ಬೆಂಗಳೂರು ನೀರಿನ ಸಮಸ್ಯೆ; ಕಾರಣವೇನು, ಈ ಬಿಕ್ಕಟ್ಟನ್ನು ಜನ ನಿಭಾಯಿಸುತ್ತಿರುವ ರೀತಿ, ಉಪಕ್ರಮಗಳಿವು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರಿನ ಸಮಸ್ಯೆ; ಕಾರಣವೇನು, ಈ ಬಿಕ್ಕಟ್ಟನ್ನು ಜನ ನಿಭಾಯಿಸುತ್ತಿರುವ ರೀತಿ, ಉಪಕ್ರಮಗಳಿವು

ಬೆಂಗಳೂರು ನೀರಿನ ಸಮಸ್ಯೆ; ಕಾರಣವೇನು, ಈ ಬಿಕ್ಕಟ್ಟನ್ನು ಜನ ನಿಭಾಯಿಸುತ್ತಿರುವ ರೀತಿ, ಉಪಕ್ರಮಗಳಿವು

ಬೆಂಗಳೂರಿನ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಅದರ ನಡುವೆ ಸುಡುಬೇಸಿಗೆಯೂ ಸಂಕಷ್ಟವನ್ನು ತಂದೊಡ್ಡಿದೆ. ಈ ಸಮಸ್ಯೆಗೆ ಕಾರಣವೇನು, ಈ ಬಿಕ್ಕಟ್ಟನ್ನು ಜನ ನಿಭಾಯಿಸುತ್ತಿರುವ ರೀತಿ ಮತ್ತು ಉಪಕ್ರಮಗಳ ವಿವರ ಹೀಗಿದೆ..

ಬೆಂಗಳೂರು ನೀರಿನ ಸಮಸ್ಯೆ (ಸಾಂಕೇತಿಕ ಚಿತ್ರ)
ಬೆಂಗಳೂರು ನೀರಿನ ಸಮಸ್ಯೆ (ಸಾಂಕೇತಿಕ ಚಿತ್ರ) (ANI)

ಬೆಂಗಳೂರು ನೀರಿನ ಸಮಸ್ಯೆ ದಿನೇದಿನೆ ಗಂಭೀರವಾಗುತ್ತಿದೆ. ಬೆಂಗಳೂರಿನ ಜನಸಂಖ್ಯೆ 1.4 ಕೋಟಿ ಆಸುಪಾಸಿನಲ್ಲಿದೆ. ಕಾವೇರಿ ನೀರು ಪೂರೈಕೆ ಸಾಕಾಗುತ್ತಿಲ್ಲ. ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಬೋರ್‌ವೆಲ್‌ಗಳು ಬತ್ತಿವೆ. ವಿಶೇಷವಾಗಿ ಯಲಹಂಕ, ವೈಟ್‌ಫೀಲ್ಡ್‌ ಮುಂತಾದೆಡೆ ನೀರಿನ ಸಮಸ್ಯೆ ಜನರನ್ನು ತೀವ್ರವಾಗಿ ಕಾಡಿದೆ. ಅದನ್ನು ಬೆಂಗಳೂರಿಗರು ಹೇಗೆ ನಿಭಾಯಿಸುತ್ತಿದ್ದಾರೆ, ನಿರ್ವಹಿಸುತ್ತಿದ್ದಾರೆ?

