ಬೆಂಗಳೂರು ಹವಾಮಾನ; ಸೂರ್ಯ ಸಂಚಾರಕ್ಕೆ ಅನುಗುಣವಾಗಿ ತಾಪಮಾನ ಹೆಚ್ಚಳ, ಶಿವರಾತ್ರಿಗೂ ಮೊದಲೇ ಕಡಿಮೆಯಾದ ಚಳಿ, ರಥ ಸಪ್ತಮಿ ದಿನ ಕರ್ನಾಟಕದ ಹವಾಮಾನ
Ratha Saptami Weather: ಶಿವರಾತ್ರಿಗೆ ಇನ್ನು ಮೂರು ವಾರ ಇದೆ. ಅಂದರೆ, ಚಳಿಗಾಲ ಇನ್ನು ಮುಗಿಯಲು ಮೂರು ವಾರಗಳು ಇದೆ. ಆಗಲೇ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಯ ಅನುಭವವಾಗತೊಡಗಿದೆ. ರಥ ಸಪ್ತಮಿ ದಿನ ಕರ್ನಾಟಕದ ಹವಾಮಾನ ಹೀಗಿದೆ ನೋಡಿ.

Ratha Saptami Weather: ವಾಡಿಕೆಯಂತೆ ಹೇಳುವುದಾದರೆ ರಥ ಸಪ್ತಮಿ ಬಂತೆಂದರೆ ಚಳಿ ಕಡಿಮೆಯಾದಂತೆ. ಅದೇ ರೀತಿ, ಶಿವರಾತ್ರಿ ಬಂದರೆ ಚಳಿ ಮುಗಿದು ಬೇಸಿಗೆ ಶುರು. ಇಂದು (ಫೆ.4) ರಥ ಸಪ್ತಮಿ. ಶಿವರಾತ್ರಿಗೆ ಇನ್ನು ಮೂರು ವಾರ ಇದೆ. ಅಂದರೆ, ಚಳಿಗಾಲ ಇನ್ನು ಮುಗಿಯಲು ಮೂರು ವಾರಗಳು ಇದೆ. ಆಗಲೇ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಯ ಅನುಭವವಾಗತೊಡಗಿದೆ. ಸದ್ಯ, ಸಂಜೆ 6ರ ನಂತರ ಹಾಗೂ ಬೆಳಗ್ಗೆ 8 ಗಂಟೆವರೆಗೆ ಅಲ್ಪ ಪ್ರಮಾಣದಲ್ಲಿ ಚಳಿ ಅನುಭವಕ್ಕೆ ಬಂದರೂ, ಬೇಸಿಗೆ ಬಿಸಿಲಿನ ತಾಪಮಾನದ ಅನುಭವ ನಿಧಾನವಾಗಿ ಆಗತೊಡಗಿದೆ. ಕರ್ನಾಟಕದ ಉದ್ದಗಲಕ್ಕೂ ಒಣಹವೆ ಇದ್ದು, ಚಳಿ ಕಡಿಮೆಯಾಗತೊಡಗಿದೆ.
ಬೆಂಗಳೂರು ಹವಾಮಾನ ಇಂದು, ಇನ್ನಾರು ದಿನ ಬಿಸಿಲಿನ ತಾಪ ಹೆಚ್ಚು
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ವಾತಾವರಣದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಕಾರಣ ತಾಪಮಾನ ಹೆಚ್ಚಳಕ್ಕೆ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಹಿಂದಿನ ಲೆಕ್ಕಾಚಾರದ ಪ್ರಕಾರ, ಬ್ರವರಿ ಮಾತ್ರವಲ್ಲದೆ, ಮಾರ್ಚ್ ತಿಂಗಳಲ್ಲೂ ಚಳಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ, ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಉತ್ತರ ಭಾರತದಿಂದ ಶೀತ ಗಾಳಿ ಹಿಂದಕ್ಕೆ ಚಲಿಸಿದ್ದರಿಂದ ಚಳಿಯ ಪ್ರಮಾಣ ಇಳಿಮುಖವಾಗಲು ಕಾರಣವಾಗಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.
