ಬೆಂಗಳೂರಿನಲ್ಲಿ ಉಲ್ಬಣಿಸುತ್ತಿರುವ ನೀರಿನ ಸಮಸ್ಯೆ; ಟ್ಯಾಂಕರ್ ನೀರಿನ ಬೆಲೆ ಪಾವತಿಸಲಾಗದೆ ಮನೆ ಖಾಲಿ ಮಾಡುತ್ತಿರುವ ಬಾಡಿಗೆದಾರರು-bengaluru water crisis tanker water rate increasing day by day in bangalore due to lack of water mgb ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಉಲ್ಬಣಿಸುತ್ತಿರುವ ನೀರಿನ ಸಮಸ್ಯೆ; ಟ್ಯಾಂಕರ್ ನೀರಿನ ಬೆಲೆ ಪಾವತಿಸಲಾಗದೆ ಮನೆ ಖಾಲಿ ಮಾಡುತ್ತಿರುವ ಬಾಡಿಗೆದಾರರು

ಬೆಂಗಳೂರಿನಲ್ಲಿ ಉಲ್ಬಣಿಸುತ್ತಿರುವ ನೀರಿನ ಸಮಸ್ಯೆ; ಟ್ಯಾಂಕರ್ ನೀರಿನ ಬೆಲೆ ಪಾವತಿಸಲಾಗದೆ ಮನೆ ಖಾಲಿ ಮಾಡುತ್ತಿರುವ ಬಾಡಿಗೆದಾರರು

ಉಲ್ಬಣಿಸುತ್ತಿರುವ ಬೆಂಗಳೂರಿನ ನೀರಿನ ಸಮಸ್ಯೆ.. ಹೆಚ್ಚುತ್ತಿರುವ ಟ್ಯಾಂಕರ್ ನೀರಿನ ಬೆಲೆ.. ಮನೆ ಖಾಲಿ ಮಾಡುತ್ತಿರುವ ಬಾಡಿಗೆದಾರರು.. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟಂತಾಗಿವೆ ಸರ್ಕಾರದ ಪ್ರಯತ್ನಗಳು.. ಸಮಸ್ಯೆ ಹೆಚ್ಚಳಕ್ಕೆ ಟ್ಯಾಂಕರ್ ಮಾಫಿಯಾ ಕಾರಣವೇ? (ವರದಿ: ಎಚ್​ ಮಾರುತಿ )

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (ಸಾಂದರ್ಭಿಕ ಚಿತ್ರ)
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಉದ್ಯಾನ ನಗರ ಎಂಬ ಖ್ಯಾತಿಗೆ ಭಾಜನವಾಗಿದ್ದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನವರಿಯಿಂದಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕಾವೇರಿ ನೀರು ಸಾಕಾಗುತ್ತಿಲ್ಲ. ಬೋರ್ ವೆಲ್​​​ಗಳು ಬತ್ತಿ ಹೋಗಿವೆ. 500 ರೂ.ಗಳಷ್ಟಿದ್ದ ಪ್ರತಿ ಟ್ಯಾಂಕರ್ ನೀರಿನ ಬೆಲೆ ಇದೀಗ 2000 ರೂ.ಗಳ ಗಡಿ ದಾಟಿದೆ. ನೀರಿನ ಬೆಲೆಯನ್ನು ಪಾವತಿಸಲಾಗದೆ ಬಾಡಿಗೆದಾರರು ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಅತ್ತ ಸರ್ಕಾರ ಬ್ರ್ಯಾಂಡ್ ಬೆಂಗಳೂರಿನ ಕನಸು ಕಾಣುತ್ತಿದೆ. ಇದು ಬೆಂಗಳೂರಿನ ಸದ್ಯದ ಚಿತ್ರಣವಾದರೂ ಮಳೆಗಾಲ ಆರಂಭವಾಗುವ ಜೂನ್ ವರೆಗೆ ಇದೇ ಪರಿಸ್ಥಿತಿ ಮುಂದುವರೆಯುವುದರಲ್ಲಿ ಸಂದೇಹವಿಲ್ಲ.

ನಗರದ ನಾಲ್ಕೂ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಇಲ್ಲಿನ 1 ಕೋಟಿ ಗೂ ಮೀರಿದ ಜನಸಂಖ್ಯೆ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಶೇ. 60ರಷ್ಟು ನಿವಾಸಿಗಳು ಟ್ಯಾಂಕರ್ ನೀರನ್ನು ಅವಲಂಬಿಸಿದ್ದಾರೆ. ಮಳೆಯ ಕೊರತೆ, ಬತ್ತಿದ ಅಂತರ್ಜಲ, ನೀರಿಲ್ಲದೆ ಸೊರಗುತ್ತಿರುವ ಬೋರ್ ವೆಲ್​​ಗಳು, ಮೂಲಭೂತ ಸೌಕರ್ಯಗಳ ಯೋಜನೆ ಇಲ್ಲದೆ ಬೆಳೆಯುತ್ತಿರುವ ನಗರ ಮತ್ತು ಟ್ಯಾಂಕರ್ ಮಾಫಿಯಾ ಪ್ರಮುಖ ಕಾರಣಗಳು. ಸಂಪೂರ್ಣವಾಗಿ ಟ್ಯಾಂಕರ್​​​ಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ನೀರಿನ ಬೆಲೆಯನ್ನು ಭರಿಸಲಾಗದೆ ಬಾಡಿಗೆದಾರರು ಕಡಿಮೆ ಸಮಸ್ಯೆ ಇರುವ ಪ್ರದೇಶಗಳತ್ತ ಮುಖ ಮಾಡಿರುವುದು ಕಂಡು ಬರುತ್ತಿದೆ.

