ಕನ್ನಡ ಸುದ್ದಿ  /  Karnataka  /  Bengaluru Water Problem 2 Lakes Drying Affect Groundwater Subsidence In Surrounding Area Bbmp Bda Mrt

ಬೆಂಗಳೂರಿನ ಈ ಎರಡೂ ಕೆರೆಗಳು ಬತ್ತಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿತ, ಬಿಡಿಎ ವಿಳಂಬ ಧೋರಣೆಗೆ ಜನಾಕ್ರೋಶ

ಬೆಳ್ಳಂದೂರು, ವರ್ತೂರು ಕೆರೆಗಳ ಪುನರುಜ್ಜೀವನ ಹಲವು ವರ್ಷಗಳಿಂದ ವಿಳಂಬವಾಗುತ್ತಿದ್ದು, ಈ ಎರಡೂ ಕೆರೆಗಳ ಪ್ರದೇಶಗಳಲ್ಲಿ ಅಂತರ್ಜಲ ಬತ್ತಲು ಕಾರಣವಾಗಿದೆ ಎಂದು ತಜ್ಞರು ಮತ್ತು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಡುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನೀರಿನ  ಸಮಸ್ಯೆ ಎದುರಾಗಿದ್ದು, ಜನರು ಪರದಾಡುವಂತಾಗಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಜನರು ಪರದಾಡುವಂತಾಗಿದೆ.

ಬೆಂಗಳೂರು: Bangalore Water Crisis: ಉದ್ಯಾನ ನಗರಿ ಬೆಂಗಳೂರಿನ ಬೆಳ್ಳಂದೂರು, ವರ್ತೂರು ಮತ್ತು ಸುತ್ತಮುತ್ತಲಿನ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಬತ್ತಿ ಹೋಗಲು ಎರಡು ಪ್ರಮುಖ ಕೆರೆಗಳ ಪುನರುಜ್ಜೀವನದ ವಿಳಂಬ ಕಾರಣ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನರುಜ್ಜೀವನ ಹಲವು ವರ್ಷಗಳಿಂದ ವಿಳಂಬ ವಾಗುತ್ತಿದ್ದು, ಈ ಎರಡೂ ಕೆರೆಗಳ ಪ್ರದೇಶಗಳಲ್ಲಿ ಅಂತರ್ಜಲ ಬತ್ತಲು ಕಾರಣವಾಗಿದೆ ಎಂದು ತಜ್ಞರು ಮತ್ತು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಡುತ್ತಾರೆ. ಈ ಎರಡೂ ಕೆರೆಗಳು 1,200 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಹರಡಿವೆ. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಪುನರುಜ್ಜೀವನವನ್ನು ಕೈಗೆತ್ತಿಕೊಂಡಿರುವುದರಿಂದ ಈ ಎರಡು ಕೆರೆಗಳಿಗೆ ಸಂಸ್ಕರಿಸಿದ ಒಳಚರಂಡಿ ಮತ್ತು ಮಳೆನೀರು ಸೇರುವುದು ಸ್ಥಗಿತಗೊಂಡಿದೆ.

ಅಂತರ್ಜಲ ಮಟ್ಟ ತೀವ್ರ ಕುಸಿತಕ್ಕೆ ಇದೇ ಕಾರಣ

ಪುನರುಜ್ಜೀವನ ಅಂಗವಾಗಿ ಬಿಡಿಎ, ಕೆರೆಗಳ ಹೂಳು ತೆಗೆಯಲು ನೀರಿನ ಒಳಹರಿವನ್ನು ಬೇರೆಡೆಗೆ ತಿರುಗಿಸಿದೆ. ಆದರೆ ಕಾಮಗಾರಿಯು ಅಪೂರ್ಣಗೊಂಡಿದ್ದು, ಅಂತರ್ಜಲ ಮಟ್ಟದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ತಜ್ಞರು ಹೇಳುತ್ತಾರೆ. ಈ ಕೆರೆಗಳು ನೀರಿನಿಂದ ತುಂಬಿದ್ದರೆ ಕೊನೆಯ ಪಕ್ಷ ಖಾಸಗಿ ಟ್ಯಾಂಕರ್‌ಗಳಿಂದ ನೀರನ್ನು ಪಡೆಯುವ ಅವಕಾಶಗಳಿದ್ದವು.