ಬೆಂಗಳೂರಿನ ನೀರಿನ ಸಮಸ್ಯೆಗೆ ಏನು ಕಾರಣ?- ಕ್ಷಿಪ್ರ, ಅನಿಯಂತ್ರಿತ ಬೆಳವಣಿಗೆ ಮತ್ತು ನಗರದ ನೈಸರ್ಗಿಕ ಜಲಮೂಲಗಳ ಸಂಪೂರ್ಣ ನಿರ್ಲಕ್ಷ್ಯದಿಂದ ಉಂಟಾದ ಸಮಸ್ಯೆಯಿಂದಾಗಿ ನಗರದ ನಿವಾಸಿಗಳು ಪರದಾಡುವಂತಾಗಿದೆ. ಆದಾಗ್ಯೂ, ಈ ನೀರಿನ ಬಿಕ್ಕಟ್ಟು ಕರ್ನಾಟಕದ ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್ ಎರಡರ ವೈಫಲ್ಯದ ಪರಿಣಾಮವಾಗಿ ಈಗ ಬೆಂಗಳೂರಿನ ನೀರಿನ ಸಮಸ್ಯೆ ಕಾಡತೊಡಗಿದೆ.

ಬೆಂಗೂರಿನ ನೀರಿನ ಸಮಸ್ಯೆ; ತುರ್ತು ಪರಿಹಾರ ಕ್ರಮಗಳು

ಬೆಂಗಳೂರಿನ ತೀವ್ರ ನೀರಿನ ಸಮಸ್ಯೆಯ ನಡುವೆ, ಅದರ ಪರಿಹಾರಕ್ಕಾಗಿ ಅಧಿಕಾರಿಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಎಲ್ಲ ನೀರಾವರಿ ಮತ್ತು ವಾಣಿಜ್ಯ ಬೋರ್‌ವೆಲ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವುದು, ನಗರದ ಪ್ರತಿಯೊಂದು ಖಾಸಗಿ ನೀರಿನ ಟ್ಯಾಂಕರ್‌ನ ನೋಂದಣಿಯನ್ನು ಕಡ್ಡಾಯಗೊಳಿಸುವುದು ಸೇರಿದೆ.

ಏತನ್ಮಧ್ಯೆ, ಮನೆಯ ಬಾಲ್ಕನಿ ತೊಳೆಯುವುದು, ವಾಹನ ತೊಳೆಯುವುದು ಮುಂತಾದವುಗಳನ್ನು ನಿಲ್ಲಿಸುತ್ತ ನಿವಾಸಿಗಳು ತಮ್ಮದೇ ಆದ ತುರ್ತುಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಇದಲ್ಲದೆ, ಸ್ನಾನಕ್ಕೆ ಅರ್ಧ ಬಕೆಟ್ ನೀರು ಬಳಸುವುದು, ಶೌಚಕ್ಕೆ ಅರ್ಧಫ್ಲಶ್ ಮಾಡುವುದು ಇತ್ಯಾದಿ ಹಲವು ನೀರು ಉಳಿತಾಯ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡಿದ್ದು, ನಗರದಲ್ಲಿರುವ ಎಲ್ಲಾ ನೀರಾವರಿ ಮತ್ತು ವಾಣಿಜ್ಯ ಬೋರ್‌ವೆಲ್‌ಗಳನ್ನು ವಶಪಡಿಸಿಕೊಂಡು ಅವುಗಳ ನೀರನ್ನು ಬಳಸುವುದಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಮಾರ್ಚ್‌ 4ರಂದು ನಿರ್ದೇಶನ ನೀಡಿದರು.

ನಮ್ಮ ದಾಖಲೆಗಳ ಪ್ರಕಾರ ಬೆಂಗಳೂರು ಸುತ್ತಮುತ್ತ 16,781 ಬೋರ್‌ವೆಲ್‌ಗಳಿದ್ದು, ಅವುಗಳ ಪೈಕಿ 6,997 ಕೊಳವೆಬಾವಿಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ. ಉಳಿದ 7,784 ಬೋರ್‌ವೆಲ್‌ಗಳಲ್ಲಿ ನೀರಿದೆ. ಸರ್ಕಾರವೂ ನೀರಿಗಾಗಿ ಬೋರ್‌ವೆಲ್‌ ಕೊರೆಯಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದರು.

