ಬೆಂಗಳೂರು ಸುತ್ತಮುತ್ತ, ಕರ್ನಾಟಕದ ಉತ್ತರ ಒಳನಾಡಲ್ಲಿ ಮುಂಜಾನೆ ಮಂಜು, ಮೈ ನಡುಕದ ಚಳಿ- ಹೀಗಿದೆ ಕರ್ನಾಟಕ ಹವಾಮಾನ ಇಂದು, ಇನ್ನು ಮಳೆ ಯಾವಾಗ
Karnataka Weather: ಬೆಂಗಳೂರು ಸುತ್ತಮುತ್ತ, ಕರ್ನಾಟಕದ ಉತ್ತರ ಒಳನಾಡಲ್ಲಿ ಮುಂಜಾನೆ ಮಂಜು, ಮೈ ನಡುಕದ ಚಳಿಯ ಅನುಭವ ಶುರುವಾಗಿದ್ದು, ಅದು ಇಂದು ಕೂಡ ಮುಂದುವರಿದಿದೆ. ಕರ್ನಾಟಕ ಹವಾಮಾನ ಇಂದು ಯಾವ ರೀತಿ ಇರಲಿದೆ, ಇನ್ನು ಮಳೆ ಯಾವಾಗ ಎಂಬುದರ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ಉತ್ತರ ಒಳನಾಡು ಮತ್ತು ಬೆಂಗಳೂರು ಸುತ್ತ ಮುತ್ತ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಇರುವ ವಾತಾವರಣವೇ ಇಂದು (ನವೆಂಬರ್ 21) ಕೂಡ ಮುಂದುವರಿಯಲಿದೆ. ಈ ಪ್ರದೇಶಗಳಲ್ಲಿ ಮುಂಜಾನೆ ಮಂಜು ಮತ್ತು ಮೈ ನಡುಗಿಸುವ ಚಳಿ ಅನುಭವಕ್ಕೆ ಬರಬಹುದು. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ನವೆಂಬರ್ 20) ಅಪರಾಹ್ನ ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆ ಪ್ರಕಾರ, ಬೆಂಗಳೂರು ಸುತ್ತಮುತ್ತ, ಕರ್ನಾಟಕದ ಉತ್ತರ ಒಳನಾಡು ಪ್ರದೇಶಗಳಲ್ಲಿ ಮುಂಜಾನೆ ಮಂಜು, ಮೈ ನಡುಗಿಸುವ ಚಳಿ ಅನುಭವಕ್ಕೆ ಬರುವ ಸಾಧ್ಯತೆ ಇದೆ. ಸಿನೊಪ್ಟಿಕ್ ಹವಾಮಾನ ಲಕ್ಷಣವನ್ನು ಉಲ್ಲೇಖಿಸಿರುವ ಹವಾಮಾನ ವರದಿ, “ದಕ್ಷಿಣ ತಮಿಳುನಾಡು ಮತ್ತು ಪಕ್ಕದ ಕೊಮೊರಿನ್ ಪ್ರದೇಶದ ಮೇಲೆ ಚಂಡಮಾರುತದ ಪರಿಚಲನೆಯು ಈಗ ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿದೆ. ಒಂದು ಚಂಡಮಾರುತದ ಪರಿಚಲನೆಯು ಕೇರಳದ ಕರಾವಳಿಯ ಆಗ್ನೆಯ ಅರೇಬಿಯನ್ ಸಮುದ್ರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿದೆ” ಎಂದು ಹೇಳಿದೆ.
ಕರ್ನಾಟಕ ಹವಾಮಾನ ಇಂದು; ಇನ್ನು ಮಳೆ ಯಾವಾಗ?
ಕರ್ನಾಟಕದಲ್ಲಿ ಇನ್ನೊಂದು ವಾರ ಮಳೆ ಸುಳಿವು ಇಲ್ಲ. ಆದರೆ, “ನವೆಂಬರ್ 21 ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಪ್ರದೇಶಗಳಲ್ಲಿ ಮೇಲ್ಬಾಗದ ವಾಯು ಚಂಡಮಾರುತದ ಪರಿಚಲನೆಯು ರೂಪುಗೊಳ್ಳುವ ಸಾಧ್ಯತೆಯಿದೆ. ಇದು ನವೆಂಬರ್ 23 ರ ಸುಮಾರಿಗೆ ಪಶ್ಚಿಮ ವಾಯವ್ಯ ದಿಕ್ಕಿನಲ್ಲಿ ಚಲಿಸುವ ಮತ್ತು ಆಗ್ನೆಯ ಬಂಗಾಳ ಕೊಲ್ಲಿಯ ಮೇಲೆ ಕಡಿಮೆ ಒತ್ತಡದ ಪ್ರದೇಶವಾಗುವ ಸಾಧ್ಯತೆಯಿದೆ. ಅದರ ನಂತರ, ಇದು ಪಶ್ಚಿಮ ವಾಯವ್ಯ ದಿಕ್ಕಿನಲ್ಲಿ ಚಲಿಸುವುದನ್ನು ಮುಂದುವರೆಸುವ ಸಾಧ್ಯತೆಯಿದೆ ಮತ್ತು ನಂತರದ 2 ದಿನಗಳಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ತೀವ್ರಗೊಳ್ಳುತ್ತದೆ” ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ನವೆಂಬರ್ 20) ಅಪರಾಹ್ನ ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆಯಲ್ಲಿ ವಿವರಿಸಿದೆ.
ಅಷ್ಟೇ ಅಲ್ಲ, ನವೆಂಬರ್ 27ಕ್ಕೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಕಡೆಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಕರ್ನಾಟಕದಲ್ಲಿ ನಿನ್ನೆ (ನವೆಂಬರ್ 20) ಗರಿಷ್ಠ ಉಷ್ಣಾಂಶ 35.8 ಡಿಗ್ರಿ ಸೆಲ್ಶಿಯಸ್ ಕಾರವಾರದಲ್ಲಿ ದಾಖಲಾಗಿದೆ. ಕನಿಷ್ಠ ಉಷ್ಣಾಂಶ 12.05 ಡಿಗ್ರಿ ಸೆಲ್ಶಿಯಸ್ ಬೀದರ್ ಮತ್ತು ವಿಜಯಪುರದಲ್ಲಿ ದಾಖಲಾಗಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಹವಾಮಾನ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು (ನವೆಂಬರ್ 21) ಮುಂಜಾನೆ ಮಂಜು ಮತ್ತು ಬೆಳಗ್ಗೆ ಮತ್ತು ರಾತ್ರಿ ವೇಳೆ ಚಳಿ ಇರಲಿದೆ. 22 ನೇ ನವೆಂಬರ್ 2024 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಭಾಗಶಃ ಮೋಡ ಮುಸುಕಿದ ವಾತಾವರಣ.ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರುತ್ತದೆ.