ಬೆಂಗಳೂರಿನಲ್ಲಿ ನೀರಿನ ಅಭಾವ: ನೀರು ಉಳಿಸಲು ಇಲ್ಲಿವೆ 10 ಸರಳ ಮಾರ್ಗಗಳು-bengaluru water crisis how to preserve water during water scarcity tips to save water saving methods mgb ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ನೀರಿನ ಅಭಾವ: ನೀರು ಉಳಿಸಲು ಇಲ್ಲಿವೆ 10 ಸರಳ ಮಾರ್ಗಗಳು

ಬೆಂಗಳೂರಿನಲ್ಲಿ ನೀರಿನ ಅಭಾವ: ನೀರು ಉಳಿಸಲು ಇಲ್ಲಿವೆ 10 ಸರಳ ಮಾರ್ಗಗಳು

Tips to save water: ಹನಿ ಹನಿ ನೀರಿನ ಬೆಲೆಯೂ ಇದೀಗ ಬೆಂಗಳೂರಿನ ಜನರಿಗೆ ಅರ್ಥವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸದ್ಯ ಪೂರೈಕೆಯಾಗುತ್ತಿರುವ ನೀರಿನ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ನೀರನ್ನು ಸಂಗ್ರಹಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಒಂದಿಷ್ಟು ಸಲಹೆಗಳು ಇಲ್ಲಿವೆ..

ನೀರು ಉಳಿಸಲು ಮಾರ್ಗಗಳು (ಪ್ರಾತಿನಿಧಿಕ ಚಿತ್ರ)
ನೀರು ಉಳಿಸಲು ಮಾರ್ಗಗಳು (ಪ್ರಾತಿನಿಧಿಕ ಚಿತ್ರ)

Bengaluru Water Crisis: ಪ್ರತಿಯೊಂದು ಜೀವಿಗೂ ನೀರು ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ನೀರಿಲ್ಲದ ಜೀವನವನ್ನು ನಾವು ಊಹಿಸಲು ಸಾಧ್ಯವಿಲ್ಲ. ನೀರೊಂದು ನೈಸರ್ಗಿಕ ಸಂಪನ್ಮೂಲವಾಗಿದೆಯಾದರೂ ಆಧುನಿಕತೆ ಹೆಸರಲ್ಲಿ ಮನುಷ್ಯ ಕಾಡನ್ನು ನಾಶ ಮಾಡಿ ಕಾಂಕ್ರಿಟ್​ ಭೂಮಿಯನ್ನಾಗಿ ಮಾಡುತ್ತಿರುವುದರಿಂದ ಸರಿಯಾದ ಮಳೆ ಕೂಡ ಬೀಳುತ್ತಿಲ್ಲ. ಇದು ರೈತರಿಗೆ ಮಾತ್ರವಲ್ಲ ಪ್ರತಿಯೊಬ್ಬರ ಮೇಲೂ ಒಂದಲ್ಲಾ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಕಳೆದ ಮಳೆಗಾಲದ ಅವಧಿಯಲ್ಲಿ ಕರ್ನಾಟಕದಲ್ಲಿ ಸರಿಯಾಗಿ ಮಳೆಯೇ ಆಗದೇ ಬರ ಘೋಷಿಸಲಾಗಿದೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಇದೀಗ ನೀರಿಗಾಗಿ ಪರದಾಡುವ ಸ್ಥಿತಿ ಒದಗಿ ಬಂದಿದೆ.

ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ನೀರಿನ ಅಭಾವ ತಲೆದೂರಿದೆ. ನೀರು ಪೂರೈಕೆ ಮಾಡುತ್ತಿದ್ದ ನೀರಿನ ಮೂಲಗಳೇ ಬರಿದಾಗುತ್ತಿದೆ. ಬೆಂಗಳೂರಿನ ಹಲವೆಡೆ ವಾಟರ್​ ಟ್ಯಾಂಕರ್​ ಮೂಲಕ ನೀರು ಪೂರೈಸಲಾಗುತ್ತಿದೆಯಾದರೂ ಅದಕ್ಕೆ ದುಪ್ಪಟ್ಟು ಹಣ ನೀಡಬೇಕಾಗಿದೆ. ಹನಿ ಹನಿ ನೀರಿನ ಬೆಲೆಯೂ ಇದೀಗ ಸಿಟಿ ಜನರಿಗೆ ಅರ್ಥವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸದ್ಯ ಪೂರೈಕೆಯಾಗುತ್ತಿರುವ ನೀರಿನ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ನೀರನ್ನು ಸಂಗ್ರಹಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಒಂದಿಷ್ಟು ಸಲಹೆಗಳು ಇಲ್ಲಿವೆ..

