ಬೆಂಗಳೂರು ತಾಪಮಾನ 7 ವರ್ಷಗಳ ಗರಿಷ್ಠ ಮಟ್ಟಕ್ಕೆ; 37.9 ಡಿಗ್ರಿ ಸೆಲ್ಶಿಯಸ್ ದಾಖಲು, ಇಲ್ಲಿದೆ ವಿವರ
ಬೆಂಗಳೂರು ನಗರದಲ್ಲಿ ಮಾರ್ಚ್ 28ರಂದು ಏಳು ವರ್ಷಗಳ ಅವಧಿಯಲ್ಲಿ ಇದೇ ದಿನದ ಗರಿಷ್ಠ ತಾಪಮಾನ ದಾಖಲಾಯಿತು. 37.9 ಡಿಗ್ರಿ ಸೆಲ್ಶಿಯಸ್ ತಾಪಮಾನ ನಿನ್ನೆ ದಾಖಲಾಗಿದ್ದು, ಹಿಂದಿನ ವರ್ಷಗಳಲ್ಲಿ ಇದೇ ದಿನ ಎಷ್ಟು ತಾಪಮಾನ ಇತ್ತು ಎಂಬುದರ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ತಾಪಮಾನ ದಿನೇದಿನೆ ಹೆಚ್ಚಳವಾಗುತ್ತಿರುವುದಷ್ಟೇ ಅಲ್ಲ, ವರ್ಷದಿಂದ ವರ್ಷಕ್ಕೂ ಹೆಚ್ಚಳವಾಗುತ್ತಿದೆ. ಬೆಂಗಳೂರು ನಗರದ ವಾತಾವರಣದಲ್ಲಿ ಉಷ್ಣಾಂಶ ಗುರುವಾರ (ಮಾರ್ಚ್ 28) ಏಳು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದು, 37.9 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.
ಕಳೆದ ಏಳು ವರ್ಷಗಳಲ್ಲಿ ಇದೇ ದಿನ ವರದಿಯಾದ ಗರಿಷ್ಠ ತಾಪಮಾನ ಇದಾಗಿದೆ. ಈ ಸಲ ಮಾರ್ಚ್ ತಿಂಗಳು ಬೆಂಗಳೂರು ನಗರದ ತಾಪಮಾನದಲ್ಲಿ ಭಾರಿ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗಿದೆ. ಬೆಂಗಳೂರು ಹವಾಮಾನ ಕೇಂದ್ರದ ವರದಿ ಪ್ರಕಾರ, ಮುಂದಿನ ನಾಲ್ಕು ದಿನಗಳು ಸಹ ಗರಿಷ್ಠ ಹಾಗೂ ಕನಿಷ್ಠ ತಾಪಮಾನದ ಪ್ರಮಾಣ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ.
ಏಳು ವರ್ಷಗಳ ಗರಿಷ್ಠ ಮಟ್ಟಕ್ಕೆ ಬೆಂಗಳೂರು ತಾಪಮಾನ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಹಂಚಿಕೊಂಡಿರುವ ಪ್ರಕಾರ 2017 ರ ಮಾ.28ರಂದು 37.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. 2018ರಲ್ಲಿ ಇದೇ ದಿನ 36.6 ಡಿಗ್ರಿ ಸೆಲ್ಸಿಯಸ್, 2019ರಲ್ಲಿ 37.5 ಡಿಗ್ರಿ ಸೆಲ್ಸಿಯಸ್, 2020ರಲ್ಲಿ 37.1 ಡಿಗ್ರಿ ಸೆಲ್ಸಿಯಸ್, 2021ರಲ್ಲಿ 37.4 ಡಿಗ್ರಿ ಸೆಲ್ಸಿಯಸ್, 2022ರಲ್ಲಿ 36.7 ಡಿಗ್ರಿ ಸೆಲ್ಸಿಯಸ್ ಹಾಗೂ 2023ರಲ್ಲಿ 36.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕರ್ನಾಟಕದಲ್ಲಿ ಮಾರ್ಚ್ 28ಕ್ಕೆ ಅನ್ವಯವಾಗುವ ಕಳೆದ 24 ಗಂಟೆಗಳ ಅವಧಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿರುವುದು ರಾಯಚೂರು ಜಿಲ್ಲೆಯ ಹಡಗನಹಾಳ್ ಹೋಬಳಿಯಲ್ಲಿ. ಅಲ್ಲಿ ಕೆಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 42.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.
ಕಲಬುರಗಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ವಿಜಯಪುರ, ಬೀದರ್, ಗದಗ, ದಾವಣಗೆರೆ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ನಿನ್ನೆ (ಮಾರ್ಚ್ 28) 41 ಡಿಗ್ರಿ ಸೆಲ್ಶಿಯಸ್‌ನಿಂದ 42.6 ಡಿಗ್ರಿ ಸೆಲ್ಶಿಯಸ್ ನಡುವೆ ಗರಿಷ್ಠ ತಾಪಮಾನ ದಾಖಲಾಗಿದೆ.
36 ಹೋಬಳಿಗಳ ವಿವಿಧೆಡೆ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ಉಷ್ಣಾಂಶ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಹವಾಮಾನ ಮಾನಿಟರಿಂಗ್ ನೆಟ್‌ವರ್ಕ್ ಹಂಚಿಕೊಂಡಿರುವ ಮಾಹಿತಿ ಪ್ರಕಾರ ರಾಯಚೂರು ಜಿಲ್ಲೆಯ 10 ಸ್ಥಳಗಳು, ಕಲಬುರಗಿ ಜಿಲ್ಲೆಯಲ್ಲಿ 9 ಸ್ಥಳಗಳು, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತಲಾ 4 ಸ್ಥಳಗಳು, ಬಳ್ಳಾರಿ ಜಿಲ್ಲೆಯಲ್ಲಿ 3 ಸ್ಥಳಗಳು, ವಿಜಯಪುರ ಜಿಲ್ಲೆಯಲ್ಲಿ 2 ಸ್ಥಳಗಳು, ಬೀದರ್, ಗದಗ, ದಾವಣಗೆರೆ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ತಲಾ 1 ಸ್ಥಳಗಳಲ್ಲಿ, ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ನಿನ್ನೆ (ಮಾರ್ಚ್ 28) ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ವಾಡಿಕೆಗಿಂತಾ (1.6 ಡಿಗ್ರಿ ಸೆಲ್ಶಿಯಸ್ to 3 ಡಿಗ್ರಿ ಸೆಲ್ಶಿಯಸ್) ನಷ್ಟು ಅಧಿಕ ತಾಪಮಾನವು ದಾಖಲಾಗಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯವಾಗಿದೆ ಎಂದು ವರದಿ ಹೇಳಿದೆ.
ಇದೇ ರೀತಿ, ಮುಂದಿನ 5 ದಿನಗಳ ತಾಪಮಾನದ ಮುನ್ಸೂಚನೆ ನೀಡಿರುವ ಹವಾಮಾನ ಕೇಂದ್ರ, ಮಾರ್ಚ್ 28 ರಿಂದ 29 ರವರೆಗೆ ರಾಜ್ಯದ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಉಷ್ಣ ಅಲೆ ಇರುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆಯನ್ನು ಸಾರ್ವಜನಿಕರಿಗೆ ನೀಡಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.