ಕನ್ನಡ ಸುದ್ದಿ  /  Karnataka  /  Bengaluru Water Crisis No Water In Bangalore Drinking Water Shortage In Bengaluru Mrt

ಬೆಂಗಳೂರಿನ 58 ಪ್ರದೇಶಗಳಲ್ಲಿ ನೀರಿನ ಸಮಸ್ಯೆ; 110 ಹಳ್ಳಿಗಳ ಪರಿಸ್ಥಿತಿ ಮತ್ತಷ್ಟು ಗಂಭೀರ, ಮಾರ್ಚ್-ಏಪ್ರಿಲ್​ನಲ್ಲಿ ಏನ್​ ಕಥೆ?

Bengaluru water crisis: ಬೆಂಗಳೂರಿನಲ್ಲಿ ಯಾವ ಮೂಲದಿಂದಲೂ ನೀರು ಲಭ್ಯವಾಗುತ್ತಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಮಾರ್ಚ್-ಏಪ್ರಿಲ್ ತಿಂಗಳಲ್ಲಿನ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ಭಯವಾಗುತ್ತಿದೆ. (ವರದಿ: ಎಚ್​ ಮಾರುತಿ)

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (ಸಾಂದರ್ಭಿಕ ಚಿತ್ರ)
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಇಡೀ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕಾವೇರಿ ನೀರು ಸರಬರಾಜು ಆಗುತ್ತಿಲ್ಲ. ಮತ್ತೊಂದು ಕಡೆ ನಗರದ ಶೇ. 50ರಷ್ಟು ಬೋರ್ ವೆಲ್ ಗಳು ಬತ್ತಿ ಹೋಗಿವೆ. ಹಾಗಾಗಿ ಯಾವ ಮೂಲದಿಂದಲೂ ನೀರು ಲಭ್ಯವಾಗುತ್ತಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಮಾರ್ಚ್-ಏಪ್ರಿಲ್ ತಿಂಗಳಲ್ಲಿನ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ಆತಂಕ ಉಂಟಾಗುತ್ತದೆ.

ಅದರಲ್ಲೂ ಈಗಾಗಲೇ ನಗರದ 58 ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ಪ್ರಮುಖ ಪ್ರದೇಶಗಳಾದ ಮಹದೇವಪುರ, ಆರ್.ಆರ್ ನಗರ, ಬೊಮ್ಮನಹಳ್ಳಿ, ಯಲಹಂಕ, ಹಾಗೂ ದಾಸರಹಳ್ಳಿಯಲ್ಲಿ ತೀವ್ರ ಸಮಸ್ಯೆ ಕಾಡುತ್ತಿದೆ. ಅನ್ಯ ಉದ್ದೇಶಗಳಿಗೆ ಬಿಡಿ, ಕುಡಿಯುವ ನೀರಿಗೂ ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಬಿಬಿಎಂಪಿ ಮೂಲಗಳ ಪ್ರಕಾರ ಮಹದೇವಪುರ– 16 ಆರ್.ಆರ್ ನಗರ– 25 ಬೊಮ್ಮನಹಳ್ಳಿ– 5 ಕಡೆ ಯಲಹಂಕ ಮತ್ತು ದಾಸರಹಳ್ಳಿಯ ತಲಾ 3 ಕಡೆ ನೀರಿನ ಅಭಾವ ಹೆಚ್ಚಿದೆ. ಸಮಸ್ಯೆ ತೀವ್ರವಾಗಿರುವ ಈ ವಲಯಗಳಲ್ಲಿ ಕೊಳವೆ ಬಾವಿ ಕೊರೆಯಲು ರೂ. 131 ಕೋಟಿ ಅನುದಾನವನ್ನು ಬಿಡುಗಡೆ ಮಾಡುವುದಾಗಿಯೂ ಆಯುಕ್ತರು ತಿಳಿಸಿದ್ದಾರೆ. ಆದ್ಯತೆಯ ಮೇರೆಗೆ ಕೊಳವೆಬಾವಿಗಳನ್ನು ಕೊರೆಯಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಪ್ರದೇಶಗಳ ಜೊತೆಗೆ ಇನ್ನೂ 257 ಸ್ಥಳಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ಪಾಲಿಕೆ ಆಯುಕ್ತರೇ ಮಾಹಿತಿ ನೀಡಿದ್ದಾರೆ. ಈ ಪ್ರದೇಶಗಳಿಗೆ ನೀರಿನ ಸರಬರಾಜು ಮಾಡಲು 68 ಟ್ಯಾಂಕರ್‌ಗಳ ಜೊತೆಗೆ 18 ಹೊಸ ಟ್ಯಾಂಕರ್‌ಗಳನ್ನು ಖರೀದಿಸಲು ಮತ್ತು 200 ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲು ಪಾಲಿಕೆ ಮುಂದಾಗಿದೆ.

2008 ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳ ಸಮಸ್ಯೆ ಮತ್ತಷ್ಟು ಹದಗೆಟ್ಟಿದೆ. ಅತ್ತ ಸಿಎಂಸಿ ಸೌಲಭವೂ ಇಲ್ಲ, ಇತ್ತ ಕಾವೇರಿ ನೀರು ಸಂಪರ್ಕವೂ ಇಲ್ಲವಾಗಿದೆ. ಈ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಮಾತ್ರವಲ್ಲದೆ ರಸ್ತೆ, ಒಳ ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

ಒಟ್ಟಾರೆ ಬೆಂಗಳೂರಿನ 110 ಹಳ್ಳಿಗಳು ಮತ್ತು 120 ಬಿಬಿಎಂಪಿ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ವರ್ಷದ ಮೇ ವರೆಗೆ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಈ ಯೋಜನೆ ಜಾರಿಯಾದರೆ 110 ಹಳ್ಳಿಗಳಿಗೆ 775 ಎಂ ಎಲ್ ಡಿ ಕುಡಿಯುವ ನೀರು ಲಭ್ಯವಾಗಲಿದೆ. ಅದುವರೆಗೂ ಈ ಭಾಗದ 12 ಲಕ್ಷ ನಾಗರೀಕರು ಈ ಬೇಸಗೆಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆಂಗಳೂರು ಉತ್ತರ ಮತ್ತು ಪೂರ್ವ ಭಾಗದಲ್ಲಿ ನೀರಿನ ಸಮಸ್ಯೆ ಸರ್ವೇ ಸಾಮಾನ್ಯ. ಅಂತರ್ಜಲ ಮಟ್ಟ ಕುಸಿದಿರುವುದರಿಂದ ದಕ್ಷಿಣ ಭಾಗದಲ್ಲಿ ಈ ವರ್ಷ ನೀರಿನ ಸಮಸ್ಯೆ ಎದುರಾಗಿದೆ. 1.25 ಕೋಟಿ ನಾಗರೀಕರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಎಲ್ಲ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಮುಳುಗುತ್ತಾರೆ. ಬೆಂಗಳೂರಿನ ಸಮಸ್ಯೆಗೆ ಕಿವಿಗೊಡುವವರು ಯಾರು?

ವರದಿ: ಎಚ್​ ಮಾರುತಿ

IPL_Entry_Point