ಹೂಳೆತ್ತಲು ಬೆಳ್ಳಂದೂರು ಮತ್ತು ವರ್ತೂರು ಕೆರೆಗಳನ್ನು ಬತ್ತಿಸಲಾಗಿದೆ. ಒಂದು ವೇಳೆ ಈ ಕೆರೆಗಳು ತುಂಬಿದ್ದರೆ ನಗರದ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗುತ್ತಿತ್ತು ಎಂದು ನೀರು ಸಂರಕ್ಷಣಾ ತಜ್ಞ ವಿಶ್ವನಾಥ್ ಶ್ರೀಕಂಠಯ್ಯ ಹೇಳುತ್ತಾರೆ. ಇದೇ ಕಾರಣಕ್ಕಾಗಿ ಬೆಳ್ಳಂದೂರು ಮತ್ತು ವರ್ತೂರು ಮತ್ತು ಸುತ್ತಮುತ್ತಲಿನ ಬೋರ್‌ವೆಲ್‌ಗಳು ಒಣಗಿವೆ. ಬೆಳ್ಳಂದೂರು ಕೆರೆ 330 ಹೆಕ್ಟೇರ್‌ ವಿಸ್ತಾರದಲ್ಲಿದ್ದು, ದಿನವೊಂದಕ್ಕೆ 66 ಮಿಲಿಯನ್ ಲೀಟರ್ ನೀರನ್ನು ಮರುಪೂರಣ ಮಾಡುತ್ತದೆ.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ 12,000 ಲೀಟರ್ ನೀರಿನ ಸಾಮರ್ಥ್ಯದ 5,500 ಟ್ಯಾಂಕರ್‌ಗಳಿಗೆ ಸಮವಾಗಿರುತ್ತದೆ. ವರ್ತೂರು ಕೆರೆ ದಿನವೊಂದಕ್ಕೆ 36 ಮಿಲಿಯನ್ ಲೀಟರ್ ನೀರನ್ನು ರೀಚಾರ್ಜ್ ಮಾಡುತ್ತದೆ. ಹೀಗೆ ದಿನವೊಂದಕ್ಕೆ 102 ಮಿಲಿಯನ್ ಲೀಟರ್ ನೀರು ರೀ ಚಾರ್ಜ್ ಆಗುವುದು ತಪ್ಪಿದ್ದರಿಂದ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗಿದೆ. ತಾತ್ಕಾಲಿಕ ಪರಿಹಾರವಾಗಿ ಬಿಡಿಎ ಈ ಎರಡು ಕೆರೆಗಳಿಗೆ ತೃತೀಯ ಹಂತದ ಸಂಸ್ಕರಿತ ತ್ಯಾಜ್ಯ ನೀರನ್ನು ಹರಿಸಬೇಕು. ಇದರಿಂದ ಈ ಕೆರೆಗಳ ಸುತ್ತಮುತ್ತಲಿನ 10 ಕಿಮೀ ವ್ಯಾಪ್ತಿಯ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದು ಅವರು ಹೇಳುತ್ತಾರೆ.

ನೀರು ಲಭ್ಯತೆ ಬಿಇಎಲ್ ಕಂಪನಿಯ ಪ್ಲಾನ್ ಸಕ್ಸಸ್

ಬೆಂಗಳೂರು ಉತ್ತರ ಭಾಗದಲ್ಲಿರುವ ದೊಡ್ಡಬೊಮ್ಮಸಂದ್ರ ಕೆರೆಯನ್ನು ಉದಾಹರಣೆಯಾಗಿ ನೋಡಬಹುದು. ಬಿಇಎಲ್ ಕಂಪನಿಯು ಈ ಕೆರೆಗೆ 10 ಎಂಎಲ್‌ಡಿ ನೀರನ್ನು ಸಂಸ್ಕರಿಸುವ ಘಟಕವನ್ನು ಸ್ಥಾಪಿಸಿದ್ದು, ಬಿಬಿಎಂಪಿ 10 ಲಕ್ಷ ರೂಪಾಯಿ ವಿದ್ಯುಚ್ಚಕ್ತಿ ಬಿಲ್ ಪಾವತಿಸುತ್ತಿದೆ. ಇದರಿಂದ 300 ಮಿಲಿಯನ್ ಲೀಟರ್ ನೀರು ಲಭ್ಯವಾಗುತ್ತಿದೆ. ಇಬ್ಲೂರು ಕೆರೆಯ ಸಮೀಪ ಇರುವವರಿಗೆ ಬೋರ್ ವೆಲ್ ನೀರು ಲಭ್ಯವಿದೆ. ಆದರೆ ಬೆಳ್ಳಂದೂರು ಕೆರೆ ಒಣಗಿದ್ದು, ಸುತ್ತಮುತ್ತ ಇರುವ ನಿವಾಸಿಗಳಿಗೆ ನೀರು ಅಲಭ್ಯವಾಗಿದೆ.

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ತೀವ್ರವಾಗಿದ್ದರೂ ಈ ಎರಡೂ ಕೆರೆಗಳ ಪುನಶ್ಚೇತನಕ್ಕೆ ಬಿಡಿಎ ಆತುರ ತೋರುತ್ತಿಲ್ಲ. ಬೆಳ್ಳಂದೂರು ಕೆರೆಯ ಕೆಲಸ ಪೂರ್ಣಗೊಳ್ಳಲು ಒಂದು ವರ್ಷ ಬೇಕಿದ್ದು, ಅಲ್ಲಿಯವರೆಗೂ ನೀರು ಹರಿಸಲು ಸಾಧ್ಯವಿಲ್ಲ. ವರ್ತೂರು ಕೆರೆಯ ಕೆಲಸ ಈ ವರ್ಷದ ಡಿಸೆಂಬರ್ ವೇಳೆಗೆ ಮುಗಿಯಲಿದೆ. ಆ ವೇಳೆಗೆ ನೀರು ಹರಿಸುವ ಭರವಸೆ ಇದೆ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.

ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳು ತೆಗೆಯುವ ಕಾಮಗಾರಿ ಆರಂಭವಾಗಿ ಐದು ವರ್ಷ ಕಳೆದಿದ್ದು, ಶೇ. 50ರಷ್ಟು ಮಾತ್ರ ಪೂರ್ಣಗೊಂಡಿದೆ. ಕೆಲವು ವರ್ಷಗಳ ಹಿಂದೆ ಈ ಎರಡೂ ಕೆರೆಗಳಲ್ಲಿ ನೊರೆ ಮತ್ತು ಬೆಂಕಿ ಕಾಣಿಸಿಕೊಂಡ ನಂತರ ಎರಡು ಕೆರೆಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಮಿತಿ ರಚಿಸಲಾಗಿತ್ತು. ಸಮಿತಿ ರಚನೆ ಮತ್ತು ಎರಡು ಕೆರೆಗಳ ಪುನಶ್ಚೇತನಕ್ಕೆ ಎನ್‌ಜಿಟಿ ನಿರ್ದೇಶನಗಳನ್ನು ನೀಡಿತ್ತು.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point