ಟ್ಯಾಂಕರ್ ನೀರಿನ ದರ 500 ರೂಪಾಯಿ ಇದ್ದದ್ದು, 2,000 ರೂಪಾಯಿಗೂ ಅಧಿಕವಾಗಿತ್ತು. ಟ್ಯಾಂಕರ್ ಮಾಫಿಯಾ ತಡೆಯುವುದಕ್ಕಾಗಿ ಸರ್ಕಾರ, ಮಾರ್ಚ್ 1ರಿಂದ 7 ರ ತನಕ ನೀರಿನ ಟ್ಯಾಂಕರ್ ನೋಂದಣಿ ಮಾಡಿಸುವುದಕ್ಕೆ ಸೂಚಿಸಿತ್ತು. ಬೆಂಗಳೂರಿನಲ್ಲಿ 3,000 ದಷ್ಟು ನೀರಿನ ಟ್ಯಾಂಕರ್‌ಗಳಿದ್ದು ಈ ಪೈಕಿ ಇನ್ನೂ ಎಲ್ಲ ಟ್ಯಾಂಕರ್‌ಗಳು ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಶಿವಕುಮಾರ್ ತಿಳಿಸಿದ್ದರು. ಅಲ್ಲದೆ, ನೋಂದಣಿ ಮಾಡಿಸದ ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡು ನೀರು ಪೂರೈಕೆಗೆ ಬಳಸುವಂತೆ ಸ್ಥಳೀಯಾಡಳಿತಕ್ಕೆ ಸೂಚಿಸಿದ್ದರು.

ಕರ್ನಾಟಕದ ಪರಿಸ್ಥಿತಿ ಹೀಗಿದೆ

ಕರ್ನಾಟಕದ 236 ತಾಲೂಕುಗಳ ಪೈಕಿ 223 ಬರಪೀಡಿತವಾಗಿದ್ದು, 219 ತೀವ್ರ ಬಾಧಿತವಾಗಿವೆ. ಬೆಂಗಳೂರಿನ ಎರಡು ಪ್ರಮುಖ ನೀರಿನ ಮೂಲಗಳಾದ ಕಾವೇರಿ ಮತ್ತು ಬೋರ್‌ವೆಲ್‌ಗಳ ನೀರಿನ ಪೂರೈಕೆಯ ಮೇಲೆ ಒಣಹವೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಬಿಕ್ಕಟ್ಟು ಉಲ್ಬಣಗೊಳ್ಳಬಹುದು. ಈಗಾಗಲೇ ಅರ್ಧದಷ್ಟು ಬೋರ್‌ವೆಲ್‌ಗಳು ಬತ್ತಿ ಹೋಗಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಜಲಮಂಡಳಿ ನೀರು ಸರಬರಾಜು ನಿಯತವಾಗಿ ಇಲ್ಲದೇ ಇರುವ ಕಾರಣ ಖಾಸಗಿ ನೀರಿನ ಟ್ಯಾಂಕರ್‌ಗ ನೀರಿನ ದರವೂ ಹೆಚ್ಚಾಗಿದೆ. ನಾನು ಪ್ರತಿ ದಿನವೂ ನೀರನ್ನು ಖರೀದಿಸುತ್ತೇನೆ. ನೀರಿಗಾಗಿ ಪ್ರತ್ಯೇಕ ಬಜೆಟ್‌ ಮಾಡಬೇಕು. ಇಷ್ಟಾಗ್ಯೂ ಸರಬರಾಜು ಮಾಡುವ ನೀರಿನ ಗುಣಮಟ್ಟವು ಕೆಟ್ಟದ್ದಾಗಿದೆ. ಅವುಗಳಲ್ಲಿ ಹುಳುಗಳಿರುವುದನ್ನೂ ಗಮನಿಸಿದ್ದೇನೆ ಎಂದು ಕೋರಮಂಗಲದ ದೀಪಾಲಿ ಸಿಕಂದ್ ಹೇಳಿದ್ದಾಗಿ ಹೆಚ್‌ಟಿ ವರದಿ ಮಾಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner