Bengaluru Weather: ಬೆಂಗಳೂರಲ್ಲಿ ಈ ವಾರ ಸುಡುಬಿಸಿಲು ಸಾಧ್ಯತೆ, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಶಿಯಸ್ ಆಸುಪಾಸು
Bengaluru Weather: ಬೆಂಗಳೂರಿಗರೇ ಅವಧಿಗೂ ಮೊದಲೇ ಬೇಸಿಗೆಯನ್ನು ಬರಮಾಡಿಕೊಳ್ಳಲು ಸಜ್ಜಾಗಿ. ಬೆಂಗಳೂರಲ್ಲಿ ಈ ವಾರ ಸುಡುಬಿಸಿಲು ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಶಿಯಸ್ ಆಸುಪಾಸು ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

Bengaluru Weather: ಬೆಂಗಳೂರು ನಗರದಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಬೆಂಗಳೂರಿಗರಿಗೆ ಬೇಸಿಗೆಯ ಸುಡುಬಿಸಿಲಿನ ಅನುಭವ ಈಗಲೇ ಶುರುವಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಈ ವಾರ ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಶಿಯಸ್ ಆಸುಪಾಸು ಇರಲಿದ್ದು, ಈ ಸಮಯದ ವಾಡಿಕೆ ತಾಪಮಾನಕ್ಕಿಂತ 1.4 ಡಿಗ್ರಿ ಸೆಲ್ಶಿಯಸ್ ಹೆಚ್ಚಳವನ್ನು ಇದು ತೋರಿಸುತ್ತಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬೆಂಗಳೂರಲ್ಲಿ ಸುಡುಬಿಸಿಲು ಸಾಧ್ಯತೆ, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಶಿಯಸ್ ಆಸುಪಾಸು
ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಈ ವಾರ ನಸುಕು ಹಾಗೂ ಮುಂಜಾನೆ ವೇಳೆ ಮಂಜು ಮುಸುಕಿದ ವಾತಾವರಣ ಇರಲಿದೆ. ಹವಾಮಾನ ವೈಪರೀತ್ಯದ ಕಾರಣ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಶಿಯಸ್ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ಹವಾಮಾನ ಮುನ್ಸೂಚನೆ ವರದಿಯಲ್ಲಿ ವಿವರಿಸಿದೆ.
ಬೆಂಗಳೂರಿನಲ್ಲಿ ಭಾನುವಾರ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಇದು ವಾಡಿಕೆ ತಾಪಮಾನಕ್ಕಿಂತ 2.4 ಡಿಗ್ರಿ ಸೆಲ್ಶಿಯಸ್ ಅಧಿಕ. ಶಿವರಾತ್ರಿಗೂ ಮೊದಲೇ ಬೆಂಗಳೂರು ನಗರ ವಾಸಿಗಳು ಬೇಸಿಗೆ ತಾಪಮಾನವನ್ನು ಅನುಭವಿಸಲಿದ್ದಾರೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ಶಿವರಾತ್ರಿ ನಂತರ ಅಂದರೆ ಮಾರ್ಚ್ ತಿಂಗಳ ಆರಂಭದಲ್ಲಿ ಬೇಸಿಗೆ ಅನುಭವಕ್ಕೆ ಬರುವುದು ವಾಡಿಕೆ.
