲಮಂಡಳಿ ಘೋ‍ಷಿಸಿದೆ. ಮನೆಗಳಲ್ಲೂ ಅಳವಡಿಸಿಕೊಳ್ಳಲು ಅದು ಮನವಿ ಮಾಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ನೀರಿನ ಸಮಸ್ಯೆ; ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ (ಸಾಂದರ್ಭಿಕ ಚಿತ್ರ)
ಬೆಂಗಳೂರು ನೀರಿನ ಸಮಸ್ಯೆ; ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ (ಸಾಂದರ್ಭಿಕ ಚಿತ್ರ) (Pixabay)

ಬೆಂಗಳೂರು: ಒಂದು ಕಾಲದ ಉದ್ಯಾನ ನಗರಿ ಬೆಂಗಳೂರಿನಲ್ಲಿ ಈಗ ನೀರಿನ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಕ್ರಮಗಳನ್ನು ಅನುಸರಿಸುತ್ತಿದ್ದರೂ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಇದೀಗ ನೀರಿನ ಉಳಿತಾಯಕ್ಕೆ ಜಲಮಂಡಳಿ ಸಾರ್ವಜನಿಕ ಸ್ಥಳಗಳಲ್ಲಿರುವ ನಲ್ಲಿಗಳಲ್ಲಿ ಏರಿಯೇಟರ್‌ (ನೀರಿನ ಹರಿವಿನ ಪ್ರಮಾಣ ತಗ್ಗಿಸುವ ಜಾಲರಿ) ಅಳವಡಿಕೆಯನ್ನು ಕಡ್ಡಾಯಗೊಳಿಸಲು ಮುಂದಾಗಿದೆ.

ನೀರು ವ್ಯರ್ಥವಾಗುವ ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌, ಐಷಾರಾಮಿ ಹೋಟೆಲ್‌ಗಳು ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿರುವ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಪ್ಲಂಬರ್‌ ಅಸೋಸಿಯೇಷನ್‌ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.

ಏರಿಯೇಟರ್‌ ಅಳವಡಿಕೆ ಇಲ್ಲದೇ ಇರುವ ನಳಗಳಿಂದ ಹೆಚ್ಚು ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಒಂದು ವೇಳೆ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸುವುದರಿಂದ ಶೇ. 60 ರಿಂದ 85 ರಷ್ಟು ನೀರನ್ನು ಉಳಿಸಬಹುದಾಗಿದೆ.

ಏರಿಯೇಟರ್ ಅಳವಡಿಕೆ ಮಾಡಲು ಪ್ಲಂಬರ್‌ಗಳಿಗೆ ತರಬೇತಿ

ಏರಿಯೇಟರ್‌ ಅಳವಡಿಕೆ ಕುರಿತು ಪ್ಲಂಬರ್‌ ಗಳಿಗೆ ತರಬೇತಿ ನೀಡಲು ಜಲ ಮಂಡಳಿ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಜಲಮಂಡಳಿಯಿಂದ ಪರವಾನಗಿ ಹೊಂದಿರುವ 1500 ಪ್ಲಂಬರ್‌ಗಳಿದ್ದಾರೆ. ಇವರಿಗೆ ತರಬೇತಿ ನೀಡಿದರೆ ಇವರು ತಾವು ಕೆಲಸ ಮಾಡುತ್ತಿರುವ ಹಾಗೂ ಮಾಡಲಿರುವ ಕಟ್ಟಡಗಳಲ್ಲಿ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸುವುದರ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಇವರಿಗೆ ಮಾರ್ಚ್‌ 21 ರಿಂದ ತರಬೇತಿ ನೀಡಲಾಗುವುದು ಎಂದು ಜಲ ಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಿಸಿದಂತೆ ನೀರು ಉಳಿತಾಯಕ್ಕೆ ವಾಟರ್‌ ಮಾಸ್ಕ್‌ ಗಳನ್ನು ಬಳಸುವುದು ಉತ್ತಮ ಮಾರ್ಗವಾಗಿದೆ. ಏರಿಯೇಟರ್‌ ಗಳು ವಾಟರ್‌ ಮಾಸ್ಕ್‌ ಗಳಂತೆ ಕೆಲಸ ಮಾಡುತ್ತವೆ. ಏರಿಯೇಟರ್‌ ಅಳವಡಿಕೆ ಸುಲಭ ಮಾರ್ಗವಾಗಿರುತ್ತದೆ. ಇಲ್ಲವೇ ಪ್ಲಂಬರ್‌ ಗಳ ಸಹಾಯದಿಂದ ಅಳವಡಿಸಿ ಕೊಳ್ಳಬಹುದಾಗಿದೆ.