ನಗರದ ಜನತೆಗೆ ನೀರುಣಿಸುವ ಜವಬ್ದಾರಿ ಬೆಂಗಳೂರು ನೀರು ಸರಬರಾಜು ಮಂಡಲಿಯ ಹೊಣೆ. ಈ ಮಂಡಲಿಯು ನೀರಿಗಾಗಿ ಕಾವೇರಿ ನೀರನ್ನು ಅಲವಂಬಿಸಿದೆ. ಇಡೀ ಬೆಂಗಳೂರಿಗೆ ಕಾವೇರಿ ನೀರು ಸರಬರಾಜಾಗುತ್ತಿಲ್ಲ. ಕಾವೇರಿ ಸಂಪರ್ಕ ಇಲ್ಲದ ಪ್ರದೇಶಗಳು ಬೋರ್ ವೆಲ್ ಮತ್ತು ಟ್ಯಾಂಕರ್ ಗಳನ್ನು ಅವಲಂಬಿಸಿವೆ. ಬಜೆಟ್ ನಲ್ಲಿ ಸರಕಾರ 200 ಕೋಟಿ ರೂ. ಒದಗಿಸಿದೆ. ಬೊರ್ ವೆಲ್​​ಗಳ ಆಳವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಸೆಪ್ಟಂಬರ್ ಅಕೋಬರ್ ನಲ್ಲೇ ಮುನ್ಸೂಚನೆ ಸಿಕ್ಕಿತ್ತಾದರೂ ಸರಕಾರ ಎಚ್ಚೆತ್ತುಕೊಳ್ಳದೆ ಇದೀಗ ಹರಸಾಹಸ ಪಡುತ್ತಿದೆ.

ಶನಿವಾರ (ಫೆ 25) ನೀರು ಸರಬರಾಜು ಮಂಡಲಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ಸಭೆ ನಡೆಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿವೆ. ಬೆಂಗಳೂರಿನ ಎಂಟು ವಲಯಗಳ ಪೈಕಿ ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಯಲಹಂಕ, ಮಹದೇವಪುರ ವಲಯಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಬಿಗಡಾಯಿಸಿದ್ದು, ಕೊಳವೆ ಬಾವಿ ಕೊರೆಯಲು ಬಿಬಿಎಂಪಿ 131 ಕೋಟಿ ರೂ. ಬಿಡುಗಡೆ ಮಾಡಿದೆ. ಕುಡಿಯುವ ನೀರಿಗೆ ಬೆಂಗಳೂರಿನ ನಾಗರೀಕರು ಶುದ್ಧ ನೀರಿನ ಘಟಕಗಳನ್ನೇ ಅವಲಂಬಿಸಿದ್ದರು.

ಬಹುತೇಕ ಘಟಕಗಳು ಬಂದ್ ಆಗಿವೆ. ಹಾಗಾಗಿ ಹೊಸದಾಗಿ ಕೊಳವೆ ಬಾವಿ ಕೊರೆಯಲು ಬಿಬಿಎಂಪಿ ತೀರ್ಮಾನಿಸಿದೆ. ತಾತ್ಕಾಲಿಕವಾಗಿ ಟ್ಯಾಂಕರ್​​ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿಯೂ ಭರವಸೆ ನೀಡಿದೆ. ನಗರದ 11 ಸಾವಿರ ಕೊಳವೆ ಬಾವಿಗಳಲ್ಲಿ 1,214 ಕೊಳವೆ ಬಾವಿಗಳು ಬತ್ತಿ ಹೋಗಿವೆ. 3,700 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಮತ್ತೆ ನೀರು ಬರಬಹುದಾದ ಕೊಳವೆ ಬಾವಿಗಳನ್ನು ಗುರುತಿಸಿ ಪ್ಲಷಿಂಗ್ ಮತ್ತು ರೀಡ್ರಿಲ್ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಕೊಳವೆ ಬಾವಿ ಕೊರೆಸಲು ಆದ್ಯತೆ ನೀಡಲಾಗುತ್ತಿದೆ. ನಗರದ 257 ಸ್ಥಳಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಪ್ರದೇಶಗಳಿಗೆ ನೀರು ಒದಗಿಸಲು 68 ಟ್ಯಾಂಕರ್ ಮತ್ತು ಹೊಸದಾಗಿ 18 ಟ್ಯಾಂಕರ್ ಖರೀದಿಸಲು ತ್ತು 200 ಖಾಸಗಿ ಟ್ಯಾಂಕರ್​​ಗಳನ್ನು ಬಾಡಿಗೆ ಪಡೆಯಲು ಕ್ರಮ ವಹಿಸಲಾಗಿದೆ.

ವಿಜ್ಞಾನಿಗಳ ಪ್ರಕಾರ ಕಳೆದ ನಾಲ್ಕು ದಶಕಗಳಲ್ಲಿ ಶೇ.79ರಷ್ಟು ನೀರಿನ ಮೂಲಗಳು ಮತ್ತು ಶೇ.88 ರಷ್ಟು ಹಸಿರು ಪ್ರದೇಶವನ್ನು ಕಳೆದುಕೊಂಡಿದ್ದೇವೆ. ಪ್ರತಿ ವರ್ಷ 10 ಲಕ್ಷ ಜನಸಂಖ್ಯೆ ಸೇರ್ಪಡೆಯಾಗುತ್ತಿದ್ದು, 2025ರ ವೇಳೆಗೆ 1.25 ಕೋಟಿ ದಾಟುವ ಸಂಭವವಿದೆ. ಆಗ ನೀರಿಗಾಗಿ ಯುದ್ದ ನಡೆದರೂ ಅಚ್ಚರಿಪಡಬೇಕಿಲ್ಲ.

ವರದಿ: ಎಚ್​ ಮಾರುತಿ