ಬೆಂಗಳೂರು ವ್ಯಾಪ್ತಿಯಲ್ಲಿ ಚಳಿಗಾಲ ಫೆಬ್ರವರಿ ಕೊನೆಯ ತನಕ ಇರುತ್ತದೆ. ಅದರೆ ಈ ವರ್ಷ ಚಳಿಗಾಲ ಎರಡು ತಿಂಗಳ ಮೊದಲೇ ಮುಗಿದಂತೆ ತೋರಿದೆ. ಜನವರಿ ಕೊನೆಯಲ್ಲೇ ಚಳಿ ಕಡಿಮೆಯಾಗಿದ್ದು, ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ದಾಟಿದೆ. ಫೆಬ್ರವರಿ ಮೊದಲ ವಾರದಲ್ಲೇ ಗರಿಷ್ಠ ತಾಪಮಾನ 30 ಡಿಗ್ರಿ ದಾಟಿದ್ದು, ಅದರಲ್ಲಿ ಸ್ಥಿರವಾಗಿ ಮುಂದುವರಿದಿದೆ. ಸೋಮವಾರ (ಫೆ 17) ಗರಿಷ್ಠ ತಾಪಮಾನ 31.9 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ರಾಯಚೂರು, ಕಲಬುರಗಿಯ ತಾಪಮಾನಕ್ಕಿಂತ ಸ್ವಲ್ಪ ಕಡಿಮೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಸಿ ಎಸ್ ಪಾಟೀಲ್ ತಿಳಿಸಿದ್ದಾಗಿ ವರದಿ ಹೇಳಿದೆ.
ಕರ್ನಾಟಕ ಹವಾಮಾನ; ವಾಡಿಕೆ ತಾಪಮಾನಕ್ಕಿಂತ ಹೆಚ್ಚಾಗಿದೆ ಗರಿಷ್ಠ ಉಷ್ಣಾಂಶ
ಕರ್ನಾಟಕದ ವಿವಿಧ ಭಾಗಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆ ತಾಪಮಾನಕ್ಕಿಂತ ಹೆಚ್ಚಾಗಿರುವುದನ್ನು ಭಾರತೀಯ ಹವಾಮಾನ ಇಲಾಖೆಯ ವಾರದ ಹವಾಮಾನ ಮುನ್ಸೂಚನೆ ವರದಿ ದಾಖಲಿಸಿದೆ. ಫೆಬ್ರವರಿ ಮಧ್ಯಭಾಗದಲ್ಲೇ ಬೇಸಿಗೆ ಕಾಲ ಅಧಿಕೃತವಾಗಿಯೇ ಆಗಮಿಸಿದ್ದು ಇದರಲ್ಲಿ ಗಮನಸೆಳೆದಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ವಿಶೇಷವಾಗಿ ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ ಮುಂತಾದೆಡೆ ವಾಡಿಕೆ ತಾಪಮಾನಕ್ಕಿಂತ ಗರಿಷ್ಠ ತಾಪಮಾನ ಹೆಚ್ಚಳವಾಗಿದೆ. ಇದೇ ರೀತಿ, ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಚಿಂತಾಮಣಿ, ಮಂಡ್ಯ, ಮೈಸೂರು ಭಾಗಗಳಲ್ಲಿ ಕೂಡ ತಾಪಮಾನ ಹೆಚ್ಚಳವಾಗಿದೆ. ಉಳಿದೆಡೆ ತಾಪಮಾನ ಸಹಜವಾಗಿದೆ ಎಂದು ವರದಿ ಹೇಳಿದೆ.
ಹವಾಮಾನ ವೈಪರೀತ್ಯಕ್ಕೆ ವಿಶೇಷವಾಗಿ ತಾಪಮಾನ ಹೆಚ್ಚಳಕ್ಕೆ ಈಶಾನ್ಯ ಗಾಳಿಯ ಅನುಪಸ್ಥಿತಿ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಮಧ್ಯಮ ತಾಪಮಾನಕ್ಕೆ ಈ ಈಶಾನ್ಯ ಗಾಳಿ ನೆರವಾಗುತ್ತದೆ. ಈ ಬಾರಿ ಇದರ ಕೊರತೆ ಕಾಡಿದೆ. ಹೀಗಾಗಿ ಉಷ್ಣಾಂಶ ಏರಿಕೆಯಾಗಿದ್ದು, ಬೆಂಗಳೂರು ನಿವಾಸಿಗಳು ಬಹುಶಃ ಬೇಗ ಬಿರು ಬೇಸಿಗೆಯನ್ನು ಅನುಭವಿಸಲಿದ್ದಾರೆ ಎನ್ನುತ್ತಿದ್ದಾರೆ ಹವಾಮಾನ ತಜ್ಞರು.