ನೀರು ಉಳಿಸಲು 10 ಸರಳ ಮಾರ್ಗಗಳು:

1) ಇಷ್ಟು ದಿನ ನೀವು ಸ್ನಾನ ಮಾಡಲು ಎರ್ರಾಬಿರ್ರಿಯಾಗಿ ನೀರು ಖಾಲಿ ಮಾಡ್ತಾ ಇದ್ದಿರಬಹುದು. ಇನ್ಮುಂದೆ ಹಾಗೆ ಮಾಡಿದರೆ ಅರ್ಥವಿಲ್ಲ. ದೇಹ ಕ್ಲೀನ್​​ ಆಗಲೇಬೇಕು, ಆದರೆ ಸ್ನಾನಕ್ಕೆ ಬಳಸುವ ನೀರಿನ ಪ್ರಮಾಣ ಕಡಿಮೆ ಮಾಡಿ. ನಿಮ್ಮ ಮಕ್ಕಳಿಗೆ ಬಕೆಟ್​​ಗೆ ನೀವೇ ನೀರು ಹಾಕಿಕೊಟ್ಟು ಅಷ್ಟರಲ್ಲೇ ಸ್ನಾನ ಮಾಡಲು ಹೇಳಿ.

2) ಸ್ನಾನ ಮಾಡಲು ಅಗತ್ಯಕ್ಕಿಂತ ಹೆಚ್ಚಿಗೆ ಸೋಪು ಅಥವಾ ಶ್ಯಾಂಪೂ ನೊರೆ ಮಾಡಿಕೊಳ್ಳಬೇಡಿ, ಇದು ಇನ್ನಷ್ಟು ನೀರನ್ನು ಬಳಸುವಂತೆ ಮಾಡುತ್ತದೆ. ನೀರಿನ ಅಭಾವವಿರುವಾಗ ಬಾತ್​ ಟಬ್​​ನಲ್ಲಿ ಎಂದಿಗೂ ಸ್ನಾನ ಮಾಡಬೇಡಿ.

3) ಬ್ರಶ್​ ಮಾಡುವಾಗ ಟ್ಯಾಪ್​ ಆನ್​ ಮಾಡಿಯೇ ಇಡಬೇಡಿ. ಬಾಯಿ-ಮುಖ ತೊಳೆಯುವ ವೇಳೆ ಒಂದು ಬಿಂದಿಗೆಯಲ್ಲಿ ನೀರು ಹಿಡಿದು ತೊಳೆಯಿರಿ. ನೇರವಾಗಿ ನಲ್ಲಿ ನೀರಿಗೆ ಮುಖ ಕೊಡಬೇಡಿ.

4) ಆದಷ್ಟು ಕಡಿಮೆ ನೀರಿನಲ್ಲಿ ಬಟ್ಟೆ ತೊಳೆಯಿರಿ. ಪಾತ್ರೆ ತೊಳೆಯುವಾಗ ಟ್ಯಾಪ್​ ಅನ್ನು ಸ್ಲೋ ಮಾಡಿಟ್ಟುಕೊಳ್ಳಿ. ಹಾಗೆಯೇ ಟ್ಯಾಪ್​​ಗೆ ಏರೇಟರ್ (faucet aerator) ಫಿಕ್ಸ್ ಮಾಡಿ. ಇದು ನಲ್ಲಿಯಲ್ಲಿ ನೀರು ಜೋರಾಗಿ ಬೀಳುವುದನ್ನು ತಡೆಯುತ್ತದೆ.

