ಬೆಂಗಳೂರು ಹವಾಮಾನ: ಏನ್ ಗುರೂ ಬೆಂಗಳೂರು ವೆದರ್ ಊಟಿ ವೆದರ್ ಥರಾ ಆಗಿ ಹೋಗಿದೆ; ಹೊಟ್ಟೆಯೊಳಗೆ ಶುರುವಾದ ಚಳಿಗೆ ಮೈ ನಡುಕ ಶುರುವಾಗಿದೆ!
Bengaluru Weather: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು ಕವಿದ, ಇಬ್ಬನಿ ಹನಿಯುವ ವಾತಾವರಣ ಇದ್ದು, ಸಂಜೆ ಚಳಿ ಮೈನಡುಕ ಹುಟ್ಟಿಸುವಂತೆ ಇದೆ. “ಏನ್ ಗುರೂ ಬೆಂಗಳೂರು ವೆದರ್ ಊಟಿ ವೆದರ್ ಥರಾ ಆಗಿ ಹೋಗಿದೆ. ಹೊಟ್ಟೆಯೊಳಗೆ ಶುರುವಾದ ಚಳಿಗೆ ಮೈ ನಡುಕ ಶುರುವಾಗಿದೆ” ಎನ್ನತೊಡಗಿದ್ದಾರೆ ಬೆಂಗಳೂರಿಗರು.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವಧಿಗೂ ಮೊದಲೇ ಚಳಿ ಕಂಡುಬಂದಿದೆ. ಡಿಸೆಂಬರ್ ತಿಂಗಳಲ್ಲಿ ಅನುಭವಕ್ಕೆ ಬರುವ ಚಳಿ ಈ ಬಾರಿ ನವೆಂಬರ್‌ನಲ್ಲೇ ಬಂದಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಇಬ್ಬನಿ ಹನಿಯುವ ವಾತಾವರಣ ಇದೆ. ಮೋಡ ಕವಿದ ವಾತಾವರಣವೂ ಇದ್ದು ಚಳಿಯ ಅನುಭವವನ್ನು ಹೆಚ್ಚಿಸಿದೆ. ಮುಂಜಾನೆ ವಾಕಿಂಗ್, ಸೈಕ್ಲಿಂಗ್ ಮಾಡುವವರ ಸಂಖ್ಯೆ ಈಗ ಕಡಿಮೆಯಾಗಿದೆ. ಚಳಿಯ ವಾತಾವರಣಕ್ಕೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆ 9 ಗಂಟೆಯಾದರೂ ಸೂರ್ಯನ ಮುಖದರ್ಶನವಾಗುವುದಿಲ್ಲ. ಹೀಗಾಗಿ ಬಹುತೇಕರಲ್ಲಿ ಒಂದು ರೀತಿಯ ಜಡಭಾವ ಕಂಡುಬಂದಿದೆ.
ಬೆಂಗಳೂರು ಹವಾಮಾನ: ಬೆಂಗಳೂರಲ್ಲಿಈ ಬಾರಿ ಮಳೆಯೂ ಹೆಚ್ಚು, ಚಳಿಯೂ ಹೆಚ್ಚು
ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ತಾಪಮಾನದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಚಳಿ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶವು 15.5 ಡಿಗ್ರಿ ಸೆಲ್ಶಿಯಸ್ ಮತ್ತು 16 ಡಿಗ್ರಿ ಸೆಲ್ಶಿಯಸ್ ನಡುವೆ ಕಂಡುಬಂದಿದೆ. ವಾರದ ಹಿಂದೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಕನಿಷ್ಠ ಉಷ್ಣಾಂಶ 12.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದನ್ನೂ ನೆನಪು ಮಾಡಿಕೊಳ್ಳಬಹುದು. ರಾಜ್ಯಕ್ಕೆ ಈ ಸಲ ಮಾಗಿ ಚಳಿ ಬೇಗ ಬಂದಿದೆ. ಪರಿಣಾಮ ಚಳಿ ಜೊತೆಗೆ ಮಧ್ಯರಾತ್ರಿ ಇಬ್ಬನಿ ಕೂಡ ಶುರುವಾಗಿದೆ. ಇನ್ನಷ್ಟೂ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, ಬೆಂಗಳೂರು ತಾಪಮಾನ 12 ಡಿಗಿಗೆ ಇಳಿಯುವ ಸಾಧ್ಯತೆ ಇದೆ. ಈಗಾಗಲೇ ಚಳಿ ಹೆಚ್ಚಿದ್ದು, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿ ಜಾಸ್ತಿ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
ಚಳಿಗಾಲದಲ್ಲಿ ಬಹುತೇಕ ಬೆಂಗಳೂರಿಗರ ದಿನಚರಿ ಬದಲಾಗುತ್ತದೆ. ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಇರುವಂಥವರು ಅದನ್ನೇ ಆರಿಸಿಕೊಂಡು ಗಂಟೆಗೊಮ್ಮೆ ಬಿಸಿಬಿಸಿ ಕಾಫಿ ಹೀರುತ್ತ ಮನೆಯಿಂದಲೇ ಕೆಲಸ ಮಾಡುತ್ತಾರೆ. ರಜೆ ಹಾಕುವ ಅವಕಾಶ ಇರುವಂಥವರು ರಜೆ ಹಾಕಿ ದಪ್ಪ ದಪ್ಪ ಹೊದಿಕೆ, ರಗ್ಗು ಹೊದ್ದು ಮಧ್ಯಾಹ್ನ ತನಕ ಮಲಗಿಬಿಡುತ್ತಾರೆ. ಹೊರ ಹೋಗಲೇ ಬೇಕಾದ ಅನಿವಾರ್ಯತೆ ಇರುವಂಥವರು ಸ್ವೆಟ್ಟರ್, ಜಾಕೆಟ್, ಮಫ್ಲರ್ ಸುತ್ತಿಕೊಂಡು ನಿಧಾನವಾಗಿ ಹೆಜ್ಜೆ ಇಡುತ್ತ ಹೊರಬರುತ್ತಾರೆ.