ಏರಿಯೇಟರ್ ಅಳವಡಿಕೆಗೆ ಮಾರ್ಚ್ 21ರಿಂದ 31ರ ತನಕ ಕಾಲಾವಕಾಶ

ಏರಿಯೇಟರ್‌ಗಳು ವಾಟರ್‌ ಮಾಸ್ಕ್‌ನಂತೆ ಕೆಲಸ ಮಾಡಲಿವೆ. ಮಾರ್ಚ್‌ 21 ರಿಂದ 31 ರ ವರೆಗೆ ಕಾಲಾವಕಾಶ ನೀಡಲಾಗಿದ್ದು ಈ ಅವಧಿಯಲ್ಲಿ ಸ್ವಯಂಪ್ರೇರಿತರಾಗಿ ಏರಿಯೇಟರ್‌ ಅಳವಡಿಸಿಕೊಳ್ಳಲೇಬೇಕು. ಒಂದು ವೇಳೆ ಅಳವಡಿಸಿಕೊಳ್ಳದಿದ್ದರೆ ಜಲಮಂಡಳಿಯೆ ಪ್ಲಂಬರ್‌ ಗಳನ್ನು ನಿಯೋಜಿಸಿ ಏರಿಯೇಟರ್‌ಗಳನ್ನು ಅಳವಡಿಸಲಾಗುವುದು ಮತ್ತು ಈ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲು ಜಲಮಂಡಳಿ ನಿರ್ಧರಿಸಿದೆ.

ಈ ಏರಿಯೇಟರ್‌ ಗಳನ್ನು ಮನೆಗಳಲ್ಲೂ ಅಳವಡಿಸಿಕೊಳ್ಳಬಹುದು. ವಾಷ್ ಬೇಸಿನ್, ಪಾತ್ರೆ ತೊಳೆಯುವ, ಶವರ್ ಗಳಲ್ಲಿ ಏರಿಯೇಟರ್‌ ಗಳನ್ನು ಅಳವಡಿಸಿಕೊಳ್ಳಲು ಜಲ ಮಂಡಳಿ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ.

ಇದರಿಂದ ಮನೆಯಲ್ಲಿ ನೀರಿನ ಬಳಕೆ ಗಣನೀಯವಾಗಿ ಕಡಿಮೆಯಾಗಿ ನೀರು ಉಳಿತಾಯವಾಗುತ್ತದೆ. ಇದರಿಂದ ನೀರಿನ ಬಿಲ್‌ ಕಡಿಮೆಯಾಗುತ್ತದೆ. ಅಧಿಕ ಪ್ರಮಾಣದಲ್ಲಿ ಏರಿಯೇಟರ್‌ ಗಳನ್ನು ಅಳವಡಿಸುವ ಪ್ಲಂಬರ್ ಗಳನ್ನು ಪ್ರೋತ್ಸಾಹಿಸಲು ಮಂಡಳಿ ನಿರ್ಧರಿಸಿದ್ದು, ಪ್ಲಂಬರ್ ಗಳಿಗೆ ಪ್ರಶಂಸನಾ ಪತ್ರವನ್ನು ನೀಡಲು ತೀರ್ಮಾನಿಸಿದೆ.

ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಈಗಾಗಲೇ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸುವ ಕೆಲಸ ಆರಂಭವಾಗಿದೆ. ಮಂಡಳಿಯ ಇತರೆ ಕಚೇರಿಗಳಲ್ಲಿ ಏರಿಯೇಟರ್‌ ಅಳವಡಿಸಲು ಸೂಚನೆ ನೀಡಲಾಗಿದೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)