ಹವಾಮಾನ ಇಲಾಖೆ ಪ್ರಕಾರ ಇನ್ನೂ ಆರು ದಿನಗಳ ಕಾಲ ಬೆಂಗಳೂರಲ್ಲಿ ಸುಡುಬಿಸಿಲಿನ ವಾತಾವರಣ ಇರಲಿದೆ. ನಂತರ ಇದರ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ. ಅದೇ ರೀತಿ, ಬೆಂಗಳೂರು ನಗರದಲ್ಲಿ ಬೆಳಿಗ್ಗೆ 8 ಗಂಟೆ ನಂತರ ಬೇಸಿಗೆ ಕಾಲದಲ್ಲಿ ಇರುವಂತೆ ಸುಡುಬಿಸಿಲು ಕಾಡುತ್ತಿದೆ. ಚಳಿಗಾಲದಲ್ಲೂ ಗರಿಷ್ಠ ತಾಪಮಾನ ದಾಖಲಾಗಿದ್ದು, ಜನರನ್ನು ಕಂಗೆಡಿಸಿದೆ. ಈಗಲೇ ಹೀಗಾದರೆ ಮಾರ್ಚ್ ನಂತರ ಹೇಗೆ ಎಂಬ ಆತಂಕ ಕಾಡುತ್ತಿದೆ.
ಕಳೆದ ವರ್ಷ ಕೂಡಾ ಜನವರಿ ಮಧ್ಯದಲ್ಲೇ ಬೇಸಿಗೆಯ ಬಿಸಿ ಕಾಡಿತ್ತು. ಈ ಬಾರಿ ಮಳೆ ಉತ್ತಮವಾಗಿದ್ದರಿಂದ ಬಿಸಿಯ ತಾಪಮಾನ ಇರುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ, ಜನವರಿ ಕೊನೆಯಿಂದಲೇ ಬಿಸಿಯ ವಾತಾವರಣ ಕಾಣಿಸತೊಡಗಿದೆ. ಕನಿಷ್ಠ ತಾಪಮಾನ ಕಳೆದ ಮೂರು ದಿನಗಳಿಂದ 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಪ್ರಸ್ತುತ 17ರಿಂದ 18 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಗರಿಷ್ಠ ತಾಪಮಾನವೂ ಕೂಡಾ 28 ಡಿಗ್ರಿ ಇದ್ದದ್ದು ಈಗ 31ರಿಂದ 33 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇದನ್ನು ಆರು ದಿನಗಳ ಕಾಲ ಇದೇ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪ್ರಸ್ತುತ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವ ಕಡಿಮೆಯಾಗಿದೆ. ಇದರಿಂದ ಬೆಂಗಳೂರಿನಲ್ಲಿ ತಾಪಮಾನ ಇಳಿಯಬಹುದು ಎನ್ನಲಾಗಿದೆ.
ರಥ ಸಪ್ತಮಿ ದಿನ ಕರ್ನಾಟಕ ಹವಾಮಾನ
ಹವಾಮಾನ ಬದಲಾವಣೆಗಳು ಸೂರ್ಯ ಸಂಚಾರಕ್ಕೆ ಅನುಗುಣವಾಗಿದ್ದು, ವಾಡಿಕೆಯಂತೆ ರಥ ಸಪ್ತಮಿಯ ವೇಳೆಗೆ ಚಳಿ ಕಡಿಮೆಯಾಗತೊಡಗಿದೆ. ಶಿವರಾತ್ರಿಗೆ ಪೂರ್ತಿ ಚಳಿ ಕಡಿಮೆಯಾಗುವ ಲಕ್ಷಣಗಳಿದ್ದು, ಬೇಸಿಗೆ ಬಿಸಿಲಿನ ಅನುಭವ ಈಗಾಗಲೇ ಅನುಭವಕ್ಕೆ ಬರತೊಡಗಿದೆ ಎಂದು ಜನರು ಹೇಳಿಕೊಳ್ಳತೊಡಗಿದ್ದಾರೆ. ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಇಂದು ಒಣಹವೆ ಇರಲಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಕೂಡ ಇದನ್ನೇ ಹೇಳಿದೆ.