ಏನ್ ಗುರೂ ಬೆಂಗಳೂರು ವೆದರ್ ಊಟಿ ವೆದರ್ ಥರಾ ಆಗಿ ಹೋಗಿದೆ
ಬೆಂಗಳೂರಲ್ಲಿ ಸಂಜೆ ನಂತರ ಮತ್ತು ಮುಂಜಾನೆ ಚಳಿ ಗಾಳಿಯ ನಡುವೆ ದ್ವಿಚಕ್ರ ವಾಹನ ಓಡಿಸುವುದು ಸವಾಲಿನ ಕೆಲಸ. ಬೈಕ್, ಸ್ಕೂಟರ್ ಹ್ಯಾಂಡಲ್ ಹಿಡಿದು ಕೈ ಬೆರಳುಗಳು ನೋಯತೊಡಗುತ್ತವೆ. ಮೂಳೆ, ಕೀಲುಗಳಲ್ಲಿ ನೋವು ಕಂಡುಬರುತ್ತದೆ. ಹೀಗಾಗಿ ಹೊರ ಹೋದವರು ಸಂಜೆಯಾಗುತ್ತಲೇ ಬೇಗ ಮನೆ ಸೇರುವ ತವಕದಲ್ಲಿರುತ್ತಾರೆ.
ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ ಸೇರಿ ವಿವಿಧೆಡೆ ರಸ್ತೆಬದಿಗಳಲ್ಲಿ ಫುಟ್‌ಪಾತ್ ವ್ಯಾಪಾರಿಗಳು ಅಲ್ಲಲ್ಲಿ ಬೆಂಕಿ ಹಾಕಿಕೊಂಡು ತಮ್ಮ ದೇಹವನ್ನು ಬೆಚ್ಚಗೆ ಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಜರ್ಕಿನ್, ಸೈಟರ್ ಹಾಗೂ ಬೆಚ್ಚನೆಯ ಉಡುಪು ತೊಟ್ಟುಕೊಂಡರೂ ಚಳಿ ತಡೆದುಕೊಳ್ಳುವುದು ಕಷ್ಟ ಎನ್ನುತ್ತಾರೆ ಆವಲಹಳ್ಳಿ ಬಿಡಿಎ ಪಾರ್ಕ್ ಸಮೀಪದ ನಿವಾಸಿ ರಾಜಣ್ಣ.
ಬೆಂಗಳೂರಲ್ಲಿ ಈ ಬಾರಿ ಚಳಿ ಹೆಚ್ಚು. ಅಂಗಡಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಬಿಸಿಬಿಸಿ ಚಹಾ ಹೆಚ್ಚು ಮಾರಾಟ ಆಗ್ತಿದೆ. ನಾವು ಸಂಜೆ ಬಜ್ಜಿ ಬೋಂಡಾ ಮಾರಾಟ ಮಾಡ್ತೇವೆ. ಈಗ ಒಂದು ವಾರದಿಂದ ಸಾಮಾನ್ಯಕ್ಕಿಂತ ಹೆಚ್ಚು ಬಜ್ಜಿ ಬೋಂಡಾ ಮಾರಾಟ ಆಗ್ತಿದೆ ಎನ್ನುತ್ತಾರೆ ಮುನೇಶ್ವರ ಬ್ಲಾಕ್‌ನ ಬೀದಿಬದಿ ಬಜ್ಜಿ ವ್ಯಾಪಾರಿ ಮಂಜುನಾಥ್.
ಸೋಷಿಯಲ್ ಮೀಡಿಯಾದಲ್ಲೂ ಅನೇಕರು ಈ ಬಗ್ಗೆ ಸ್ಟೇಟಸ್ ಹಾಕುತ್ತಿದ್ದಾರೆ, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲೂ ಅಂತಹ ಪೋಸ್ಟ್ ಕಂಡುಬಂದಿದೆ.
ಶೇಷಗಿರಿ ದೇಶಪಾಂಡೆ ಎಂಬುವವರು “ಏನ್ ಗುರೂ ಬೆಂಗಳೂರು ವೆದರ್ ಊಟಿ ವೆದರ್ ಥರಾ ಆಗಿ ಹೋಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು ಹವಾಮಾನ ಇಂದು: ಬೆಂಗಳೂರು ಸುತ್ತ ಮುತ್ತ ಅಂದರೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮೈ ನಡುಗಿಸುವ ಚಳಿ ಅನುಭವಕ್ಕೆ ಬರಲಿದೆ. ಇಂದು ಅಪರಾಹ್ನ ತನಕ ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.