5) ವಾಷಿಂಗ್​ ಮಿಷನ್​ ಬದಲಾಗಿ ನೀವು ಕೈಯಲ್ಲಿ ಬಟ್ಟೆ ತೊಳೆಯುವವರಾಗಿದ್ದರೆ ಬಟ್ಟೆ ತೊಳೆದ ನೀರನ್ನು ಅಲ್ಲಿಯೇ ಚೆಲ್ಲುವ ಬದಲು ನಿಮ್ಮ ಮನೆಯಲ್ಲಿರುವ ಗಿಡಗಳಿಗೆ ಹಾಕಿ. ಇದರಿಂದ ನೀವು ತಾಜಾ ನೀರನ್ನು ಗಿಡಗಳಿಗೆ ಹಾಕುವುದನ್ನು ಉಳಿಸಬಹುದು. ಅಥವಾ ಈ ನೀರನ್ನು ಟಾಯ್ಲೆಟ್​ ಫ್ಲೆಶ್​ ಮಾಡಲು ಬಳಸಬಹುದು.

6) ಆಟೋಮೆಟಿಕ್​ ವಾಷಿಂಗ್​ ಮಿಷನ್​​ನಲ್ಲಿ ಬಟ್ಟೆ ತೊಳೆಯುತ್ತಿದ್ದರೆ ನೀವು ಒಂದೆರಡು ಜೊತೆ ಬಟ್ಟೆ ಹಾಕಿದರೆ ಪ್ರಯೋಜನವಾಗುವುದಿಲ್ಲ. ಹೀಗಾಗಿ ಫುಲ್​ ಲೋಡ್​ ಆಗುವಂತೆ ಬಟ್ಟೆ ಹಾಕಿ, ಇದರಿಂದ ನೀರು ಉಳಿತಾಯವಾಗುತ್ತದೆ.

7) ಪಾತ್ರೆ ತೊಳೆಯಲು ಡಿಶ್​ ವಾಶರ್ ಬಳಸುತ್ತಿದ್ದರೂ ಕೂಡ ಫುಲ್​ ಲೋಡ್​ ಆಗುವಂತೆ ಪಾತ್ರೆಗಳನ್ನು ಹಾಕಿ.

8) ನೇರವಾಗಿ ಟ್ಯಾಪ್​ ನೀರಿಗೆ ತರಕಾರಿಗಳನ್ನು ಹಿಡಿದು ತೊಳೆಯುವ ಬದಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ತರಕಾರಿಗಳನ್ನು ತೊಳೆಯಿರಿ.

9) ಮನೆಯಿಂದ ಹೊರಗಡೆ ಹೊರಡುವ ಮುನ್ನ ಮನೆಯಲ್ಲಿನ ಎಲ್ಲಾ ಟ್ಯಾಪ್​​ಗಲು ಕ್ಲೋಸ್​ ಆಗಿವೆಯಾ ಎಂದು ಒಮ್ಮೆ ಚೆಕ್​ ಮಾಡಿಕೊಳ್ಳಿ. ಹಾಗೆಯೆ ಮನೆಯಲ್ಲಿ ಎಲ್ಲಾದರೂ ನೀರು ಸೋರಿಕೆ ಆಗ್ತಾ ಇದ್ರೆ ಮೊದಲು ಅದನ್ನು ರಿಪೇರಿ ಮಾಡಿಸಿ.

10) ಮಳೆ ನೀರನ್ನು ಸಂಗ್ರಹಿಸಿ ಅದನ್ನು ವಾಶಿಂಗ್​ ಸಲುವಾಗಿ ಹಾಗೂ ಗಾರ್ಡನ್​ಗೆ ಬಳಸಲು ವ್ಯವಸ್ಥೆ ಮಾಡಿಕೊಳ್ಳಿ. ಮಳೆ ನೀರು ಕೊಯ್ಲು ಪದ್ಧತಿ ಬಗ್ಗೆ ಎಲ್ಲರೂ ಕೇಳಿದ್ದೀರಾದರೂ ಅನುಸರಿಸುವವರ ಸಂಖ್ಯೆ ಬಹಳ ಕಡಿಮೆ. ಕನಿಷ್ಠಪಕ್ಷ ಬರುವ ಮಳೆಗಾಲದಲ್ಲಾದರೂ ಇದರ ವ್ಯವಸ್ಥೆ ಮಾಡಿ, ಮಳೆ ನೀರು ಸಂಗ್ರಹಿಸಿ.